Homeಮುಖಪುಟ2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ, ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್...

2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ, ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್ ಯಾರು?

ಕೇವಲ ಒಂದು ಚುನಾವಣೆ ಹೊರತುಪಡಿಸಿ ಸುಮಾರು 8 ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿಯಾಗಿದ್ದಾರೆ.

- Advertisement -
- Advertisement -

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೋದಿ-ಅಮಿತ್ ಶಾ ಜೋಡಿ ಪ್ರಚಂಡ ಬಹಮತ ಗಳಿಸಿ ವಿಜಯಿಯಾದರು. ಹತ್ತು ವರ್ಷಗಳ ನಂತರ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಯ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದರು. ಆಗ ಬಹುತೇಕ ಮಾಧ್ಯಮಗಳು ಅಮಿತ್ ಶಾರನ್ನು ಚಾಣಕ್ಯ ಎಂದು ಕರೆಯಲು ಶುರುಮಾಡಿದರು. ಮೋದಿ ಮಾಸ್ಟರ್ ಸ್ಟ್ರೋಕ್ ಎಂದು ಕೊಂಡಾಡಿದರು. ಅಂದರೆ ತೆರೆಯ ಮೇಲಿದ್ದವರನ್ನು ಆ ಸಾಧನೆಗೆ ಕಾರಣಕರ್ತರೆಂದು ಹೊಗಳಲಾಯಿತು. ಆದರೆ ತೆರೆಯ ಹಿಂದೆಯೂ ಸಹ ಕೆಲವರು ದುಡಿದ್ದಿದ್ದರು ಮಾತ್ರವಲ್ಲ ಅವರೇ ಬಿಜೆಪಿ ಗೆಲ್ಲಲು ಮೂಲಭೂತ ಕಾರಣೀಕರ್ತರಾಗಿದ್ದರು. ಅವರಲ್ಲಿ ರಾಜಕೀಯ ತಂತ್ರಜ್ಷ ಪ್ರಶಾಂತ್ ಕಿಶೋರ್ ಪ್ರಮುಖರು.

ಪೊಲಿಟಿಕಲ್ ಸ್ಟ್ರಾಟಜಿ ಎಂಬ ಹೊಸ ವಿಧಾನವೊಂದು ಇತ್ತೀಚಿನ ಚುನಾವಣೆಗಳಲ್ಲಿ ಅತ್ಯಗತ್ಯವಾಗಿದೆ. ಅದಕ್ಕಾಗಿಯೇ ಕೆಲಸ ಮಾಡುವ ಹಲವು ಕಂಪನಿಗಳಿವೆ. ಅವುಗಳಲ್ಲಿ ಬಹಳ ಯಶಸ್ಸು ಕಂಡ ಮತ್ತು ಪ್ರಖ್ಯಾತವಾದ ಕಂಪನಿಯೆಂದರೆ IPAC (ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ). ಅದರ ಮುಖ್ಯಸ್ಥ ಪ್ರಶಾಂತ್ ಕಿಶೋರ್. ಅಂದರೆ 2014ರಲ್ಲಿ ಮೋದಿ ಗೆಲ್ಲಲು ತೆರೆಯ ಹಿಂದೆ ನಿಂತು ತಂತ್ರ ರೂಪಿಸಿದ ರಾಜಕೀಯ ಚತುರ.

