ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಪಿಂಜ್ರಾ ತೋಡ್ ಕಾರ್ಯಕರ್ತೆ ದೇವಂಗನಾ ಕಾಳಿತಾಗೆ ನೀಡಿರುವ ಜಾಮೀನು ವಿರುದ್ಧ ಎಎಪಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದೇವಂಗನಾ ಕಾಳಿತಾಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ದೆಹಲಿ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, “ಕಾಳಿತಾ ಪ್ರಭಾವಿ ವ್ಯಕ್ತಿಯಾಗಿದ್ದು, ಜೊತೆಗೆ ಈ ಪ್ರಕರಣದಲ್ಲಿ ಪೊಲೀಸ್ ಸಾಕ್ಷಿಗಳು ಮಾತ್ರ ಇದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದಲ್ಲಿ ಕೆಲವು ಸಂರಕ್ಷಿತ ಸಾಕ್ಷಿಗಳೂ ಇದ್ದಾರೆ” ಎಂದು ವಾದಿಸಿದ್ದರು.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ದೆಹಲಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿ, “ಪ್ರಭಾವಿ ವ್ಯಕ್ತಿಯಾಗಿರುವುದು ಜಾಮೀನು ನಿರಾಕರಿಸುವ ನೆಲೆಯಾಗಿರಬಾರದು” ಎಂದು ಹೇಳಿದೆ.
ಇದನ್ನೂ ಓದಿ: ಸಿಎಎ ವಿರೋಧಿಗಳ ಬೇಟೆ ಮುಂದುವರಿಕೆ; ಇಬ್ಬರು JNU ವಿದ್ಯಾರ್ಥಿನಿಯರ ಬಂಧನ
“ಪ್ರಭಾವಿ ವ್ಯಕ್ತಿಯಾಗಿರುವುದು ಜಾಮೀನು ನಿರಾಕರಿಸುವ ನೆಲೆಯಾಗಬಹುದೇ. ಆಕೆ ಸಾಕ್ಷಿಯನ್ನು ಹೇಗೆ ನಾಶಮಾಡಬಹುದು” ಎಂದು ನ್ಯಾಯಪೀಠವು ರಾಜು ಅವರನ್ನು ಪ್ರಶ್ನಿಸಿತು.
ಕಲಿತಾಗೆ ಜಾಮೀನು ನೀಡುವ ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: CAA ವಿರೋಧಿ ಹೋರಾಟಗಾರ್ತಿಯವರಿಗೆ ಜಾಮೀನು ನೀಡಿದ ನ್ಯಾಯಾಲಯ: ಮತ್ತೆ ಬಂಧಿಸಿದ ದೆಹಲಿ ಪೊಲೀಸರು!
ಸೆಪ್ಟೆಂಬರ್ 1 ರಂದು, ಈಶಾನ್ಯ ದೆಹಲಿಯ ಹಿಂಸಾಚಾರ ಪ್ರಕರಣವೊಂದರಲ್ಲಿ ಹೈಕೋರ್ಟ್ ಕಾಳಿತಾಗೆ ಜಾಮೀನು ನೀಡಿ, “ಆಕೆ ನಿರ್ದಿಷ್ಟ ಸಮುದಾಯದ ಮಹಿಳೆಯರನ್ನು ಪ್ರಚೋದಿಸಿದ್ದಾರೆಂದು ಅಥವಾ ಶಾಂತಿಯುತ ಆಂದೋಲನದಲ್ಲಿ ದ್ವೇಷದ ಭಾಷಣ ಮಾಡಿದ್ದರು ಎಂದು ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದಾರೆ” ಎಂದು ಹೇಳಿತ್ತು.
ಸಿಎಎ ವಿರೋಧಿ ಮಹಿಳೆಯರ ಧರಣಿ ವೇಳೆ ಜಾಫ್ರಾಬಾದ್‌ನಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ದೇವಂಗನಾ ಕಾಳಿತಾ ಮತ್ತು ನತಾಶಾ ನರ್ವಾಲ್ ಅವರನ್ನು ಮೇ 23 ರಂದು ಬಂಧಿಸಲಾಯಿತು.
ಇದನ್ನೂ ಓದಿ: JNU ವಿದ್ಯಾರ್ಥಿನಿ ದೇವಾಂಗನಾ ಕಾಳಿತಾ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ: ಜಾಮೀನು ಮಂಜೂರು
ನಂತರ ಜಾಮೀನು ಸಿಕ್ಕಿದ್ದರೂ ಸಹ ದೆಹಲಿ ಪೊಲೀಸರು ಮತ್ತೊಮ್ಮೆ ಕಾಳಿತಾ ಅವರನ್ನು ಬಂಧಿಸಿದ್ದರು. ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಇಂತಹ ಕೆಲಸಗಳನ್ನು ಮಾಡುತ್ತಿತ್ತು. ಆದರೆ ದೆಹಲಿ ಸರ್ಕಾರದ ಈ ನಡೆಯಿಂದ ಅನುಮಾನ ಸೃಷ್ಟಿಯಾಗುತ್ತಿದೆ.
ಯಾವುದೋ ಕ್ಷುಲಕ ಕಾರಣ ನೀಡಿ ಕೋರ್ಟ್ ನೀಡಿರುವ ಜಾಮೀನನ್ನು ತಿರಸ್ಕರಿಸಬೇಕು ಎಂದು ದೆಹಲಿ ಸರ್ಕಾರ ಸಲ್ಲಿಸಿರುವ ಮನವಿ ನಿಜಕ್ಕೂ ಖಂಡನೀಯ. ಹೋರಾಟದ ಹಿನ್ನೆಲೆಯಿಂದ ಬಂದ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಇಂತಹ ಕೆಲಸಕ್ಕೆ ಮುಂದಾಗಿರುವುದು ಅವಮಾನಕರವಾದ ಸಂಗತಿ.
ಇದನ್ನೂ ಓದಿ: 10 ದಿನದಲ್ಲಿ 3 ಬಾರಿ ಸಿಎಎ ವಿರೋಧಿ ಹೋರಾಟಗಾರ್ತಿಯರ ಬಂಧನ: ಕಪಿಲ್ ಮಿಶ್ರಾ ಮೇಲೆ ಕ್ರಮ ಏಕಿಲ್ಲ?


