ದೆಹಲಿಯ ವಾಯುಮಾಲಿನ್ಯ ‘ಗಂಭೀರ ಮಟ್ಟ’ ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ.
ವಿವಿಧ ಪ್ರಕರಣಗಳಲ್ಲಿ ವಾದ ಮಂಡಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರಿಗೆ ವರ್ಚುವಲ್ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ನ್ಯಾಯಮೂರ್ತಿ ಪಿ.ಎಸ್ ನರಸಿಂಹ ನೇತೃತ್ವದ ಪೀಠ ಸಲಹೆ ನೀಡಿದೆ. ವಾಯುಮಾಲಿನ್ಯ ಆರೋಗ್ಯದ ಮೇಲೆ ಶಾಶ್ವತ ಪರಿಣಾಮ ಬೀರಬಹುದು ಎಂದಿದೆ.
ನ್ಯಾಯಾಧೀಶರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ನಾವು ಕೋರ್ಟ್ ಹಾಲ್ ಒಳಗೂ ಮಾಸ್ಕ್ ಧರಿಸುತ್ತೇವೆ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನರಸಿಂಹ ಅವರು, “ಮಾಸ್ಕ್ ಕೂಡ ಸಾಕಾಗುವುದಿಲ್ಲ. ನಾವು ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸುತ್ತೇವೆ” ಎಂದಿದ್ದಾರೆ.
ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮತ್ತೊಮ್ಮೆ ಹದಗೆಟ್ಟಿದ್ದು, ವಿಷಕಾರಿ ಮತ್ತು ಗಂಭೀರ ಮಟ್ಟಕ್ಕೆ ತಲುಪಿದೆ. ರಾಷ್ಟ್ರ ರಾಜಧಾನಿ ದಟ್ಟವಾದ ಬೂದು ಹೊಗೆಯಿಂದ ಆವೃತವಾಗಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ವಿಷಕಾರಿ ಹೊಗೆಗೆ ಬೆಳೆ ತ್ಯಾಜ್ಯ ಸುಡುವುದನ್ನು ಪ್ರಮುಖ ಕಾರಣವೆಂದು ಹೇಳಿತ್ತು. ಈ ವಿಷಯದಲ್ಲಿ ಪಂಜಾಬ್ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು ಹೆಚ್ಚಿನ ಜವಾಬ್ದಾರಿ ವಹಿಸುವಂತೆ ನಿರ್ದೇಶಿಸಿತ್ತು.
ನವೆಂಬರ್ 17 ರಂದು ಸುಪ್ರೀಂ ಕೋರ್ಟ್ ವಾಯುಮಾಲಿನ್ಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು


