Homeಮುಖಪುಟ’ಹೊಸ ಭಾರತ’ದಲ್ಲಿ ಪತ್ರಿಕೋದ್ಯಮಕ್ಕಿರುವ ಬೆದರಿಕೆಗಳು: ಭಾಗ-2; ಮೌನದ ದೊಡ್ಡ ಬಲಿಪಶು ಸತ್ಯ

’ಹೊಸ ಭಾರತ’ದಲ್ಲಿ ಪತ್ರಿಕೋದ್ಯಮಕ್ಕಿರುವ ಬೆದರಿಕೆಗಳು: ಭಾಗ-2; ಮೌನದ ದೊಡ್ಡ ಬಲಿಪಶು ಸತ್ಯ

- Advertisement -
- Advertisement -

ಗೌರಿ ಲಂಕೇಶ್‌ರವರ 61ನೇ ಜನ್ಮದಿನದ ಅಂಗವಾಗಿ ನೀಡಿದ ಸ್ಮಾರಕ ಉಪನ್ಯಾಸ

(ಹಿರಿಯ ಪತ್ರಕರ್ತ, ಭಾರತದ ಮೊದಲ ಪ್ರಾದೇಶಿಕ ಟಿವಿ ಚಾನೆಲ್ ಏಷ್ಯಾನೆಟ್‌ನ ಸಂಸ್ಥಾಪಕರು ಮತ್ತು ಹಾಲಿ ಚೆನ್ನೈನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನ ಅಧ್ಯಕ್ಷರಾಗಿರುವ ಸಸಿಕುಮಾರ್ ಅವರು ಗೌರಿ ಲಂಕೇಶ್ ಅವರ 61ನೇ ಜನ್ಮದಿನದ ಅಂಗವಾಗಿ ನೀಡಿದ ಸ್ಮಾರಕ ಉಪನ್ಯಾಸದ ಆಯ್ದ ಮುಖ್ಯ ಭಾಗಗಳು ಇಲ್ಲಿವೆ. ಇದು ತದ್ರೂಪಿ ಪೂರ್ಣಪಾಠ ಅಲ್ಲವಾಗಿ, ವಿಡಿಯೋದಿಂದ ಬರಹ ರೂಪಕ್ಕೆ ಮಾಡಿದ ಕನ್ನಡ ಅನುವಾದವಾದರೂ, ಬಹುತೇಕ ಎಲ್ಲವೂ ಉಪನ್ಯಾಸಕರ ಮಾತುಗಳೇ ಆಗಿವೆ- ಅನುವಾದಕ.)

ನ್ಯಾಯಾಂಗದ ಸ್ವಾತಂತ್ರ್ಯ

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯಲ್ಲಿ ಮಾಧ್ಯಮ ಮತ್ತು ನ್ಯಾಯಾಂಗದ ಪಾತ್ರ ಪ್ರಮುಖವಾದದು. ನ್ಯಾಯಾಂಗದ ಪ್ರಮುಖ ಸದಸ್ಯರಾದ ಜಸ್ಟಿಸ್ ರೋಹಿಂಟನ್ ಫಾಲಿ ನಾರಿಮನ್ ಅವರು ಸಂವಿಧಾನದ ಮೇಲೆ ದಾಳಿಗಿಳಿದಿರುವ ಕೇಂದ್ರ ಕಾನೂನು ಸಚಿವರನ್ನು ತರಾಟೆಗೆ ತೆಗೆದುಕೊಂಡಿರುವುದರ ಬಗ್ಗೆ ಇತ್ತೀಚೆಗಷ್ಟೇ ನಾನು ಓದಿದೆ. ಅದು ನ್ಯಾಯಾಧೀಶರ ನೇಮಕಾತಿ ಕುರಿತ ಕೊಲಿಜಿಯಂ ವ್ಯವಸ್ಥೆಯ ಕುರಿತಾಗಿತ್ತು. ಈ ಕುರಿತು ಮಾತನಾಡುವುದು ಆಗತ್ಯವಾದರೂ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸದ್ಯಕ್ಕೆ ನ್ಯಾಯಾಧೀಶರುಗಳಾಗಿ ಕೆಲಸ ಮಾಡುತ್ತಿರುವವರು ಈ ಕುರಿತು ರಾಜಕೀಯ ಮಾತನಾಡುವಂತಿಲ್ಲ; ಅವರು ಮಾರುಕಟ್ಟೆಗೆ ಬಂದು ಬೀದಿ ಚರ್ಚೆ ಮಾಡಬಾರದು. ಆದುದರಿಂದ ಮಾಜಿ ನ್ಯಾಯಮೂರ್ತಿಯೊಬ್ಬರು ಈ ಕುರಿತು ಮಾತನಾಡಿದ್ದಾರೆ. ಅವರು ಹೇಳುತ್ತಾರೆ: ನ್ಯಾಯಾಂಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾದರೆ- ಅವರ ಮಾತುಗಳಲ್ಲೇ ಹೇಳಬೇಕೆಂದರೆ- ’ನಾವು ಕತ್ತಲ ಯುಗದ ಪಾತಾಳಕ್ಕೆ ಬೀಳಲಿದ್ದೇವೆ’.

