ಕೇರಳದಲ್ಲಿ ಮುಂದಿನ ಎಪ್ರಿಲ್ 6 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿನ ಆಡಳಿತರೂಢ ಎಡಪಕ್ಷಗಳ ಚುನಾವಣಾ ಅಭಿಯಾನದ ಘೋಷಣೆ “ಖಂಡಿತವಾಗಿಯೂ, ಎಲ್‌ಡಿಎಫ್” ಎಂಬುದಾಗಿದೆ. ಈ ಅಭಿಯಾನಕ್ಕೆ ಒಂದು ಸ್ಟಾರ್ ಪ್ರಚಾರಕರಿದ್ದರೆ ಅದು, “ಖಂಡಿತವಾಗಿಯೂ” ಪಿಣರಾಯಿ ವಿಜಯನ್ ಆಗಿದ್ದಾರೆ ಎನ್ನಲಾಗಿದೆ.
75 ರ ಹರೆಯದ ಪಿಣರಾಯಿ ವಿಜಯನ್ ಧರ್ಮಡಂನಲ್ಲಿ ಪ್ರಚಾರವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ‘ದಿ ಕ್ಯಾಪ್ಟನ್’ ಎಂದು ಅವರನ್ನು ಉಲ್ಲೇಖಿಸಿ ಬೃಹತ್ ಗಾತ್ರದ ಕಟೌಟ್‌ಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಎಡಪಕ್ಷಗಳ ಪರವಾಗಿರುವ ಘೋಷಣೆಗಳು, ಅಭಿವೃದ್ಧಿ ಯೋಜನೆಗಳು, ಕೊರೊನಾ ಕಾಲದಲ್ಲಿ ಜಾರಿಗೆ ತಂದಿರುವ ಪಿಂಚಣಿ, ಪಡಿತರ ಸೇರಿದಂತೆ ಇತರ ಕಲ್ಯಾಣ ಯೋಜನೆಗಳನ್ನು ಚುನಾವಣಾ ಅಭಿಯಾನಗಳಲ್ಲಿ ಬಳಸಲಾಗುತ್ತಿದೆ.
ಇದನ್ನೂ ಓದಿ: ಸಿಎಎ ಜಾರಿ ಮಾಡುವುದಿಲ್ಲ: ಅಮಿತ್ ಶಾಗೆ ಸ್ಪಷ್ಟ ಉತ್ತರ ನೀಡಿದ ಕೇರಳ ಮುಖ್ಯಮಂತ್ರಿ
ಪಿಣರಾಯಿ ವಿಜಯನ್‌ರ ಮುಖವು ಈ ಬಾರಿ ಕೇರಳದಲ್ಲಿ ಖಂಡಿತವಾಗಿಯೂ ಕೆಲಸ ಮಾಡಲಿದೆ ಎಂದು ಚುನಾವಣಾ ವಿಶ್ಲೇಷಕರ ಅಭಿಪ್ರಾಯವಾಗಿದೆ. 1939 ರಲ್ಲಿ ಕಮ್ಯುನಿಸ್ಟ್ ಪಕ್ಷವು ಕೇರಳದಲ್ಲಿ ಮೊದಲ ಸಭೆ ನಡೆಸಿದ ಪರಪ್ರಂ ಗ್ರಾಮ ಸೇರಿದಂತೆ ಧರ್ಮಡಂ ಕ್ಷೇತ್ರವು ಎಡಪಕ್ಷಗಳ ಭದ್ರ ಕೋಟೆಯಾಗಿದೆ. ಇಲ್ಲಿ ಪಿಣರಾಯಿ ವಿಜಯನ್ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಂಬರಂ ದಿವಾಕರನ್ ವಿರುದ್ಧ 36,000 ಮತಗಳಿಂದ ಜಯ ಗಳಿಸಿದ್ದರು.