ಏನು ಪೊಲಿಟಿಕಲ್ ಸ್ಟ್ರಾಟಜಿ
ಚುನಾವಣೆಯೊಂದನ್ನು ಗೆಲ್ಲಬೇಕಾದರೆ ಯಾವುದೇ ಪಕ್ಷವು ತಮ್ಮ ಬಗ್ಗೆ ಮತದಾರರಲ್ಲಿ ಸದ್ಭಾವನೆ ಮೂಡುವಂತೆ ಮಾಡುವುದು ಪೂರ್ವ ಷರತ್ತು. ಒಳ್ಳೆಯ ಕೆಲಸಗಳನ್ನು ಮಾಡುವುದು, ಜನರ ಸಮಸ್ಯೆಗಳನ್ನು ಬಗೆಹರಿಸಿದರೆ ಜನ ಮತ ಹಾಕುತ್ತಾರೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿತ್ತು. ಆದರೆ ಇಂದಿನ ಯುಗದಲ್ಲಿ ಅಷ್ಟು ಮಾತ್ರ ಸಾಕಾಗುವುದಿಲ್ಲ. ಉಳಿದ ಪಕ್ಷಗಳಿಗಿಂತ ನಾವೇ ಅತ್ಯುತ್ತಮ ಆಯ್ಕೆ ಎಂದು ಮತದಾರರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಾಗಬೇಕಾದರೆ ಅದಕ್ಕೊಂದು ತಂತ್ರ ಎಣೆಯಬೇಕು. ಜಾತಿ, ಧರ್ಮ ಇತ್ಯಾದಿಗಳ ಆಧಾರದಲ್ಲಿ ಮತಗಳನ್ನು ಪರಿಗಣಿಸಿ ಅವರನ್ನು ಒಲಿಸಲು ಡೇಟಾವನ್ನು ಸಂಗ್ರಹಿಸಿಬೇಕು. ಮತದಾರರ ನಾಡಿಮಿಡಿತವನ್ನು ಅರಿಯಲು ಸರ್ವೇಗಳು, ಸಂಶೋಧನೆಗಳನ್ನು ನಡೆಸಿ ಅವರನ್ನು ಮನಸ್ಸನ್ನು ಸೆಳೆಯಲು ಟಿವಿ, ಪತ್ರಿಕೆಯ ಸುದ್ದಿ ಸೇರಿದಂತೆ ಹೇಗೆ ಮಾತಾಡಬೇಕು, ಯಾವ ವಿಷಯ ಮಾತಾಡಬೇಕು, ಅವರನ್ನು ಹೇಗೆ ಮರಳು ಮಾಡಬೇಕು ಎಂಬುದರ ಕುರಿತು ಅಧ್ಯಯನ ಮಾಡಿ ತಂತ್ರ ರೂಪಿಸಿ ಜಾರಿಗೊಳಿಸುವುದೇ ಈ ಪೊಲಿಟಿಕಲ್ ಸ್ಟ್ರಾಟಜಿ.. ಸರಳವಾಗಿ ಹೇಳುವುದಾದರೆ ಮರಳುಮಾಡುವ ಜಾಹೀರಾತು. ಅದರಲ್ಲಿ ಯಶಸ್ವಿಯಾದವರೆ ಈ ಪ್ರಶಾಂತ್ ಕಿಶೋರ್.

ಗುಜರಾತ್‌ನಲ್ಲಿ ಮೋದಿ ಗೆಲುವಿನಲ್ಲಿ ಪ್ರಶಾಂತ್ ಕಿಶೋರ್ ಪಾತ್ರ
ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಪರಿಣಿತರಾದ ಇವರು 8 ವರ್ಷಗಳ ಕಾಲ ವಿಶ್ವಸಂಸ್ಥೆಗೆ ಕೆಲಸ ಮಾಡಿ ಅಪಾರ ಜನ ಒಡನಾಟದ ಅನುಭವ ಗಳಿಸಿದ್ದರು. ಅದರ ಆಧಾರದಲ್ಲಿಯೇ ಸರ್ವೇ, ಸಂಶೋಧನೆಗಳ ಆಧಾರದಲ್ಲಿ ಜನರ ನಾಡಿಮಿಡಿತ ಅರಿತು ಚುನಾವಣಾ ತಂತ್ರ ರೂಪಿಸಲು ಆರಂಭಿಸಿದ್ದರು. 2012ರಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಮೂರನೇ ವಿಧಾನಸಭಾ ಚುನಾವಣೆ ಎದುರಾಗಿತ್ತು. ಆಗ ಯುವಕ ಪ್ರಶಾಂತ್ ಕಿಶೋರ್ ಅವರ ಬೆನ್ನಿಗೆ ನಿಂತು ತಂತ್ರ ರೂಪಿಸಿದರು. ಮೋದಿ ಅನಾಯಾಸವಾಗಿ ಗೆದ್ದು ಮೂರನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದರು. ಅಲ್ಲಿಂದ ಪ್ರಶಾಂತ್‌ರವರ ರೇಟಿಂಗ್ ಕೂಡ ಏರಲು ಆರಂಭಿಸಿತು.

