Homeಚಳವಳಿಎಡಪಂಥದ್ದು ದುರ್ಗಮ ದಾರಿ: ಯೋಗೇಂದ್ರ ಯಾದವ್ ಗೆ ಕೆ.ಫಣಿರಾಜ್ ಪ್ರತಿಕ್ರಿಯೆ

ಎಡಪಂಥದ್ದು ದುರ್ಗಮ ದಾರಿ: ಯೋಗೇಂದ್ರ ಯಾದವ್ ಗೆ ಕೆ.ಫಣಿರಾಜ್ ಪ್ರತಿಕ್ರಿಯೆ

- Advertisement -
- Advertisement -

ಭಾರತದಲ್ಲಿ ‘ಎಡಪಂಥ’ ತಲುಪಿರುವ ಸ್ಥಿತಿಯನ್ನು ಕುರಿತು ಎರಡು ಸಂಚಿಕೆಗಳ ಹಿಂದೆ ಯೋಗೇಂದ್ರ ಯಾದವ್ ಅವರು ಸಮಯೋಚಿತವಾದ ಸವಾಲುಗಳನ್ನೇ ಎತ್ತಿದ್ದರು; ಒಟ್ಟಾರೆಯಾಗಿ ಅವರ ಆಶಯಗಳ ಗಂಭೀರತೆಯನ್ನು ಇನ್ನೂ ಹೆಚ್ಚು ವಿಸ್ತರಿಸುವ ಸಂವಾದಗಳಲ್ಲಿ ತೊಡಗಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರುವ ಎಲ್ಲ (ಬೌದ್ಧಿಕ ವರ್ಗಕ್ಕೆ ಮಾತ್ರವಲ್ಲ) ನಾಗರಿಕರಿಗೂ ಅನಿವಾರ್ಯವಾಗಿದೆ.

ಗಳಿಸಿದ ಸ್ಥಾನಕ್ಕೂ, ಎಡ ಪಕ್ಷಗಳ ಪ್ರಭಾವಕ್ಕೂ ನಂಟಿದೆಯಾ?:
ಯೋಗೇಂದ್ರ ಅವರ ಬರಹವು ಎಡಪಕ್ಷಗಳ ಕುಸಿತವನ್ನು, ಅವುಗಳ ಗಳಿಸಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯ ಆಧಾರದಲ್ಲಿ ವಿವರಿಸಿರುವುದು, ಮೇಲ್ನೋಟಕ್ಕೆ ಬಿರುಬೀಸಾಗಿದೆ ಎಂದು ಎನಿಸಬಹುದು; ಆದರೆ, ಎಪ್ಪತ್ತು ವರ್ಷಗಳ ಭಾರತದ ಜೀವನವನ್ನು ಗಮನಿಸಿದಲ್ಲಿ, ಎರಡು ಕಾರಣಗಳಿಗೆ ಚುನಾವಣಾ ರಾಜಕೀಯದಲ್ಲಿನ ಸಫಲತೆ/ ವಿಫಲತೆಗಳು ಸಾಮಾಜಿಕ-ರಾಜಕೀಯ ವಿಚಾರಗಳ ಸಫಲತೆ/ವಿಫಲತೆಗಳ ಮುಖ್ಯವಾದ ಸೂಚಿಯಾಗಿರುವುದನ್ನು ಕಡೆಗಣಿಸುವಂತಿಲ್ಲ :

(1) ಭಾರತದಂತಹ ವಿಸ್ತಾರವಾದ ಭೌಗೋಳಿಕ, ಸಾಮಾಜಿಕ ಹಾಗು ಸಾಂಸ್ಕೃತಿಕ ಭಿನ್ನತೆಯುಳ್ಳ ದೇಶದಲ್ಲಿ ಒಂದು ಸಂಘಟಿತ ವಿಚಾರಧಾರೆಯು ಬಹುಮತದ ಜನರ ಬದುಕಿನ ಬುದ್ಧಿಭಾವಗಳನ್ನು ಮುಟ್ಟಿ, ಅವರ ಸಮ್ಮತಿಯನ್ನು ಪಡೆಯುವುದು.

