2017 ಮತ್ತು 2022ರ ನಡುವೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಗುಜರಾತ್‌ನಲ್ಲಿ ಅತಿ ಹೆಚ್ಚು ಪೊಲೀಸ್ ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂಸತ್ತಿನಲ್ಲಿ ಕಳೆದ ವಾರ ಮಾಹಿತಿ ನೀಡಿರುವ ಸರ್ಕಾರವು, “ಗುಜರಾತ್ ರಾಜ್ಯದಲ್ಲಿ ಈ ಐದು ವರ್ಷಗಳಲ್ಲಿ 80 ಮಂದಿ ಪೊಲೀಸರ ವಶದಲ್ಲಿ ಸಾವನ್ನಪ್ಪಿದ್ದಾರೆ. 2021-22ರಲ್ಲಿ 24, 2020-21ರಲ್ಲಿ 17, 2019-20ರಲ್ಲಿ 12, 2018-19ರಲ್ಲಿ 13 ಮತ್ತು 2017-18ರಲ್ಲಿ 14 ಸಾವುಗಳು ದಾಖಲಾಗಿವೆ” ಎಂದು ಹೇಳಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಕಳೆದ ಐದು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 669 ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಫೆಬ್ರವರಿ 8 ರಂದು ಕಾಂಗ್ರೆಸ್ ಸಂಸದ ಫುಲೋ ದೇವಿ ನೇತಮ್ ಅವರು ಕೇಳಿದ ಪ್ರಶ್ನೆಗೆ ರೈ ಉತ್ತರಿಸಿದ್ದಾರೆ.

ನಿತ್ಯಾನಂದ ರೈ ಅವರು ಕಳೆದ ಜುಲೈನಲ್ಲಿ ಸಂಸತ್ತಿಗೆ ಮಾಹಿತಿ ನೀಡುತ್ತಾ, “2021-22ರಲ್ಲಿ ದೇಶದಲ್ಲಿ 2,544 ಕಸ್ಟಡಿ ಸಾವುಗಳು ವರದಿಯಾಗಿವೆ” ಎಂದು ತಿಳಿಸಿದ್ದರು. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು (501 ಸಾವುಗಳು) ಘಟಿಸಿರುವುದಾಗಿ ತಿಳಿಸಲಾಗಿತ್ತು.
ಪ್ರಕರಣಗಳಲ್ಲಿ ಆರೋಪಿಗಳಲ್ಲದೆ ಕಸ್ಟಡಿಗೆ ದೂಡಲ್ಪಟ್ಟ ಸಾಕ್ಷಿಗಳ ಸಾವನ್ನೂ ‘ಕಸ್ಟಡಿಯಲ್ ಡೆತ್’ ಎಂಬ ಪದದ ಮೂಲಕವೇ ಗುರುತಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.
ಬುಧವಾರ ಮಂಡಿಸಿದ ಅಂಕಿಅಂಶದಲ್ಲಿ, ಗುಜರಾತ್ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಕಸ್ಟಡಿ ಸಾವುಗಳು ವರದಿಯಾಗಿವೆ ಎಂದು ಸರ್ಕಾರ ಹೇಳಿದೆ. ಈ ರಾಜ್ಯದಲ್ಲಿ 2017-18 ರಿಂದ 2021-22ರ ನಡುವೆ 76 ಸಾವುಗಳು ದಾಖಲಾಗಿವೆ.
ಇದರ ನಂತರ ಉತ್ತರ ಪ್ರದೇಶ (41), ತಮಿಳುನಾಡು (40), ಬಿಹಾರ (38) ರಾಜ್ಯಗಳಿದ್ದು, ಕೊನೆಯ ಸ್ಥಾನದಲ್ಲಿರುವ ಸಿಕ್ಕಿಂ ಮತ್ತು ಗೋವಾದಲ್ಲಿ ತಲಾ ಒಂದು ಸಾವುಗಳು ಸಂಭವಿಸಿವೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿದ ಮಾಹಿತಿಗಳನ್ನು ಉಲ್ಲೇಖಿಸಿದ ರೈ, “ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ 201 ಜನರ ಕುಟುಂಬಗಳಿಗೆ 5.8 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಒಂದು ಪ್ರಕರಣದಲ್ಲಿ ಶಿಸ್ತು ಕ್ರಮವನ್ನೂ ಕೈಗೊಳ್ಳಲಾಗಿದೆ” ಎಂದ ಸದನಕ್ಕೆ ಮಾಹಿತಿ ನೀಡಿದ್ದಾರೆ.


