ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆಯ ವಿವಾದದ ಮಧ್ಯೆ, ಚೀನಾದ ಸರ್ಕಾರ-ಸಂಬಂಧಿತ ಹ್ಯಾಕರ್‌ಗಳ ಗುಂಪು ಮಾಲ್‌ವೇರ್ ಮೂಲಕ ಭಾರತದ ನಿರ್ಣಾಯಕ ಪವರ್ ಗ್ರಿಡ್ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಅಮೆರಿಕದ ಕಂಪನಿಯೊಂದು ತನ್ನ ಇತ್ತೀಚಿನ ಅಧ್ಯಯನದಲ್ಲಿ ಹೇಳಿಕೊಂಡಿದ್ದು, ಕಳೆದ ವರ್ಷ ಮುಂಬೈನಲ್ಲಿ ಭಾರಿ ವಿದ್ಯುತ್ ಕಡಿತ ಉಂಟಾಗಿದ್ದಕ್ಕೆ ಈ ಆನ್‌ಲೈನ್ ಒಳನುಗ್ಗುವಿಕೆ ಕಾರಣವಾಗಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಮ್ಯಾಸಚೂಸೆಟ್ಸ್ ಮೂಲದ ರೆಕಾರ್ಡೆಡ್ ಫ್ಯೂಚರ್, ವಿವಿಧ ದೇಶ/ರಾಜ್ಯಗಳ ಅಂತರ್ಜಾಲದ ಬಳಕೆಯನ್ನು ಅಧ್ಯಯನ ಮಾಡುತ್ತದೆ. ಅದು ತನ್ನ ಇತ್ತೀಚಿನ ವರದಿಯಲ್ಲಿ ಚೀನಾ-ಸಂಬಂಧಿತ ಬೆದರಿಕೆ ಚಟುವಟಿಕೆ ಗುಂಪು ರೆಡ್‌ಇಕೋ ಭಾರತೀಯ ವಿದ್ಯುತ್ ವಲಯವನ್ನು ಗುರಿಯಾಗಿಸಿಕೊಂಡು ನಡೆಸಿದ ಅಭಿಯಾನವನ್ನು ವಿವರಿಸಿದೆ.

ದೊಡ್ಡ-ಪ್ರಮಾಣದ ಸ್ವಯಂಚಾಲಿತ ನೆಟ್‌ವರ್ಕ್ ಸಂಚಾರ ವಿಶ್ಲೇಷಣೆ ಮತ್ತು ತಜ್ಞರ ವಿಶ್ಲೇಷಣೆಯ ಸಂಯೋಜನೆಯ ಮೂಲಕ ಚಟುವಟಿಕೆಯನ್ನು ಗುರುತಿಸಲಾಗಿದೆ.

ಅಕ್ಟೋಬರ್ 12 ರಂದು, ಮುಂಬೈನಲ್ಲಿ ಗ್ರಿಡ್ ವೈಫಲ್ಯದಿಂದಾಗಿ ಭಾರಿ ವಿದ್ಯುತ್ ಕಡಿತವಾಗಿತ್ತು. ಹಳಿಗಳಲ್ಲಿ ರೈಲುಗಳನ್ನು ನಿಲ್ಲಿಸುವುದು, ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಮನೆಯಿಂದ ಕೆಲಸ ಮಾಡುವವರಿಗೆ ಅಡ್ಡಿಯುಂಟು ಮಾಡುವುದು ಮತ್ತು ಬಳಲುತ್ತಿದ್ದ ಆರ್ಥಿಕ ಚಟುವಟಿಕೆಯನ್ನು ತೀವ್ರವಾಗಿ ಮುಗ್ಗರಿಸುವಂತೆ ಮಾಡುವುದು ಆನ್‌ಲೈನ್ ದಾಳಿಯ ಗುರಿಯಾಗಿತ್ತು ಎನ್ನಲಾಗಿದೆ.

ಅಂದು ಅಗತ್ಯ ಸೇವೆಗಳಿಗಾಗಿ ವಿದ್ಯುತ್ ಸರಬರಾಜು ಪುನರಾರಂಭಗೊಳ್ಳಲು ಎರಡು ಗಂಟೆ ಬೇಕಾಯಿತು, ಈ ಘಟನೆಯ ತನಿಖೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶಿಸಿದ್ದರು.

ತನ್ನ ವರದಿಯಲ್ಲಿ, ರೆಕಾರ್ಡೆಡ್ ಫ್ಯೂಚರ್ ಕಂಪನಿಯು, ಶಂಕಿತ ಒಳನುಗ್ಗುವಿಕೆಗಳನ್ನು ಪ್ರಕಟಿಸುವ ಮೊದಲು, ಪರಿಹಾರ ವ್ಯವಸ್ಥೆಯನ್ನು ಬೆಂಬಲಿಸಲು ಸೂಕ್ತ ಭಾರತೀಯ ಸರ್ಕಾರಿ ಇಲಾಖೆಗಳಿಗೆ ಸೂಚಿಸಿದೆ.

