ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯದಿಂದ ಮುಚ್ಚಲಾಗಿದ್ದ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಮತ್ತೆ ನವೆಂಬರ್ 29 ರ ಸೋಮವಾರದಿಂದ ತೆರೆಯಲಿವೆ ಎಂದು ದೆಹಲಿ ಸರ್ಕಾರ ಬುಧವಾರ ತಿಳಿಸಿದೆ.
“ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಗರದಲ್ಲಿ ಮತ್ತೆ ತೆರೆಯಲು ಅನುಮತಿ ನೀಡಲಾಗುವುದು. ನವೆಂಬರ್ 29 ಕ್ಕೆ ಸರ್ಕಾರಿ ಕಚೇರಿಗಳ ವರ್ಕ್ ಫ್ರಂ ಹೋಂ ಮುಗಿಯುತ್ತದೆ. ಆದರೆ, ಕಚೇರಿಗೆ ಬರಲು ಎಲ್ಲರೂ ಸಾರ್ವಜನಿಕ ಸಾರಿಗೆಯನ್ನು ಬಳಸಲು ನಾವು ವಿನಂತಿಸುತ್ತೇವೆ” ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.
ನವೆಂಬರ್ 27 ರಿಂದ ದೆಹಲಿಯಲ್ಲಿ ಅಗತ್ಯವಲ್ಲದ ವಸ್ತುಗಳನ್ನು ಸಾಗಿಸುವ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಅನುಮತಿ ನೀಡಲಾಗುವುದು. ಅಗತ್ಯವಲ್ಲದ ವಸ್ತುಗಳನ್ನು ಸಾಗಿಸುವ ಡೀಸೆಲ್ ಮತ್ತು ಪೆಟ್ರೋಲ್ ಟ್ರಕ್‌ಗಳ ಪ್ರವೇಶದ ಮೇಲಿನ ನಿಷೇಧ ಡಿಸೆಂಬರ್ 3 ರವರೆಗೆ ಮುಂದುವರಿಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ವಾಯು ಮಾಲಿನ್ಯ ತಡೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಸಿದ್ಧ: ದೆಹಲಿ ಸರ್ಕಾರ
ದೆಹಲಿಯ ಏರ್ ಕ್ವಾಲಿಟಿ ಅರ್ಲಿ ವಾರ್ನಿಂಗ್ ಸಿಸ್ಟಮ್ ಪ್ರಕಾರ, ಬುಧವಾರದಂದು ದೆಹಲಿಯ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲಿರುವ ಸಾಧ್ಯತೆಯಿದೆ.
ನವೆಂಬರ್ 15 ರಂದು ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ತಡೆಯಲು “ಸಂಪೂರ್ಣ ಲಾಕ್‌ಡೌನ್”ನಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ವಾಯುಮಾಲಿನ್ಯದ ಕುರಿತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗಾಳಿಯ ಗುಣಮಟ್ಟದ ಬಿಕ್ಕಟ್ಟನ್ನು ಎದುರಿಸಲು ಹಲವು ಕ್ರಮಗಳನ್ನು ಜಾರಿಗೊಳಿಸಿದ್ದರು. ಒಂದು ವಾರ ಶಾಲೆಗಳನ್ನು ಮುಚ್ಚುವುದು, ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವುದು ಮತ್ತು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಘೋಷಿಸಿದ್ದರು.