2014ರ ಲೋಕಸಭಾ ಚುನಾವಣೆ
ನರೇಂದ್ರ ಮೋದಿಯವರು ಗುಜರಾತ್‌ನಿಂದ ಹೊರಬಂದು ರಾಷ್ಟ್ರನಾಯಕರಾಗುವ ಹವಣಿಕೆಯಲ್ಲಿದ್ದರು. ಬಿಜೆಪಿಯಲ್ಲಿ ಉಗ್ರ ನಾಯಕತ್ವದ ಕೊರತೆಯು ಬಾದಿಸುತ್ತಿತ್ತು. ಅದೇ ಸಮಯದಲ್ಲಿ ಯುಪಿಎ2 ಸರ್ಕಾರ ಭಾರೀ ಭ್ರಷ್ಟಾಚಾರ ಮತ್ತು ಹಗರಣಗಳ ಆರೋಪದಲ್ಲಿ ಮುಳುಗಿತ್ತು. ಅಂತಹ ಸಂದರ್ಭದಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮೋದಿ ಮೂಡಿಬಂದರು. ಆಗ ಚುನಾವಣೆ ತಂತ್ರಕ್ಕೆ ಅವರಿಗೆ ಜೊತೆಯಾಗಿದ್ದು ಅದೇ ಪ್ರಶಾಂತ್ ಕಿಶೋರ್.

ಚಾಯ್ ಪೇ ಚರ್ಚಾ
ಮೋದಿ ಒಬ್ಬ ಸಾಮಾನ್ಯ ಬಡಕುಟುಂಬದಿಂದ ಬೆಳೆದುಬಂದವರು. ಚಹಾ ಮಾರಿ ಜೀವನ ಸಾಗಿಸಿ ಜನಸೇವೆಗಾಗಿ ಗುಜರಾತಿನ ಮುಖ್ಯಮಂತ್ರಿಯಾದರು ಎಂಬ ಭಾವನೆ ಜನರಲ್ಲಿ ಬೆಳೆಸುವುದಕ್ಕಾಗಿ ಪ್ರಶಾಂತ್ ಕೊಟ್ಟ ದೊಡ್ಡ ಐಡಿಯಾವೇ ಚಾಯ್ ಪೇ ಚರ್ಚಾ. ಚಹಾ ಕುಡಿಯುತ್ತಾ ಚರ್ಚೆ ಎಂಬುದು ಭಾರತದ ಉದ್ದಗಲಕ್ಕೂ ಫೇಮಸ್ ಆಯ್ತು.

ಸಿಎಜಿCitizens for Accountable Governance
ಮೊದಲೇ ಹೇಳಿದಂತೆ ಅಗ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನಾಯಕತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಪ್ರಶಾಂತ್ ಕಿಶೋರ್ ಸಿಎಜಿ ಆರಂಭಿಸಿದರು. ಅಂದರೆ ಜವಾಬ್ದಾರಿಯುತ ಆಡಳಿತಕ್ಕಾಗಿ ನಾಗರಿಕರು ಎಂಬರ್ಥದ ಆಕರ್ಷಕ ಟೈಟಲ್ ನೀಡಿದರು.

