ಗೌರವಯುತ ಅಂತ್ಯಕ್ರಿಯೆ ಮೃತ ವ್ಯಕ್ತಿಯ ಹಕ್ಕು, ಇದು ಇತರ ಮೂಲಭೂತ ಹಕ್ಕುಗಳಷ್ಟೇ ಮುಖ್ಯವಾಗಿದೆ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪೂರ್ವ ಉಪನಗರಗಳಿಗೆ ಹೆಚ್ಚುವರಿ ಸ್ಮಶಾನ ಸ್ಥಳಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಬಾಂಬೆ ಹೈಕೋರ್ಟ್, ಈ ಮಹತ್ವದ ಅಂಶಗಳನ್ನು ಗಮನಿಸಿದೆ.
ಜನರು ಸಮಾಧಿ ಮಾಡಲು ಮಂಗಳ ಗ್ರಹಕ್ಕೆ ಹೋಗಬೇಕೇ?, ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ(BMC) ಸ್ಮಶಾನಕ್ಕಾಗಿ ಕಳೆದ ನವೆಂಬರ್‌ನಿಂದ ಸ್ಥಳವನ್ನು ಕುಂಡು ಹಿಡಿಯಲಾಗಲಿಲ್ಲ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ವೇಳೆ ಕಳೆದ ಎರಡು ವರ್ಷಗಳಿಂದ ಪೂರ್ವ ಉಪನಗರಗಳಿಗೆ ಹೆಚ್ಚುವರಿ ರುದ್ರಭೂಮಿಯನ್ನು ಒದಗಿಸದ ಮುಂಬೈ ಮಹಾನಗರ ಪಾಲಿಕೆಯ ಉಡಾಫೆ ಧೋರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾ. ಅಮಿತ್ ಬೋರ್ಕರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿದೆ.
ಮಹಾನಗರ ಪಾಲಿಕೆಗೆ ಮೃತ ವ್ಯಕ್ತಿಗಳನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ಸಾಕಷ್ಟು ಜಾಗ ಒದಗಿಸಬೇಕಾದುದು ಶಾಸನಾತ್ಮಕ ಕರ್ತವ್ಯ ಹಾಗೂ ಅನಿವಾರ್ಯತೆ ಇದೆ. ಈ ಬಾಧ್ಯತೆಯ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಹೇಳಿದೆ.
ಮುಂಬೈನ ಪೂರ್ವ ಉಪನಗರಗಳಿಗೆ ಹೆಚ್ಚುವರಿ ಸ್ಮಶಾನ ಭೂಮಿಯನ್ನು ಕೋರಿ ಉಪನಗರದ ಗೋವಂಡಿ-ಶಂಶೇರ್ ಅಹ್ಮದ್, ಅಬ್ರಾರ್ ಚೌಧರಿ ಮತ್ತು ಅಬ್ದುಲ್ ರೆಹಮಾನ್ ಶಾ ಎಂಬ ಮೂವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಮೃತ ವ್ಯಕ್ತಿಯ ಯೋಗ್ಯ ಮತ್ತು ಗೌರವಾನ್ವಿತ ಅಂತ್ಯಕ್ರಿಯೆಯ ಹಕ್ಕು ಇತರ ಮೂಲಭೂತ ಹಕ್ಕುಗಳಷ್ಟೇ ಮುಖ್ಯವಾಗಿದೆ ಎಂದು ಕೋರ್ಟ್ ಹೇಳಿದೆ.
ಸ್ಮಶಾನಕ್ಕಾಗಿ ಮೂರು ಸ್ಥಳಗಳನ್ನು ಉಲ್ಲೇಖಿಸಿ ಅರ್ಜಿಯಲ್ಲಿ ಹೇಳಲಾಗಿದೆ. ಆದರೆ ಆ ಸ್ಥಳಗಳು ಸ್ಮಶಾನಕ್ಕೆ ಯೋಗ್ಯವಾಗಿಲ್ಲ ಎಂದು ಬಿಎಂಸಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ಆಗ ಜನರು ಸಮಾಧಿ ಮಾಡಲು ಮಂಗಳ ಗ್ರಹಕ್ಕೆ ಹೋಗಬೇಕೇ ಎಂದು ಪೀಠವು ತರಾಟೆಗೆ ತೆಗೆದುಕೊಂಡಿದೆ. ಅವರು ಮಂಗಳ ಗ್ರಹಕ್ಕೆ ಹೋಗಬೇಕೇ? ನವೆಂಬರ್‌ನಿಂದ ನಿಮಗೆ ಸ್ಥಳ ಸಿಗಲಿಲ್ಲ. ಸತ್ತವರು ಈಗ ಎಲ್ಲಿಗೆ ಹೋಗುತ್ತಾರೆ? ಸಿಜೆ ಉಪಾಧ್ಯಾಯ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಜಾರ್ಖಂಡ್: ವಿಧಾನಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಲ್ಪನಾ ಸೊರೇನ್


