ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಧನ ಸಹಾಯ, 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ವಿತರಣೆ ಸೇರಿದಂತೆ ಹಲವು ಭರವಸೆಗಳೊಂದಿಗೆ ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಶುಕ್ರವಾರ (ಜ.17) ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ಭರವಸೆಗಳನ್ನು ನೀಡಲಾಗಿದೆ.
- ಮಹಿಳಾ ಸಮೃದ್ದಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಧನ ಸಹಾಯ.
- ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ 500 ರೂಪಾಯಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್, ಹೋಳಿ ಮತ್ತು ದೀಪಾವಳಿ ಸಮಯದಲ್ಲಿ ತಲಾ ಒಂದು ಉಚಿತ ಸಿಲಿಂಡರ್.
- ದೆಹಲಿಯ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಯ ಆರೋಗ್ಯ ವಿಮೆ ಒದಗಿಸುವ ‘ಆಯುಷ್ಮಾನ್ ಭಾರತ್ ಯೋಜನೆ’ಯ ಅನುಷ್ಠಾನ.
- ದೆಹಲಿಯ ನಿವಾಸಿಗಳಿಗೆ 5 ಲಕ್ಷ ಹೆಚ್ಚುವರಿ ಆರೋಗ್ಯ ವಿಮೆ.
- 60-70- ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ 2,500 ರೂಪಾಯಿ ಮಾಸಿಕ ಪಿಂಚಣಿ.
- 70 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ರೂಪಾಯಿ ಮಾಸಿಕ ಪಿಂಚಣಿ.
- ಜೆಜೆ ಕ್ಲಸ್ಟರ್‌ಗಳಲ್ಲಿ ‘ಅಟಲ್ ಕ್ಯಾಂಟೀನ್’ಗಳ ಸ್ಥಾಪನೆ. ಕೇವಲ 5 ರೂಪಾಯಿಗೆ ಪೌಷ್ಠಿಕ ಊಟ.
ಕರ್ನಾಟಕ, ತೆಲಂಗಾಣ ಸೇರಿದಂತೆ ವಿವಿದೆಡೆ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಟೀಕಿಸಿದ್ದರು. ದೇಶ ದಿವಾಳಿಯಾಗುತ್ತದೆ ಎಂದಿದ್ದರು. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಮಹಿಳೆಯರಿಗೆ ಆರ್ಥಿಕ ಸಹಾಯ, ಹಿರಿಯ ನಾಗರಿಕರಿಗೆ ಪಿಂಚಣಿ ಹೆಚ್ಚಳದ ಯೋಜನೆಗಳನ್ನು ಘೋಷಿಸಿದಾಗಲೂ ಬಿಜೆಪಿ ನಾಯಕರು ವಿರೋಧಿಸಿದ್ದರು.
ಆದರೆ, ಈಗ ಬಿಜೆಪಿಯೇ ಚುನಾವಣಾ ಪೂರ್ಣ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವುದಕ್ಕೆ ಕಾಂಗ್ರೆಸ್ ಮತ್ತು ಎಎಪಿ ವ್ಯಂಗ್ಯವಾಡಿದೆ. ‘ನಮ್ಮದೇ ಕಾಪಿ’ ಎಂದಿದೆ.
“ಕೇಜ್ರಿವಾಲ್ ಯೋಜನೆಗಳು ಸರಿ ಎಂದು ಮೋದಿ ಒಪ್ಪಿಕೊಳ್ಳಲಿ”
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, “ಎಎಪಿ ಘೋಷಣೆ ಮಾಡಿರುವ ಯೋಜನೆಗಳ ಕುರಿತು ನಾವು ಮಾಡಿರುವ ಟೀಕೆ ತಪ್ಪು ಎಂಬುವುದನ್ನು ಪ್ರಧಾನಿ ಮೋದಿಯವರು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ಉಚಿತ ವಿದ್ಯುತ್, ನೀರು ಮತ್ತು ಬಸ್ ಪ್ರಯಾಣದಂತ ಕಲ್ಯಾಣ ಯೋಜನೆಗಳಿಂದ ಜನರಿಗೆ ಸಹಾಯವಾಗಿದೆ ಎಂಬುವುದನ್ನೂ ಒಪ್ಪಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಬಿಜೆಪಿ ಪ್ರಣಾಳಿಕೆ ಎಎಪಿಯ ಪ್ರಣಾಳಿಕೆಗಿಂತ ಭಿನ್ನವಾಗಿಲ್ಲ. ನಮ್ಮದೇ ಯೋಜನೆಗಳನ್ನು ಅವರು ನಕಲು ಮಾಡಿದ್ದಾರೆ. ಬಿಜೆಪಿ ಪ್ರಣಾಳಿಕೆಯ ಕುರಿತು ಒಂದೇ ವಾಕ್ಯದಲ್ಲಿ ಹೇಳುವುದಾದರೆ, “ಕೇಜ್ರಿವಾಲ್ ಮಾಡಿರುವ ಕೆಲಸಗಳು ಉತ್ತಮವಾಗಿದೆ. ಅದನ್ನು ನಾವು ಮುಂದುವರೆಸುತ್ತೇವೆ” ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.