(2) ಆ ವಿಚಾರಧಾರೆಯು ಪ್ರಭುತ್ವದ ಶಾಸನಬದ್ಧ ಅಧಿಕಾರ ಪಡೆದುಕೊಂಡು ಜನರ ಸದ್ಯದ ಬದುಕಿನ ಸ್ಥಿತಿಗತಿಗಳನ್ನು ಬದಲಾಯಿಸುವ ಸಕ್ಷಮತೆಯ ಭರವಸೆಯನ್ನು ಜನರಲ್ಲಿ ಬಿತ್ತುವುದು.

ಆಧುನಿಕ ಸಂವಿಧಾನಬದ್ಧ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಈ ಸೂಚಿಗಳು ಎಡ-ಮಧ್ಯಮ-ಬಲ ಮೂರೂ ವಿಚಾರಧಾರೆಗಳಿಗೂ ಸಮನಾಗಿ ಅನ್ವಯಿಸುತ್ತದೆ.

ಯೋಗೀಂದರ್ ಭಾರತದ ಕಮ್ಯುನಿಸ್ಟ್ ಪಕ್ಷಗಳನ್ನು ‘ಎಡ’ ಎಂಬುದಕ್ಕೆ ಅನ್ವರ್ಥವಾಗಿ ಪರಿಗಣಿಸುತ್ತಾರೆ. ಸ್ಥಾಪಿತ ಅಧಿಕಾರದ ವಿರುದ್ಧ ಒಂದು ಸ್ಪಷ್ಟವಾದ ರಾಜಕೀಯ ಪ್ರಣಾಳಿಕೆ, ಆ ಪ್ರಣಾಳಿಕೆಗೆ ಬದ್ಧವಾದ ಕಾರ್ಯಸೂಚಿ, ಕಾರ್ಯಸೂಚಿಯನ್ವಯ ನಡೆಸುವ ಆಚರಣೆಗಳು- ಈ ಬಗೆಯ ಖಚಿತ ರಚನೆಯುಳ್ಳ ಸಂಘಟನೆಗಳನ್ನು ‘ಎಡ’ವೆಂದು ಗುರುತಿಸುವುದು ಆಧುನಿಕ ಸಮಾಜ ಹಾಗು ರಾಜ್ಯಶಾಸ್ತ್ರಗಳ ವಾಡಿಕೆಯಾಗಿದ್ದು, ಆ ಬಗೆಯಲ್ಲಿ ಭಾರತದಲ್ಲಿ ಕಮ್ಯುನಿಷ್ಟ್ ಪಕ್ಷಗಳನ್ನು ‘ಎಡ’ ಎಂದು ಗುರುತಿಸುವುದೂ ಸರಿಯೇ.

ಈ ಕಣ್ಣೋಟದಿಂದ, ಮೊದಲ ಲೋಕಸಭೆಯಿಂದ ಹದಿನೇಳನೇ ಲೋಕಸಭಾ ಚುನಾವಣೆಗಳವರೆಗಿನ ಭಾರತದ ‘ಎಡ’ ಪಕ್ಷಗಳ ಸಫಲತೆಗಳನ್ನು ಗಮನಿಸಿದರೆ, ‘ಎಡ ಪಕ್ಷಗಳು’ ದೇಶದ ಅಧಿಕಾರವನ್ನು ನಿಯಂತ್ರಿಸುವ ಕೇಂದ್ರ ಪ್ರಭುತ್ವದ ಅಂಚಿನಲ್ಲಿರುವ ಪ್ರಭಾವಹೀನ ಸಂಘಟನೆಯಾಗಿರುವುದು ನಮಗೆ ನಿಚ್ಚಳವಾಗಿ ಕಾಣುತ್ತದೆ. ಮೊದಲ ಲೋಕಸಭೆಯಲ್ಲಿದ್ದ 489 ಸ್ಥಾನಗಳಲ್ಲಿ ಎಡಪಕ್ಷಗಳು 22 ಸ್ಥಾನ ಪಡೆದಿದ್ದವು; ಹದಿನಾಲ್ಕನೇ ಲೋಕಸಭೆಯಲ್ಲಿ ಇದ್ದ 543 ಸ್ಥಾನಗಳಲ್ಲಿ 59 ಸ್ಥಾನಗಳನ್ನು ಪಡೆದದ್ದು ಅವುಗಳ ಅತ್ಯಂತ ಯಶಸ್ವಿ ಚುನಾವಣಾ ಪ್ರದರ್ಶನವಾಗಿತ್ತು; ಹದಿನೇಳನೇ ಲೋಕಸಭೆಯಲ್ಲಿ ಇರುವ 543 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಮಾತ್ರ ಸಫಲವಾಗಿವೆ.

