ದೆಹಲಿಯ ವಾಯುಮಾಲಿನ್ಯ ‘ಗಂಭೀರ’ ಮಟ್ಟ ತಲುಪಿದ್ದು, ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ರಾಷ್ಟ ರಾಜಧಾನಿ ಪ್ರದೇಶದಾದ್ಯಂತ (ಎನ್‌ಸಿಆರ್) ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲ್ಯಾನ್ (ಜಿಆರ್‌ಎಪಿ) ಯ ಹಂತ IIIರ ಅಡಿ ನಿರ್ಬಂಧಗಳನ್ನು ಜಾರಿಗೊಳಿಸಿದೆ. ನಿರ್ಮಾಣ ಕಾರ್ಯಗಳು, ವಾಹನಗಳು ಮತ್ತು ಕೈಗಾರಿಕಾ ಕಾರ್ಯಾಚರಣೆಗಳ ಮೇಲೆ ವ್ಯಾಪಕವಾದ ನಿರ್ಬಂಧಗಳನ್ನು ವಿಧಿಸಲಾಗಿದೆ.
ಯಾವುದಕ್ಕೆಲ್ಲ ನಿರ್ಬಂಧ?
- ಅನಿವಾರ್ಯವಲ್ಲದ ನಿರ್ಮಾಣ ಮತ್ತು ಉರುಳಿಸುವಿಕೆ : ಮಣ್ಣಿನ ಕೆಲಸ, ಪೈಲಿಂಗ್, ತೆರೆದ ಕಂದಕ ನಿರ್ಮಾಣ, ವೆಲ್ಡಿಂಗ್, ಪೇಂಟಿಂಗ್, ಪ್ಲಾಸ್ಟರಿಂಗ್, ಟೈಲ್/ನೆಲಹಾಸು ಕೆಲಸ, ಆರ್‌ಎಂಸಿ ಸ್ಥಾವರಗಳು.
- ಡಾಂಬರು ಹಾಕದ ರಸ್ತೆಗಳಲ್ಲಿ ಸಿಮೆಂಟ್, ಮರಳು ಮತ್ತು ಹಾರುಬೂದಿಯಂತಹ ನಿರ್ಮಾಣ ಸಾಮಗ್ರಿಗಳ ಸಾಗಣೆ.
- ಕಲ್ಲು ಪುಡಿ ಮಾಡುವ ಯಂತ್ರಗಳು, ಇಟ್ಟಿಗೆ ಗೂಡುಗಳು ಮತ್ತು ಗಣಿಗಾರಿಕೆ ಚಟುವಟಿಕೆಗಳು.
- ಬಿಎಸ್-III ಪೆಟ್ರೋಲ್ ಮತ್ತು ಬಿಎಸ್-IV ಡೀಸೆಲ್ ನಾಲ್ಕು ಚಕ್ರಗಳ ವಾಹನಗಳು; ಅನಿವಾರ್ಯವಲ್ಲದ ಡೀಸೆಲ್-ಚಾಲಿತ ಮಧ್ಯಮ ಸರಕು ವಾಹನಗಳು; ಸಿಎನ್‌ಜಿ, ವಿದ್ಯುತ್ ಅಥವಾ ಬಿಎಸ್-VI ಮಾನದಂಡಗಳಲ್ಲಿ ಓಡದ ಅಂತರ-ರಾಜ್ಯ ಡೀಸೆಲ್ ಬಸ್‌ಗಳು.
- ಅನುಮೋದಿಸದ ಇಂಧನಗಳನ್ನು ಬಳಸುವ ಕೈಗಾರಿಕೆಗಳು.
ಯಾವುದಕ್ಕೆಲ್ಲ ಅವಕಾಶ?
- ಅಗತ್ಯ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವಾ ಯೋಜನೆಗಳು: ಮೆಟ್ರೋ, ರೈಲ್ವೆ, ವಿಮಾನ ನಿಲ್ದಾಣ, ಹೆದ್ದಾರಿ, ರಕ್ಷಣಾ, ಆರೋಗ್ಯ ರಕ್ಷಣೆ, ನೈರ್ಮಲ್ಯ ಯೋಜನೆಗಳು.
- ಕಟ್ಟುನಿಟ್ಟಾದ ಧೂಳು ನಿಯಂತ್ರಣ ಮತ್ತು ತ್ಯಾಜ್ಯ ನಿರ್ವಹಣೆಯೊಂದಿಗೆ ನಿರ್ಣಾಯಕ ಯೋಜನೆಗಳಿಗೆ ನಿರ್ಮಾಣ ಕಾರ್ಯ.