ಧರ್ಮಡಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಆಯ್ಕೆ ಇದುವರೆಗೂ ನಡೆದಿಲ್ಲ. ಆದ್ದರಿಂದ ಮುಖ್ಯಮಂತ್ರಿಯ ಕೆಲಸ ಇನ್ನೂ ಸುಲಭವಾದಂತಾಗಿದೆ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸಿ.ಕೆ. ಪದ್ಮನಾಭನ್ ತನ್ನ ಪ್ರಚಾರ ಕಾರ್ಯವನ್ನು ಇನ್ನೂ ಪ್ರಾರಂಭಿಸಿಲ್ಲ.
ಜಿಲ್ಲೆಯ ಪೊಟ್ಟಂಪರಾ ಗ್ರಾಮದಲ್ಲಿರುವ ಕಾಂಗ್ರೆಸ್ ಕಚೇರಿಯು ಪಕ್ಷವು ಇಲ್ಲಿ ಎದುರಿಸುತ್ತಿರುವ ಬಿಕ್ಕಟ್ಟಿನ ಕಥೆಯನ್ನು ಹೇಳುತ್ತದೆ. ಕಟ್ಟಡ ಸುತ್ತ ಕಳೆ ಗಿಡಗಳು ಅತಿಕ್ರಮಿಸಿದ್ದು, ಇದನ್ನು ತಿಂಗಳುಗಳಿಂದ ಮುಚ್ಚಲಾಗಿದೆ.
ಇದನ್ನೂ ಓದಿ: ಕೇರಳ – ಈಗ ಚುನಾವಣೆ ನಡೆದರೂ ಕಮ್ಯುನಿಷ್ಟ್ ಸರ್ಕಾರ ಮತ್ತೆ ಅಧಿಕಾರಕ್ಕೆ!
ಬುಧವಾರ ತಮ್ಮ ಕಚೇರಿಯ ಹಿಂದಿರುವ ಮೈದಾನದಲ್ಲಿ ನಡೆದ ಸಭೆಗೆ ಪಿಣರಾಯಿ ವಿಜಯನ್ ಆಗಮಿಸಿದ್ದರು. ಅವರು ಆಗಮಿಸುತ್ತಿದ್ದಂತೆ ಅಲ್ಲಿರುವ ಕಾರ್ಯಕರ್ತರು ಅವರನ್ನು ಘೋಷಣೆಗಳ ಮೂಲಕ ಸ್ವಾಗತಿಸಿದ್ದಾರೆ. ತಕ್ಷಣ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಮುಖಂಡ ಮಾತು ನಿಲ್ಲಿಸಿ, ಮುಖ್ಯಮಂತ್ರಿಗೆ ವೇದಿಕೆಯನ್ನು ಬಿಟ್ಟು ಕೊಟ್ಟಿದ್ದಾರೆ. ನಂತರ ಪಿಣರಾಯಿ ಅಲ್ಲಿ ನರೆದಿರುವ ಜನರನ್ನು ಉದ್ದೇಶಿಸಿ ಅವರದೇ ವಿಶೇಷ ಶೈಲಿಯಲ್ಲಿ ಮಾತನಾಡಿದ್ದಾರೆ.
ಪಿಣರಾಯಿ ತಮ್ಮ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪಿಸುತ್ತಿರುವ ಹಗರಣಗಳನ್ನು ಸಮರ್ಥಿಸುವ ಯಾವುದೆ ಮಾತುಗಳನ್ನು ಆಡದೆ, ಬಿಜೆಪಿ ಮತ್ತು ಯುಡಿಎಫ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಾ, “ಒಂದು ವಿಷಯ ನಿಶ್ಚಿತ, ನಿಮ್ಮ ನಂಬಿಕೆಗೆ ಧಕ್ಕೆ ತರುವಂತಹ ಯಾವುದನ್ನೂ ನಾವು ಮಾಡಿಲ್ಲ” ಎಂದು ಅವರು ಒತ್ತಿ ಹೇಳಿದ್ದಾರೆ.