ಹದಿನಾರನೇ ಲೋಕ ಸಭೆಯವರೆಗೂ, ಅವುಗಳಿಗೆ ಬಹುಪಾಲು ಸ್ಥಾನಗಳನ್ನು ತಂದು ಕೊಟ್ಟ ರಾಜ್ಯಗಳು ಕೇರಳ ಹಾಗು ಪಶ್ಚಿಮ ಬಂಗಳಾ; ಹದಿನೇಳನೇ ಲೋಕಸಭೆಯಲ್ಲಿ ಪಶ್ಚಿಮ ಬಂಗಾಳದಿಂದ ಒಂದೂ ಸ್ಥಾನವನ್ನೂ ಎಡಪಕ್ಷಗಳು ಪಡೆಯದೇ ಇರುವುದೂ ಮತ್ತು ಅದಕ್ಕೆ ಸ್ಪಷ್ಟವಾಗಿ ಕಾಣುತ್ತಿರುವ ಕಾರಣಗಳೂ, ಆ ಪ್ರದೇಶದಲ್ಲಿ ಎಡಪಕ್ಷಗಳು ಪ್ರಭಾವ ಶೂನ್ಯವಾಗಿರುವುದನ್ನು ತೋರಿಸುತ್ತಿವೆ. ಇಷ್ಟರಿಂದಲೇ ಎಡಪಕ್ಷಗಳು ‘ಇಲ್ಲವಾಗಿವೆ’ ಎನ್ನಬಹುದೇ? ಇದಕ್ಕೆ ಉತ್ತರವನ್ನು, ಚುನಾವಣಾ ರಾಜಕೀಯದಲ್ಲಿ ಭಾಗವಹಿಸುತ್ತಿರುವ ಎಡಪಕ್ಷಗಳು, ಯಾವ ಕಾರಣಕ್ಕಾಗಿ ಚುನಾವಣೆಗಳಲ್ಲಿ ಭಾಗವಹಿಸುತ್ತಿದ್ದವು ಎಂಬುದರಲ್ಲಿ ಕಂಡುಕೊಳ್ಳಬೇಕಾಗಿದೆ. ಉದಾಹರಣೆಗೆ, ಎಡಪಕ್ಷಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ಹೆಚ್ಚು ಸ್ಥಾನಗಳನ್ನು ಗಳಿಸುತ್ತಿದ್ದ ಸಿಪಿಐಂ ಪಕ್ಷವು ತನ್ನ ಕಣ್ಣೋಟವನ್ನು ‘ಜನರ ಪ್ರಜಾತಾಂತ್ರಿಕ ಕ್ರಾಂತಿ’ ಎಂದು ಕರೆದುಕೊಳ್ಳುತ್ತದೆ. ಆ ಕಣ್ಣೋಟದ ಪ್ರಕಾರ:

ಭಾರತದ ಜಮೀಂದಾರಿ ಹಾಗು ಬಂಡವಾಳಶಾಹಿ ಅಧಿಕಾರ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗಿರುವ ಜನ ಸಮುದಾಯವನ್ನು ಸಂಘಟಿಸಿ, ಅವರಲ್ಲಿ ಹಕ್ಕಿನ ಅರಿವನ್ನು ಬಿತ್ತಿ, ಆ ಅರಿವಿನಲ್ಲಿ ಅವರು ಪಕ್ಷವನ್ನು ವ್ಯವಸ್ಥೆಯನ್ನು ಬದಲಾಯಿಸುವ ಮುಂಚೂಣಿ ಪಕ್ಷವೆಂದು ಒಪ್ಪಿ, ಆ ಒಪ್ಪಿಗೆಯು ಚುನಾವಣೆಗಳಲ್ಲಿ ಬಹುಮತದ ಸ್ಥಾನಗಳನ್ನು ತಂದುಕೊಟ್ಟು, ದೇಶದ ಕೇಂದ್ರ ಪ್ರಭುತ್ವದ ಸೂತ್ರವು ಪಕ್ಷದ ಕೈಯಲ್ಲಿ ಭದ್ರವಾಗಿ ನೀಡುವುದು ‘ಕ್ರಾಂತಿ’ಯ ಉನ್ನತ ಹಂತವಾಗಿರುತ್ತದೆ; ಆಗ ಮುಂಚೂಣಿ ಪಕ್ಷವಾಗಿ, ತಾನು ದೇಶದ ‘ಬಂಡವಾಳಶಾಹಿ-ಜಮೀಂದಾರಿ ಪ್ರಾಬಲ್ಯದ ಪ್ರಜಾಪ್ರಭುತ್ವ’ವನ್ನು ‘ಜನ ಹಿತದ ಸಮಾಜವಾದಿ ಪ್ರಜಾಪ್ರಭುತ್ವ’ವಾಗಿ ಪರಿವರ್ತಿಸುವ ಎರಡನೇ ಹಂತಕ್ಕೆ ತಯಾರಾಗುತ್ತದೆ.