ತದನಂತರ ಅವು ಮೋದಿ ಗೆಲುವಿಗಾಗಿ ಹಲವಾರು ಮಾರ್ಕೆಟಿಂಗ್ ತಂತ್ರಗಳನ್ನು ಎಣೆದು ಪ್ರಚಾರಾಂದೋಲನಗಳನ್ನು ಕೈಗೊಂಡರು. ನೂರಾರು ಜನ ಐಟಿ ತಂತ್ರಜ್ಞರನ್ನು ಒಳಗೊಂಡು ವಿನೂತನ ಜಾಹಿರಾತುಗಳು, ‘ಅಬ್ ಕಿ ಬಾರ್, ಮೋದಿ ಸರ್ಕಾರ್’ ರೀತಿಯ ಸ್ಲೋಗನ್‌ಗಳು, ಮೋದಿಯವರ ತ್ರೀಡಿ ರ‍್ಯಾಲಿಗಳು, ಏಕತೆಗಾಗಿ ಓಟ, ಮಂಥನ್‌ಗಳು ಸೇರಿದಂತೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘಟಿಸಿದರು. ಅದೇ ಸಮಯಕ್ಕೆ ಅಣ್ಣ ಹಜಾರೆಯವರು ಲೋಕ್‌ಪಾಲ್ ಮಸೂದೆಗಾಗಿ ಉಪವಾಸ ಆರಂಭಿಸಿದ್ದರು. ಭ್ರಷ್ಟಾಚಾರದಿಂದ ಬಹುತೇಕ ಜನ ಬೀದಿಗಿಳಿಸಿದ್ದರು. ಇದೆಲ್ಲವನ್ನು ಬಳಸಿಕೊಂಡ ಪ್ರಶಾಂತ್ ಕಿಶೋರ್ ಆ ಅಲೆಯನ್ನು ಮೋದಿ ಪರವಾಗಿ ಮಾಡಿದರು. ಪರಿಣಾಮ ನರೇಂದ್ರ ಮೋದಿಗೆ ದಿಗ್ವಿಜಯ ಸಾಧ್ಯವಾಯಿತು.

ತನ್ನ ಸ್ವಂತ ಊರು ಜ್ಞಾಪಕ
ಅಷ್ಟರಲ್ಲಿ ಪ್ರಶಾಂತ್ ಕಿಶೋರ್ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದರು. ಬಿಹಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದವು. ತನ್ನ ತಂದೆಯವರು ವಲಸೆ ಬಂದಿದ್ದ ರಾಜ್ಯ ಬಿಹಾರಕ್ಕೆ ವಾಪಸಾದ ಅವರು ತಮ್ಮ ತಂಡವನ್ನು IPAC (ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ) ಎಂದು ಮರುನಾಮಕರಣ ಮಾಡಿದರು. ಆದರೆ ಈ ಬಾರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಮಹಘಟಬಂಧನ್‌ಗೆ ಕೆಲಸ ಮಾಡಲು ನಿರ್ಧರಿಸಿದ್ದರು. ಮೋದಿ ಗೆಲುವಿಗಾಗಿ ಹೆಣೆದಿದ್ದ ತಂತ್ರಗಳನ್ನೇ ಇಲ್ಲಿಯೂ ಎಣೆದರು. ಪರಿಣಾಮ ಅಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಯ ಒಕ್ಕೂಟ ಹೀನಾಯವಾಗಿ ಸೋತರೆ ಮಹಾಘಟಬಂಧನ್ ಭರ್ಜರಿ ಜಯ ಸಾಧಿಸಿತ್ತು.

ಮೊದಲ ಸೋಲು
2017ರ ಫೆಬ್ರವರಿ-ಮಾರ್ಚ್‌ನಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ಈ ಬಾರಿ ಅವರೊಂದಿಗೆ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿತ್ತು. ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪರವಾಗಿ ತಂತ್ರಗಾರಿಕೆ ನಡೆಸಲು ಅವರು ಒಪ್ಪಿಕೊಂಡು ಕೆಲಸ ಮಾಡಿದರು. ಆಗ ಮೊದಲ ಬಾರಿ ಅವರ ತಂತ್ರಗಾರಿಕೆ ಮಕಾಡೆ ಮಲಗಿತ್ತು. ಅದು ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ.

ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 105 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು ಕೇವಲ 07 ಸ್ಥಾನಗಳಲ್ಲಿ ಮಾತ್ರ ಗೆಲ್ಲುವು ಮೂಲಕ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು. ಪ್ರಶಾಂತ್ ಕಿಶೋರ್‌ರವರ ಲೆಕ್ಕಾಚಾರಗಳು ಉಲ್ಟಾ ಹೊಡೆದಿದ್ದವು. ಆದರೂ ಪಂಜಾಬ್‌ನಲ್ಲಿ ಅವರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಯಶಸ್ವಿಯಾಗಿದ್ದರು. ಒಟ್ಟು 117 ಕ್ಷೇತ್ರಗಳಲ್ಲಿ ಕಾಂಗ್ರೆಸ್ 77 ರಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿದಿತ್ತು.

ಅಧಿಕೃತ ಜೆಡಿಯು ಪಕ್ಷ ಸೇರ್ಪಡೆ
ಇಷ್ಟು ದಿನ ತೆರೆಯ ಹಿಂದಿದ್ದು ತಂತ್ರ ರೂಪಿಸುತ್ತಿದ್ದ ಪ್ರಶಾಂತ್ ಕಿಶೋರ್ 2018ರಲ್ಲಿ ಅಧಿಕೃತವಾಗಿ ಬಿಹಾರದಲ್ಲಿ ಪ್ರಬಲವಾಗಿರುವ ನೀತೀಶ್ ಕುಮಾರ್‌ರವರ ಜೆಡಿಯು ಪಕ್ಷ ಸೇರಿದರು. ಅವರಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಯಿತು.

ಜಯದ ಲಯಕ್ಕೆ ಮರಳಿದ ಪ್ರಶಾಂತ್ : ಆಂಧ್ರದಲ್ಲಿ ಜಯಭೇರಿ
2019ರಲ್ಲಿ ಲೋಕಸಭಾ ಚುನಾವಣೆಗಳ ಜೊತೆಗೆ ಜರುಗಿದ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಜಗನ್‌ಮೋಹನ್ ರೆಡ್ಡಿಯವರ ವೈಎಸ್‌ಆರ್‌ಸಿಪಿ ಪಕ್ಷದ ಪರ ಕೆಲಸ ಮಾಡಿದರು.
‘ಜಗಣ್ಣಾಸ್ ನವರತ್ನುಲು’ ಹೆಸರಿನಲ್ಲಿ 35 ಮೆಗಾ ಕ್ಯಾಂಪೇನ್‌ಗಳನ್ನು ನಡೆಸಿದ ಇವರ ತಂಡ ನೇರವಾಗಿ 1 ಕೋಟಿ ಜನರನ್ನು ಮಾತಾಡಿಸಿತು. 4.8 ಕೋಟಿ ಮತದಾರರನ್ನು ಮುಟ್ಟಿ ಜಗನ್‌ಮೋಹನ್ ಪರ ಮರುಳಾಗುವಂತೆ ಮಾಡಿತು.

ಇವರು ಚುನಾವಣೆಗಾಗಿ ರೂಪಿಸಿದ ಜಗನ್‌ಮೋಹನ್ ರೆಡ್ಡಿಯವರ ಥೀಮ್ ಸಾಂಗ್ ‘ಕಾವಾಲಿ ಜಗನ್, ಮನಜಗನ್’ ಆಂಧ್ರ ಮಾತ್ರವಲ್ಲದೇ ದೇಶಾದ್ಯಂತ ವೈರಲ್ ಆಯಿತು. ಐಪ್ಯಾಕ್ ಯೂಟ್ಯೂಬ್ ಚಾನೆಲ್‌ನೊಂದರಲ್ಲೇ ಆ ಹಾಡನ್ನು ಬರೋಬ್ಬರಿ ಎರಡೂವರೆ ಕೋಟಿ ಜನ ನೋಡಿದ್ದಾರೆ ಅಂದರೆ ಅದರ ಪರಿಣಾಮ ಊಹಿಸಿ. ಆ ಹಾಡು ಇಲ್ಲಿದೆ ನೋಡಿ.

ಪರಿಣಾಮ ನಿಮಗೆ ಗೊತ್ತೆ ಇದೆ. 175ಕ್ಷೇತ್ರಗಳಲ್ಲಿ 151ಕ್ಷೇತ್ರಗಳಲ್ಲಿ ವೈಎಸ್‌ಆರ್‌ಸಿಪಿ ಗೆಲುವಿನ ಕೇಕೆ ಹಾಕಿತು. ಅಲ್ಲದೇ 25 ಲೋಕಸಭಾ ಸ್ಥಾನಗಳ ಪೈಕಿ 23ನ್ನು ತನ್ನದಾಗಿಸಿಕೊಂಡಿತು. ಅಲ್ಲಿಗೆ ಪ್ರಶಾಂತ್ ಕಿಶೋರ್ ಸಾಮರ್ಥ್ಯ ಮತ್ತೆ ಸಾಬೀತಾಯಿತು.

ಗ ಮೋದಿ ವಿರುದ್ಧ ನಿಂತ ಪ್ರಶಾಂತ್ ಕಿಶೋರ್
ಇಷ್ಟೆಲ್ಲಾ ಸಾಧನೆಗಳು, ಎರಡು ಬಾರಿ ಮೋದಿ ಗೆಲ್ಲಿಸಿದ ಪ್ರಶಾಂತ್ ಕಿಶೋರ್ ಇದ್ದಕ್ಕಿದ್ದಂತೆ ಮೋದಿ ವಿರುದ್ಧ ನಿಂತಿದ್ದಾರೆ. ಇದಕ್ಕೆ ಕಾರಣ ಮೋದಿ ಸರ್ಕಾರ ಜಾರಿಗೊಳಿಸಿ ಸಿಎಎ, ಎನ್‌ಆರ್‌ಸಿ ಕಾಯ್ದೆಗಳಾಗಿವೆ. ಇವು ಭಾರತದ ಸಂವಿಧಾನಕ್ಕೆ ಮತ್ತು ಮಹಾತ್ಮ ಗಾಂಧಿಯವರ ಆಶಯಗಳಿಗೆ ವಿರುದ್ಧವಾಗಿವೆ ಎಂದು ಪ್ರಶಾಂತ್ ಕಿಶೋರ್ ಕಿಡಿಕಾರಿದ್ದಾರೆ. ಉತ್ತರ ಪ್ರದೇಶದ ರೋಹ್ಟಾಸ್ ಜಿಲ್ಲೆಯ ಕೋನುರ್ ಎಂಬ ಗ್ರಾಮದಲ್ಲಿ 1977ರಲ್ಲಿ ಜನಿಸಿದ ಪ್ರಶಾಂತ್‌ರವರ ತಂದೆ ವೈದ್ಯರು. ಅಲ್ಲಿಂದ ಅವರು ಬಿಹಾರಕ್ಕೆ ವಲಸೆ ಹೋಗಿದ್ದರು. ಪ್ರಶಾಂತ್ ಕಿಶೋರ್ ಅಸ್ಸಾಂನ ಗುಹವಾಟಿ ಮೂಲಕ ಮಹಿಳೆಯನ್ನು ಮದುವೆಯಾಗಿದ್ದಾರೆ. ಈ ಎಲ್ಲಾ ಕಾರಣಗಳಿಗೆ ಅವರು ಈ ಕಾಯ್ದೆಗಳ ವಿರುದ್ಧವಿದ್ದಾರೆ. ಅವರು ಸಿಎಎ ಎನ್‌ಆರ್‌ಸಿ ಪರ ತಮ್ಮ ಪಕ್ಷ ಜೆಡಿಯು ನಿಂತಿದ್ದರಿಂದ ಅದಕ್ಕೆ ರಾಜೀನಾಮೆ ನೀಡಿ ಹೊರಬಂದರು.

