ಈಶಾನ್ಯ ದೆಹಲಿಯ ಹಿಂಸಾಚಾರದಲ್ಲಿ 42 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿಂಸಾಚಾರದಲ್ಲಿ ಹಲವು ಜೀವಹಾನಿಯಾಗಿದೆ. ಅಪಾರ ಪ್ರಮಾಣದ ಆಸ್ತಿ ಕಳೆದುಕೊಂಡಿದ್ದಾರೆ. ಹಿಂಸಾಚಾರದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಸೂಕ್ತ ಸಹಾಯ ಮಾಡಬೇಕು. ಈಶಾನ್ಯ ದೆಹಲಿಯಲ್ಲಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ನಡುವೆ ಹಿಂಸಾಚಾರದಲ್ಲಿ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಮೃತಪಟ್ಟಿರುವ ಸ್ಥಳಕ್ಕೆ ಫೋರೆನ್ಸಿಕ್ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಈಶಾನ್ಯ ದೆಹಲಿಯ ಚಂದ್ ಬಾಗ್ ಪ್ರಧೇಶಕ್ಕೆ ಭೇಟಿ ನೀಡಿರುವ ಫೋರೆನ್ಸಿಕ್ ತಂಡ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದೆ ಎಂದು ವರದಿಗಳು ತಿಳಿಸಿವೆ.
ಗುಪ್ತಚರ ವಿಭಾಗದ ಅಧಿಕಾರಿ ಸಾವಿಗೆ ಸ್ಥಳೀಯ ಆಮ್ ಆದ್ಮಿ ಪಕ್ಷದ ಮುಖಂಡ ತಹೀರ್ ಹುಸೇನ್ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ದ ಐಪಿಸಿ 302ರ ರೀತ್ಯ FIR ದಾಖಲಿಸಲಾಗಿದೆ.
ಮತ್ತೊಂದೆಡೆ ಈಶಾನ್ಯ ದೆಹಲಿಯ ಹಿಂಸಾಚಾರಕ್ಕೆ ಕಾಂಗ್ರೆಸ್ ಮುಖಂಡ ಇಶ್ರತ್ ಜಾಹನ್ ಕಾರಣ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಇಶ್ರತ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.