ಈ ಕಣ್ಣೋಟದ ಹಿನ್ನೆಲೆಯಲ್ಲಿ, ಎಡಪಕ್ಷಗಳಿಗೆ ದಕ್ಕುವ ಶಾಸನಸಭೆಯ ಸ್ಥಾನಗಳು, ಮುಂಚೂಣಿ ಪಕ್ಷದ ಜನಸಂಘಟನೆಯ ಸಾಮರ್ಥ್ಯ/ದೌರ್ಬಲ್ಯದ ಮಾಪಕವಾಗಿರುತ್ತದೆ. ಸ್ವಾತಂತ್ರೋತ್ತರ ಭಾರತದ ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ, ಸದರಿ, ಎಡಪಕ್ಷಗಳು ಅತಿ ಕಡಿಮೆ ಸ್ಥಾನ ಗಳಿಸಿರುವುದು, ಅವುಗಳ ಜನಸಂಘಟನಾ ಸಾಮರ್ಥ್ಯವೂ ದುರ್ಬಲವಾಗಿದೆ ಎನ್ನುವುದನ್ನೇ ಸೂಚಿಸುತ್ತದೆ. ಗಳಿಸಿದ ಸ್ಥಾನಗಳ ಕುಸಿತವು, ಜನಮಾನಸದಲ್ಲಿ ಮುಂಚೂಣಿ ಪಕ್ಷದ ವಿಶ್ವಾಸವೂ ಕುಸಿದಿರುವುದನ್ನೇ ಸೂಚಿಸುತ್ತದೆ. ಇಂತಾಗಿ, ‘ಇಲ್ಲವಾಗಿದೆ’ ಎನ್ನುವುದು ಬರೀ ರೂಪಕ ಮಾತ್ರವಾಗಿರದೇ ವಾಸ್ತವವೂ ಆಗಿದೆ.

ಸಂಘಟಿತ ರಾಜಕೀಯ ‘ಎಡ’ ಇಲ್ಲವಾಗಿದೆಯಾ?
ಚುನಾವಣೆಗಳಲ್ಲಿ ಭಾಗವಹಿಸುತ್ತಿದ್ದ ಸಂಘಟಿತ ಕಮ್ಯುನಿಷ್ಟ್ ಪಕ್ಷಗಳು ‘ಇಲ್ಲ’ವಾಗಿವೆ ಎಂದರೆ, ದೇಶದಲ್ಲಿ ಎಡವೇ ‘ಇಲ್ಲವಾಗಿದೆ’ ಎನ್ನುವುದು ಸರಿಯಾ? ಇದಕ್ಕೆ, ಭಾರತದಲ್ಲಿ ಯಾವ್ಯಾವುದನ್ನು ಎಡವೆಂದು ಕರೆಯಬಹುದು ಮತ್ತು ಅವುಗಳ ಸ್ಥಿತಿಗತಿ ಏನಾಗಿದೆ ಎಂಬ ಸಮೀಕ್ಷೆಯಿಂದ ಉತ್ತರ ಕಂಡುಕೊಳ್ಳ ಬೇಕಾಗುತ್ತದೆ. ಭಾರತದಲ್ಲಿ ಅಧಿಕಾರಸ್ಥ ವಿಭಾಗಗಳೆಂದರೆ: ಜಮೀಂದಾರಿ, ಬಂಡವಾಳಶಾಹಿ, ಜಾತಿ ಶ್ರೇಣೀಕರಣ, ಪಿತೃಪ್ರಧಾನ ಸಮಾಜ ಪದ್ಧತಿಗಳ ಯಜಮಾನಿಕೆ (ಹೆಜಮನಿ-ಇದು ಭೌತಿಕ ಸಂಪನ್ಮೂಲ ಹಂಚಿಕೆ, ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಅಧಿಕಾರಗಳನ್ನು ಒಟ್ಟಾಗಿ ಹೇಳುವ ಪದ).

