ಸಿನಿಮಾ ಹಾಗೂ ಟಿ.ವಿ. ಶೋಗಳಿಂದ ದೂರ ಉಳಿದಿರುವ ಬಾಲಿವುಡ್ ನಟಿ ಸನಾ ಖಾನ್, ಖಿನ್ನತೆಯಿಂದ ಬಳಲುತ್ತಿದ್ದ ಸಂಗತಿಯನ್ನ ಹಂಚಿಕೊಂಡಿದ್ದಾರೆ. ಜೊತೆಗೆ ತಾನೇಕೆ ಹಿಜಾಬ್ ಧರಿಸಲು ಮುಂದಾದೆ ಎಂದು ಹೇಳಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ‘ಜೈ ಹೋ’ ಚಿತ್ರದಲ್ಲಿ ಅಭಿನಯಿಸಿದ, ಬಿಗ್ ಬಾಸ್ ಸೀಸನ್ 6ರಲ್ಲಿ ಫೈನಲಿಸ್ಟ್ ಆಗಿದ್ದ ನಟಿ ಸನಾ ಖಾನ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
2020ರಲ್ಲಿ ಮುಫ್ತಿ ಅನಾಸ್ ಸೈಯದ್ ಅವರನ್ನು ವಿವಾಹವಾಗಿರುವ ಸನಾ ಅವರು, ಇತ್ತೀಚೆಗೆ ಮಾತನಾಡಿದ್ದು ತಮ್ಮ ಜೀವನಶೈಲಿಯನ್ನು ಬದಲಾಯಿಸಲು ಕಾರಣವೇನೆಂದು, ಸಿನಿಮಾದಿಂದ ದೂರವಾಗಿದ್ದು ಏಕೆಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬುರ್ಕಾ ಧರಿಸಿ ಮಾತನಾಡಿರುವ ಸನಾ, “ನನ್ನ ಹಿಂದಿನ ಜೀವನದಲ್ಲಿ ಸಹಜವಾಗಿ ಹೆಸರು, ಕೀರ್ತಿ, ಹಣ ಎಲ್ಲವೂ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಲ್ಲವಳಾಗಿದ್ದೆ. ಆದರೆ ನನ್ನ ಹೃದಯದಲ್ಲಿ ನೆಮ್ಮದಿ ಮಾತ್ರ ಇರಲಿಲ್ಲ. ನಾನು ಎಲ್ಲವನ್ನೂ ಪಡೆದಿದ್ದೇನೆ. ಆದರೆ ನಾನು ಏಕೆ ಸಂತೋಷವಾಗಿಲ್ಲ? ಇದು ತುಂಬಾ ಕಠಿಣವಾಗಿತ್ತು. ಖಿನ್ನತೆಗೆ ಒಳಗಾದೆ. ಅಲ್ಲಾನ ಸಂದೇಶಗಳನ್ನು ನೋಡಲಾರಂಭಿಸಿದೆ” ಎಂದಿದ್ದಾರೆ.
“2019ರ ಸಮಯ. ನನಗೆ ಇನ್ನೂ ನೆನಪಿದೆ, ಅದು ರಂಜಾನ್ ಅವಧಿ. ನನ್ನ ಕನಸಿನಲ್ಲಿ ನನ್ನದೇ ಸಮಾಧಿಯನ್ನು ನೋಡಿದೆ. ಸುಡುವ, ಉರಿಯುತ್ತಿರುವ ಸಮಾಧಿಯನ್ನು ನಾನು ಕಾಣುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಲಿಲ್ಲ, ನನ್ನನ್ನೇ ಅದರಲ್ಲಿ ನೋಡಿದೆ. ನಾನು ಬದಲಾಗದಿದ್ದರೆ, ಇದು ನನ್ನ ಅಂತ್ಯ ಎಂದು ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟು ಮಾಡಿತು. ಆಗುತ್ತಿದ್ದ ಬದಲಾವಣೆಗಳು ನನಗೆ ಇನ್ನೂ ನೆನಪಿದೆ. ನಾನು ಎಲ್ಲಾ ಸ್ಫೂರ್ತಿದಾಯಕವಾದ ಇಸ್ಲಾಮಿಕ್ ಭಾಷಣಗಳನ್ನು ಕೇಳಲಾರಂಭಿಸಿದೆ. ಒಂದು ರಾತ್ರಿ ನಾನು ತುಂಬಾ ಸುಂದರವಾದ ಸಂಗತಿಯನ್ನು ಓದಿದೆ” ಎಂದು ನೆನಪು ಮಾಡಿಕೊಂಡಿದ್ದಾರೆ.
