2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪಾತ್ರವಹಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮುಂದಿನ ವರ್ಷದ ಚುನಾವಣೆಯಲ್ಲಿಯೂ ಅಮರಿಂದರ್ ಸಿಂಗ್ ಪರ ಕೆಲಸ ಮಾಡಲಿದ್ದಾರೆ.

ಈ ಕುರಿತು ಪಂಜಾಬ್ ಸಿಎಂ ಕಾರ್ಯಾಲವು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಶಾಂತ್ ಕಿಶೋರ್‌ರವರನ್ನು ಸಿಎಂರವರಿಗೆ ಪ್ರಧಾನ ಸಲಹೆಗಾರರಾಗಿ ಆಗಿ ನೇಮಿಸಿಕೊಳ್ಳಲಾಗಿದೆ. ಅದೊಂದು ಕ್ಯಾಬಿನೆಟ್ ದರ್ಜೆಯ ಹುದ್ದೆಯಾಗಿದೆ. ಆದರೆ ತಮ್ಮ ಕೆಲಸಕ್ಕಾಗಿ ಕಿಶೋರ್ ಗೌರವಧನವಾಗಿ ಕೇವಲ 1 ರೂ ಪಡೆಯಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ಇದನ್ನೂ ಓದಿ: ಧೈರ್ಯವಿದ್ದರೆ CAA, NRC ಜಾರಿಗೊಳಿಸಿ: ಅಮಿತ್ ಶಾಗೆ ಪ್ರಶಾಂತ್‌ ಕಿಶೋರ್‌ ಸವಾಲು


“ಪ್ರಶಾಂತ್ ಕಿಶೋರ್ ಅವರು ನನ್ನ ಪ್ರಧಾನ ಸಲಹೆಗಾರರಾಗಿ ಸೇರಿಕೊಂಡಿದ್ದಾರೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಪಂಜಾಬ್ ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತೇನೆ!” ಎಂದು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

2017 ರ ಪಂಜಾಬ್ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ 117 ಸ್ಥಾನಗಳಲ್ಲಿ 77 ಸ್ಥಾನ ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿ ಅಧಿಕಾರಿ ಹಿಡಿದಿತ್ತು. ಈ ಹಿಂದೆ 2012 ರ ಚುನಾವಣೆಯಲ್ಲಿ ಕಾಂಗ್ರೆಸ್ 46 ಸ್ಥಾನಗಳಲ್ಲಿ ಮಾತ್ರ ಗೆದ್ದು ಶಿರೋಮಣಿ ಅಕಾಲಿ ದಳ – ಬಿಜೆಪಿ (68 ಸ್ಥಾನಗಳಲ್ಲಿ ಜಯ) ಮೈತ್ರಿಯೆದುರು ಸೋಲನನುಭವಿಸಿತ್ತು.

2017 ರಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಪರವಾಗಿಯೂ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು. ಆದರೆ ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. 403 ಸ್ಥಾನಗಳಲ್ಲಿ ಕೇವಲ 7ರಲ್ಲಿ ಮಾತ್ರ ಗೆಲುವ ಸಾಧಿಸಿತ್ತು. ಅದನ್ನು ಹೊರತುಪಡಿಸಿ ಆಂಧ್ರದಲ್ಲಿ ವೈಎಸ್‌ಆರ್‌ಪಿ ಪಕ್ಷದ ಜಗನ್ ಮೋಹನ್ ರೆಡ್ಡಿ ಮತ್ತು ದೆಹಲಿಯಲ್ಲಿ ಆಪ್ ಪಕ್ಷದ ಅರವಿಂದ್ ಕೇಜ್ರಿವಾಲ್ ಪರ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್ ಪಕ್ಷಗಳನ್ನು ಭಾರೀ ಅಂತರದಲ್ಲಿ ಗೆಲ್ಲಿಸುವಲ್ಲಿ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಪ.ಬಂಗಾಳದಲ್ಲಿ BJP ಎರಡಂಕಿ ದಾಟುವುದಿಲ್ಲ: ಒಂದು ವೇಳೆ ಗೆದ್ದರೆ ಟ್ವಿಟರ್ ತ್ಯಜಿಸುತ್ತೇನೆ- ಪ್ರಶಾಂತ್ ಕಿಶೋರ್

ಮುಂದಿನ ತಿಂಗಳು ಆರಂಭವಾಗಲಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪರವಾಗಿಯೂ, ತಮಿಳುನಾಡಿನಲ್ಲಿ ಎಂ.ಕೆ ಸ್ಟಾಲಿನ್‌ರವರ ಡಿಎಂಕೆ ಪರವಾಗಿಯೂ ಪ್ರಶಾಂತ್ ಕಿಶೋರ್ ಕೆಲಸ ಮಾಡುತ್ತಿದ್ದಾರೆ. ಬಂಗಾಳದಲ್ಲಂತೂ ಬಿಜೆಪಿ ಎರಡಂಕಿ ದಾಟಿದರೆ ತಾನು ಟ್ವಿಟರ್ ತ್ಯಜಿಸುವುದಾಗಿ ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.

ಪ್ರಶಾಂತ್ ಕಿಶೋರ್ ಭಾರತದ ರಾಜಕೀಯ ಚತುರ ಎಂದು ಹೆಸರು ಪಡೆದವರು. 2013 ರಲ್ಲಿ ನರೇಂದ್ರ ಮೋದಿ ಪರವಾಗಿ ಕೆಲಸ ಮಾಡಿದ್ದ ಅವರು ನಂತರ ಬಿಜೆಪಿಯಿಂದ ದೂರವಾಗಿದ್ದಾರೆ. ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಕಿಶೋರ್ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಎ, ಎನ್‌ಆರ್‌ಸಿ ಪರ ಮತ ಹಾಕಿದನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.


ಇದನ್ನೂ ಓದಿ: 2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ, ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್ ಯಾರು?

LEAVE A REPLY

Please enter your comment!
Please enter your name here