ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ಸೋಮವಾರ (ಡಿಸೆಂಬರ್ 15) ‘ಅತ್ಯಂತ ಅಪಾಯಕಾರಿ’ (Severe Category)ಮಟ್ಟ ತಲುಪಿದೆ. ಸಂಪೂರ್ಣ ನಗರ ದಟ್ಟವಾದ ಹೊಗೆಯಿಂದ (ಮಂಜು ಮತ್ತು ಧೂಳಿನ ಪದರ) ಅವೃತ್ತವಾಗಿದೆ. ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 498ಕ್ಕೆ ತಲುಪಿದೆ.
ನಗರದ 40 ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳ ಪೈಕಿ 38 ‘ಗಂಭೀರ’ ವಾಯು ಗುಣಮಟ್ಟವನ್ನು ವರದಿ ಮಾಡಿದರೆ, ಎರಡು ಕೇಂದ್ರಗಳು ‘ಅತ್ಯಂತ ಕಳಪೆ’ ಮಟ್ಟವನ್ನು ದಾಖಲಿಸಿವೆ. ಜಹಾಂಗೀರ್‌ಪುರಿ ನಗರದ ಅತ್ಯಂತ ಕಲುಷಿತ ಪ್ರದೇಶ ಎಂದು ದಾಖಲಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, 401 ರಿಂದ 500ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ಅತ್ಯಂತ ಗಂಭೀರ’ ಎಂದು ವರ್ಗೀಕರಿಸಲಾಗಿದ್ದು, ಇದು ದೊಡ್ಡ ಮಟ್ಟದಲ್ಲಿ ಆರೋಗ್ಯ ಅಪಾಯಗಳನ್ನುಂಟು ಮಾಡುತ್ತದೆ.
ಭಾನುವಾರ ನಗರದ ಎಕ್ಯೂಐ 461ಕ್ಕೆ ಏರಿತ್ತು, ಇಂದು (ಸೋಮವಾರ) ಅದನ್ನೂ ಮೀರಿ 500 ಗಡಿ ತಲುಪಿದೆ. ಇದು ಈವರೆಗಿನ ಅತ್ಯಂತ ಕಲುಷಿತ ವಾಯುಗುಣಮಟ್ಟ ಎಂದು ವರದಿಯಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಮಾಲಿನ್ಯದ ಮಟ್ಟ ಮತ್ತಷ್ಟು ಉಲ್ಬಣಗೊಂಡಿದೆ.
ಕಡಿಮೆ ಮಟ್ಟದ ಗಾಳಿಯ ವೇಗ ಮತ್ತು ಕಡಿಮೆ ತಾಪಮಾನದಿಂದಾಗಿ ಮಾಲಿನ್ಯಕಾರಕಗಳು ಚದುರದೆ ಭೂಮಿಗೆ ಹತ್ತಿರವೇ ಬಂಧಿತವಾಗಿವೆ. ಇದರಿಂದಾಗಿ ದಟ್ಟವಾದ ಮಂಜು ಮತ್ತು ಧೂಳಿನ ಪದರ ನಗರವನ್ನು ಆವರಿಸಿದೆ. ವಜೀರ್‌ಪುರ್ ಮೇಲ್ವಿಚಾರಣಾ ಕೇಂದ್ರವು ದಿನದಲ್ಲಿ ಗರಿಷ್ಠ ಸಾಧ್ಯವಾದ ಎಕ್ಯೂಐ ಮಟ್ಟ 500 ದಾಖಲಿಸಿದೆ. ಇದರ ಮೇಲೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದತ್ತಾಂಶವನ್ನು ದಾಖಲು ಮಾಡುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಸ್ಥಿತಿಯನ್ನು ಸೂಚಿಸುತ್ತದೆ. ಮಾಲಿನ್ಯಕಾರಕಗಳು ತೀವ್ರವಾಗಿ ಕೇಂದ್ರೀಕೃತವಾಗಿರುವುದನ್ನು ತೋರಿಸುತ್ತದೆ.