ದೆಹಲಿಯಲ್ಲಿ ಮತ್ತೆ ಕಮಾಲ್ ಮಾಡಿದ ಪ್ರಶಾಂತ್ ಕಿಶೋರ್

2020ರಲ್ಲಿ ದೆಹಲಿಯಲ್ಲಿ ನಡೆದ ರಾಜ್ಯ ವಿಧಾನಸಭಾ ಚುಣಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಶಾಂತ್ ಕಿಶೋರ್ ಕೆಲಸ ಮಾಡಿದರು. ಯಥಾಪ್ರಕಾರ ದೆಹಲಿಯ 70 ಕ್ಷೇತ್ರಗಳ ಪೈಕಿ 62 ರಲ್ಲಿ ಆಪ್ ಜಯಭೇರಿ ಬಾರಿಸಿತು. ಇಲ್ಲಿಯೂ ಕಿಶೋರ್ ಕಮಾಲ್ ಮಾಡಿದ್ದರು.

ಸದ್ಯಕ್ಕೆ ಬಿಹಾರದಲ್ಲಿ ಯುವಜನರನ್ನು ಸಂಘಟಿಸುವಲ್ಲಿ ಪ್ರಶಾಂತ್ ಕಿಶೋರ್ ಗಮನ ನೀಡಿದ್ದಾರೆ. ಆದರೆ ಇವರು ಮೋದಿಯನ್ನು ಹೊತ್ತು ಮೆರೆಸಿದವರು, ಇವರಿಗೆ ಚಳವಳಿಗಳ ಆಳ ಜ್ಞಾನವಿಲ್ಲ, ಗೆಲ್ಲುವವರ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ ಎಂದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯೆಂಬಂತೆ ಅವರು ತವರು ರಾಜ್ಯ ಬಿಹಾರದಲ್ಲಿಈ ಬಾರಿ ನಡೆದ ಚುನಾವಣೆಯಲ್ಲಿ ಪ್ರಶಾಂತ್ ಏನನ್ನು ಮಾಡಲು ಸಾಧ್ಯವಾಗಲಿಲ್ಲ.

ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವಿಜಯಮಾಲೆ

2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಟಿಎಂಸಿ ಪರ ಕೆಲಸ ಮಾಡಲು ಪ್ರಶಾಂತ್ ನಿರ್ಧರಿಸಿದರು. ಅಂದರೆ ಬಿಜೆಪಿಯನ್ನು ಎದುರಿಸಲು ಸಜ್ಜಾದರು. “ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡುತ್ತಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರದಿಂದ ನಿವೃತ್ತಿ ಹೊಂದುತ್ತೇನೆ, ಬರೆದಿಟ್ಟುಕೊಳ್ಳಿ” ಎಂದು ಸವಾಲು ಹಾಕಿದ್ದರು.

ಇಂದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಬಂಗಾಳದಲ್ಲಿ ಟಿಎಂಸಿ 205 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಬಿಜೆಪಿ ಕೇವಲ 84 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಅಲ್ಲಿಗೆ ಕಿಶೋರ್ ಮಾತು ನಿಜವಾಗಿದೆ.

ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪರವಾಗಿ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ರು. ಅಲ್ಲಿ ಡಿಎಂಕೆ ಮೈತ್ರಿಕೂಟ 146 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಜಯದತ್ತ ಮುನ್ನುಗ್ಗಿದೆ.

2022 ರಲ್ಲಿ ಪಂಜಾಬ್‌ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಮರಿಂದರ್ ಸಿಂಗ್ ಪರ ಕೆಲಸ ಮಾಡಲು ಪ್ರಶಾಂತ್ ಕಿಶೋರ್ ನಿರ್ಧಿರಿಸಿದ್ದಾರೆ.


ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ದಾಟುವುದಿಲ್ಲ: ನಿಜವಾಗುತ್ತಿದೆ ಪ್ರಶಾಂತ್ ಕಿಶೋರ್ ಭವಿಷ್ಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...