ಇದನ್ನು ಹೇಳುವಾಗ ನನಗೆ ಈಗಿನ ಮುಖ್ಯ ನ್ಯಾಯಮೂರ್ತಿಯವರ ತಂದೆ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ನೆನಪಾಗುತ್ತಿದ್ದಾರೆ; ತುರ್ತುಪರಿಸ್ಥಿತಿ ಹೇರಲಾಗುತ್ತಿದ್ದ ಸಂದರ್ಭದಲ್ಲಿ ’ಮಿನರ್ವ ಮಿಲ್ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ತೀರ್ಪು ನೀಡುತ್ತಾ ಅವರು ಹೇಳಿದ ಮಾತುಗಳು ನೆನಪಾಗುತ್ತವೆ. ಸಂವಿಧಾನದಲ್ಲಿ ಮೂರು ಮುಖ್ಯ ಪರಿಚ್ಛೇದಗಳಿವೆ. ಕರಾಳ ಯುಗ ಮತ್ತು ನಾವು ಒಂದು ದೇಶವಾಗಿ ಎಚ್ಚೆತ್ತುಕೊಳ್ಳಬೇಕಾದ ಸ್ವಾತಂತ್ರ್ಯದ ಸ್ವರ್ಗದ ನಡುವೆ ಇರುವ ವ್ಯತ್ಯಾಸ ಆ ಪರಿಚ್ಛೇದಗಳು ಎಂದು ಅವರು ಹೇಳುವಾಗ, ಕವಿ ರವೀಂದ್ರನಾಥ ಠಾಗೋರ್ ಅವರ ಪ್ರಖ್ಯಾತ ಕವನ ’ವೇರ್ ದಿ ಮೈಂಡ್ ಇಸ್ ವಿಥೌಟ್ ಫಿಯನ್’ನ ಸಾಲುಗಳನ್ನು ಉಲ್ಲೇಖಿಸಿದ್ದರು.

