ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಸಲ್ಲಿಸಿದ್ದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಡಿಸೆಂಬರ್ 9) ಕಾಯ್ದಿರಿಸಿದೆ.
ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 2ರಂದು ಜಾಮೀನು ನಿರಾಕರಿಸಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠ ಇಂದು ಮುಕ್ತಾಯಗೊಳಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (ಯುಎಪಿಎ) ಅಪರಾಧಗಳನ್ನು ಎಸಗಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪ್ರಕರಣದಲ್ಲಿ ಈ ಏಳು ಮಂದಿ ಐದು ವರ್ಷಗಳಿಗೂ ಹೆಚ್ಚು ಸಮಯದಿಂದ ಬಂಧನದಲ್ಲಿದ್ದಾರೆ.
ಐದು ವರ್ಷಗಳು ಕಳೆದರೂ ಗಲಭೆಯ ಹಿಂದಿನ ಪಿತೂರಿ ಆರೋಪಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ ಮತ್ತು ವಿಚಾರಣೆ ವಿಳಂಬವಾಗಿದೆ ಎಂಬ ಈ ಎರಡು ವಿಷಯಗಳನ್ನು ಮುಂದಿಟ್ಟುಕೊಂಡು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.
ಗುಲ್ಫಿಶಾ ಫಾತಿಮಾ ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ಉಮರ್ ಖಾಲಿದ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಶಾರ್ಜೀಲ್ ಇಮಾಮ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ದೇವ್ ವಾದ ಮಂಡಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಪರವಾಗಿ ವಾದ ಮಂಡಿಸಿದ ವಕೀಲರು, ದೆಹಲಿ ಗಲಭೆ ಘಟನೆ ಆಕಸ್ಮಿಕ ಎಂದು ಕರೆಯುವುದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಅದು ಸಂಪೂರ್ಣ ಯೋಜಿತ, ದೇಶವ್ಯಾಪಿ ಷಡ್ಯಂತ್ರವಾಗಿತ್ತು. ಅದರ ಏಕೈಕ ಉದ್ದೇಶ ಸರ್ಕಾರವನ್ನು ಉರುಳಿಸುವುದು ಮತ್ತು ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸುವುದಾಗಿತ್ತು ಎಂದಿದ್ದಾರೆ.
ಈ ಷಡ್ಯಂತ್ರಕ್ಕೆ ಆರೋಪಿಗಳು ಡೆಲ್ಲಿ ಪ್ರೊಟೆಸ್ಟ್ ಸಪೋರ್ಟ್ ಗ್ರೂಪ್ (ಡಿಪಿಎಸ್‌ಜಿ), ಜಾಮಿಯಾ ಅವರ್ನೆಸ್ ಕ್ಯಾಂಪೇನ್ ಟೀಮ್, ಮುಸ್ಲಿಂ ಸ್ಟೂಡೆಂಟ್ ಆರ್ಗನೈಸೇಶನ್ಸ್, ಪಿಂಜ್ರಾ ತೋಡ್ ಮುಂತಾದ ವಾಟ್ಸಾಪ್ ಗ್ರೂಪ್‌ಗಳಲ್ಲಿ ನಡೆಸಿದ ಸಂಭಾಷಣೆ ಮತ್ತು ಹಣ ವರ್ಗಾವಣೆ ಸಾಕ್ಷ್ಯ ಎಂದು ಹೇಳಿದ್ದಾರೆ. ಅಲ್ಲದೆ, ವಿಚಾರಣೆ ಇಷ್ಟೊಂದು ವರ್ಷ ತಡವಾಗಿರುವುದಕ್ಕೆ ಆರೋಪಿಗಳೇ ಕಾರಣ ಎಂದು ವಾದಿಸಿದ್ದಾರೆ.
ಆರೋಪಿಗಳು ಒಬ್ಬೊಬ್ಬರಾಗಿ ಜಾಮೀನು ಅರ್ಜಿ ಸಲ್ಲಿಸುವುದು, ದಾಖಲೆಗಳ ಕಾಪಿ ಕೇಳುವುದು, ಸಾಕ್ಷಿಗಳನ್ನು ವಿಚಾರಣೆಗೆ ಕರೆಸದಂತೆ ತಡೆಯುವುದು ಮುಂತಾದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿಗಳು ಸಂಪೂರ್ಣ ಸಹಕಾರ ನೀಡಿದರೆ ಕೇವಲ ಎರಡು ವರ್ಷದೊಳಗೆ ಎಲ್ಲಾ ಸಾಕ್ಷಿಗಳನ್ನು ವಿಚಾರಣೆ ನಡೆಸಿ ಪ್ರಕರಣ ಪೂರ್ಣಗೊಳಿಸಬಹುದು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.