ಈ ಯಜಮಾನಿಕೆಗಳನ್ನು ಆಂಶಿಕವಾಗಿ ಪ್ರತಿರೋಧಿಸುವ ಪ್ರತಿ ಆಚಾರ-ವಿಚಾರಗಳನ್ನೂ ‘ಎಡ’ವೆಂದು ಕರೆಯಬೇಕಾಗುತ್ತದೆ. ಈ ಅರ್ಥದಲ್ಲಿ ಜಯಪ್ರಕಾಶ ನಾರಾಯಣರ ‘ಸೋಷಿಯಲಿಸ್ಟ್ ಪಕ್ಷ’, ಕೃಪಲಾನಿಯವರ ‘ಕಿಸಾನ್-ಮಜ್ದೂರ್ ಪಕ್ಷ’, ಇವೆರಡೂ ವಿಲೀನವಾದ ‘ಪ್ರಜಾ ಸೋಷಿಯಲಿಸ್ಟ್ ಪಕ್ಷ’, ಒಡೆದು ಒಗ್ಗೂಡಿದ ‘ಸಂಯುಕ್ತ ಸೋಷಿಯಲಿಸ್ಟ್ ಪಕ್ಷ’-ಇವುಗಳ ಸಂಘಟಿತ ಅಸ್ಥಿತ್ವ ಹಾಗು ಕಾರ್ಯಾಚರಣೆಗಳು 1951-1972ರ ವರೆಗೆ ಇದ್ದರೂ, ಕೇಂದ್ರ ಪ್ರಭುತ್ವದಲ್ಲಿ ಇವುಗಳ ಪಾತ್ರ ಕಮ್ಯುನಿಷ್ಟ್ ಪಕ್ಷಗಳಷ್ಟೇ ಪ್ರಭಾವಹೀನವಾಗಿತ್ತು. ಇವುಗಳ ಹೊಸ ಅವತರಿಣಿಕೆಗಳಾದ ‘ಜನತಾ ದಳ’ ಹಾಗು ‘ಸಮಾಜವಾದಿ ಪಕ್ಷ’ಗಳನ್ನು ವಿಚಾರ, ಸಂಘಟನೆ ಹಾಗು ಆಚರಣೆ-ಈ ಮೂರೂ ನೆಲೆಯಲ್ಲೂ ‘ಎಡ’ವೆಂದು ಕರೆಯಲು ಆಧಾರಗಳಿಲ್ಲ.