ಈ ಪರಿಚ್ಛೇದಗಳಲ್ಲಿ ಮುಖ್ಯವಾದವು ಎಂದರೆ, ಕಾನೂನಿನ ಎದುರು ಎಲ್ಲಾ ನಾಗರಿಕರ ಸಮಾನತೆಯ ಕುರಿತು ಹೇಳುವ 14ನೇ ಪರಿಚ್ಛೇದ ಮತ್ತು ವಾಕ್, ಅಭಿವ್ಯಕ್ತಿ ಮತ್ತಿತರ ಸ್ವಾತಂತ್ರ್ಯಗಳ ಬಗ್ಗೆ ಹೇಳುವ 19ನೇ ಪರಿಚ್ಛೇದ. ಇದರಲ್ಲಿ 19(1), ಪತ್ರಕರ್ತರ ಪಾತ್ರಕ್ಕೆ ಒಂದು ಆಧಾರವನ್ನು ಒದಗಿಸುತ್ತದೆ. ಯುಎಸ್‌ಎಯಲ್ಲಿ ಇರುವಂತೆ, ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪ್ರತ್ಯೇಕವಾಗಿ ಏನನ್ನೂ ಹೇಳುವುದಿಲ್ಲ. ಅಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಯಾವುದೇ ಕಾನೂನನ್ನು ಸಂವಿಧಾನಕ್ಕೆ ತರಲಾಗದು ಎಂದು ಹೇಳುತ್ತದೆ. ನಮ್ಮಲ್ಲಿಯೂ ಅಂಥದ್ದೊಂದು ಇರಬೇಕಿತ್ತು. ನಮ್ಮಲ್ಲಿ ದುರದೃಷ್ಟವಶಾತ್ ನೆಹರೂ ಅವರೇ ಮಂಡಿಸಿದ ಮೊದಲ ತಿದ್ದುಪಡಿಯಾದ 19(2) ’ಸಾಧುವಾದ ನಿಯಂತ್ರಣ’ದ ಅಥವಾ ’ವಿವೇಚನಾಯುಕ್ತ ನಿಯಂತ್ರಣ’ದ ಕುರಿತು ಮಾತನಾಡುತ್ತದೆ. ಸಾಧುವಾದ ನಿಯಂತ್ರಣವೇನೂ ತಪ್ಪಲ್ಲ. ಆದರೆ ಇದನ್ನೇ ಪತ್ರಕರ್ತರ ನಿಯಂತ್ರಣಕ್ಕಾಗಿ ಒಂದು ಕೊರಳ ಹಗ್ಗದಂತೆ ಬಳಸಲಾಗುತ್ತಿದ್ದು, ಉಳಿದ ಆರೋಪಗಳ ಜೊತೆಗೆ ರಾಷ್ಟ್ರವಿರೋಧಿ ಕೃತ್ಯ ಇತ್ಯಾದಿಗಳನ್ನು ಪತ್ರಕರ್ತರ ಮೇಲೆ ಹೇರಲಾಗುತ್ತಿದೆ. ಇದನ್ನು ಸಮರ್ಥಿಸುತ್ತಾ ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷರೊಬ್ಬರು ಪರಿಚ್ಛೇದ 19(2) ಬಹಳ ಮುಖ್ಯ ಎಂಬಂತೆ ಮಾತನಾಡಿದ್ದರು. ಪರಿಚ್ಛೇದ 19ರಲ್ಲಿ ನೀಡಲಾದ ಎಲ್ಲಾ ಸ್ವಾತಂತ್ರ್ಯಗಳನ್ನು ಕಡೆಗಣಿಸಿ, 19(2)ನ್ನೇ ಮುಖ್ಯ ಎಂಬಂತೆ, ಅದನ್ನು ಪತ್ರಿಕಾ ಸ್ವಾತಂತ್ರ್ಯದ ದಮನಕ್ಕೆ ಬಳಸುವುದೆಂದರೆ ಕುದುರೆಯ ಮುಂದೆ ಗಾಡಿಯನ್ನು ಕಟ್ಟಿದಂತೆ. 19(2) ಇಲ್ಲದಿದ್ದರೆ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಮನ ನಡೆಯುತ್ತಿರಲಿಲ್ಲ ಎಂದು ಹೇಳುವಂತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ 1857ರ ಸಿಪಾಯಿ ದಂಗೆಯ ನಂತರದಿಂದಲೇ ಪತ್ರಿಕೆಗಳ ಬಾಯಿ ಮುಚ್ಚಿಸುವ ಕೆಲಸಗಳು ನಡೆದಿವೆ. ಪ್ರಾದೇಶಿಕ ಪತ್ರಿಕೆಗಳ ಕಾಯಿದೆ, 1910ರ ಭಾರತೀಯ ಪತ್ರಿಕೆಗಳ ಕಾಯಿದೆ ಸೇರಿದಂತೆ ಹಲವಾರು ಕಾಯಿದೆಗಳು ಬಂದಿವೆ. ಎರಡನೇ ಮಹಾಯುದ್ಧದ ಕಾಲದಲ್ಲಂತೂ ಅದೇ ನೆಪದಲ್ಲಿ ಎಲ್ಲಾ ವಿಷಯಗಳ ಕುರಿತು ಸಾರಾಸಗಟು ಬಾಯಿಮುಚ್ಚಿಸುವ ಕಾಯಿದೆಗಳು ಬಂದಿವೆ. ಇವೆಲ್ಲವುಗಳ ಕಾರಣದಿಂದ ಮೊದಲ ತಿದ್ದುಪಡಿಯಾದ 19(2) ಬಂತು. ನೆಹರೂ ಅವರು ಇದನ್ನು ತರಲು ಆ ಕಾಲಘಟ್ಟ ಕಾರಣವಾಗಿತ್ತು. ಅದು ಮುಖ್ಯವಾಗಿ ಬೇಜವಾಬ್ದಾರಿಯುತ ವರದಿಗಾರಿಕೆಯ ವಿರುದ್ಧವಾಗಿತ್ತು. ಅಂಬೇಡ್ಕರ್ ಅವರು ಕೂಡಾ ಇದನ್ನು ಬೆಂಬಲಿಸಿದ್ದರು. ಆದರೆ, ಬೇರೆಯೇ ಕಾರಣಗಳಿಗಾಗಿ. ಅವರ ಉದ್ದೇಶ ಬೇರೆಯೇ ಆಗಿತ್ತು. ಅದು ಆ ಕಾಲದಲ್ಲಿ ಕಾನೂನು ಮತ್ತು ಶಿಸ್ತಿನ ಜವಾಬ್ದಾರಿ ಹೊತ್ತಿದ್ದ ರಾಜ್ಯ ಸರಕಾರಗಳಿಗೆ ಹೆಚ್ಚಿನ ಆಧಿಕಾರ ಕೊಡುವುದಾಗಿತ್ತು. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ವಿರುದ್ಧವಾಗಿ ಪೂರ್ವಾಗ್ರಹದ ವರದಿ ಮಾಡುವುದನ್ನು ತಡೆಯುವ ಉದ್ದೇಶ ಹೊಂದಿತ್ತು. ಆ ಕಾಲದಲ್ಲಿ ಇಂತವು ಸಾರಾಸಗಟಾಗಿ ನಡೆಯುತ್ತಿದ್ದವು.

