ರಾಷ್ಟ್ರ ರಾಜಧಾನಿಯ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸುವ ಮೂಲಕ ದೆಹಲಿ ಗದ್ದುಗೆಯನ್ನು 27 ವರ್ಷಗಳ ನಂತರ ಏರುತ್ತಿದೆ. ವಿಧಾನಸಭೆಯ ಒಟ್ಟು 70 ಕ್ಷೇತ್ರಗಳಲ್ಲಿ ಪಕ್ಷವು 48 ಸ್ಥಾನಗಳನ್ನು ಗಳಿಸಿದ್ದು, ಆಡಳಿತರೂಢ ಎಎಪಿಯ ಸಂಖ್ಯೆ 22 ಕ್ಕೆ ಇಳಿದಿದೆ. ಪಕ್ಷದ ಪ್ರಮುಖ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ವ್ಯಕ್ತಿಗಳು ಚುನಾವಣೆಯಲ್ಲಿ ಸೋಲುಂಡಿದ್ದು ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಅದಾಗ್ಯೂ, ಮುಖ್ಯಮಂತ್ರಿ ಅತಿಶಿ ಅವರು ತಮ್ಮ ಕಲ್ಕಾಜಿ ಕ್ಷೇತ್ರವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. Delhi Election Results
2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು, ಬಿಜೆಪಿಗೆ 8 ಸ್ಥಾನಗಳಲ್ಲಿ ಸಮಾಧಾನ ಪಡುವಂತೆ ಮಾಡಿತ್ತು. ಅದಕ್ಕೂ ಮುಂಚಿನ 2015ರ ಚುನಾವಣೆಯಲ್ಲಿ ಎಎಪಿ ವಿಧಾನಸಭೆಯ 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಬಿಜೆಪಿಗೆ 3 ಸ್ಥಾನಗಳಷ್ಟೆ ದಕ್ಕಿತ್ತು. ಅದಾಗ್ಯೂ, ಕಾಂಗ್ರೆಸ್ ಸಸತ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಶೂನ್ಯ ಸಾಧನೆ ಮಾಡಿದೆ. Delhi Election Results
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಖ್ಯಮಂತ್ರಿ ಅತಿಶಿ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿ ರಮೇಶ್ ಬಿಧುರಿ ಅವರನ್ನು 3521 ಮತಗಳಿಂದ ಸೋಲಿಸಿದ್ದಾರೆ ಎಂದು ಚುನಾವಣಾ ಆಯೋಗದ ವೆಬ್‌ಸೈಟ್ ತಿಳಿಸಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರಂವಿದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದ್ರ ಜೈನ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರ ಸೋಲಿನ ನಡುವೆ ಅತಿಶಿ ಅವರ ಗೆಲುವು ಪಕ್ಷಕ್ಕೆ ಸಮಾಧಾನ ತಂದಿದೆ.
ಪ್ರತಿಷ್ಠಿತ ನವದೆಹಲಿ ಸ್ಥಾನವನ್ನು ಕೇಜ್ರಿವಾಲ್ ಪರ್ವೇಶ್ ವರ್ಮಾ ವಿರುದ್ಧ ಸೋತರೆ, ಮನೀಶ್ ಸಿಸೋಡಿಯಾ ಅವರನ್ನು ಜಂಗ್‌ಪುರದಿಂದ ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ಸೋಲಿಸಿದರು. ದೆಹಲಿ ಸಚಿವ ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್ ಕ್ಷೇತ್ರದಿಂದ, ರಾಜಿಂದರ್ ನಗರದಿಂದ ದುರ್ಗೇಶ್ ಪಾಠಕ್, ಮಾಲ್ವಿಯಾ ನಗರದಿಂದ ಸೋಮನಾಥ್ ಭಾರ್ತಿ ಮತ್ತು ಶಕುರ್ ಬಸ್ತಿಯಿಂದ ಸತ್ಯೇಂದರ್ ಜೈನ್ ಸೋತರು.