ಯುಎಸ್ ಕಂಪನಿಯ ಅಧ್ಯಯನಕ್ಕೆ ಭಾರತ ಸರ್ಕಾರದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
2020 ರ ಆರಂಭದಿಂದಲೂ, ರೆಕಾರ್ಡೆಡ್ ಫ್ಯೂಚರ್‌ನ ಇನ್‌ಸಿಕ್ಟ್ ಗ್ರೂಪ್, ಚೀನಾ ಸರ್ಕಾರ ಪ್ರಾಯೋಜಿತ ಗುಂಪಿನಿಂದ ಭಾರತೀಯ ಸಂಸ್ಥೆಗಳ ವಿರುದ್ಧ ಶಂಕಿತ ಉದ್ದೇಶಿತ ಒಳನುಗ್ಗುವಿಕೆ ಚಟುವಟಿಕೆಯಲ್ಲಿ ಹೆಚ್ಚಳವನ್ನು ಗಮನಿಸಿದೆ.

ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ, ಈ ಸಂಶೋಧನೆಯು ಮುಂಬೈ ನಿಲುಗಡೆಗೆ ಬೀಜಿಂಗ್‌ನಿಂದ ಬಂದ ಸಂದೇಶವಾಗಿರಬಹುದು, ಭಾರತವು ತನ್ನ ಗಡಿ ಹಕ್ಕುಗಳನ್ನು ತೀವ್ರವಾಗಿ ಪ್ರಸ್ತಾಪಿಸಿದರೆ ಏನಾಗಬಹುದು ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ ಎಂದು ಹೇಳಿದೆ.

ರೆಕಾರ್ಡೆಡ್ ಕಂಪನಿ ಮಾಡಲಾದ ವರದಿಯ ಪ್ರಕಾರ, 2020 ರ ಮಧ್ಯದಿಂದ ಭಾರತದ ವಿವಿಧ ಪವರ್‌ಗ್ರಿಡ್‌ಗಳ ಮೇಲೆ ಈ ಆನ್‌ಲೈಬ್ ದಾಳಿ ನಡೆದಿದೆ ಎಂದು ಹೇಳಿದೆ.

ವಿದ್ಯುತ್ ಸರಬರಾಜು ಮತ್ತು ಬೇಡಿಕೆಯನ್ನು ಸಮತೋಲನಗೊಳಿಸುವ ವಿದ್ಯುತ್ ಗ್ರಿಡ್‌ನ ಕಾರ್ಯಾಚರಣೆಯ ಜವಾಬ್ದಾರಿಯುತ ಹತ್ತು ವಿಭಿನ್ನ ಭಾರತೀಯ ವಿದ್ಯುತ್ ವಲಯದ ಸಂಸ್ಥೆಗಳನ್ನು ಸಂಘಟಿತ ಅಭಿಯಾನದಲ್ಲಿ ಗುರಿಯಾಗಿ ಮಾಡಲಾಗಿದೆ.
ಗುರುತಿಸಲಾದ ಇತರ ಗುರಿಗಳಲ್ಲಿ ಎರಡು ಭಾರತೀಯ ಬಂದರುಗಳು ಸೇರಿವೆ ಎಂದು ಅದು ಹೇಳಿದೆ.

ಚೀನೀ ಸೈಬರ್ ಗೂಢಚರ್ಯೆ ಚಟುವಟಿಕೆಗೆ ಅನನ್ಯವಾಗಿಲ್ಲವಾದರೂ, ಪ್ಲಗ್‌ಎಕ್ಸ್ ಅನ್ನು ಚೀನಾ-ನೆಕ್ಸಸ್ ಗುಂಪುಗಳು ಹಲವು ವರ್ಷಗಳಿಂದ ಹೆಚ್ಚು ಬಳಸುತ್ತಿವೆ.

“2020 ರ ಉಳಿದ ಅವಧಿಯಲ್ಲಿ, ಚೀನಾದ ಸರ್ಕಾರಿ ಪ್ರಾಯೋಜಿತ ಬೆದರಿಕೆ ಚಟುವಟಿಕೆ ಗುಂಪುಗಳಿAದ ಭಾರತೀಯ ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳ ಗುರಿಯತ್ತ ಹೆಚ್ಚಿನ ಗಮನವನ್ನು ನಾವು ಗುರುತಿಸಿದ್ದೇವೆ” ಎಂದು ವರದಿ ಹೇಳಿದೆ.

ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳ ಅತ್ಯಂತ ವಿವಾದಾತ್ಮಕ ಪ್ರದೇಶದಿಂದ ಸೈನ್ಯವನ್ನು ಹೊರ ತೆಗೆಯಲು ಉಭಯ ದೇಶಗಳು ಕಳೆದ ತಿಂಗಳು ಪರಸ್ಪರ ಒಪ್ಪಂದಕ್ಕೆ ಬಂದಿವೆ.


ಇದನ್ನೂ ಓದಿ: 8 ಹಂತಗಳಲ್ಲಿ ಪ.ಬಂಗಾಳ ಚುನಾವಣೆ: ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

LEAVE A REPLY

Please enter your comment!
Please enter your name here