ಸಂವಿಧಾನದ ಮೇಲಿನ ದಾಳಿ

ಸಂಸತ್ತಿಗೆ ಸಂವಿಧಾನದ ಮೂಲಭೂತ ಸಂರಚನೆಗಳನ್ನು ಬದಲಾಯಿಸುವ ಅಧಿಕಾರವಿಲ್ಲ ಎಂದು ಹೇಳುವ ಐತಿಹಾಸಿಕ ’ಕೇಶವಾನಂದ ಭಾರತಿ ವರ್ಸಸ್ ಕೇರಳ ಸರಕಾರ’ ಪ್ರಕರಣದ ತೀರ್ಪು ಸರಿಯಿಲ್ಲ ಎಂದು ಕೇಂದ್ರ ಕಾನೂನು ಸಚಿವರು ಮತ್ತು ಉಪ ರಾಷ್ಟ್ರಪತಿ ತೆಗೆದಿರುವ ತಗಾದೆ ಆಗೊಮ್ಮೆ ಈಗೊಮ್ಮೆ ನಡೆಯಬಹುದಾದ ಪ್ರಕರಣವಲ್ಲ. ಸಂವಿಧಾನವನ್ನು ಬದಲಿಸಬಹುದು, ಅದು ತಾವು ಬಯಸಿ ಬದಲಿಸಿದಂತೆ ಇರಬೇಕು ಎಂಬ ಉದ್ದೇಶದಿಂದ ನಡೆಸಿದ ವ್ಯವಸ್ಥಿತ ಹುನ್ನಾರದ ಭಾಗವದು. ಪರಿಚ್ಛೇದ 19(2) ಬಂದಾಗ ಅದನ್ನು ವಿರೋಧಿಸಿದ ಏಕೈಕ ವ್ಯಕ್ತಿ ಎಂದರೆ, ಈಗಿನ ಬಿಜೆಪಿಯ ಮೂಲಪಕ್ಷ ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ. ಅಲ್ಲಿಂದ ಇಲ್ಲಿಗೆ ಎಲ್ಲಿಯವರೆಗೆ ಬಂದಿದ್ದೇವೆ ನೋಡಿ. ಒಂದು ಕಾಲದಲ್ಲಿ ಪತ್ರಿಕೆಗಳಿಗೆ ಅನಿಯಂತ್ರಿತ ಸ್ವಾತಂತ್ರ್ಯ ಕೊಡುವುದರ ಪರವಾಗಿದ್ದವರು, ತುರ್ತುಪರಿಸ್ಥಿತಿಯ ಕಾಲದಲ್ಲಿ ಪತ್ರಿಕಾ ನಿರ್ಬಂಧವನ್ನು ವಿರೋಧಿಸಿದವರು ಈಗೇನು ಮಾಡುತ್ತಿದ್ದಾರೆ? ತುರ್ತುಪರಿಸ್ಥಿತಿಯು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪುಚುಕ್ಕೆ ಮತ್ತು ಅದು ಕಪ್ಪುಚುಕ್ಕೆಯಾಗಿಯೇ ಉಳಿಯುವುದು. ಅದರ ಕುರಿತು ಸಂಶಯವೇ ಇಲ್ಲ. ಆದರೆ, ಇಂದು ಅವರಿಂದಲೇ ಸಂವಿಧಾನದ ಆಚರಣೆಯಾಗಿರುವ ಗಣರಾಜ್ಯೋತ್ಸವ ದಿನಾಚರಣೆಯ ಬೆನ್ನಿಗೇ ನೇರವಾಗಿ ಸಂವಿಧಾನದ ಮೇಲೆ ದಾಳಿಗಳು ನಡೆಯುತ್ತಿವೆ. ಅದಕ್ಕಾಗಿಯೇ ರೋಹಿಂಟನ್ ನಾರಿಮನ್ ಅಂಥವರು ಅಷ್ಟು ವಿಚಲಿತರಾಗಿ ಸಂವಿಧಾನದ ಪರವಾಗಿ ಮಾತನಾಡಬೇಕಾಯಿತು.

ಪತ್ರಿಕಾ ಸ್ವಾತಂತ್ರ್ಯ

ಇಂದು ಪತ್ರಿಕಾ ಸ್ವಾತಂತ್ರ್ಯಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸವಾಲು ಹಾಕಲಾಗುತ್ತಿದೆ. ಸವಾಲು ಏನು- ಬೆದರಿಕೆಯನ್ನೇ ಒಡ್ಡಲಾಗುತ್ತಿದೆ. ನೀವು ನಮ್ಮ ಪರವಾಗಿ ಇಲ್ಲದಿದ್ದರೆ, ನಿಮಗೆ ನಮ್ಮ ಸರಕಾರಿ ಜಾಹೀರಾತುಗಳು ಸಿಗುವುದಿಲ್ಲ. ಬೇರೆಯವರ ಜಾಹೀರಾತುಗಳೂ ಸಿಗುವುದಿಲ್ಲ. ಬೇರೆಯವರು ಕೊಟ್ಟರೆ, ಅವರಿಗೆ ಹೇಳಲಾಗುತ್ತದೆ: ’ನೀವು ಅವರಿಗೆ ಜಾಹೀರಾತು ಕೊಟ್ಟರೆ, ಅದನ್ನೊಂದು ನಮ್ಮ ವಿರೋಧಿ ಕೃತ್ಯ ಎಂದು ಪರಿಗಣಿಸಲಾಗುತ್ತದೆ’ ಎಂದು. ಸಹಜವಾಗಿಯೇ ಉದ್ಯಮಿಗಳು ಬೆದರುತ್ತಾರೆ. ಇದು ಆಮಿಷದಿಂದ ಬೆದರಿಕೆಯ ತನಕ ಮುಂದುವರಿದಿದೆ. ನೀವು ನಮ್ಮನ್ನು ಬೆಂಬಲಿಸದಿದ್ದರೆ, ನಮ್ಮ ಗೆಳೆಯರಾದ ಐಟಿ, ಐಡಿ ಮುಂತಾದವರು ನಿಮ್ಮ ಬಾಗಿಲಿಗೆ ಬರುತ್ತಾರೆ. ಅದರಿಂದಾಗಿ, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬಹಳಷ್ಟು ಮಂದಿ ರಾಜಿ ಮಾಡಿಕೊಂಡಿದ್ದಾರೆ; ಮತ್ತೆ ಕೆಲವರು ವಾಸ್ತವನ್ನು ಬಿಚ್ಚಿಟ್ಟು ಗಟ್ಟಿಯಾಗಿ ಮಾತನಾಡುವವರು ಉಳಿದುಕೊಂಡಿದ್ದಾರೆ. ಆದರೂ, ಅವರ ಬಾಯಿಯನ್ನು ಇಂದಲ್ಲ ನಾಳೆ ಮುಚ್ಚಿಸಲು ಸಾಧ್ಯ ಎಂದು ನಮಗೆ (* ಸರ್ಕಾರದ ದೃಷ್ಟಿಯಿಂದ ಹೇಳ್ತಾ ಇರೋದು- ಅನುವಾದಕ) ಗೊತ್ತಿದೆ. ಆದರೆ, ಚಿಕ್ಕ ಎಲೆಕ್ಟ್ರಾನಿಕ್ ಮಾಧ್ಯಮಗಳು, ಪರ್ಯಾಯ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಕೆಲವರು ಸ್ವಲ್ಪ ಬೆದರಿದ್ದಾರೆ. ಆದರೂ ಹೆಚ್ಚಿನವರು ವಾಸ್ತವಿಕವಾಗಿ ಬರೆಯುತ್ತಾ, ಆಳವಾದ ವರದಿಗಳನ್ನು ಮಾಡುತ್ತಾ ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲಿ ವಸ್ತುನಿಷ್ಠತೆ ಮತ್ತು ಪ್ರಾಮಾಣಿಕತೆಗಳನ್ನು ಕಾಣಬಹುದು. ಇತ್ತೀಚೆಗೆ ಬಿಬಿಸಿಯು ಎರಡು ಭಾಗಗಳಲ್ಲಿ ಮಿಸ್ಟರ್ ಮೋದಿಯವರ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿತು. ಅದು ಭಾರತೀಯ ವೀಕ್ಷಕರಿಗಾಗಿ ಆಗಿರಲಿಲ್ಲ. ಅದು ಯುಕೆಯ ವೀಕ್ಷಕರಿಗಾಗಿತ್ತು. ಆದರೂ ಅದು ಪರ್ಯಾಯ ಅಥವಾ ಬದಲಿ ಮಾಧ್ಯಮದ ಮೂಲಕ ಭಾರತೀಯರನ್ನು ತಲುಪಿತು. ಸರಕಾರವು ತಕ್ಷಣವೇ ತುರ್ತುಪರಿಸ್ಥಿತಿಯ ಕಾಲದಂತೆ ಅವುಗಳ ಪ್ರಸಾರವನ್ನು ತಡೆಹಿಡಿಯಿತು. ಅದರಲ್ಲಿ ಅದೆಷ್ಟು ಯಶಸ್ವಿಯಾಯಿತು, ನಿಮಲ್ಲಿ ಎಷ್ಟು ಜನರು ಅದನ್ನು ನೋಡಿದ್ದೀರಿ ಎಂದು ನನಗೆ ಗೊತ್ತಿಲ್ಲ.