“ನಿಮ್ಮ ಕೊನೆಯ ದಿನವು ಹಿಜಾಬ್ ಧರಿಸಿದ ಮೊದಲ ದಿನವಾಗಿರಲು ನೀವು ಬಯಸುವುದಿಲ್ಲ ಎಂದು ಸಂದೇಶವಿತ್ತು. ಅದು ನನ್ನನ್ನು ತುಂಬಾ ಆಳವಾಗಿ ಪ್ರಭಾವಿಸಿದ ವಿಷಯ” ಎನ್ನುವ ಸನಾ ಖಾನ್ ಭಾವುಕರಾಗುತ್ತಾರೆ.
View this post on Instagram
ಜೀವನದಲ್ಲಿ ಶಾಶ್ವತವಾಗಿ ಹಿಜಾಬ್ ಧರಿಸುವುದಾಗಿ ಹೇಳಿರುವ ನಟಿ ಸನಾ, “ಮರುದಿನ ಬೆಳಿಗ್ಗೆ ನಾನು ಎದ್ದದ್ದು ನನಗೆ ನೆನಪಿದೆ. ಅದು ನನ್ನ ಜನ್ಮದಿನವಾಗಿತ್ತು. ನಾನು ಮೊದಲು ಸಾಕಷ್ಟು ಸ್ಕಾರ್ಫ್‌ಗಳನ್ನು ಖರೀದಿಸಿದ್ದೆ. ನಾನು ಕ್ಯಾಪ್ ತೆಗೆದು ಹಾಕಿ, ಸ್ಕಾರ್ಫ್ ಧರಿಸಲಾರಂಭಿಸಿದೆ. ನಾನು ಇನ್ನೆಂದೂ ಹಿಬಾಜ್ ತೆಗೆಯುವುದಿಲ್ಲ ಎಂದು ನಿರ್ಧರಿಸಿ” ಎಂದಿದ್ದಾರೆ.
ಇದನ್ನೂ ಓದಿರಿ: ನಿರ್ಗಮಿತ ರಾಷ್ಟ್ರಪತಿಗೆ ಪ್ರಧಾನಿ ಮೋದಿ ಅಗೌರವ ತೋರಿದರೆ; ವೈರಲ್ ವಿಡಿಯೊದ ವಾಸ್ತವವೇನು?
ಸನಾ ಮತ್ತು ಅವರ ಪತಿ ಅನಾಸ್ ಸೈಯದ್ ಇತ್ತೀಚೆಗೆ ಹಜ್‌ಗೆ ಒಟ್ಟಿಗೆ ಭೇಟಿ ನೀಡಿದ್ದರು. ಬದಲಾದ ವ್ಯಕ್ತಿಯಾಗಿ ಧಾರ್ಮಿಕ ಪ್ರವಾಸಕ್ಕೆ ಹೋಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, “ಈಗ ನಾನು ಬದಲಾಗಿದ್ದೇನೆ, ನಾನು ಮತ್ತೆ ವಾಪಸ್ ಆಗುವುದಿಲ್ಲ. ನನ್ನ ಅಬಯಾ (ಹಿಜಾಬ್) ಅನ್ನು ತೆಗೆದು ಎಸೆಯುವುದಿಲ್ಲ ಎಂದು ನನಗೆ ಸಂತೋಷವಾಗಿದೆ” ಎಂದಿದ್ದಾರೆ.
ಸನಾ ಅವರು ಧನ್ ಧನಾ ಧನ್ ಗೋಲ್‌ನ ‘ಬಿಲ್ಲೋ ರಾಣಿ’ ಮತ್ತು ಇತರ ನೃತ್ಯದ ಹಾಡುಗಳ ಮೂಲಕ ಪ್ರಸಿದ್ಧರಾದರು. ‘ಜೈ ಹೋ’, ‘ವಜಾ ತುಮ್ ಹೋ’ ಮತ್ತು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