- ವಿನಾಯಿತಿ ಪಡೆದ ವಾಹನಗಳನ್ನು ಬಳಸುವ ಅಂಗವಿಕಲ ವ್ಯಕ್ತಿಗಳು.
- ಸಾರ್ವಜನಿಕ ಸಾರಿಗೆಗಳ ಬಳಕೆ ಮತ್ತು 5 ನೇ ತರಗತಿಯವರೆಗೆ ಹೈಬ್ರಿಡ್/ಆನ್‌ಲೈನ್ ಶಾಲಾ ತರಗತಿಗಳು
ಜಿಆರ್‌ಎಪಿ-IIIರ ಅಡಿಯಲ್ಲಿ, ಮಣ್ಣಿನ ಕೆಲಸ, ಪೈಲಿಂಗ್, ತೆರೆದ ಕಂದಕ ನಿರ್ಮಾಣ, ವೆಲ್ಡಿಂಗ್, ಪೇಂಟಿಂಗ್, ಪ್ಲಾಸ್ಟರಿಂಗ್, ಟೈಲ್ ಅಥವಾ ನೆಲಹಾಸು ಕೆಲಸ ಮತ್ತು ರೆಡಿ-ಮಿಕ್ಸ್ ಕಾಂಕ್ರೀಟ್ (ಆರ್‌ಎಂಸಿ) ಸ್ಥಾವರಗಳ ಕಾರ್ಯಾಚರಣೆ ಸೇರಿದಂತೆ ಎಲ್ಲಾ ಅನಿವಾರ್ಯವಲ್ಲದ ನಿರ್ಮಾಣ ಮತ್ತು ಕೆಡವುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಸಿಮೆಂಟ್, ಮರಳು ಮತ್ತು ಹಾರುಬೂದಿಯಂತಹ ವಸ್ತುಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಅನುಮೋದಿಸದ ಇಂಧನಗಳನ್ನು ಬಳಸುವ ಕೈಗಾರಿಕೆಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಲಾಗಿದೆ. ಕಲ್ಲು ಪುಡಿ ಮಾಡುವ ಯಂತ್ರಗಳು ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಮುಂದಿನ ಸೂಚನೆ ಬರುವವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.
ದೆಹಲಿ ಮತ್ತು ನೆರೆಯ ಎನ್‌ಸಿಆರ್ ಜಿಲ್ಲೆಗಳಾದ ಗುರುಗ್ರಾಮ, ಫರಿದಾಬಾದ್, ಗಾಝಿಯಾಬಾದ್ ಮತ್ತು ಗೌತಮ್ ಬುದ್ಧ ನಗರಗಳಲ್ಲಿ ಬಿಎಸ್-III ಪೆಟ್ರೋಲ್ ಮತ್ತು ಬಿಎಸ್-IV ಡೀಸೆಲ್ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಅಂಗವಿಕಲ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ.
ಅನಿವಾರ್ಯವಲ್ಲದ ಡೀಸೆಲ್ ಚಾಲಿತ ಮಧ್ಯಮ ಸರಕು ವಾಹನಗಳು ಮತ್ತು ಸಿಎನ್‌ಜಿ, ವಿದ್ಯುತ್ ಅಥವಾ ಬಿಎಸ್-VI ಮಾನದಂಡಗಳಲ್ಲಿ ಓಡದ ಅಂತರರಾಜ್ಯ ಡೀಸೆಲ್ ಬಸ್‌ಗಳು ಕೂಡ ರಾಜಧಾನಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಭಾರೀ ದಂಡವನ್ನು ತಪ್ಪಿಸಲು ನಾಗರಿಕರು ತ್ಯಾಜ್ಯವನ್ನು ಬಯಲಿನಲ್ಲಿ ಸುಡುವುದನ್ನು ತಪ್ಪಿಸಬೇಕು, ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಮತ್ತು ವಾಹನಗಳು ಮಾನ್ಯ ಪಿಯುಸಿ ಪ್ರಮಾಣಪತ್ರಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
0 ಯಿಂದ 50ರ ನಡುವಿನ ವಾಯುಗುಟ್ಟವನ್ನು ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ಅತೀ ಕಳಪೆ’ ಮತ್ತು 401 ರಿಂದ 500 ‘ತೀವ್ರ ಕಳಪೆ’ ಅಥವಾ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ದೆಹಲಿಯ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬುಧವಾರ (ನ.12) ಬೆಳಿಗ್ಗೆ 9 ಗಂಟೆಗೆ 414 ಆಗಿದ್ದು, ಬಹು ಮೇಲ್ವಿಚಾರಣಾ ಕೇಂದ್ರಗಳಲ್ಲಿ 400 ಅಂಕಗಳನ್ನು ದಾಟಿದೆ.


