ಉತ್ತರ ದೆಹಲಿಯಲ್ಲಿ 2020ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಗೋಕುಲಪುರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ 10 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ದೆಹಲಿಯ ಕಾರ್ಕರ್ದೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಸೆಪ್ಟೆಂಬರ್ 12 ರಂದು ಹೊರಡಿಸಿದ ಆದೇಶದಲ್ಲಿ ಮೊಹಮ್ಮದ್ ಶಾನವಾಝ್ ಅಲಿಯಾಸ್ ಶಾನು, ಮೊಹಮ್ಮದ್ ಶೋಯೆಬ್ ಅಲಿಯಾಸ್ ಚುತ್ವಾ, ಶಾರುಖ್, ರಶೀದ್ ಅಲಿಯಾಸ್ ರಾಜಾ, ಆಝಾದ್, ಅಶ್ರಫ್ ಅಲಿ, ಪರ್ವೇಝ್, ಮೊಹಮ್ಮದ್ ಫೈಝಲ್, ರಾಶಿದ್ ಅಲಿಯಾಸ್ ಮೋನು ಮತ್ತು ಮೊಹಮ್ಮದ್ ತಾಹಿರ್ ಅವರ ವಿರುದ್ದದ ಎಲ್ಲಾ ಆರೋಪಗಳನ್ನು ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳ ವಿರುದ್ದದ ಸಾಕ್ಷ್ಯವು ಅವರನ್ನು ಅಪರಾಧಿಗಳು ಎಂದು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದಿರುವ ನ್ಯಾಯಾಧೀಶರು, ಗಲಭೆ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ಮೇಲೆ ದಾಖಲಾಗಿದ್ದ ಪ್ರಕರಣಗಳಿಂದ ಮುಕ್ತಗೊಳಿಸಿದ್ದಾರೆ.
ಫೆಬ್ರವರಿ 24,2020 ರಂದು ಶಿವ ವಿಹಾರ್‌ನ ಬ್ರಿಜ್‌ಪುರಿ ರಸ್ತೆಯ ಚಮನ್ ಪಾರ್ಕ್‌ನಲ್ಲಿ ಸುಮಾರು 1,500 ಜನರ ಗುಂಪು ನನ್ನ ಆಸ್ತಿಯನ್ನು ಧ್ವಂಸಗೊಳಿಸಿದೆ ಎಂದು ಆರೋಪಿಸಿ ನರೇಂದರ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿತ್ತು. ದೂರಿನ ಪ್ರಕಾರ, ಆರೋಪಿಗಳು ಚಿನ್ನ, ಬೆಳ್ಳಿ ಮತ್ತು ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಮನೆಗೆ ಬೆಂಕಿ ಹಚ್ಚಿ ದೊಡ್ಡ ಮಟ್ಟದ ಹಾನಿ ಉಂಟು ಮಾಡಿದ್ದಾರೆ ಎಂದು ನರೇಂದರ್ ಹೇಳಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಜುಲೈ 14,2020 ರಂದು ಮೊದಲ ಚಾರ್ಜ್‌ಶೀಟ್ ಸಲ್ಲಿಸಿದರು, ನಂತರ ಜನವರಿ ಮತ್ತು ಸೆಪ್ಟೆಂಬರ್ 2023ರಲ್ಲಿ ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸಿದ್ದರು. ಸಾಕ್ಷ್ಯಗಳು ಮತ್ತು ಬಹು ಆರೋಪ ಪಟ್ಟಿಗಳ ಹೊರತಾಗಿಯೂ, ಪ್ರಾಸಿಕ್ಯೂಷನ್ ಆರೋಪಗಳನ್ನು ನಿರ್ಣಾಯಕವಾಗಿ ರುಜುವಾತುಪಡಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಎಲ್ಲಾ 10 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಇದನ್ನೂ ಓದಿ : ದೆಹಲಿ ಗಲಭೆ ಪ್ರಕರಣ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್


