ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಮಾಯರಿಗೆ ಅಪರಾಧಿ ಪಟ್ಟ ಕಟ್ಟುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವಕೀಲ ಪ್ರಶಾಂತ್ ಭೂಷಣ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೆಹಲಿ ಗಲಭೆ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಬಂಧಿಸಲಾಗಿದ್ದು, ಅವರ ಬಂಧನವನ್ನು ವಿರೋಧಿಸಿ ಅವರನ್ನು ಬಿಡುಗಡೆ ಮಾಡುವಂತೆ ಇಂದು ದೆಹಲಿಯ ಸಿವಿಲ್ ಸೊಸೈಟಿ ಮುಖಂಡರು ನಡೆಸಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಮಾಜಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ಬಂಧನ
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪ್ರಶಾಂತ್ ಭೂಷಣ್ ಅವರು, ಉಮರ್ ಖಾಲಿದ್‌ನನ್ನು ಅಪರಾಧಿ ಎಂದು ಪಟ್ಟಕಟ್ಟಲು ದೆಹಲಿ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. ಖಾಲಿದ್‌ನನ್ನು ಇಸ್ಲಾಮಿಕ್ ಪ್ರತ್ಯೇಕತಾವಾದಿ ನಾಯಕನಂತೆ ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ದೆಹಲಿ ಪೊಲೀಸರು ಅಮಾಯಕರಿಗೆ ಅಪರಾಧಿ ಪಟ್ಟ ಕಟ್ಟಿ, ಸಮಾಜದಲ್ಲಿಅವರನ್ನು ಕ್ರಿಮಿನಲ್‌ಗಳೆಂದು ಬಿಂಬಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಗಲಬೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನವಾಗಿರುವ ಯಾರೊಬ್ಬರ ವಿರುದ್ಧವೂ ಸೂಕ್ತ ಸಾಕ್ಷ್ಯಾಧಾರವಿಲ್ಲ, ಆದರೂ ಬಂಧಿಸಲಾಗಿದೆ. ಈ ಬಗ್ಗೆ ರಾಷ್ಟ್ರಪತಿಗಳಿಗೂ ಪತ್ರ ಬರೆದಿದ್ದೇವೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯೋಜನಾ ಆಯೋಗದ ಮಾಜಿ ಸದಸ್ಯೆ ಸಯೀದಾ ಹಮೀದ್, ಕಮ್ಯುನಿಸ್ಟ್ ನಾಯಕಿ ಕವಿತ್ ಕೃಷ್ಣನ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಇದನ್ನೂ ಓದಿ: ದೆಹಲಿ ಗಲಭೆಯ ತನಿಖೆ ಅನ್ಯಾಯದಿಂದ ಕೂಡಿದೆ; ಕೇಜ್ರಿವಾಲ್‌ಗೆ ಗಣ್ಯರ ಪತ್ರ


