ಮೃತ ಮಹಿಳೆಯ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪುಣೆ ಮೂಲದ ಮಹಿಳೆಯ ಮಾನನಷ್ಟ ಮಾಡಿದ ಆರೋಪದಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 500 ಮತ್ತು 501ರ ಅನ್ವಯ ಮನೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಶಿಮ್ ಜಿಲ್ಲೆಯ ರಾಷ್ಟ್ರೀಯ ಬಂಜಾರ ಪರಿಷತ್‌ನ ಯುವ ವಿಭಾಗದ ಮುಖ್ಯಸ್ಥರಾಗಿರುವ ಶ್ಯಾಮ್ ಸರ್ದಾರ್ ರಾಥೋಡ್ ಅವರು ದೂರು ದಾಖಲಿಸಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಕೆಲ ಸುದ್ದಿವಾಹಿನಿಗಳು ಕೂಡಾ ಮೃತ ಮಹಿಳೆ ಮತ್ತು ಬಂಜಾರ ಸಮುದಾಯವನ್ನು ಅವಮಾನಿಸಿವೆ ಎಂದು ಅವರು ದೂರಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಚಿವರ ರಾಜೀನಾಮೆಗೆ ಕಾರಣವಾದ ಸಾವಿನ ಪ್ರಕರಣ ಸಂಬಂಧದಲ್ಲಿ, ಫಡ್ನವೀಸ್ ಜತೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಪ್ರವೀಣ್ ದಾರೇಕರ್, ಮಾಜಿ ಸಚಿವರಾದ ಸುಧೀರ್ ಮುಗಂಟಿವಾರ್, ಆಶೀಶ್ ಶೇಲರ್, ಮುಂಬೈ ಶಾಸಕ ಅತುಲ್ ಭಟ್ಕಳ್‌ಕರ್ ಹಾಗೂ ಬಿಜೆಪಿ ನಾಯಕಿ ಚಿತ್ರಾ ವಾಘ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೊತೆಗೆ ದೂರಿನಲ್ಲಿ ಪ್ರಸಾದ್ ಲಾಡ್, ಶಾಂತಾಬಾಯಿ ಚವ್ಹಾಣ್ ಮತ್ತು ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರನ್ನೂ ಹೆಸರಿಸಲಾಗಿದೆ.
ಇದನ್ನೂ ಓದಿ: ಕೇರಳ ಚುನಾವಣೆ: ಸದ್ಯದ ಸ್ಥಿತಿ ಮತ್ತು ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಹಗ್ಗಜಗ್ಗಾಟ
ಪುಣೆಯ ಹಡಪಸಾರ್ ಎಂಬಲ್ಲಿ 23 ವರ್ಷ ಮಹಿಳೆ ಇತ್ತೀಚೆಗೆ ಮೃತಪಟ್ಟಿದ್ದರು. ಮಹಿಳೆಯ ಸಾವಿನ ಹಿಂದೆ ಶಿವಸೇನೆ ಶಾಸಕ ಸಂಜಯ್ ರಾಥೋಡ್ ಅವರ ಕೈವಾಡವಿದೆ ಎಂದು ಬಿಜೆಪಿ ಆಪಾದಿಸಿದ ಹಿನ್ನೆಲೆಯಲ್ಲಿ ರಾಜಕೀಯ ವಿವಾದ ಸೃಷ್ಟಿಯಾಗಿತ್ತು. ಬಂಜಾರ ಸಮುದಾಯಕ್ಕೆ ಸೇರಿದ ರಾಥೋಡ್, ರಾಜ್ಯದ ಅರಣ್ಯ ಸಚಿವ ಹುದ್ದೆಗೆ ರವಿವಾರ ರಾಜೀನಾಮೆ ನೀಡಿದ್ದರು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೂಜಾ ಚೌವಾಣ್ ಎಂಬ 23 ವರ್ಷದ ಯುವತಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಕಲಿಯಲು ಪುಣೆಯಲ್ಲಿ ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ವಾಸಿಸುತ್ತಿದ್ದಳು. ಫೆಬ್ರವರಿ 8 ರಂದು ಈ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು.
ಯುವತಿಯ ಸಾವಿನ ಎರಡು ದಿನಗಳ ನಂತರ, ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಕ್ಲಿಪ್ ಬಿಡುಗಡೆಯಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಯುವತಿಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಆಡಿಯೋ ಕ್ಲಿಪ್‌ನಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು ಸಂಜಯ್ ರಾಥೋಡ್ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಸಂಜಯ್ ರಾಥೋಡ್ ನಿರಾಕರಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ’ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸಿಕೊಂಡರೂ, ಅದನ್ನು ಕ್ರಿಮಿನಲ್ ಪ್ರಕರಣ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಕಳೆದ ವಾರ ತಿಳಿಸಿದ್ದರು.
ಇದನ್ನೂ ಓದಿ: ಮಕ್ಕಳನ್ನು ಹೆರುವುದು ನೀವು, ಸರ್ಕಾರ ವೆಚ್ಚ ಭರಿಸಬೇಕಾ?: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ
ಸಚಿವ ಸಂಜಯ್ ರಾಥೋಡ್‌ಗೂ ಮೃತ ಯುವತಿಯ ಸಾವಿಗೂ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿ, ಅವರ ಬಂಧನಕ್ಕೆ ಪಕ್ಷ ಒತ್ತಾಯಿಸುತ್ತಿತ್ತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಾವಿನ ಬಗ್ಗೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
“ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರ ಆರೋಪ ಹೊಂದಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಬೀಡ್ ಜಿಲ್ಲೆಯಲ್ಲಿ ಸಂಜಯ್ ರಾಥೋಡ್ ಅವರ ಪ್ರತಿಮೆಯನ್ನು ಸುಟ್ಟು ಬಿಜೆಪಿ ಪ್ರತಿಭಟನೆ ನಡೆಸಿತ್ತು” ಎಂದು ಬಿಜೆಪಿ ಮಹಾರಾಷ್ಟ್ರ ಕಳೆದ ವಾರ ಟ್ವೀಟ್ ಮಾಡಿದೆ.
“ಸಂಜಯ್ ರಾಥೋಡ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಆದರೆ ಏನೂ ಆಗುತ್ತಿಲ್ಲ. ಮಾಧ್ಯಮ ವರದಿಗಳು ಹೊರಬರದಿದ್ದರೆ ಏನೂ ಆಗುತ್ತಿರಲಿಲ್ಲ. ರಾಜ್ಯದ ಪೊಲೀಸರು ಒತ್ತಡದಲ್ಲಿದ್ದಾರೆ. ಮೊದಲು, ಪೋಲಿಸ್ ತನಿಖೆಯ ಬಗ್ಗೆ ತನಿಖೆ ನಡೆಸಬೇಕಾಗಿದೆ” ಎಂದು ಫಡ್ನವಿಸ್ ಕಳೆದ ವಾರ ಹೇಳಿದ್ದರು.
ಇದನ್ನೂ ಓದಿ: ಭಾರತದ ಪವರ್‌ಗ್ರಿಡ್‌ಗಳು ಚೀನಾ ಹ್ಯಾಕರ್‌ಗಳ ಟಾರ್ಗೆಟ್!


