‘ಸದ್ಗುರು’ ಎಂದು ಕರೆಯಲ್ಪಡುವ ಜಗ್ಗಿ ವಾಸುದೇವ್ ನೇತೃತ್ವದ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಬುಧವಾರ (ಫೆ.26) ಆಯೋಜಿಸಿದ್ದ ಅದ್ದೂರಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಲ್ಗೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಗ್ಗಿ ವಾಸುದೇವ್ ಜೊತೆ ಡಿಕೆಶಿ, ಅಮಿತ್ ಶಾ ಮತ್ತು ಇತರರು ವೇದಿಕೆ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಶಿವಭಕ್ತಿಯ ಶಿಖರ!
ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. @SadhguruJV ಅವರು ಪ್ರತಿ ಶಿವರಾತ್ರಿಯಂದು ನಡೆಸಿಕೊಡುವ ಈ ಕಾರ್ಯಕ್ರಮದ ಬಗ್ಗೆ ಕೇಳಿದ್ದೆ, ಕಣ್ಣಾರೆ ನೋಡಿ ಇದು ಶಿವಭಕ್ತಿಯ ಶಿಖರ ಅನಿಸಿತು. ನನ್ನ ಹೆಸರಲ್ಲೇ ಶಿವನಿದ್ದಾನೆ. ಅದರ ಹಿಂದೆ ಸ್ವಾರಸ್ಯಕರ ಸಂಗತಿ ಇದೆ.
ದೊಡ್ಡ… pic.twitter.com/HqSnWVXNF8
— DK Shivakumar (@DKShivakumar) February 26, 2025
ಡಿಕೆಶಿ ನಡೆ ಕೆಲ ಕಾಂಗ್ರೆಸ್ ನಾಯಕರು ಮತ್ತು ಪ್ರಗತಿಪರರ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಗ್ಗಿವಾಸುದೇವ್ ನೀಡಿದ್ದ ಆಹ್ವಾನ ಪತ್ರವನ್ನು ಫೆ.25ರಂದು ಡಿ.ಕೆ ಶಿವಕುಮಾರ್ ಅವರು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆಗಲೇ ಡಿಕೆಶಿ ನಡೆಗೆ ಆಕ್ಷೇಪ ವ್ಯಕ್ತವಾಗಿತ್ತು.
ಡಿಕೆಶಿ ಫೇಸ್‌ಬುಕ್‌ನಲ್ಲಿ ಆಹ್ವಾನ ಪತ್ರದೊಂದಿಗೆ ಹಾಕಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿ ಪಿ.ವಿ ಮೋಹನ್ ಅವರು “ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿ ಮತ್ತು ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ, ರಾಷ್ಟ್ರದ ಭರವಸೆಯ ಸಂಕೇತವಾಗಿರುವ ನಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡಿದ, ಆರ್‌ಎಸ್‌ಎಸ್ ಜೊತೆ ಹೊಂದಾಣಿಕೆಯಾಗುವ ಅಭಿಪ್ರಾಯ ಹೊಂದಿರುವ ಯಾರಿಗಾದರೂ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆ ವ್ಯಕ್ತಪಡಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದಿದ್ದಾರೆ.
“ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ರಾಜಿ ಮಾಡಿಕೊಳ್ಳುವ ಬದಲು, ದೃಢ ನಿಶ್ಚಯಕ್ಕೆ ಬದ್ಧತೆ ಅತ್ಯಗತ್ಯ; ಇದನ್ನು ನಿರ್ಲಕ್ಷಿಸುವುದರಿಂದ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳ್ಳಬಹುದು. ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಆರ್‌ಎಸ್‌ಎಸ್ ಹಿನ್ನಲೆಯ ಹಲವಾರು ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಆತಂಕವಾಗಿದೆ. ನಮ್ಮ ಪಕ್ಷದ ಅಧ್ಯಕ್ಷರು ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡು ಇಡೀ ರಾತ್ರಿ ಕಳೆಯುವುದನ್ನು ನೋಡಲು ಸಾಧ್ಯವಿಲ್ಲ, ಇದನ್ನು ಗ್ರಹಿಸುವುದು ಕಷ್ಟ” ಎಂದು ಬರೆದುಕೊಂಡಿದ್ದಾರೆ.

ಇನ್ನು, ಜಗ್ಗಿ ವಾಸುದೇವ್ ಜೊತೆ ಡಿ.ಕೆ ಶಿವಕುಮಾರ್ ಮತ್ತು ಅಮಿತ್ ಶಾ ವೇದಿಕೆ ಹಂಚಿಕೊಂಡಿರುವ ಫೋಟೋ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಡಿವೈಎಫ್‌ಐ ನಾಯಕ ಮುನೀರ್ ಕಾಟಿಪಳ್ಳ ಅವರು “ಡಿಕೆಶಿ ಹಿಂದೆ ಮಂಗಳೂರಿನ ಯಾರೆಲ್ಲ ಕಾಂಗ್ರೆಸ್ ಮುಖಂಡರು ಹೋಗಬಹುದು?” ಎಂದು ಪ್ರಶ್ನಿಸಿದ್ದಾರೆ.

