2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಸಂಬಂದ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ನ್ಯಾಯಾಲಯವು ಶುಕ್ರವಾರ BBCಗೆ ಹೊಸ ಸಮನ್ಸ್ ನೀಡಿದೆ.
ಬಿಬಿಸಿ ಜೊತೆಗೆ ಲಾಭರಹಿತ ಸಂಸ್ಥೆ ವಿಕಿಮೀಡಿಯಾ ಮತ್ತು ಡಿಜಿಟಲ್ ಲೈಬ್ರರಿ ಇಂಟರ್ನೆಟ್ ಆರ್ಕೈವ್‌ಗೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಬಿಜೆಪಿ ಸದಸ್ಯ ಬಿನಯ್ ಕುಮಾರ್ ಸಿಂಗ್ ಅವರು ಮಾನನಷ್ಟ ದೂರು ದಾಖಲಿಸಿದ್ದು, ”ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡದಿದ್ದರೂ, ವಿಕಿಪೀಡಿಯಾದಲ್ಲಿ ಅದನ್ನು ವೀಕ್ಷಿಸಲು ಲಿಂಕ್‌ಗಳನ್ನು ಒದಗಿಸುತ್ತದೆ ಮತ್ತು ಆ ಬಗ್ಗೆ ಇಂಟರ್ನೆಟ್ ಆರ್ಕೈವ್‌ನಲ್ಲಿ ವಿಷಯವು ಇನ್ನೂ ಲಭ್ಯವಿದೆ” ಎಂದು ಅವರು ಆರೋಪಿಸಿದ್ದಾರೆ.
ವಿಕಿಮೀಡಿಯಾ ಫೌಂಡೇಶನ್ ವಿಕಿಪೀಡಿಯಾ ವೆಬ್‌ಸೈಟ್‌ಗೆ ಹಣ ನೀಡುತ್ತದೆ. ವಿಕಿಮೀಡಿಯಾ ಮತ್ತು ಇಂಟರ್ನೆಟ್ ಆರ್ಕೈವ್ ಎರಡೂ ಅಮೇರಿಕನ್ ಕಂಪನಿಗಳಾಗಿವೆ, ಆದರೆ BBC ಬ್ರಿಟಿಷ್ ಮಾಧ್ಯಮ ಸಂಸ್ಥೆಯಾಗಿದೆ.
ಮೇ 3 ರಂದು, ನ್ಯಾಯಾಲಯವು ಮೊದಲು ಸಮನ್ಸ್ ಜಾರಿಗೊಳಿಸಿದಾಗ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿರುವ ಎರಡು ವಿದೇಶಿ ಘಟಕಗಳ ವಕೀಲರು ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಹೂಡುವ ಅಧಿಕಾರ ಇಲ್ಲ ಎಂದು ಹೇಳಿದ್ದರು.
”ಹೇಗ್ ಕನ್ವೆನ್ಷನ್ ಮತ್ತು ಭಾರತ ಸರ್ಕಾರದ ನಿಯಮಗಳ ಪ್ರಕಾರ, ವಿದೇಶಗಳಲ್ಲಿ ಸಮನ್ಸ್ ಅಥವಾ ನೋಟಿಸ್‌ಗಳನ್ನು ಕಾನೂನು ವ್ಯವಹಾರಗಳ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕ ಮಾತ್ರ ಜಾರಿಗೊಳಿಸಬಹುದು ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರುಚಿಕಾ ಸಿಂಗ್ಲಾ ಗಮನಿಸಿದ್ದಾರೆ” ಎಂದು ದಿ ಹಿಂದೂ ವರದಿ ಮಾಡಿದೆ.
ಇದೀಗ ನ್ಯಾಯಾಲಯವು ಎರಡೂ ವಿದೇಶಿ ಸಂಸ್ಥೆಗಳಿಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕ ಶುಕ್ರವಾರ ಹೊಸ ಸಮನ್ಸ್ ನೀಡಲಾಗಿದೆ.
