ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿರುವ ಕ್ರಾಂತಿಕಾರಕ ಬದಲಾವಣೆ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇದೇ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಹೊಸ ಯೋಜನೆಯೊಂದನ್ನು ಜಾರಿ ಮಾಡಲು ನಿರ್ಧರಿಸಿದೆ. ಏನದು ಹೊಸ ಯೋಜನೆ?
ದೆಹಲಿ ಶಾಲೆಗಳಲ್ಲಿ ಓದುತ್ತಿರುವ 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೈಥಿಲಿ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ಪರಿಚಯಿಸುವುದಾಗಿ ದೆಹಲಿ ಸರ್ಕಾರ ತಿಳಿಸಿದೆ.
‘ಪೂರ್ವಾಚಲೀಸ್’ ಎಂದೇ ಕರೆಯಲ್ಪಡುವ ಪೂರ್ವ ಉತ್ತರ ಪ್ರದೇಶ ಹಾಗೂ ಬಿಹಾರದಿಂದ ದೆಹಲಿಗೆ ವಲಸೆ ಬರುವ ಬಹುಪಾಲು ಜನರು ಮಾತನಾಡುವ ಭಾಷೆ ಮೈಥಿಲಿ ಮತ್ತು ಬೋಜ್ ಪುರಿಯಾಗಿದ್ದು, ದೆಹಲಿಗೆ ವಲಸೆ ಬಂದಿರುವ ಶೇ.40% ಜನರು ಈ ರಾಜ್ಯದವರೇ ಆಗಿದ್ದಾರೆ.
ಈಗಾಗಲೇ ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಮೈಥಿಲಿ ಭಾಷೆಯನ್ನು ಈ ವರ್ಷದಿಂದ ಐಚ್ಛಿಕ ವಿಷಯವನ್ನಾಗಿ ಸೇರಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಹಾಗೆಯೇ ಆಧುನಿಕ ಭಾರತೀಯ ಭಾಷೆಗಳನ್ನು ವ್ಯಾಖ್ಯಾನಿಸುವ ಸಂವಿಧಾನದ 8ನೇ ಪರಿಚ್ಛೇದಕ್ಕೆ ಬೋಜ್ ಪುರಿ ಭಾಷೆಯನ್ನು ಸೇರಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
‘8-12ನೇ ತರಗತಿವರೆಗಿನ ವಿದ್ಯಾರ್ಥಿಗಳು ಮೈಥಿಲಿ ಭಾಷೆಯನ್ನು ಒಂದು ವಿಷಯವನ್ನಾಗಿ ಕಲಿಯಲಿದ್ದಾರೆ. ದೆಹಲಿಯಲ್ಲಿ ವಾಸವಿರುವ ಮೈಥಿಲಿ ಭಾಷೆಯನ್ನು ಮಾತನಾಡಬಲ್ಲ ಸಾವಿರಾರು ವಿದ್ಯಾರ್ಥಿಗಳಿಗೆ ಮಾತೃಭಾಷೆಯನ್ನು ಒಂದು ವಿಷಯವನ್ನಾಗಿ ಕಲಿಯಲು ಅವಕಾಶ ಸಿಗಲಿದೆ’ ಎಂದು ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಾಗಿರುವ ಮನಿಷ್ ಸಿಸೋಡಿಯಾ ತಿಳಿಸಿದರು.
ಮೈಥಿಲಿ ಭಾಷೆಯಂತೆ ಬೋಜ್ ಪುರಿ ಭಾಷೆಯನ್ನು ಪರಿಚ್ಛೇದಕ್ಕೆ ಸೇರಿಸಿದಲ್ಲಿ ಬೋಜ್ ಪುರಿ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ವಿದ್ಯಾರ್ಥಿಗಳು ಕಲಿಸಬಹುದು. ಹಾಗಾಗಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬೋಜ್ ಪುರಿ ಭಾಷೆಯನ್ನು ಒಳಗೊಳ್ಳಬೇಕು ಎಂದು ಸರ್ಕಾರವು ಒತ್ತಾಯಿಸಿದೆ.
‘ಮೈಥಿಲಿ ಭಾಷೆಯಂತೆ ಬೋಜ್ ಪುರಿಯನ್ನು ಐಚ್ಛಿಕ ವಿಷಯವನ್ನಾಗಿ ಪರಿಚಯಿಸಬೇಕು ಎಂದುಕೊಂಡೆವು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೋಜ್ ಪುರಿಯನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಮೈಥಿಲಿ-ಬೋಜ್ ಪುರಿ ಅಕಾಡೆಮಿ ಆಫ್ ದೆಹಲಿ ಅಧ್ಯಕ್ಷನಾಗಿ ನಾನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬೋಜ್ ಪುರಿಯನ್ನು ಸೇರಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಸಿಸೋಡಿಯಾ ತಿಳಿಸಿದರು.
‘ಈಗಾಗಲೇ ಸರ್ಕಾರವು ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ನೀಡುತ್ತಿದೆ. ಈ ಪ್ರಯೋಗದಲ್ಲಿ ನಾವು ಉತ್ತಮ ಫಲಿತಾಂಶ ಪಡೆದಿದ್ದೇವೆ. ಇದೇ ನಿಟ್ಟಿನಲ್ಲಿ ಮೈಥಿಲಿ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ನಾಗರೀಕ ಸೇವಾ ಪರೀಕ್ಷೆ ಒಳಗೊಂಡಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ಮನೀಷ್ ಸಿಸೊಡಿಯಾ ತಿಳಿಸಿದ್ದಾರೆ.


