Homeಮುಖಪುಟವಯನಾಡಿನಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು: ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್

ವಯನಾಡಿನಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು: ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್

- Advertisement -

ಕೇರಳದ ವಯನಾಡಿನಲ್ಲಿ 10 ವರ್ಷದ 5ನೇ ವಿದ್ಯಾರ್ಥಿನಿ ಶೆಹಲಾ ಶೆರಿನ್, ಸರ್ಕಾರಿ ಶಾಲೆಯಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಳು. ಎರಡು ದಿನಗಳ ಹಿಂದೆ ಘಟನೆ ನಡೆದಿತ್ತು. ಶಾಲೆ ಮತ್ತು ವೈದ್ಯರ ನಿರ್ಲಕ್ಷ್ಯ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರೊಟೆಸ್ಟ್ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ.

ಇದನ್ನೂ ಓದಿ: ತರಗತಿಯಲ್ಲಿದ್ದ ಬಾಲಕಿಗೆ ಕಚ್ಚಿದ ಹಾವು: ತಲೆಕೆಡಿಸಿಕೊಳ್ಳದ ಶಿಕ್ಷಕಿ, ಬಾಲಕಿಯ ಧಾರುಣ ಸಾವು

ಶೆಹಲಾ ಶೆರಿನ್ ಸಾವಿಗೆ ಶಾಲೆ ಮತ್ತು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಮತ್ತು ಶೆಹಲಾ ಸಹಪಾಠಿಗಳು ಆರೋಪಿಸಿದ್ದಾರೆ. ಈಗಾಗಲೇ ಆಸ್ಪತ್ರೆ ವೈದ್ಯರು ಮತ್ತು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಸದಸ್ಯರ ನೇತೃತ್ವದಲ್ಲಿ ಬಾಲಕಿಯ ಸಾವಿಗೆ ನ್ಯಾಯ ಒದಗಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಹೆಚ್ಚಿದೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಿದ್ಯಾರ್ಥಿಗಳನ್ನು ಬ್ಯಾರಿಕೇಡ್ ನಿಂದ ತಡೆಯಲಾಯಿತು. ಆದರೆ ಬ್ಯಾರಿಕೇಡ್ ತಳ್ಳಿ ಒಳಗೆ ಪ್ರವೇಶಿಸಲು ಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಉತ್ತರ ಕೇರಳದ ವಯನಾಡು ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ವಿದ್ಯಾರ್ಥಿನಿ ಶೆಹಲಾ ಶೆರಿನ್ ಗೆ ಹಾವು ಕಚ್ಚಿ ಮೃತಪಟ್ಟಿದ್ದಾಳೆ. ಸುಲ್ತಾನ್ ಬಾಥೆರಿಯಲ್ಲಿರುವ ಶಾಲೆಯ ತರಗತಿಯಲ್ಲಿ ವಿದ್ಯಾರ್ಥಿನಿ ಶೆಹಲಾ ಕುಳಿತಿದ್ದಳು. ಈ ವೇಳೆ ಮಹಡಿ ಮೇಲಿನ ರಂಧ್ರದೊಳಗಿಂದ ಬಂದ ಹಾವು ಶೆಹಲಾಳನ್ನು ಕಚ್ಚಿದೆ. ಆದರೆ ಶೆಹಲಾ ಉಗುರು ಅಥವಾ ಕಲ್ಲಿನಿಂದ ಏಟು ಮಾಡಿಕೊಂಡಿದ್ದಾಳೆ ಎಂದು ಶಿಕ್ಷಕರು ನಿರ್ಲಕ್ಷಿಸಿದ್ದರು. ಇತ್ತ ಬಾಥೆರಿಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದರೆ ವಿಷ ಏರದಂತೆ ಮಗುವಿಗೆ ಔಷಧಿಯನ್ನು ವೈದ್ಯರು ನೀಡಿಲ್ಲ. ಹೀಗಾಗಿ ಶೆಹಲಾ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಇನ್ನು ಶಿಕ್ಷಕ ಮತ್ತು ವೈದ್ಯರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ: ಶಿವಸೇನೆ ಶಾಸಕರ ಒಕ್ಕೊರಲ ಒತ್ತಾಯ

ಶೆಹಲಾ ಶೆರಿನ್ ಸಹಪಾಠಿಗಳು, ಶಾಲಾ ಸಮವಸ್ತ್ರದಲ್ಲೇ, ತಮ್ಮ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಫಲಕ ಹಿಡಿದು, ಘೋಷಣೆ ಕೂಗಿ ಶೆಹಲಾಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಸುಲ್ತಾನ್ ಬಾಥೆ ಪಟ್ಟಣದ ಮೂಲಕ ಮೆರವಣಿಗೆ ಹೊರಟು, ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆಯ ಮುಂದೆ ಒಂದುಗೂಡಿದರು. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲು ನಿರಾಕರಿಸಿದ ಶಿಕ್ಷಕರು ಮತ್ತು ಅವಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಯೊಬ್ಬರು ಆಗ್ರಹಿಸಿದ್ದಾರೆ.

ಬಾಲಕನೊಬ್ಬ ಪ್ಲಾಸ್ಟಿಕ್ ಹಾವನ್ನು ಕೊರಳಲ್ಲಿ ಸುತ್ತಿಕೊಂಡು, ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಆಟದ ಮೈದಾನದಲ್ಲಿ ಮತ್ತು ತರಗತಿ ಕೋಣೆಗಳ ಒಳಗೆ ಹಾವುಗಳು ಬರುತ್ತಿವೆ ಎಂದು ಆರೋಪಿಸಿದರು. ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಹೇಳಬೇಕೆಂದು ಒತ್ತಾಯಿಸಿದರು.

ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ, ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಶಿಕ್ಷಕರು, ಮಕ್ಕಳಿಗೆ ತರಬೇತಿ ಮತ್ತು ತಿಳಿವಳಿಕೆ ನೀಡಬೇಕು ಎಂದು ಹೇಳಿದ್ದಾರೆ.

ವಯನಾಡು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಎ.ಹ್ಯಾರಿಸ್, ಶಾಲೆಗೆ ಭೇಟಿ ನೀಡಿ, ಶಾಲೆಯ ಮತ್ತು ಅದರ ಆವರಣದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಾಧ್ಯಮ ವರದಿ ಆಧಾರದ ಮೇಲೆ ತಮ್ಮದೇ ಪ್ರಕರಣ ದಾಖಲಿಸಿದ್ದು, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವೈದ್ಯಕೀಯ ಅಧಿಕಾರಿಯಿಂದ ವರದಿ ಕೋರಿದೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ

0
ಮುಂಬರುವ ಉತ್ತರ ಪ್ರದೇಶದ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದ್ದು, ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರ ಮುಜಾಫರ್‌ನಗರದ ಗ್ರಾಮಸ್ಥರು ಓಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...
Wordpress Social Share Plugin powered by Ultimatelysocial