ಅಂಬೇಡ್ಕರರು ಸ್ಥಾಪಿಸಿದ ‘ಇಂಡಿಪೆಂಡೆಂಟ್ ಲೇಬರ್ ಪಕ್ಷ’ ಹಾಗು ‘ಷೆಡ್ಯುಲ್ಡ್ ಕ್ಯಾಸ್ಟ್ಸ್ ಫೆಡರೇಷನ್’ಗಳು ಸ್ವಾತಂತ್ರೋತ್ತರದಲ್ಲಿ ಸಂಘಟಿತವಾಗಿ ಮುಂದುವರೆಯಲಿಲ್ಲ; ಅವುಗಳ ವಾರಸುದಾರಿಕೆ ಪಡೆದ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ’ ಮತ್ತು ಸದರಿ ಇರುವ ಅದರ ಯಾವ ಬಣಗಳಿಗೂ ಕೇಂದ್ರ ಪ್ರಭುತ್ವದಲ್ಲಿ ಪ್ರಭಾವ ಬೀರುವಷ್ಟು ಶಕ್ತಿ ಯಾವತ್ತೂ ಇರಲಿಲ್ಲ. ‘ಬಹುಜನ ಸಮಾಜ ಪಕ್ಷ’ದ ಸ್ಥಾನ ಗಳಿಕೆಗಳು ಏರಿಳಿತ ಕಂಡರೂ, ಕೇಂದ್ರದಲ್ಲಿ ಅದು ಅಧಿಕಾರ ಹಿಡಿಯುವಷ್ಟು ಸಂಘಟನೆ-ಪ್ರಭಾವ ವ್ಯಾಪ್ತಿಯನ್ನು ಇನ್ನೂ ಪಡೆದಿಲ್ಲ. ಇಂದು ಕಮ್ಯುನಿಷ್ಟ್ ಪಕ್ಷಗಳನ್ನು ಹೊರತು ಪಡಿಸಿದ ‘ಎಡ’ ಎಂದು ನಾವು ಗುರುತಿಸಬಹುದಾದ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ'( ಅಥವಳೆ ಬಣವನ್ನು ಬಿಟ್ಟು), ‘ಬಹುಜನ ಸಮಾಜ ಪಕ್ಷ’ ?ಇವೆರಡರ ಸಂಘಟಿತ ಶಕ್ತಿಯು ‘ಇಲ್ಲವಾದ ಕಮ್ಯುನಿಷ್ಟ್ ಎಡ’ವನ್ನು ತುಂಬುವಂತಿಲ್ಲ; ಕಮ್ಯುನಿಷ್ಟ್ ಪಕ್ಷಗಳು ಹಾಗು ಈ ಎರಡು ಪಕ್ಷಗಳು ಗಳಿಸಿದ ಸ್ಥಾನಗಳ ಸಂಕಲನವೂ ‘ಎಡ’ವು ‘ಇಲ್ಲ’ವಾದಷ್ಟು ದುರ್ಬಲವಾಗಿರುವುದನ್ನು ಸೂಚಿಸುತ್ತದೆ.

ಸಂಘಟಿತ ರಾಜಕೀಯ ಪಕ್ಷಗಳು ಮಾತ್ರ ‘ಎಡ’ವೇ?
ಪ್ರಭುತ್ವ, ಪ್ರಭುತ್ವದಿಂದ ಅಧಿಕಾರ ಪಡೆದ ಸಂಸ್ಥೆಗಳನ್ನೂ, ಈ ಅಧಿಕಾರ ವ್ಯವಸ್ಥೆಯಲ್ಲಿ ನೇರ ದಾವೆದಾರರಾದ ಸಂಘಟಿತ ರಾಜಕೀಯ ಪಕ್ಷಗಳನ್ನು ಒಟ್ಟು ಸೇರಿಸಿ ‘ರಾಜಕೀಯ ಸಮಾಜ’ವೆಂದೂ, ಪ್ರಭುತ್ವದ ಅಧಿಕಾರದಲ್ಲಿ ನೇರ ದಾವೆದಾರರಲ್ಲದ ಸಾಮಾಜಿಕ ಸಂಘಟನೆ, ಸಂಸ್ಥೆಗಳನ್ನೂ (ಇದರಲ್ಲಿ ಕುಟುಂಬ ವ್ಯವಸ್ಥೆಯನ್ನೂ ಸೇರಿಸಿ) ಹಾಗು ಕಾಣುವ ಮಟ್ಟಿಗೆ ಸ್ವತಂತ್ರರಾಗಿರುವ ನಾಗರಿಕರನ್ನೂ ಒಳಗೊಂಡ ಸಮಾಜ ವಿಭಾಗವನ್ನು ‘ನಾಗರಿಕ ಸಮಾಜ’ವೆಂದೂ ಶಾಸ್ತ್ರೀಯವಾಗಿ ಗುರುತಿಸಲಾಗುತ್ತದೆ. ಮೇಲೆ ಹೇಳಲಾಗಿರುವ ಅಧಿಕಾರಸ್ಥ ಯಜಮಾನಿಕೆಯನ್ನು ಪ್ರತಿರೋಧಿಸುವವರನ್ನು ‘ಎಡ’ವೆಂದು ಕರೆಯಬಹುದಾದರೆ, ‘ನಾಗರಿಕ ಸಮಾಜ’ದಲ್ಲಿರುವ ‘ಎಡ’ದ ಗಣನೆಯನ್ನೂ ಪರಿಗಣಿಸದೇ ‘ಎಡ ಇನ್ನು ಇಲ್ಲ’ ಎನ್ನುವುದು ಸರಿಯೇ? ಖಂಡಿತ ಸರಿಯಲ್ಲ; ಆಧುನಿಕ ಸಮಾಜಗಳಲ್ಲಿ ‘ರಾಜಕೀಯ ಸಮಾಜ’ದಷ್ಟೇ ಪ್ರಬಲವಾದ ಪಾತ್ರವನ್ನು ‘ನಾಗರಿಕ ಸಮಾಜ’ವೂ ವಹಿಸುತ್ತದೆ; ‘ರಾಜಕೀಯ ಸಮಾಜ’ದ ದಿಕ್ಕು ದೆಸೆಯನ್ನು ಬದಲಾಯಿಸುವ ಶಕ್ತಿಯನ್ನೂ ‘ನಾಗರಿಕ ಸಮಾಜ’ ಹೊಂದಿರುವ ಸಾಧ್ಯತೆಗಳನ್ನು ಅವಗಣಿಸಲಾಗದು.