ನಗರದ ಒಟ್ಟು ಎಕ್ಯೂಐ ಸುಮಾರು 493-498 ತಲುಪಿ ‘ತೀವ್ರ ಗಂಭೀರ’ ಮಟ್ಟದಲ್ಲಿದೆ. ರೋಹಿಣಿ, ಆಶೋಕ್ ವಿಹಾರ್, ಜಹಾಂಗೀರ್‌ಪುರಿಯಂತಹ ಪ್ರದೇಶಗಳಲ್ಲಿ ಕೂಡ ವಾಯುಗುಣಮಟ್ಟ 500ಕ್ಕೆ ಹತ್ತಿರ ತಲುಪಿದೆ.
ವಾಯು ಗುಣಮಟ್ಟದ ಪೂರ್ವ ಎಚ್ಚರಿಕೆ ವ್ಯವಸ್ಥೆ (ಎಕ್ಯೂಇಡಬ್ಲ್ಯುಎಸ್) ಪ್ರಕಾರ, ದೆಹಲಿಯ ಗಾಳಿಯ ಗುಣಮಟ್ಟವು ಸದ್ಯಕ್ಕೆ ‘ಗಂಭೀರ ಮಟ್ಟದಲ್ಲೇ’ ಉಳಿಯುವ ಸಾಧ್ಯತೆ ಇದೆ. ಮುಂದಿನ ಆರು ದಿನಗಳಲ್ಲಿ ಪರಿಸ್ಥಿತಿ ತುಂಬಾ ಕಳಪೆಯಾಗಿರಲಿದೆ.
ಹವಾಮಾನ ವೈಪರೀತ್ಯದಿಂದಾಗಿ, ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣವು ವಿಮಾನ ಕಾರ್ಯಾಚರಣೆಗಳಲ್ಲಿ ಸಂಭವನೀಯ ವಿಳಂಬದ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಿದೆ.
ದಟ್ಟವಾದ ಮಂಜು ಮತ್ತು ಧೂಳಿನಿಂದ ಕೂಡಿದ ಹೊಗೆ ನಗರವನ್ನು ಆವರಿಸಿದ್ದು, ಅನೇಕ ಕಡೆಗಳಲ್ಲಿ ಗೋಚರತೆ ಶೂನ್ಯಕ್ಕೆ ಇಳಿದಿದೆ. ಇಂಡಿಯಾ ಗೇಟ್, ಕರ್ತವ್ಯ ಪಥ, ಅಕ್ಷರಧಾಮ, ಬರಾಪುಲ್ಲಾ ಫ್ಲೈಓವರ್ ಸಂಪೂರ್ಣ ಮರೆಯಾಗಿವೆ. ಇದರಿಂದ ರಸ್ತೆ ಸಂಚಾರ ಮತ್ತು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಅನೇಕ ವಿಮಾನಗಳ ಹಾರಾಟ ವಿಳಂಬಗೊಂಡಿದೆ. ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವಿಮಾನ ಸ್ಥಿತಿ ಪರಿಶೀಲಿಸುವಂತೆ ಸಲಹೆ ನೀಡಿವೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ. ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಜಿಆರ್‌ಎಪಿ ಹಂತ 4 ಜಾರಿಗೊಳಿಸಲಾಗಿದೆ. ಇದರಡಿ ಹೆಚ್ಚಿನ ನಿರ್ಮಾಣ/ಧ್ವಂಸ ಕಾರ್ಯಗಳನ್ನು ನಿಷೇಧಿಸಲಾಗಿದೆ. ಅಗತ್ಯವಲ್ಲದ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಶಾಲೆಗಳು 11ರವರೆಗೆ ಹೈಬ್ರಿಡ್ ಮಾದರಿಯಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ.
ಕಲುಷಿತ ಗಾಳಿ ಹಿನ್ನೆಲೆ ಮಕ್ಕಳು ಮತ್ತು ಹಿರಿಯರು, ಉಸಿರಾಟ ಸಮಸ್ಯೆಗಳುಳ್ಳವರು ಅನಗತ್ಯವಾಗಿ ಹೊರಗಡೆ ಓಡಾಡದೆ ಮನೆಯೊಳಗೆ ಇರುವಂತೆ ಮತ್ತು ಮಾಸ್ಕ್/ಏರ್ ಪ್ಯೂರಿಫೈಯರ್ ಬಳಸುವಂತೆ ಸಲಹೆ ನೀಡಲಾಗಿದೆ.


