ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿ ಪ್ರತಿಭಟನಾ ಸ್ಥಳದಿಂದ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನೂರಕ್ಕೂ ಹೆಚ್ಚು ರೈತರು ದೆಹಲಿಗೆ ಕಾಲ್ನಡಿಗೆ ಜಾಥಾವನ್ನು ಪ್ರಾರಂಭಿಸಲಿದ್ದಾರೆ. ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ ‘ದೆಹಲಿ ಚಲೋ’ ಮೆರವಣಿಗೆ ನಡೆಸಲಾಗುತ್ತಿದೆ.
ದೆಹಲಿ ಚಲೋ ಮೆರವಣಿಗೆಗೆ ಮುಂಚಿತವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ; ಮಧ್ಯಾಹ್ನ 1 ಗಂಟೆಗೆ ಮೆರವಣಿಗೆಗೆ ಮುಂಚಿತವಾಗಿ ಪೊಲೀಸರು ಅಂಬಾಲಾ-ದೆಹಲಿ ಗಡಿಯಲ್ಲಿ ಬ್ಯಾರಿಕೇಡ್ ಮಾಡಿದ್ದಾರೆ. ಹರಿಯಾಣ ಗಡಿ ಭಾಗದಲ್ಲಿ ಭಾರೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಂಬಾಲಾ ಜಿಲ್ಲಾಡಳಿತವು ಈಗಾಗಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ಆದೇಶವನ್ನು ಹೊರಡಿಸಿದೆ. ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಯಾವುದೇ ಕಾನೂನುಬಾಹಿರ ಸಭೆಯನ್ನು ನಿರ್ಬಂಧಿಸುತ್ತದೆ.
ಅಂಬಾಲಾದಲ್ಲಿ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶುಕ್ರವಾರ ರಜೆ ಇರಲಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಅಂಬಲ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಂಭು ಗಡಿ ಬಿಂದು – ರಾಜಪುರ (ಪಂಜಾಬ್)-ಅಂಬಾಲ (ಹರಿಯಾಣ) – ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಬಹುಪದರದ ಬ್ಯಾರಿಕೇಡಿಂಗ್ ಈಗಾಗಲೇ ಜಾರಿಯಲ್ಲಿದೆ. ಶಂಭು ಗಡಿಯಲ್ಲೂ ಜಲಫಿರಂಗಿಗಳನ್ನು ನಿಯೋಜಿಸಲಾಗಿದೆ.
ದೆಹಲಿ ಪೊಲೀಸರು ಮೆರವಣಿಗೆಗೆ ಮುಂಚಿತವಾಗಿ ಗಡಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. “ದೆಹಲಿ ಪೊಲೀಸರು ಅಲರ್ಟ್ ಆಗಿದ್ದು, ನಗರದ ಗಡಿ ಬಿಂದುಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಿಂಘು ಗಡಿಯಲ್ಲಿ ಬ್ಯಾರಿಕೇಡ್ ನಿಯೋಜನೆಯನ್ನು ಮಾಡಲಾಗಿದೆ. ಆದರೆ, ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಬು ಗಡಿಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಇದು ಹೆಚ್ಚಾಗಬಹುದು” ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗಡಿ ಮತ್ತು ದೆಹಲಿಯ ಕೇಂದ್ರ ಭಾಗದಲ್ಲಿ ಭದ್ರತಾ ವ್ಯವಸ್ಥೆಗಳಿಂದಾಗಿ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ರೈತರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ ಒಟ್ಟುಗೂಡಿದರು. ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
“ಮೆರವಣಿಗೆ 297ನೇ ದಿನಕ್ಕೆ ಕಾಲಿಟ್ಟಿದ್ದು, ಖಾನೌರಿ ಗಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಗೆ 101 ರೈತರ ಜಾಥಾ ಶಂಭು ಗಡಿಯಿಂದ ದೆಹಲಿಯತ್ತ ಸಾಗಲಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಂಎಸ್‌ಪಿ ಜೊತೆಗೆ, ರೈತರು ಕೃಷಿ ಸಾಲ ಮನ್ನಾ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಬಾರದು, ಪೊಲೀಸ್ ಪ್ರಕರಣಗಳನ್ನು (ರೈತರ ವಿರುದ್ಧ) ಹಿಂಪಡೆಯಬೇಕು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಭೂ ಸ್ವಾಧೀನ ಕಾಯಿದೆ, 2013 ರ ಮರುಸ್ಥಾಪನೆ ಮತ್ತು 2020-21 ರಲ್ಲಿ ಹಿಂದಿನ ಆಂದೋಲನದ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಕೂಡ ಅವರ ಬೇಡಿಕೆಗಳ ಭಾಗವಾಗಿದೆ.
ಇದನ್ನೂ ಓದಿ; ಉತ್ತರ ಪ್ರದೇಶ ಕಾಂಗ್ರೆಸ್ಗೆ ಮೇಜರ್ ಸರ್ಜರಿ : ಎಲ್ಲಾ ಘಟಕಗಳ ವಿಸರ್ಜನೆ


