“ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡುತ್ತಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರ ತ್ಯಜಿಸುತ್ತೇನೆ, ಬರೆದಿಟ್ಟುಕೊಳ್ಳಿ”.. 2020ರ ಡಿಸೆಂಬರ್ 21 ರಂದು ಹೀಗೆ ಹೇಳಿದ್ದು ಸದ್ಯದ ಚುನಾವಣೆಯಲ್ಲಿ ಬಂಗಾಳದಲ್ಲಿ ಟಿಎಂಸಿ ಪರ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಪರ ಚುನಾವಣಾ ತಂತ್ರಜ್ಞನಾಗಿ ಕೆಲಸ ಮಾಡಿದ ರಾಜಕೀಯ ಚತುರ ಪ್ರಶಾಂತ್ ಕಿಶೋರ್..

ಅವರು ಈ ಮಾತು ಹೇಳಿ ನಾಲ್ಕು ತಿಂಗಳ ನಂತರ ಅದು ನಿಜವಾಗುತ್ತಿದೆ. ಇಂದು ಪಶ್ಚಿಮ ಬಂಗಾಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು 294 ವಿಧಾನಸಭಾ ಕ್ಷೇತ್ರಗಳಲ್ಲಿ 204 ಸ್ಥಾನಗಳಲ್ಲಿ ಟಿಎಂಸಿ ಭರ್ಜರಿ ಮುನ್ನಡೆ ಸಾಧಿಸಿ ಜಯದತ್ತ ಮುನ್ನುಗ್ಗುತ್ತಿದೆ. ಆದರೆ ಬಿಜೆಪಿ 84 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿ ತಿಣುಕಾಡುತ್ತಿದೆ. ಇನ್ನು ಅಂತಿಮ ಫಲಿತಾಂಶ ಘೋಷಣೆಯಾಗಿಲ್ಲದಿದ್ದರೂ ಈಗಿನ ಟ್ರೆಂಡ್‌ಗಳ ಪ್ರಕಾರ ಬಿಜೆಪಿ 100  ಸ್ಥಾನಗಳಲ್ಲಿ ಗೆಲ್ಲುವುದು ಅಸಾಧ್ಯದ ಮಾತು. ಹಾಗಾಗಿ ಪ್ರಶಾಂತ್ ಕಿಶೋರ್ ನುಡಿದಿದ್ದ ಭವಿಷ್ಯ ನಿಜವಾಗುತ್ತಲಿದೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ BJP ಎರಡಂಕಿ ದಾಟುವುದಿಲ್ಲ: ಒಂದು ವೇಳೆ ಗೆದ್ದರೆ ಈ ಕ್ಷೇತ್ರ ತ್ಯಜಿಸುತ್ತೇನೆ- ಪ್ರಶಾಂತ್ ಕಿಶೋರ್

ಈ ವರ್ಷದ ಫೆಬ್ರವರಿ 27 ರಂದು ಅವರು ತಮ್ಮ ಮಾತನ್ನು ಪುನರುಚ್ಚರಿಸಿದ್ದರು. “ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರಮುಖ ಕದನಗಳಲ್ಲಿ ಒಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಇಲ್ಲಿನ ಜನರು ಸರಿಯಾದುದನ್ನು ಆಯ್ಕೆ ಮಾಡುವ ಮೂಲಕ ತಮ್ಮ ಸ್ಪಷ್ಟ ಸಂದೇಶವನ್ನು ತಿಳಿಸಲು ಸಜ್ಜಾಗಿದ್ದಾರೆ. ಪಶ್ಚಿಮ ಬಂಗಾಳ ತನ್ನ ಸ್ವಂತ ಮಗಳನ್ನು ಬಯಸುತ್ತಿದೆ. ನನ್ನ ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದನ್ನು ಮಾಡಲು ಮೇ 2ರವರೆಗೆ ಕಾಯಿರಿ” ಎಂದು ಟ್ವೀಟ್ ಮಾಡಿದ್ದರು.

ಅಲ್ಲದೇ ಇಂಡಿಯಾ ಟುಡೆ ನಿರೂಪಕ ರಾಹುಲ್ ಕುನ್ವಾಲ್‌ಗೆ ಸಂದರ್ಶನ ನೀಡಿದ್ದಾಗ ಅವರು, ಬಿಜೆಪಿ 100 ಸ್ಥಾನಗಳನ್ನು ದಾಟುವುದಿಲ್ಲ ಎಂದು ಅವರು ಮತ್ತೆ ಸವಾಲು ಹಾಕಿದ್ದರು. ರಾಹುಲ್ ಕುನ್ವಾಲ್, “ಇದು ನಿಜವೇ? ಎಂದು ಪದೇ ಪದೇ ಕೇಳಿದ್ದರು. ಒಂದು ವೇಳೆ 100 ದಾಟಿದರೆ ನೀವು ಬೇರೆ ಏನು ಕೆಲಸ ಮಾಡುತ್ತೀರಿ” ಎಂದೆಲ್ಲಾ ಪ್ರಶ್ನಿಸಿದ್ದರು. ಆಗ ಪ್ರಶಾಂತ್ ಕಿಶೋರ್ ಆ ಸಂದರ್ಭ ಬಂದಾಗ ಯೋಚಿಸುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

ಈಗ ಪ್ರಶಾಂತ್ ಕಿಶೋರ್ ಮಾತು ನಿಜವಾಗುತ್ತಿದ್ದು, ಬಂಗಾಳದಲ್ಲಿ ಬಿಜೆಪಿ 100 ಸ್ಥಾನಗಳನ್ನು ದಾಟಲು ಹೆಣಗಾಡುತ್ತಿದೆ. ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರು 200 ಸ್ಥಾನ ಗೆಲ್ಲುತ್ತೇವೆ, ಮುಂದಿನ ಸರ್ಕಾರ ನಮ್ಮದೆ ಎಂಬ ಹೇಳಿಕೆ ನೀಡಿದ್ದರು.

ಇನ್ನೊಂದೆಡೆ ಪ್ರಶಾಂತ್ ಕಿಶೋರ್ ಡಿಎಂಕೆ ಪರವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಡಿಎಂಕೆ ಸಹ ತಮಿಳುನಾಡಿನಲ್ಲಿ ಭರ್ಜರಿ ಜಯಗಳಿಸಿದೆ.


ಇದನ್ನೂ ಓದಿ: 2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ, ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್ ಯಾರು?

LEAVE A REPLY

Please enter your comment!
Please enter your name here