”ಭಾರತ: ಮೋದಿ ಪ್ರಶ್ನೆ” ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಬಿಬಿಸಿ ಜನವರಿ 17ರಂದು ಬಿಡುಗಡೆ ಮಾಡಿತ್ತು. 2002ರ ಗುಜರಾತ್ ಗಲಭೆಗಳ ಕುರಿತು ಮತ್ತು ಇದರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿಯವರ ಪಾತ್ರ ಏನು ಎಂಬ ಬಗ್ಗೆ ಸಾಕ್ಷ್ಯಚಿತ್ರ ತೋರಿಸಿದೆ. ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ಶಿಕ್ಷೆಯಿಲ್ಲದ ವಾತಾವರಣಕ್ಕೆ ಮುಖ್ಯಮಂತ್ರಿ ನೇರ ಹೊಣೆಗಾರರಾಗಿದ್ದರು ಎಂದು ಆ ಸಾಕ್ಷ್ಯಚಿತ್ರಗಳು ಹೇಳುತ್ತವೆ. ಗಲಭೆಯಲ್ಲಿ 790 ಮುಸ್ಲಿಮರು ಮತ್ತು 254 ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತವೆ.
ಯುನೈಟೆಡ್ ಕಿಂಗ್‌ಡಮ್ ಸರ್ಕಾರದಿಂದ ಕಳುಹಿಸಲಾದ ತನಿಖಾಧಿಕಾರಿಗಳಲ್ಲಿ ಮಾಜಿ ಹಿರಿಯ ರಾಜತಾಂತ್ರಿಕರನ್ನು ಒಳಗೊಂಡಿತ್ತು. ಅವರಲ್ಲಿ ಒಬ್ಬರು ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ್ದು, ಈ ಹಿಂಸಾಚಾರವನ್ನು ಆರ್‌ಎಸ್ಎಸ್ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್‌ನಿಂದ ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸಾಕ್ಷ್ಯಚಿತ್ರವನ್ನು ಆಡಳಿತಾರೂಢ ಬಿಜೆಪಿ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜನವರಿ 21ರಂದು, ಕೇಂದ್ರವು ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕಲು ಯೂಟ್ಯೂಬ್ ಮತ್ತು ಟ್ವಿಟರ್‌ಗೆ ನಿರ್ದೇಶಿಸಿತ್ತು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಾಕ್ಷ್ಯಚಿತ್ರವನ್ನು ರಾಜಕೀಯ ದುರುದ್ದೇಶ ಎಂದು ಕರೆದಿದ್ದರು.
ವಿಶ್ವ ಹಿಂದೂ ಪರಿಷತ್ ಮತ್ತು ಮೋದಿ ವಿರುದ್ಧ ಮಾನಹಾನಿಕರ ಮತ್ತು ಆಧಾರರಹಿತ ಆರೋಪಗಳನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ ಎಂದು ಸಿಂಗ್ ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ. ಸಾಕ್ಷ್ಯಚಿತ್ರವನ್ನು ಪ್ರಕಟಿಸದಂತೆ ಬಿಬಿಸಿ, ವಿಕಿಪೀಡಿಯಾ ಮತ್ತು ಇಂಟರ್ನೆಟ್ ಆರ್ಕೈವ್ ಅನ್ನು ನಿರ್ಬಂಧಿಸಲು ಅವರು ನ್ಯಾಯಾಲಯದಿಂದ ನಿರ್ದೇಶನಗಳನ್ನು ಕೋರಿದ್ದಾರೆ.
ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಗೆ ಬೇಷರತ್ ಕ್ಷಮೆಯಾಚಿಸಲು ಮತ್ತು 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಬಿಬಿಸಿ, ವಿಕಿಮೀಡಿಯಾ ಮತ್ತು ಇಂಟರ್ನೆಟ್ ಆರ್ಕೈವ್‌ಗೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ.