ಆನಂದ ಪಟವರ್ಧನ್

ನಮ್ಮಲ್ಲೇ ಆನಂದ ಪಟವರ್ಧನ್ ಹಿಂದಿನಿಂದಲೂ ಪ್ರಭುತ್ವದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ಅವರು ಬಾಬ್ರಿ ಮಸೀದಿ ನೆಲಸಮದ ಕುರಿತು ’ರಾಮ್ ಕೆ ನಾಮ್’ ಅಂದರೆ, ’ರಾಮನ ಹೆಸರಲ್ಲಿ’ ಎಂಬ ಒಂದು ಸಾಕ್ಷ್ಯಚಿತ್ರ ಮಾಡಿದರು. ಅದಕ್ಕೆ ಅಡಚಣೆಗಳನ್ನು ಒಡ್ಡಲಾಯಿತು. ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾದ ಈ ಸಾಕ್ಷ್ಯಚಿತ್ರವನ್ನು ಬಿಬಿಸಿಯಂತೆ ಸ್ವಾಯತ್ತವಾದ ದೂರದರ್ಶನದಲ್ಲಿ ಪ್ರಸಾರ ಮಾಡಬೇಕೆಂದು ಅವರು ಸುಪ್ರೀಂಕೋರ್ಟ್ ಮೊರೆಹೋದರು. ಚಿತ್ರವನ್ನು ಪ್ರಸಾರ ಮಾಡುವಂತೆ ನ್ಯಾಯಾಲಯ ಆದೇಶಿಸಿತು. ದೂರದರ್ಶನ ಅದನ್ನು ಪ್ರಸಾರ ಮಾಡಿತು. ಯಾವಾಗ? ಮಧ್ಯರಾತ್ರಿಯ ಬಳಿಕ- ಯಾರೂ ನೋಡದ ಸಮಯದಲ್ಲಿ. ಅವರಿಗೆ, ನಿಮ್ಮ ಆದೇಶದಂತೆ ನಾವು ಚಿತ್ರವನ್ನು ಪ್ರಸಾರ ಮಾಡಿದ್ದೇವೆ ಎಂದು ನ್ಯಾಯಾಲಯಕ್ಕೆ ತೋರಿಸಬೇಕಾಗಿತ್ತು. ಬಾಯಿ ಮುಚ್ಚಿಸುವುದು ಎಂದರೆ ಇದೇ. ಲಿಬರಾನ್ ಆಯೋಗದ ಮುಂದೆ ಇದು ಸಾಕ್ಷ್ಯವಾಯಿತು. ನಮ್ಮಲ್ಲಿ ಬಹಳಷ್ಟು ಸಾಕ್ಷ್ಯಚಿತ್ರ ನಿರ್ಮಾಪಕರು ಇದ್ದಾರೆ. ಇಲ್ಲಿ ಕವಿತಾ ಲಂಕೇಶ್ ಅವರು ತಮ್ಮಕ್ಕ ಗೌರಿ ಲಂಕೇಶ್ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದಾರೆ. ಇತ್ತೀಚೆಗೆ ತಮ್ಮ ಚಿತ್ರಕ್ಕಾಗಿ (ಕಾಳಿ) ನೀಡಿದ ಕಿರುಕುಳದಿಂದ ಮಣಿಮೇಖಲೈ ತಾತ್ಕಾಲಿಕ ಪರಿಹಾರ ಪಡೆದರು.

