ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ 10 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಜುಲೈ 31 ರಿಂದ ಅಕ್ಟೋಬರ್ 30ರವರೆಗೆ ನಿಗದಿತ ಮೂರು ತಿಂಗಳೊಳಗೆ ನಿರ್ಧರಿಸಲು ವಿಫಲವಾದ ಕಾರಣ ತೆಲಂಗಾಣ ಸ್ಪೀಕರ್ ವಿರುದ್ದ ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಸ್ಪೀಕರ್ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. “ಈ ವಿಷಯವನ್ನು ನಿರ್ಧರಿಸಬೇಕೆ ಅಥವಾ ನ್ಯಾಯಾಂಗ ನಿಂದನೆ ಎದುರಿಸಬೇಕೆ ಎಂಬುದು ಅವರ (ತೆಲಂಗಾಣ ಸ್ಪೀಕರ್) ವೈಯಕ್ತಿಕ ವಿಷಯ. ಇದು ನ್ಯಾಯಾಂಗ ನಿಂದನೆಯಾಗಿದೆ” ಎಂದು ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಪೀಠ ಹೇಳಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 10 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಮೂರು ತಿಂಗಳೊಳಗೆನಿರ್ಧರಿಸುವಂತೆ ನ್ಯಾಯಾಲಯ ಜುಲೈ 31 ರಂದು ಸ್ಪೀಕರ್‌ಗೆ ನಿರ್ದೇಶನ ನೀಡಿತ್ತು.
ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಎಲ್ಲಾ ವಿಷಯಗಳಲ್ಲಿ ನೋಟಿಸ್‌ಗಳನ್ನು ಜಾರಿಗೊಳಿಸಿದ್ದು, ಎರಡು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಅಥವಾ ನ್ಯಾಯಾಂಗ ನಿಂದನೆಯನ್ನು ಎದುರಿಸುವಂತೆ ಸ್ಪೀಕರ್‌ಗೆ ಹೇಳಿದೆ. ಇಂತಹ ವಿಷಯಗಳನ್ನು ನಿರ್ಧರಿಸುವಲ್ಲಿ ಸ್ಪೀಕರ್‌ಗೆ ಸಾಂವಿಧಾನಿಕ ವಿನಾಯಿತಿ ಇಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
“ಸ್ಪೀಕರ್ ತಮ್ಮ ಹೊಸ ವರ್ಷದ ಸಂಭ್ರಮವನ್ನು ಎಲ್ಲಿ ಆಚರಿಸಬೇಕು” ಎಂದು ಅವರೇ ನಿರ್ಧರಿಸಲಿ” ಎಂದು ಹೇಳಿದ ಸಿಜೆಐ, ಸಂಭವನೀಯ ಪರಿಣಾಮಗಳ ಬಗ್ಗೆಯೂ ಸುಳಿವು ನೀಡಿದ್ದಾರೆ.
ಬಿಆರ್‌ಎಸ್ ನಾಯಕರಾದ ಕೆ.ಟಿ. ರಾಮರಾವ್, ಪಾಡಿ ಕೌಶಿಕ್ ರೆಡ್ಡಿ ಮತ್ತು ಕೆ.ಒ. ವಿವೇಕಾನಂದ್ ಸಲ್ಲಿಸಿದ್ದ ಅರ್ಜಿಗಳನ್ನು ಈ ಹಿಂದೆ ಅಂಗೀಕರಿಸಿದ್ದ ಪೀಠ, ರಾಜಕೀಯ ಪಕ್ಷಾಂತರಗಳು ರಾಷ್ಟ್ರೀಯ ಕಾಳಜಿಯ ವಿಷಯವಾಗಿದ್ದು, ಅದನ್ನು ತಡೆಯದಿದ್ದರೆ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಬಹುದು ಎಂದು ಹೇಳಿತ್ತು.
“ಪ್ರಸ್ತುತ ಮೇಲ್ಮನವಿಯನ್ನು ನಾವು ಅಂಗೀಕರಿಸಲು ಒಲವು ತೋರುತ್ತೇವೆ. ಹೈಕೋರ್ಟ್ ವಿಭಾಗೀಯ ಪೀಠವು 2024ರ ನವೆಂಬರ್ 22ರಂದು ಹೊರಡಿಸಿದ ಆದೇಶವನ್ನು ರದ್ದುಗೊಳಿಸಲಾಗಿದೆ. 10 ಶಾಸಕರ ವಿರುದ್ಧದ ಅನರ್ಹತಾ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮತ್ತು 3 ತಿಂಗಳೊಳಗೆ ನಿರ್ಧರಿಸಬೇಕು. ಯಾವುದೇ ಶಾಸಕರಿಗೆ ವಿಚಾರಣೆಯನ್ನು ಮುಂದೂಡಲು ಅವಕಾಶ ನೀಡಬಾರದು. ಹಾಗೆ ಮಾಡಿದರೆ, ಸ್ಪೀಕರ್ ಪ್ರತಿಕೂಲ ತೀರ್ಮಾನಗಳನ್ನು ಎದುರಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಈ ಹಿಂದೆ ಹೇಳಿತ್ತು.