ಕಲ್ಕಾಜಿಯಲ್ಲಿ ಎಎಪಿ ಮತ್ತು ಬಿಜೆಪಿಯಿಂದ ಭರ್ಜರಿ ಪ್ರಚಾರ ನಡೆದಿತ್ತು. ಚುನಾವಣೆಗೆ ಮುನ್ನ ಅತಿಶಿ ಮತ್ತು ಬಿಧುರಿ ನಡುವಿನ ತೀಕ್ಷ್ಣವಾದ ವಾಕ್ಸಮರ ನಡೆದಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಅಲ್ಕಾ ಲಂಬಾ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಅತಿಶಿ ಅವರು 52,154 ಮತಗಳನ್ನು ಪಡೆದರೆ, ಬಿಜೆಪಿಯ ರಮೇಶ್ ಬಿಧುರಿ 48,633 ಪಡೆದು 3,521 ಮತಗಳಿಂದ ಸೋಲುಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ 4,392 ಮತಗಳನ್ನು ಪಡೆದಿದ್ದಾರೆ.
ಮೂರು ಬಾರಿ ದೆಹಲಿ ಶಾಸಕರಾಗಿದ್ದ ರಮೇಶ್ ಬಿಧುರಿ, ಮುಖ್ಯಮಂತ್ರಿ ಅತಿಶಿ ತಮ್ಮ “ಮರ್ಲೆನಾ” ಎಂಬ ಉಪನಾಮವನ್ನು ಬಳಸುವುದನ್ನು ನಿಲ್ಲಿಸುವ ನಿರ್ಧಾರವನ್ನು ಟೀಕಿಸಿದ್ದರು. ಇದರ ನಂತರ ಅವರಿಬ್ಬರ ನಡುವೆ ತೀವ್ರ ವಾಕ್ಸಮರ ನಡೆಡಿತ್ತು. ಶಿಕ್ಷಣ ಸಲಹೆಗಾರರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ 43 ವರ್ಷದ ಅತಿಶಿ ಅವರು, ರಾಷ್ಟ್ರ ರಾಜಧಾನಿಯಲ್ಲಿ ಶೈಕ್ಷಣಿಕ ಸುಧಾರಣೆಗಳನ್ನು ತರಲು ಆಗಿನ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.
ಈ ನಡುವೆ, ಜಂಗ್‌ಪುರ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಥಿ ತರ್ವಿಂದರ್ ಸಿಂಗ್ ಮರ್ವಾ ಅವರ ಮುಂದೆ 675 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಬಿಜೆಪಿಯ ತರ್ವಿಂದರ್ ಸಿಂಗ್‌ಗೆ 38,859 ಮತಗಳು ಲಭಿಸಿದ್ದರೆ, ಮನೀಶ್ ಅವರಿಗೆ 38,184 ಮತಗಳು ಸಿಕ್ಕಿವೆ. ಈ ನಡುವೆ ಕಾಂಗ್ರೆಸ್‌ನ ಫರಾದ್ ಸೂರಿ ಅವರಿಗೆ 7,350 ಮತಗಳು ಲಭಿಸಿದೆ.
ಎಎಪಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರು ಶಕುರ್ ಬಸ್ತಿ ಕ್ಷೇತ್ರದಲ್ಲಿ ಬಿಜೆಪಿಯ ಕರ್ನೈಲ್ ಸಿಂಗ್ ವಿರುದ್ಧ 20,998 ಮತಗಳ ಅಂತರದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ 56,869 ಮತಗಳು ಲಭಿಸಿದ್ದರೆ, ಎಎಪಿಗೆ 35,871 ಹಾಗೂ ಕಾಂಗ್ರೆಸ್‌ನ ಸತೀಶ್ ಕುಮಾರ್ ಲೂತ್ರಾ ಅವರಿಗೆ 5,784 ಮತಗಳು ಲಭ್ಯವಾಗಿದೆ.
ಇದನ್ನೂಓದಿ: Delhi Election Results 2025 | ಎಎಪಿ ಘಟಾನುಘಟಿಗಳ ಹೀನಾಯ ಸೋಲು; ಅತಿಶಿ ಗೆಲುವು!