ನಮ್ಮದೇ ಕಾಪಿ : ವಿನೇಶ್ ಪೋಗಟ್
ಬಿಜೆಪಿ ದೆಹಲಿ ವಿಧಾನಸಭಾ ಚುನಾವಣೆಗೆ ‘ಸಂಕಲ್ಪ ಪತ್ರ’ ಎಂಬ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ನಮ್ಮ ಪಕ್ಷದ ಯೋಜನೆಗಳಿಂದ ನಕಲು ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮತ್ತು ಲೋಕಸಭೆ ಚುನಾವಣೆಗೆ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳನ್ನೇ ಬಿಜೆಪಿ ನಕಲು ಮಾಡಿದೆ ಎಂದು ಹರಿಯಾಣದ ಕಾಂಗ್ರೆಸ್ ಶಾಸಕಿ ಹಾಗೂ ಮಾಜಿ ಕುಸ್ತಿಪಟು ವಿನೇಶ್ ಪೋಗಟ್ ಹೇಳಿದ್ದಾರೆ.
ಇಂದು ಭರವಸೆಗಳನ್ನು ನೀಡುವ ಮೂಲಕ ದೆಹಲಿಯ ಅಭಿವೃದ್ದಿಗೆ ಬಿಜೆಪಿ ಅಡಿಪಾಯ ಹಾಕಿದೆ. ಭರವಸೆಗಳನ್ನು ಈಡೇರಿಸುವ ಕೆಲಸ ಬಿಜೆಪಿ ಮಾಡಲಿದೆ. ಬಿಜೆಪಿಯ ಸಾಧನೆಯೆಂದರೆ, ಅದು ಹೇಳಿದ್ದನ್ನು ಮಾಡುತ್ತದೆ. ಹೇಳದಿರುವುದನ್ನೂ ಮಾಡುತ್ತದೆ. ‘ಮೋದಿಯವರ ಗ್ಯಾರಂಟಿ ಎಂದರೆ, ಅದು ಈಡೇರುವ ಭರವಸೆಯಿದೆ” ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಜೆ.ಪಿ ನಡ್ಡಾ ಹೇಳಿದ್ದಾರೆ.
“ದೆಹಲಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಕಲ್ಯಾಣ ಯೋಜನೆಗಳು ಬಿಜೆಪಿ ಸರ್ಕಾರ ಬಂದರೆ ಮುಂದುವರೆಸಲಾಗುವುದು. ಈ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುವುದು ಮತ್ತು ಜನರಿಗೆ ಅನುಕೂಲವಾಗುವಂತೆ ಮತ್ತಷ್ಟು ಬಲಪಡಿಸಲಾಗುವುದು. ಎಎಪಿ ಆಡಳಿತದ ವಿಶಿಷ್ಟ ಲಕ್ಷಣವಾಗಿರುವ ಭ್ರಷ್ಟಾಚಾರದ ಪ್ರತಿಯೊಂದು ಮಾರ್ಗಗಳನ್ನೂ ನಮ್ಮ ಸರ್ಕಾರ ಬಂದರೆ ಬಂದ್ ಮಾಡುತ್ತೇವೆ. ಈ ವಿಷಯದಲ್ಲಿ ನಾವು ಬದ್ದರಾಗಿದ್ದೇವೆ” ಎಂದು ನಡ್ಡಾ ತಿಳಿಸಿದ್ದಾರೆ.
ದೊಡ್ಡ ಮತ್ತು ಸಣ್ಣ ಮಟ್ಟದ 12 ಸಾವಿರ ಸಭೆಗಳು, 41 ಎಲ್‌ಇಡಿ ವ್ಯಾನ್‌ಗಳ ಮೂಲಕ ಸುಮಾರು 1.8 ಲಕ್ಷ ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಿಜೆಪಿ ಪ್ರಣಾಳಿಕೆ ತಯಾರಿಸಿದೆ. ಇದು ದೆಹಲಿಗೆ ಸಂಬಂಧಿಸಿದಂತೆ ಬಿಜೆಪಿಯ ಬದ್ದತೆಯ ಮೊದಲ ಹಂತವಾಗಿದೆ. ಇನ್ನೂ ಎರಡು ಕಾರ್ಯಕ್ರಮಗಳನ್ನು ಬಿಜೆಪಿ ಘೋಷಣೆ ಮಾಡಲಿದೆ ಎಂದು ನಡ್ಡಾ ಹೇಳಿದ್ದಾರೆ.


