ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಬೇಕೆಂಬ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ದೆಹಲಿ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿದಾರರಿಗೆ ಒದಗಿಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದ ಸಿಐಸಿಯ 2017ರ ಆದೇಶವನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ (ಡಿಯು) ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಸಚಿನ್ ದತ್ತ ಅವರ ಪೀಠ ಪುರಸ್ಕರಿಸಿದೆ.
“ಸಿಐಸಿ ಆದೇಶವನ್ನು ರದ್ದುಗೊಳಿಸಲಾಗಿದೆ” ಎಂಬುವುದಾಗಿ ಏಕ ಸದಸ್ಯ ನ್ಯಾಯಾಧೀಶರ ಪೀಠ ತೀರ್ಪು ಪ್ರಕಟಿಸುತ್ತಾ ಹೇಳಿದೆ” ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಪ್ರಧಾನಿ ಮೋದಿ ರಾಜ್ಯಶಾಸ್ತ್ರದಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆಂದು ಹೇಳಲಾಗುವ 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಕೋರ್ಸ್ ತೇರ್ಗಡೆಯಾದ ವಿದ್ಯಾರ್ಥಿಗಳ ದಾಖಲೆಗಳನ್ನು ಆರ್‌ಟಿಐ ಅರ್ಜಿದಾರರು ಕೋರಿದ್ದರು.
2016ರಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿಯವರಿಗೆ ತಮ್ಮ ಶೈಕ್ಷಣಿಕ ಪದವಿಗಳ ಬಗ್ಗೆ ಸ್ಪಷ್ಟನೆ ನೀಡಿ ಮತ್ತು ಅವುಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಕೇಳಿದ್ದ ನಂತರ ಈ ವಿಷಯವು ಚರ್ಚೆಗೆ ಬಂದಿತ್ತು.
ಪ್ರಧಾನಿ ಮೋದಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 1978ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ರಾಜ್ಯಶಾಸ್ತ್ರ ಕೋರ್ಸ್‌ನಲ್ಲಿ ಪದವಿ ಪಡೆದಿರುವುದಾಗಿ ತಿಳಿಸಿದ್ದರು.
ಅದಕ್ಕೂ ಒಂದು ವರ್ಷದ ಮೊದಲು, ನೀರಜ್ ಶರ್ಮಾ ಎಂಬುವವರು 1978ರಲ್ಲಿ ದೆಹಲಿ ವಿಶ್ವವಿದ್ಯಾಲಯವು ನೀಡಿದ ಎಲ್ಲಾ ಬಿಎ ಪದವಿಗಳ ವಿವರಗಳನ್ನು ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲು ವಿಶ್ವವಿದ್ಯಾನಿಲಯವು ನಿರಾಕರಿಸಿತ್ತು. ಅದು ‘ಖಾಸಗಿ’ ಮತ್ತು ‘ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿತ್ತು.
ಡಿಸೆಂಬರ್ 2016 ರಲ್ಲಿ, ಶರ್ಮಾ ವಿಶ್ವವಿದ್ಯಾಲಯದ ಪ್ರತಿಕ್ರಿಯೆಯ ವಿರುದ್ಧ ಸಿಐಸಿಗೆ ಅರ್ಜಿ ಸಲ್ಲಿಸಿದ್ದರು. ಮಾಹಿತಿ ಆಯುಕ್ತ ಪ್ರೊ. ಎಂ. ಆಚಾರ್ಯುಲು ಅವರು 1978ರಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ವಿಷಯದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಹೊಂದಿರುವ ರಿಜಿಸ್ಟರ್ ಅನ್ನು ಸಾರ್ವಜನಿಕಗೊಳಿಸುವಂತೆ ದೆಹಲಿ ವಿವಿಗೆ ನಿರ್ದೇಶನ ನೀಡಿದ್ದರು.
ಜನವರಿ 23,2017 ರಂದು ದೆಹಲಿ ವಿವಿ ಸಿಐಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿ ಸಂಬಂಧ ವಿವಿ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು “ಸಿಐಸಿ ಆದೇಶವು ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ದೇಶದ ವಿವಿಗಳ ಕೋಟ್ಯಂತರ ವಿದ್ಯಾರ್ಥಿಗಳ ಪದವಿ ವಿವರಗಳು ವಿಶ್ವಾಸಾರ್ಹ ವಿಷಯವಾಗಿದೆ” ಎಂದಿದ್ದರು.
‘ತಿಳಿದುಕೊಳ್ಳುವ ಹಕ್ಕು ಅನಿಯಂತ್ರಿತ ಹಕ್ಕಲ್ಲ. ಆರ್‌ಟಿಐ ಕಾಯ್ದೆಯಡಿಯಲ್ಲಿ ವೈಯಕ್ತಿಕ ಮಾಹಿತಿ ಕೇಳಲು ಅವಕಾಶವಿಲ್ಲ. ಅಧಿಕಾರಿಗಳನ್ನು ಬೆದರಿಸಲು ಆರ್‌ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
‘ಸಾರ್ವಜನಿಕ ಕುತೂಹಲ (Interest to the Public) ಮತ್ತು ‘ಸಾರ್ವಜನಿಕ ಹಿತಾಸಕ್ತಿ’ ( Public Interest) ಎನ್ನುವುದು ಎರಡೂ ಒಂದೇ ಅಲ್ಲ. ಹಾಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಕೇವಲ ಕುತೂಹಲಕ್ಕಾಗಿ ಮೋದಿಯವರ ಪದವಿ ವಿವರ ಕೇಳಲು ಸಾಧ್ಯವಿಲ್ಲ ಎಂದಿದ್ದರು.
ಆರ್‌ಟಿಐ ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸಂಜಯ್ ಹೆಗ್ಡೆ, ವಿದ್ಯಾರ್ಥಿಗಳ ಪದವಿ ವಿವರಗಳನ್ನು ವಿಶ್ವಾಸಾರ್ಹ ವಿಷಯ ಎಂಬ ದೆಹಲಿ ವಿವಿಯ ವಾದವನ್ನು ಪ್ರಶ್ನಿಸಿದ್ದರು.
ಮಾಹಿತಿ ಬಹಿರಂಗಪಡಿಸುವಿಕೆಯು ಸಾರ್ವಜನಿಕವಾಗಿ ಒಳಿತನ್ನು ಉಂಟುಮಾಡುತ್ತದೆಯೇ ಅಥವಾ ಹಾನಿಯನ್ನುಂಟುಮಾಡುತ್ತದೆಯೇ ಎಂದು ಮಾಹಿತಿ ಅಧಿಕಾರಿ ನೋಡಬೇಕು ಎಂದು ಎಂದಿದ್ದರು.
ವಾದ ಆಲಿಸಿದ್ದ ನ್ಯಾಯಾಲಯ ಜನವರಿ 2017ರಲ್ಲಿ ಅರ್ಜಿದಾರ ಶರ್ಮಾ ಅವರಿಗೆ ನೋಟಿಸ್ ನೀಡಿ ಆದೇಶ ಕಾಯ್ದಿರಿಸಿತ್ತು.
ಬುಲ್ಡೋಝರ್ ಅ’ನ್ಯಾಯ’ದ ವಿರುದ್ದದ ತೀರ್ಪು ನಾಗರಿಕರ ಹಕ್ಕುಗಳನ್ನು ಎತ್ತಿ ಹಿಡಿದಿದೆ: ಸಿಜೆಐ ಗವಾಯಿ


