ತೀವ್ರ ಕುತೂಹಲ ಕೆರೆಳಿಸಿ, ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ನಂದಿಗ್ರಾಮ ಕ್ಷೇತ್ರದಲ್ಲಿ ಕೊನೆಗೂ ಸಿಎಂ ಮಮತಾ ಬ್ಯಾನರ್ಜಿ ಕೊನೆಗೂ ರೋಚಕ ಗೆಲುವು ಸಾಧಿಸಿದ್ದಾರೆ ಎಂದು ಎಎನ್‌ಐ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅವರು ತಮ್ಮ ಹಳೆಯ ಸಹೋದ್ಯೋಗಿ ಮತ್ತು ಈಗಿನ ಪ್ರತಿಸ್ಪರ್ಧಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ 1200 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎನ್ನಲಾಗಿತ್ತು. ಆದರೆ ಈ ಕುರಿತು ಗೊಂದಲಗಳು ಏರ್ಪಟ್ಟು ಸುವೇಂದು ಅಧಿಕಾರಿ ಜಯಗಳಿಸಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಚುನಾವಣಾ ಆಯೋಗ ಬಿಜೆಪಿಯ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ಧ 1,736 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಘೋಷಿಸಿದೆ. ಈ ನಡುವೆ “ನಂದಿಗ್ರಾಮದಲ್ಲಿ ಇನ್ನೂ ಎಣಿಕೆ ಮುಗಿದಿಲ್ಲ, ತಾಳ್ಮೆಯಿಂದಿರಿ, ವದಂತಿಗಳನ್ನು ಹರಡಬೇಡಿ” ಎಂದು ಟಿಎಂಸಿ ಟ್ವೀಟ್ ಮಾಡಿತ್ತು.
ಈ ಕ್ಷೇತ್ರದಲ್ಲಿ ಆರಂಭದಿಂದ ಬಿಜೆಪಿಯ ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದರು. ನಂತರ ಮಮತಾ ಬ್ಯಾನರ್ಜಿ ಮುನ್ನಡೆ ಸಾಧಿಸಿದ್ದರು. ಈ ರೀತಿಯ ಹಗ್ಗ ಜಗ್ಗಾಟ ಕೊನೆ ಹಂತದವರೆಗೂ ಮುಂದುವರೆದಿದ್ದು ಕೊನೆಗೂ ಮಮತಾ ಬ್ಯಾನರ್ಜಿಗೆ ಸೋಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ “ನಂದಿಗ್ರಾಮದ ಜನತೆ ಯಾವುದೇ ತೀರ್ಪು ಕೊಟ್ಟರೂ ಸ್ವೀಕರಿಸುತ್ತೇನೆ. ನಮ್ಮ ಬೃಹತ್ ವಿಜಯದಲ್ಲಿ ನಂದಿಗ್ರಾಮವನ್ನು ತ್ಯಾಗಮಾಡಬೇಕಾಗಿ ಬಂದಿದೆ. ಆದರೆ ನಾವು ಇಡೀ ರಾಜ್ಯವನ್ನು ಗೆದ್ದಿದ್ದೇವೆ. ಇದುವರೆಗೆ ಏನಾಗಿದೆಯೊ ಅದು ನಮಗೆ ಒಳಿತಾಗಿದೆ. ಆದರೆ ನಾನು ನಂದಿಗ್ರಾಮದ ಫಲಿತಾಂಶದ ವಿಚಾರದಲ್ಲಿ ಕೋರ್ಟಿಗೆ ಹೋಗುತ್ತೇನೆ. ಅಲ್ಲಿ ಕೆಲವು ದುಷ್ಕೃತ್ಯಗಳು ನಡೆದಿವೆ ಎಂದು ನಾನು ಕೇಳಿದ್ದೇನೆ” ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯು ಭರ್ಜರಿ ಸಾಧನೆ ಮಾಡಿದೆ. ಒಟ್ಟು 294 ಕ್ಷೇತ್ರಗಳಲ್ಲಿ 213 ಸ್ಥಾನಗಳು ಅದು ಮುನ್ನಡೆ ಸಾಧಿಸುವ ಮೂಲಕ ಸೂಪರ್ ವಿಕ್ಟರಿಯತ್ತ ಮುನ್ನುಗ್ಗುತ್ತಿದೆ. ಬಿಜೆಪಿ 78 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಮತ್ತು ಪಕ್ಷದ ಪ್ರಬಲ ಮುಖಂಡನಾಗಿದ್ದ ಮತ್ತು ಈಗ ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಸುವೇಂಧು ಅಧಿಕಾರಿ ಈ ಚುನಾವಣೆಯಲ್ಲಿ ಸಿಎಂ ವಿರುದ್ಧ 50 ಸಾವಿರ ಮತಗಳ ಅಂತರದಲ್ಲಿ ಜಯಗಳಿಸುವುದಾಗಿ ಸವಾಲು ಹಾಕಿದ್ದರು.
ನಂದಿಗ್ರಾಮ ಸುವೇಂಧು ಅಧಿಕಾರಿಯವರ ಪ್ರಬಲ ಭದ್ರಕೋಟೆಯಾಗಿತ್ತು. ಅಂತಹ ಭದ್ರಕೋಟೆಯಲ್ಲಿ ಸ್ಪರ್ಧಿಸುವ ಮೂಲಕ ಮಮತಾ ಬ್ಯಾನರ್ಜಿ ಬಹುದೊಡ್ಡ ರಿಸ್ಕ್ ಅನ್ನು ತೆಗೆದುಕೊಂಡಿದ್ದರು. ಅಲ್ಲದೇ ಅವರು ಬೇರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ತೀರ್ಮಾನಿಸಿದ್ದರು.
ಇದನ್ನೂ ಓದಿ: Election Results 2021 Live Updates | ಎಡಪಕ್ಷಕ್ಕೆ ಬಹುಮತ; ಸಂಪ್ರದಾಯ ಬದಲಿಸಿದ ಪಿಣರಾಯಿ!