ವಿಚಾರಣೆಗಳನ್ನು ನಿಗದಿಪಡಿಸುವ ಏಕಸದಸ್ಯ ನ್ಯಾಯಾಧೀಶರ ನಿರ್ದೇಶನವನ್ನು ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪನ್ನು ಬದಿಗಿಟ್ಟಿದ್ದ ಸುಪ್ರೀಂ ಕೋರ್ಟ್, ಯಾವುದೇ ಶಾಸಕರಿಗೆ ಅನರ್ಹತೆ ಪ್ರಕ್ರಿಯೆಯನ್ನು ವಿಳಂಬ ಮಾಡಲು ಅವಕಾಶ ನೀಡಬಾರದು ಎಂದು ಒತ್ತಿ ಹೇಳಿತ್ತು.
ಶಾಸಕರ ಅನರ್ಹತೆಗೆ ಪ್ರಸ್ತುತ ಇರುವ ಕಾರ್ಯವಿಧಾನವನ್ನು ಸಂಸತ್ತು ಪರಿಶೀಲಿಸಬೇಕು. ಸ್ಪೀಕರ್‌ಗಳು ಆಗಾಗ್ಗೆ ಇಂತಹ ಪ್ರಕರಣಗಳನ್ನು ವಿಳಂಬ ಮಾಡುತ್ತಾರೆ, ಪಕ್ಷಾಂತರಿಗಳ ವಿರುದ್ಧದ ಕ್ರಮವನ್ನು ದುರ್ಬಲಗೊಳಿಸುತ್ತಾರೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುತ್ತಾರೆ ಎಂದಿತ್ತು.
ಬಾಕಿ ಇರುವ ಅನರ್ಹತೆ ಪ್ರಕರಣಗಳ ಕುರಿತು ಸ್ಪೀಕರ್ ಸಕಾಲಿಕ ಕ್ರಮ ಕೈಗೊಳ್ಳಬೇಕೆಂದು ಬಿಆರ್‌ಎಸ್ ನಾಯಕರು ಸಲ್ಲಿಸಿದ್ದ ಅರ್ಜಿಗಳು ಕೋರಿವೆ. ಅರ್ಜಿಗಳು ಸಲ್ಲಿಕೆಯಾದ ಏಳು ತಿಂಗಳ ನಂತರ, ನ್ಯಾಯಾಲಯ ಮಧ್ಯಪ್ರವೇಶಿಸಿದ ನಂತರವೇ ಸ್ಪೀಕರ್ ನೋಟಿಸ್ ನೀಡಿದ್ದು ‘ದುರದೃಷ್ಟಕರ’ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು.
ಹತ್ತನೇ ಶೆಡ್ಯೂಲ್ ಅಡಿಯಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುವಾಗ ಸ್ಪೀಕರ್ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ನ್ಯಾಯಮಂಡಳಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನ್ಯಾಯಾಲಯ ಪುನರುಚ್ಚರಿಸಿದ್ದು, ಹತ್ತನೇ ಶೆಡ್ಯೂಲ್ ಅಡಿಯಲ್ಲಿ ನ್ಯಾಯಮಂಡಳಿಯಾಗಿ ಕಾರ್ಯನಿರ್ವಹಿಸುವಾಗ ಸ್ಪೀಕರ್ ಯಾವುದೇ ಸಾಂವಿಧಾನಿಕ ವಿನಾಯಿತಿಯನ್ನು ಅನುಭವಿಸುವುದಿಲ್ಲ” ಎಂದು ತಿಳಿಸಿದೆ.
ಅನರ್ಹತೆ ಎದುರಿಸುತ್ತಿರುವ ಶಾಸಕರು ಕಲಾಪವನ್ನು ದೀರ್ಘಗೊಳಿಸಲು ಅವಕಾಶ ನೀಡಬಾರದು ಎಂದು ಸ್ಪೀಕರ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ವಿಳಂಬ ಮಾಡುವ ಯಾವುದೇ ಪ್ರಯತ್ನವು ಪ್ರತಿಕೂಲ ತೀರ್ಮಾನಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.
ಜೈಸಲ್ಮೇರ್‌ನ ಭಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನಕ್ಕೆ ನುಸುಳಲು ಯತ್ನಿಸುತ್ತಿದ್ದ ಯುವಕನನ್ನು ಸೆರೆ ಹಿಡಿದ ಬಿಎಸ್ಎಫ್


