ನಾಪತ್ತೆಯಾಗಿದ್ದ ಮುಸ್ಲಿಂ ಮುಖಂಡ ಮುಮ್ತಾಝ್ ಅಲಿ ಕೃಷ್ಣಾಪುರ ಅವರ ಮೃತದೇಹ ಇಂದು (ಅ.7) ಬೆಳಿಗ್ಗೆ ಮಂಗಳೂರಿನ ಕೂಳೂರು ಸೇತುವೆ ಬಳಿ ನದಿಯಲ್ಲಿ ಪತ್ತೆಯಾಗಿದೆ.
ಮಾಜಿ ಶಾಸಕ ಮೊಯ್ದಿನ್ ಬಾವ ಮತ್ತು ಹಾಲಿ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಅವರ ಸಹೋದರರಾಗಿರುವ ಉದ್ಯಮಿ ಮುಮ್ತಾಝ್ ಅಲಿ, ಕರಾವಳಿ ಭಾಗದ ಮುಸ್ಲಿಂ ಮುಖಂಡರಾಗಿದ್ದರು. ಹಲವಾರು ಶೈಕ್ಷಣಿಕ, ಸಾಮಾಜಿಕ ಸಂಘ-ಸಂಸ್ಥೆಗಳ ಜೊತೆ ಗುರುತಿಸಿಕೊಂಡಿದ್ದರು.
ಭಾನುವಾರ (ಅ.6) ಮುಂಜಾನೆ ಮನೆಯಿಂದ ಹೊರಟಿದ್ದ ಮುಮ್ತಾಝ್ ಅಲಿ ಅವರು ನಾಪತ್ತೆಯಾಗಿದ್ದರು. ಅವರ ಬಿಎಂಡಬ್ಲ್ಯೂ ಕಾರು ಮಂಗಳೂರು ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಸೇತುವೆ ಬಳಿ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿತ್ತು.
ಮುಮ್ತಾಝ್ ಅಲಿ ಕಾರು ನಿಲ್ಲಿಸಿ ನದಿಗೆ ಹಾರಿರಬಹುದು ಎಂಬ ಶಂಕೆ ಮೇಲೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಕರಾವಳಿ ರಕ್ಷಣಾ ಪಡೆಯ ತಂಡಗಳು ಸ್ಥಳೀಯರ ಸಹಾಯದೊಂದಿಗೆ ನದಿಯಲ್ಲಿ ಶೋಧ ಕಾರ್ಯ ನಡೆಸಿತ್ತು. ಇಂದು ಬೆಳಿಗ್ಗೆ 10.40ರ ಸುಮಾರಿಗೆ ಸ್ಥಳೀಯ ಮೀನುಗಾರರ ದೋಣಿಗೆ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಆರು ಮಂದಿಯ ಮೇಲೆ ಎಫ್‌ಐಆರ್
ಮುಮ್ತಾಝ್ ಅಲಿ ಅವರದ್ದು ಆತ್ಮಹತ್ಯೆಯೇ? ಎಂಬುವುದು ತನಿಖೆಯಿಂದ ಖಚಿತವಾಗಬೇಕಿದೆ. ಪ್ರಸ್ತುತ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವರದಿಗಳ ಪ್ರಕಾರ, ಮುಮ್ತಾಝ್ ಅವರನ್ನು ಬೆದರಿಸಿ, ಬ್ಲ್ಯಾಕ್ ಮೇಲೆ ಮಾಡಿ ಲಕ್ಷಾಂತರ ರೂಪಾಯಿ ಹಣ ಕಿತ್ತಿದ್ದಲ್ಲದೆ, ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಮಹಿಳೆ ಸೇರಿದಂತೆ 6 ಜನರ ಮೇಲೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 173ರ ಅಡಿ ಎಫ್‌ಐಆರ್ ದಾಖಲಾಗಿದೆ.
ಮುಮ್ತಾಝ್ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.
ತನಿಖೆಗೆ ಆಗ್ರಹಿಸಿದ ಕರ್ನಾಟಕ ಮುಸ್ಲಿಂ ಜಮಾಅತ್
ಮುಮ್ತಾಝ್ ಅಲಿ ಯಾವತ್ತೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯುವವರೆಂದು ಊಹಿಸಲೂ ಸಾಧ್ಯವಿಲ್ಲ . ಅವರ ಸಾವಿನ ಹಿಂದೆ ನಿಗೂಢತೆಗಳು ಎದ್ದು ಕಾಣುತ್ತಿದ್ದು, ಆದ್ಧರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರಿಯಾದ ತನಿಖೆ ನಡೆಸಿ, ಸತ್ಯವನ್ನು ಹೊರತರಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ಇದನ್ನೂ ಓದಿ : PoSH ಸಮಿತಿ ರಚನೆ ಬಗ್ಗೆ 15 ದಿನಗಳ ಕಾಲಾವಕಾಶ ಕೋರಿದ ಕರ್ನಾಟಕ ಫಿಲ್ಮ್ ಚೇಂಬರ್