ಭಯದ ವಾತಾವರಣ

ಜೀನ್ ಪಾಲ್ ಸಾರ್ತ್ರೆ ಅವರನ್ನು ಹಿಂದೆ ಬೊಲಿವಿಯಾದಲ್ಲಿ ಬಂಧಿಸಲಾಗಿತ್ತು. ಅವರು ಬೊಲಿವಿಯನ್ ಕ್ರಾಂತಿಯನ್ನು ಪ್ರಚೋದಿಸಿದರು ಎಂಬುದಕ್ಕಾಗಿ ಅಲ್ಲ; ಅವರು ಕ್ರಾಂತಿಯ ಕುರಿತು ಪುಸ್ತಕ ಬರೆದರು ಎಂಬುದಕ್ಕಾಗಿ. ಆ ಪುಸ್ತಕದ ಹೆಸರು ’ರೆವಲ್ಯೂಷನ್ ವಿಥಿನ್ ಎ ರೆವಲ್ಯೂಷನ್’ ಎಂದು; ಅಂದರೆ, ಕ್ರಾಂತಿಯ ಒಳಗೊಂದು ಕ್ರಾಂತಿ. ಇಂದು ಒಂದು ಚಲನಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದರೆ ಅದಕ್ಕೆ ಸೆನ್ಸಾರ್ ಮಂಡಳಿಯ ಅನುಮತಿ ಬೇಕು. ನೀವು ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರವೂ ಚಿತ್ರವನ್ನು ಪ್ರದರ್ಶಿಸಬಾರದು ಎಂದರೆ? ಇತ್ತೀಚಿನ ’ಪಠಾಣ್’ ಚಿತ್ರಕ್ಕೆ ಏನಾಯಿತು ಎಂದು ನೋಡಿದ್ದೇವೆ. ಅವರ ಪ್ರಯತ್ನ ಎಷ್ಟು ಯಶಸ್ವಿಯಾಯಿತು ಎಂದು ನನಗೆ ಗೊತ್ತಿಲ್ಲ. ಅದು ಬಾಕ್ಸ್‌ಆಫೀಸಿನಲ್ಲಿ ಅಲೆಗಳನ್ನು ಎಬ್ಬಿಸಿತು. ಇದಕ್ಕೆ ಹೊರತಾಗಿ ಬೀದಿಗಳಲ್ಲಿ ಬಾಯಿಮುಚ್ಚಿಸುವ ಬೀದಿಗುಂಪು, ಸಂಘಟನೆಗಳನ್ನು ಪ್ರಚೋದಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಅವರಿಗೆ ಬೇಡವೆಂದರೆ, ನೀವು ಅವುಗಳ ಪ್ರದರ್ಶನ ಮಾಡಲಾಗದು. ಇಂಥಾ ಘಟನೆಗಳು ಒಂದರ ನಂತರ ಇನ್ನೊಂದು ನಡೆಯುತ್ತಿವೆ. ಒಂದು ಕೆಟ್ಟ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಯಾರು ಬೇಕಾದರೂ ಮೋಟಾರ್ ಸೈಕಲುಗಳಲ್ಲಿ ಬಂದು, ನಾಡಪಿಸ್ತೂಲುಗಳಿಂದ ಯಾರಿಗಾದರೂ ಗುಂಡು ಹಾರಿಸಬಹುದು; ಯಾರೋ ಒಬ್ಬನು ಅಥವಾ ಒಬ್ಬಳು ಬರೆದದ್ದು, ಮಾತನಾಡಿದ್ದು ಅಥವಾ ತೋರಿಸಿದ್ದು ಅವರಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ. ಯಾವುದೇ ಶಿಕ್ಷೆಯ ಭಯವಿಲ್ಲದೇ ಏನನ್ನಾದರೂ ಮಾಡಬಹುದಾದ ವಾತಾವರಣವನ್ನು ಸೃಷ್ಟಿಸಿರುವ ಕುರಿತಾಗಿಯೇ ಬಿಬಿಸಿ ಸಾಕ್ಷ್ಯಚಿತ್ರದ ಮೊದಲ ಭಾಗದಲ್ಲಿ ಹೇಳಿರುವುದು.

ಅವರು ಬೆಂಬಲಿಸುವ ಸಾಮಾಜಿಕ ಮಾಧ್ಯಮಗಳಲ್ಲಿ, ಮತ್ತೆಮತ್ತೆ ಒಳಗೊಳಗೇ ಚಕ್ರಾಕಾರದಲ್ಲಿ ತಿರುಗುವ ಗುಂಪುಗಳಲ್ಲಿ ಒಂದೇ ರೀತಿಯ ವಿಚಾರಗಳನ್ನು, ವಿಷವನ್ನು, ಸುಳ್ಳನ್ನು ಬಿತ್ತಿ ಹರಡಲಾಗುತ್ತಿದೆ. ಈ ರೀತಿಯಲ್ಲಿ ಒಂದು ಕಡೆಯಲ್ಲಿ ಸರಕಾರದ ಭಯ, ಇನ್ನೊಂದು ಕಡೆಯಲ್ಲಿ ಸಾಮಾಜಿಕ ಭಯದ ವಾತಾವರಣವನ್ನು ಉಂಟುಮಾಡಲಾಗುತ್ತಿದೆ. ಉತ್ತರ ಪ್ರದೇಶದ ಚುನಾವಣಾ ಪ್ರಚಾರ ನೆನಪಿರಬಹುದು.

ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

ದೇಶದ 80 ಶೇಕಡಾ ಜನರಿಗೆ 20 ಶೇಕಡಾ ಜನರ ಬೆದರಿಕೆ ಇದೆ ಎಂದು ಪ್ರಚಾರ ಮಾಡಲಾಯಿತು. ಮೊತ್ತ ಮೊದಲಾಗಿ, ಇದರಲ್ಲಿ ಸಾಮಾನ್ಯ ವಿವೇಕವೇ ಇಲ್ಲ. ಇದೇ ರೀತಿಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ದ್ವೇಷವನ್ನು ಹರಡಲಾಗುತ್ತದೆ. ಒಂದೇ ರೀತಿಯ ವಿಚಾರಗಳನ್ನು ಹೊಂದಿರುವ ಸಾವಿರಾರು ಜನರ ಗುಂಪಿನಿಂದ ಭಿನ್ನವಾಗಿ ಮಾತನಾಡುವವರು ಅವರಾಗಿಯೇ ಹೊರಗೆ ಹೋಗುವಂತೆ ಮಾಡಲಾಗುತ್ತದೆ. ಇಲ್ಲವೇ ಅದರ ನಿರ್ವಾಹಕರು ಅಂಥವರಿಗೆ ಬಾಗಿಲು ತೋರಿಸುತ್ತಾರೆ. ಮತ್ತೆಮತ್ತೆ ಹೇಳುವ ಸುಳ್ಳುಗಳಿಂದಾಗಿ ಜನರು ಬಾವಿಗಳ ಒಳಗಿನ ಕಪ್ಪೆಗಳಾಗುತ್ತಾರೆ, ಆದರೆ ತಾವು ಸಮುದ್ರದಲ್ಲಿರುವ ಮೀನುಗಳು, ತಮಗೆ ಜಗತ್ತಿನ ಎಲ್ಲಾ ವಿಚಾರಗಳು ತಿಳಿದಿವೆ ಎಂದು ಭಾವಿಸುತ್ತಾರೆ. ಇದೊಂದು ತಾಂತ್ರಿಕವಾದ ಸಮಸ್ಯೆ. ಇದು ಭಾರತದಲ್ಲಿ ಮಾತ್ರ ನಡೆಯುವ ವಿಚಾರವಲ್ಲ. ಪ್ರಭಾವಿ, ಸರ್ವಾಧಿಕಾರಿ ಪ್ರವೃತ್ತಿಯ ನಾಯಕರಿರುವ ಎಲ್ಲಾ ದೇಶಗಳಲ್ಲಿಯೂ ಇದು ನಡೆಯುತ್ತದೆ.