“ಈ ಕಾರ್ಯಕ್ರಮಕ್ಕೆ ಡಿಕೆಶಿ ಹೋಗಬಾರದು. ಒಬ್ಬ ಡಿಸಿಎಂ ಆಗಿ, ಅವರು ಅಂತಹ ಕಾರ್ಯಕ್ರಮಗಳಿಗೆ ಹಾಜರಾಗಬಾರದು ಮತ್ತು ಆಹ್ವಾನವನ್ನು ನಿರ್ಲಕ್ಷಿಸಬೇಕು” ಎಂದು ಪ್ರಗತಿಪರ ಚಿಂತಕರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಬಣ ಡಿ.ಕೆ ಶಿವಕುಮಾರ್ ನಾಯಕತ್ವದ ವಿರುದ್ದ ಒಳಗೊಳಗೆ ಅಸಮಾಧಾನ ಹೊಂದಿರುವ ನಡುವೆ, ಡಿಕೆಶಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ, ಹೆಚ್.ಸಿ ಮಹದೇವಪ್ಪ ಅವರಂತಹ ಕಾಂಗ್ರೆಸ್‌ನ ಹಿರಿಯ ನಾಯಕರು ಪ್ರಯಾಗ್‌ರಾಜ್ ಕುಂಭಮೇಳದ ಕುರಿತು ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಆದರೆ, ಅದಕ್ಕೆ ವಿರುದ್ದವೆಂಬಂತೆ ಡಿ.ಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಕುಂಭಮೇಳಕ್ಕೆ ತೆರಳಿ ಗಂಗಾಸ್ನಾನ ಮಾಡಿದ್ದರು.
ಹರ ಹರ ಮಹಾದೇವ!
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ. pic.twitter.com/LhwwJ0hvpK
— DK Shivakumar (@DKShivakumar) February 9, 2025
ತಿ.ನರಸೀಪುರದ ಕುಂಭಮೇಳದಲ್ಲೂ ಬಹಳ ಉತ್ಸುಕತೆಯಿಂದ ಡಿಕೆಶಿ ಪಾಲ್ಗೊಂಡಿದ್ದರು. ಇಲ್ಲಿಯೂ ಸಂಗಮದಲ್ಲಿ ಸ್ನಾನ ಮಾಡಿದ್ದರು ಮತ್ತು ಕಾವೇರಿ ಆರತಿ ಮಾಡಿದ್ದರು.
ಪ್ರಯತ್ನ ವಿಫಲವಾಗಬಹುದು,
ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ!ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾ ಆರತಿ ನೆರವೇರಿಸಿ, ಭಗವಂತನಲ್ಲಿ ಪ್ರಾರ್ಥಿಸಿದೆ. ಪುಣ್ಯಸ್ನಾನ ಮಾಡಿ ಭಕ್ತಿ-ಭಾವಗಳಲ್ಲಿ ಮಿಂದು ಭಾವಪರವಶನಾದೆ. pic.twitter.com/cWrSu5MZNc
— DK Shivakumar (@DKShivakumar) February 12, 2025
ಆ ಬಳಿಕ, ಫೆ.26ರಂದು ಸದಾಶಿವನಗರದ ಮನೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿಕೆಶಿ, “ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ ಎಂದಿದ್ದರು. ಈ ಮೂಲಕ ಕುಂಭಮೇಳದಲ್ಲಿ ಭಾಗಿಯಾದ ಬಗ್ಗೆ ಕೆಲವರ ಆಕ್ಷೇಪಕ್ಕೆ ತಿರುಗೇಟು ನೀಡಿದ್ದರು.
ಇನ್ನು, “ಪ್ರಯಾಗ್‌ರಾಜ್ ಕುಂಭಮೇಳವನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದೆ” ಎಂದು ಡಿಕೆಶಿ ಶ್ಲಾಘಿಸಿದ್ದಾಗಿ ವರದಿಯಾಗಿದೆ.
ಕೆಲ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಡಿಕೆಶಿಯ ಇತ್ತೀಚಿನ ನಡೆಗಳಿಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಡಿಕೆಶಿ ಬಿಜೆಪಿ ಸೇರಬಹುದು ಎಂಬ ಚರ್ಚೆಗಳೂ ಗದಿಗೆದರಿವೆ.