1980-2019ರವರೆಗೆ ಭಾರತದಲ್ಲಿ ನಡೆದ ಆಧಿಕಾರಸ್ಥ ಯಜಮಾನಿಕೆಗಳ ವಿರುದ್ಧ ನಡೆದ ಚಳುವಳಿಗಳು, ಅವುಗಳಿಗೆ ಚೋಧಕವಾದ ವಿಚಾರಗಳು ಹಾಗು ಈ ವಿದ್ಯಮಾನಗಳ ಸುತ್ತ ಕಟ್ಟಿಕೊಂಡ ಸಂಸ್ಥೆ-ಸಂಘಟನೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ‘ನಾಗರಿಕ ಸಮಾಜ’ದಲ್ಲಿ ‘ಎಡ’ ಇನ್ನೂ ‘ಇದೆ’ ಎನ್ನಲು ಅಡ್ಡಿ ಇಲ್ಲ. ಆದರೆ, ಭಾರತದ ಭೌಗೋಳಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯ ವಿಸ್ತಾರದಲ್ಲಿ ಇಂತಹ ‘ಎಡ’ವು ಬಿಡಿಯಾಗಿದೆ; ಜನರ ಬುದ್ಧಿಭಾವಗಳ ಮೇಲೆ ಇದರ ಪ್ರಭಾವವು ಸ್ಥಳೀಯವೂ, ಬಿಡಿಯಾಗಿಯೂ ಇದೆ. ಸಂಖ್ಯಾವಾರು ಲೆಕ್ಕದಲ್ಲಿ ಇರುವ ಹತ್ತು ‘ನಾಗರಿಕ ಸಮಾಜದ ಎಡ’ಗಳ ಪ್ರತ್ಯೇಕ ಶಕ್ತಿಯನ್ನು ಕೂಡಿಸಿದರೆ ನಮಗೆ ಹತ್ತು ಪಟ್ಟು ಬಲದ ಒಂದು ‘ನಾಗರಿಕ ಸಮಾಜದ ಎಡ’ ಸಿಕ್ಕಿದರೆ ಅದು ‘ಸಂಕಲಿತ ಶಕ್ತಿ’; ಹತ್ತಕ್ಕಿಂತ ಹೆಚ್ಚು ಪಟ್ಟು ಶಕ್ತಿ ದಕ್ಕಿದರೆ ಅದು ‘ಸಂಚಯಿತ ಶಕ್ತಿ’; ಬಲ ಹತ್ತರ ಕೆಳಗೆ ಕುಸಿದರೆ ಅದು ‘ಸಂಕುಚಿತ’ ಸ್ಥಿತಿ. ಇಂದು ‘ನಾಗರಿಕ ಸಮಾಜದ ಎಡ’ಗಳ ಒಗ್ಗೂಡುವಿಕೆ ‘ಸಂಕುಚಿತ’ ಸ್ಥಿತಿಯಲ್ಲಿದೆ. ಒಗ್ಗೂಡಲು ಹೋದರೆ ಬಿಡಿಯಾದ ‘ಗುರುತು’ (ಐಡೆಂಟಿಟಿ) ಹಾಗು ಶಕ್ತಿ ತಗ್ಗುವ ಸಂದೇಹವು ‘ನಾಗರಿಕ ಸಮಾಜದ ಎಡ’ಗಳಲ್ಲಿ ಇದೆ. ಬಿಡಿಯಾದ ‘ನಾಗರಿಕ ಸಮಾಜದ ಎಡ’ಗಳನ್ನು ಬೆಸೆಯುವ ಒಂದು ಸರ್ವಸಮ್ಮತ ವೈಚಾರಿಕತೆಯ ಸೂತ್ರದ ದಾರ ಸಧ್ಯಕ್ಕೆ ‘ಇಲ್ಲ’. ಇಂತಹ ಸೂತ್ರದ ದಾರವಿಲ್ಲದೆ, ತುಂಬಾ ಸ್ವತಂತ್ರವಾಗಿ ‘ನಾಗರಿಕ ಸಮಾಜದ ಎಡ’ಗಳು ಕಾರ್ಯಾಚರಿಸಬಹುದಾದ ‘ಬಿಡಿಯಾಗಿ ನಡೆವೆವು, ಒಗ್ಗಟ್ಟಾಗಿ ಹೊಡೆವೆವು’ (ಫೈಟ್ ಅಪಾರ್ಟ್, ಸ್ಟ್ರೈಕ್ ಟುಗೇದರ್) ಎಂಬ ತಂತ್ರವೂ ತನ್ನ ಮಂತ್ರಶಕ್ತಿಯನ್ನು ಪಡೆದಿಲ್ಲ.

