ಹೋರಾಟಗಾರ, ಸಾಂಸ್ಕೃತಿಕ ಚಿಂತಕ, ಕವಿ ಕೆ.ಬಿ.ಸಿದ್ದಯ್ಯ ಅವರ ದರೈಸ್ತ್ರೀ (ದಲಿತ, ರೈತ, ಸ್ತ್ರೀ) ಪರಿಕಲ್ಪನೆ ಮತ್ತು ಸಾಂಸ್ಕೃತಿಕ ಆಶಯವನ್ನು ಮುಂದುವರೆಸಿಕೊಂಡು ಹೋಗಲು ತುಮಕೂರಿನಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಆರಂಭವಾಗಿದ್ದು, ಇಬ್ಬರಿಗೆ ದರೈಸ್ತ್ರೀ ಪ್ರಶಸ್ತಿ ಮತ್ತೊಬ್ಬರಿಗೆ ಕೆ.ಬಿ.ಕಾವ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಮಾರ್ಚ್ 7 ರ ಭಾನುವಾರ ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಬಾಲಭವನಲ್ಲಿ ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟ್ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.
ದಲಿತ ಚಳುವಳಿ ಮತ್ತು ರೈತ ಚಳುವಳಿಯನ್ನು ತಾತ್ವಿಕವಾಗಿ, ಸಂಘಟನಾತ್ಮಕವಾಗಿ, ಭಾವನಾತ್ಮಕವಾಗಿ ಬೆಸೆಯುವ ತಾತ್ವಿಕ ಚಿಂತನೆಯ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ದಲಿತ, ರೈತ, ಸ್ತ್ರೀ ಹೋರಾಟಗಾರರ ಹೆಸರಿನಲ್ಲಿ ಸಾಂಸ್ಕೃತಿಕ ಪ್ರಶಸ್ತಿ ನೀಡುವುದನ್ನು 2005ರಲ್ಲಿ ಕೆ.ಬಿ.ಸಿದ್ದಯ್ಯ ಅವರು ಆರಂಭಿಸಿದ್ದರು.
ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಕುರಿತು ಎಬಿಪಿ-ಸಿ- ಓಟರ್ ಸಮೀಕ್ಷೆ ಹೇಳಿದ್ದೇನು…ಇಲ್ಲಿದೆ ವಿವರ
ಕೆ.ಬಿ.ಸಿದ್ದಯ್ಯ ಅವರ ಈ ಪರಿಕಲ್ಪನೆಯನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶವನ್ನು ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹೊಂದಿದ್ದು, ಈ ಬಾರಿ ವಿವಿಧ ವಿಭಾಗಗಳ ಮೂವರು ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಬಾರಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಅವರನ್ನು ‘ದರೈಸ್ತ್ರೀ’ (ದಲಿತ, ರೈತ, ಸ್ತ್ರೀ) ಪ್ರಶಸ್ತಿಗೆ ಹಾಗೂ ಕವಿ ವಿಲ್ಸನ್ ಕಟೀಲ್ ಅವರನ್ನು ‘ಕೆ.ಬಿ ಕಾವ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೂರು ಪ್ರಶಸ್ತಿಗಳು ತಲಾ 10 ಸಾವಿರ ರೂ. ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಮಾರ್ಚ್ 7ರಂದು ತುಮಕೂರು ನಗರದ ಬಾಲಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕುರಿ, ಮೇಕೆಗಳು ಸತ್ತರೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆ ಮರುಜಾರಿಗೊಳಿಸಿ: ಸಿದ್ದರಾಮಯ್ಯ