ಹಾಗಾಗಿ ಮುಖ್ಯವಾಹಿನಿಯ ಮಾಧ್ಯಮಗಳು ಮಹತ್ವ ಕಳೆದುಕೊಳ್ಳುತ್ತಿವೆ. ನಿಯಂತ್ರಿತ ಮಾಧ್ಯಮದಲ್ಲಿ ಅಪಪ್ರಚಾರಗಳನ್ನು ಮಾಡಲು ಸಾಧ್ಯವಿರುವಾಗ, ಉಳಿದ ಮಾಧ್ಯಮಗಳನ್ನು ಯಾಕೆ ಲೆಕ್ಕಿಸಬೇಕು. ಬಹುಶಃ ಆದಕ್ಕಾಗಿಯೇ ನಮ್ಮ ಪ್ರಧಾನಿಯವರು ಅಧಿಕಾರಕ್ಕೆ ಬಂದ ಇಷ್ಟು ವರ್ಷಗಳಲ್ಲಿ ಒಂದೇ ಒಂದು ಮಾಧ್ಯಮಗೋಷ್ಠಿ ನಡೆಸಿಲ್ಲ. ಯಾಕೆಂದರೆ, ಅವರಿಗೆ ಅದರ ಅಗತ್ಯವಿಲ್ಲ. ಸ್ವಲ್ಪ ಸಮಯದ ಹಿಂದೆ, ಮಾಧ್ಯಮವು ತಾನೇ ಎಲ್ಲವನ್ನೂ ಮುನ್ನಡೆಸುತ್ತೇನೆ ಎಂಬ ಅಹಂಕಾರದಲ್ಲಿತ್ತು. ಅಂದರೆ, ಮಾಧ್ಯಮವು ಈಗಿನ ದುಸ್ಥಿತಿಗೆ ಬರುವ ಮೊದಲು. ನಾನು ಇಷ್ಟಪಡುವ ಪ್ರಖ್ಯಾತ ಅರ್ಥಶಾಸ್ತ್ರಜ್ಞ, ಒಡಿಶಾದ ಪ್ರಭಾತ್ ಪಟ್ನಾಯಕ್ ಹೇಳಿದ್ದರು: ಗಾಡಿಯ ಕೆಳಗೆ, ಅದರ ನೆರಳಿನಲ್ಲಿ ನಡೆಯುವ ನಾಯಿಯು, ತಾನೇ ಗಾಡಿಯನ್ನು ಮುನ್ನಡೆಸುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಇರುವಂತೆ ಮುಖ್ಯವಾಹಿನಿಯ ಮಾಧ್ಯಮವು ಭ್ರಮೆಯಲ್ಲಿದೆ. ಇದು ಸ್ವಲ್ಪ ಹೆಚ್ಚೆನಿಸಬಹುದು. ಡೊನಾಲ್ಡ್ ಟ್ರಂಪ್ ಕೂಡಾ ಒಂದು ಹಂತದಲ್ಲಿ ಮಾಧ್ಯಮ ಹೇಳಿಕೆಗಳನ್ನು ಕಡಿತಗೊಳಿಸಿದ್ದರು. ಟ್ವಿಟರ್, ಫೇಸ್‌ಬುಕ್, ಮನ್ ಕಿ ಬಾತ್, ಸರಕಾರಿ ಏಜೆನ್ಸಿ ಇತ್ಯಾದಿಗಳ ಮೂಲಕ ನೇರವಾಗಿ ಜನರನ್ನು ತಲುಪಬಹುದಾದರೆ, ಅದರಲ್ಲಿ ತಪ್ಪೇನಿಲ್ಲ. ಒಟ್ಟಿನಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಇಂದು ಹಿಂದಿನಷ್ಟು ಪ್ರಭಾವಿಗಳಾಗಿ ಉಳಿದಿಲ್ಲ. ಅವು ಈಗ ಒಂದೋ ಸರಕಾರದ ಒತ್ತಡಕ್ಕೆ ಶರಣಾಗುತ್ತವೆ ಇಲ್ಲವೇ, ಸರಕಾರವನ್ನು ಎದುರು ಹಾಕಿಕೊಳ್ಳಲು ಬಯಸದೇ ತೆಪ್ಪಗಿರುತ್ತವೆ. ಇದರ ದೊಡ್ಡ ಬಲಿಪಶು ಎಂದರೆ, ಸತ್ಯ. ಸತ್ಯವನ್ನು ಮೌನ ಅಥವಾ ಸುಳ್ಳು ಬದಲಿಸುತ್ತಿದೆ. ಕಟ್ಟಾ ಸುಳ್ಳುಗಳನ್ನು ಪ್ರತಿ ನಿತ್ಯ ಹೇಳುವ ಚಾನೆಲ್‌ಗಳನ್ನು ನಾನು ಹೆಸರಿಸಬೇಕಾಗಿಲ್ಲ.

ಇಂದು ಮಾಧ್ಯಮಗಳ ಮುಂದಿ ಇರುವ ಸವಾಲು ಇದೇ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು? ಜನರ ಹಿತಾಸಕ್ತಿಯ ಪ್ರಶ್ನೆಗಳನ್ನು ಹೇಗೆ ಚರ್ಚಿಸಬೇಕು? ಜನರ ಆಸಕ್ತಿಯೆಂಬುದು ಸಾರ್ವಜನಿಕ ಹಿತಾಸಕ್ತಿ ಆಗಬೇಕೆಂದಿಲ್ಲ. ಆದುದರಿಂದ ಈಗ ಮುಖ್ಯವಾಹಿನಿಯ ಮಾಧ್ಯಮಗಳು ಸಾರ್ವಜನಿಕ ಹಿತಾಸಕ್ತಿಯ ಬದಲು, ಸರಕಾರಗಳ ವಿಮರ್ಶೆಯ ಬದಲು ಜನರಿಗೆ ಸುಳ್ಳುಗಳನ್ನು, ಖ್ಯಾತ ವ್ಯಕ್ತಿಗಳ ಖಾಸಗಿ ಜೀವನವನ್ನು, ಗಾಸಿಪ್‌ಗಳು, ರಂಜಕ ಸುದ್ದಿಗಳನ್ನು ಬಿತ್ತುತ್ತಿವೆ. ಇದು ಪ್ರಭುತ್ವಕ್ಕೆ ಚೆನ್ನಾಗಿ ಸರಿಹೊಂದುತ್ತದೆ. ಇದರ ಜೊತೆಗೆ ಟ್ರೋಲ್ ಫ್ಯಾಕ್ಟರಿಗಳು ಮತ್ತೆಮತ್ತೆ ಸುಳ್ಳುಗಳನ್ನು ಹೇಳಿ ಏನೋ ನಡೆಯುತ್ತಿರುವ ಭ್ರಮೆ ಹುಟ್ಟಿಸುತ್ತವೆ. ನೀವು ಇಂಥಾ ಸುಳ್ಳುಗಳನ್ನು ಬಯಲಿಗೆಳೆದು ಸತ್ಯ ಹೇಳಿದರೆ, ಸರಕಾರಕ್ಕೆ, ಅದರ ಪ್ರಚಾರ ಅಭಿಯಾನಕ್ಕೆ ಅನಾನುಕೂಲವಾಗುತ್ತದೆ. ಆದುದರಿಂದ, ಸತ್ಯ ಹೇಳುವವರ ಬಾಯಿಯನ್ನು ಹೇಗಾದರೂ ಮಾಡಿ ಮುಚ್ಚಿಸಲಾಗುತ್ತದೆ.

ಅನುವಾದ ಮತ್ತು ಬರಹರೂಪ:
ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...