ಇದೆಲ್ಲವೂ, ‘ರಾಜಕೀಯ ಸಮಾಜ’ದಲ್ಲಿ 1980ರವರೆಗೂ ಗೌಣವಾಗಿದ್ದು, ಆ ನಂತರದಲ್ಲಿ ತನ್ನ ‘ನಾಗರಿಕ ಸಮಾಜ’ದ ‘ಸಂಚಯಿತ ಶಕ್ತಿ’ಯಿಂದ ‘ರಾಜಕೀಯ ಸಮಾಜ’ದ ಸೂತ್ರ ಹಿಡಿಯುವ ಹಂತಕ್ಕೆ ‘ಹಿಂದುತ್ವವಾದಿ ಫ್ಯಾಸಿಸಂ’ ತಲುಪಿದ ಹಂತದಲ್ಲಿ ನಡೆಯುತ್ತಿರುವುದು ಸೋಜಿಗವೇನೂ ಅಲ್ಲ. ‘ರಾಜಕೀಯ ಸಮಾಜದ ಎಡ’ ಹಾಗು ‘ನಾಗರಿಕ ಸಮಾಜದ ಎಡ’ಗಳ ನಡುವೆ ಇರುವ ಸಂಬಂಧವು ಉತ್ತಮ ಸ್ಥಿತಿಯಲ್ಲಿ ಪರಸ್ಪರ ಅಪನಂಬಿಕೆಯದೂ, ಕೆಟ್ಟ ಸ್ಥಿತಿಯಲ್ಲಿ ಔಪಚಾರಿಕೆಯ ಸೌಹಾರ್ದದ್ದೂ ಮಾತ್ರ ಆಗಿದೆ.

ಈ ಹಿನ್ನೆಲೆಯಲ್ಲಿ ‘ಹೊಸ ಎಡ’ದ ಸಾಧ್ಯತೆಯು ಅಸ್ತಿತ್ವದಲ್ಲಿರುವ ‘ರಾಜಕೀಯ’ ಹಾಗು ‘ನಾಗರಿಕ’ ಎಡಗಳ ಉಳಿದಿರುವ ಶಕ್ತಿಯ ‘ಸಂಚಯ’ದ ಸಂಕಲ್ಪವನ್ನು ಅವಲಂಬಿಸಿದೆ; ಅದು ‘ಸಂಕುಚಿತ’ ಸ್ಥಿತಿಯಿಂದ ದುರ್ಗಮವಾದ ಹಾದಿಯಲ್ಲಿ ನಡೆಯುವುದರಲ್ಲಿ ಮಾತ್ರ ಶುರುವಾಗಬೇಕಿದೆ.

ಇದನ್ನು ಓದಿ: ಎಡಪಂಥ ಇನ್ನಿಲ್ಲ! ಅಮರವಾಗಲಿ ಎಡಪಂಥ…. : ಯೋಗೇಂದ್ರ ಯಾದವ್

ಇದನ್ನು ಓದಿ: ಎಡಪಂಥ ಸಾಯುತ್ತಿದೆ, ಲೋಹಿಯಾವಾದಿಯ ಕಳಕಳಿಗೆ ಒಂದು ಪ್ರತಿಕ್ರಿಯೆ – ಶ್ರೀಪಾದ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...