ಕೇರಳದ ವಿಧಾನಸಭಾ ಚುನಾವಣೆಯನ್ನು ದೇಶಾದ್ಯಂತ ಅತ್ಯಂತ ಕುತೂಹಲದಿಂದ ವೀಕ್ಷಿಸಲಾಗುತ್ತಿದೆ. “ಜಾತ್ಯತೀತತೆಯನ್ನು ಚೂರುಚೂರು ಮಾಡಲು ಪ್ರಯತ್ನಿಸುತ್ತಿರುವ ಪಡೆಗಳು ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಎಡಪಕ್ಷಗಳು ಜಾತ್ಯತೀತತೆ ಬಗ್ಗೆ ರಾಜಿಯಾಗುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಜಾಗತೀಕರಣದ ಪ್ರತಿಪಾದಕರು. ದೇಶದಲ್ಲಿನ ಎಡಪಕ್ಷಗಳ ಏಕೈಕ ದ್ವೀಪವಾಗಿದೆ ಕೇರಳ” ಎಂದು ಪಿಣರಾಯಿ ತಮ್ಮ ಭಾಷಣಗಳಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೇರಳ ಬಿಜೆಪಿ ರೈಲಿನಲ್ಲಿ ಮೆಟ್ರೋಮ್ಯಾನ್: ಪ್ಯಾಸೆಂಜರ್‌ಗಳಿಲ್ಲ, ರೆಡ್ ಸಿಗ್ನಲ್‌ಗಳೇ ಎಲ್ಲ!
ಪರಪ್ರಂನಲ್ಲಿ ಉಚಿತ ಪಡಿತರ ಪಡೆಯಲು ನಿಂತಿರುವ ಹಿರಿಯ ಮಹಿಳೆ ಯಶೋಧ, “ನಾನು ಮತ್ತೆ ಕೇರಳದಲ್ಲಿ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತೇನೆ. ಈ ಉಚಿತ ಪಡಿತರ ಕಿಟ್ ನಮಗೆ ಒಂದು ತಿಂಗಳು ಸಾಕಾಗುತ್ತದೆ. ಪಿಣರಾಯಿ ವಿಜಯನ್ ಹೆಚ್ಚಿಸಿದ ವಿಧವಾ ಪಿಂಚಣಿ 1600 ರೂಪಾಯಿ ನನಗೆ ಸಿಗುತ್ತಿದೆ. ಕಳೆದ ತಿಂಗಳು ನಾನು ಉದ್ಯೋಗ ಖಾತ್ರಿ ಯೋಜನೆಯ ನೂರು ದಿನಗಳ ಕೆಲಸವನ್ನು ಪೂರೈಸಿದೆ” ಎನ್ನುತ್ತಾರೆ.
ಕ್ಷೇತ್ರದಲ್ಲಿ ಎಡಪಕ್ಷಗಳ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿರುವ ಸಿಪಿಐ ಹಿರಿಯ ನಾಯಕ ಸಿ.ಎನ್. ಚಂದ್ರನ್, ಅಭ್ಯರ್ಥಿಯನ್ನು ಹುಡುಕುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಹೇಳುತ್ತಾರೆ. “ಇದು ಪಿಣರಾಯಿ ವಿಜಯನ್ ವಿರುದ್ಧ ಹೋರಾಡಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂದು ತೋರಿಸುತ್ತದೆ” ಎಂದು ಅವರು ಹೇಳುತ್ತಾರೆ. ಮಂಗಳವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಧರ್ಮಡಂನಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಹೆಸರು ಕಾಣಿಸಿಕೊಂಡಿಲ್ಲ.
ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಂ.ಎಂ. ಹಸನ್ “ನಾವು ಧರ್ಮಡಂನಲ್ಲಿ ಅಭ್ಯರ್ಥಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಕಾಂಗ್ರೆಸ್ ಖಂಡಿತವಾಗಿಯು ಸ್ಪರ್ಧಿಸಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ ಹೇಳಿಕೆ


