ಜನಸಂಖ್ಯಾಗನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಹೋರಾಟದ ಸೂಚನೆ ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಸಭೆ ನಡೆದಿದೆ.
ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ ರಾಜ್ಯದ ಇತರ ಹಿಂದುಳಿದ ವರ್ಗಗಳ ‘ಪ್ರವರ್ಗ–3ಎ’ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಮುಂಬರುವ ಜನವರಿ 23ರ ಒಳಗೆ ಶೇ 4 ರಿಂದ ಶೇ 12ಕ್ಕೆ ಹೆಚ್ಚಿಸ ಬೇಕು’ ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ. ಕಾಲಮಿತಿಯೊಳಗೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿ, “ಒಕ್ಕಲಿಗರೆಲ್ಲರೂ ಪಕ್ಷಭೇದ ಮರೆತು, ವೈಷಮ್ಯಗಳನ್ನು ಪಕ್ಕಕ್ಕಿಟ್ಟು ಪೂಜ್ಯರ ನಾಯಕತ್ವದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಒಕ್ಕಲಿಗರ ಮೀಸಲಾತಿ ವಿಚಾರವಾಗಿ ಎಲ್ಲರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲು ಈ ಸಭೆ ನಡೆಸಲಾಗುತ್ತಿದೆ. ಈ ಸಭೆ ನೋಡಿದ ನಂತರ ನನಗೆ ಒಂದು ಮಾತು ನೆನಪಾಗುತ್ತಿದೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಹೋರಾಟ ಮಾಡುವುದು ಯಶಸ್ಸು” ಎಂದಿದ್ದಾರೆ.
“ನಾವು ಹುಟ್ಟುವಾಗ ಇಂತಹುದೆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಹುಟ್ಟುವಾಗ ಉಸಿರು ಇರುತ್ತದೆ, ಆದರೆ ಹೆಸರು ಇರುವುದಿಲ್ಲ. ಸತ್ತಾಗ ಹೆಸರು ಇರುತ್ತದೆ, ಆದರೆ ಉಸಿರೇ ಇರುವುದಿಲ್ಲ. ಹುಟ್ಟು ಸಾವಿನ ಮಧ್ಯೆ ನಾವು ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋಗಬೇಕು” ಎಂದು ಆಶಿಸಿದ್ದಾರೆ.
“ನಮ್ಮ ತಂದೆ, ತಾಯಿಗಳಿಂದ ನಾವು ಒಕ್ಕಲಿಗ ಜಾತಿಯಲ್ಲಿ ಹುಟ್ಟಿ, ಬೆಳೆದು, ಸಂಘಟಿತರಾಗಿದ್ದೇವೆ. ಈ ವೇದಿಕೆಯಲ್ಲಿರುವ ನಮ್ಮೆಲ್ಲರನ್ನೂ ಸಮಾಜ ಹಾಗೂ ನಮ್ಮ ಪಕ್ಷದಲ್ಲಿ ಗುರುತಿಸುವುದೇ ಒಕ್ಕಲಿಗರು ಎಂದು. ನನ್ನನ್ನು ಕಾಂಗ್ರೆಸ್ ಪಕ್ಷ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಎಸ್.ಎಮ್. ಕೃಷ್ಣ ಅವರ ನಂತರ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ನನ್ನ ಸಂಘಟನೆಯ ಇತಿಹಾಸ ಒಂದು ಕಡೆಯಾದರೆ, ನಾನು ಒಕ್ಕಲಿಗ ಸಮುದಾಯದವನು ಎಂಬ ಕಾರಣಕ್ಕೆ ಆಯ್ಕೆ ಮಾಡಿರುವುದೂ ಮತ್ತೊಂದು ಸತ್ಯ” ಎಂದು ಹೇಳಿದ್ದಾರೆ.
“ಆರ್. ಅಶೋಕ್ ಸೇರಿದಂತೆ ಇಲ್ಲಿರುವ ಮಂತ್ರಿಗಳು ಈ ಸ್ಥಾನಕ್ಕೆ ಬರಲು ಕಾರಣ ಅವರು ಒಕ್ಕಲಿಗ ಸಮಾಜದ ಪ್ರತಿನಿಧಿಯಾಗಿರುವುದಕ್ಕೆ. ಇದನ್ನು ನಾವೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ನಾವು ನಮ್ಮ ಹಕ್ಕು ಕೇಳಲು ಇಲ್ಲಿ ನಿಂತಿದ್ದೇವೆ. ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ, ನಮ್ಮ ಸಮಾಜದ ಕಾನೂನು ತಜ್ಞರು ಅಧ್ಯಯನ ಮಾಡಿ, ಸ್ವಾಮೀಜಿಗಳ ಜತೆ ಚರ್ಚೆ ಮಾಡಿದ್ದಾರೆ. ನಾವು ಬೇರೆಯವರ ಹಕ್ಕನ್ನು ಕೇಳುತ್ತಿಲ್ಲ. ಈ ಸಮಾಜದ ಜನಸಂಖ್ಯೆ ಎಷ್ಟಿದೆಯೋ ಅದರ ಆಧಾರದ ಮೇಲೆ ನಮಗೆ ಮೀಸಲಾತಿ ನೀಡಿ ಎಂದು ಕೇಳುತ್ತಿದ್ದೇವೆ. ನಾವು ಯಾರಿಗೂ ತೊಂದರೆ ಮಾಡುವವರಲ್ಲ” ಎಂದಿದ್ದಾರೆ.
ಸಭೆಯಲ್ಲಿದ್ದ ಕಂದಾಯ ಸಚಿವ ಆರ್. ಅಶೋಕ ಅವರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಹಕ್ಕೊತ್ತಾಯದ ಮನವಿಯನ್ನು ನೀಡಿದರು. ‘ಮೀಸಲಾತಿ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ಒಕ್ಕಲಿಗ ಸಮುದಾಯದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಸಮುದಾಯದ ಪರವಾಗಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅಶೋಕ್ ಪ್ರತಿಕ್ರಿಯಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾ ನಂದನಾಥ ಸ್ವಾಮೀಜಿ ಮಾತನಾಡಿ, “ಈ ಸಭೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಇಲ್ಲ ಎಂದು ಯಾರೂ ಅಂದುಕೊಳ್ಳಬಾರದು. ಪಂಚರತ್ನ ಯಾತ್ರೆಯಲ್ಲಿರುವ ಕುಮಾರಸ್ವಾಮಿ, ನನ್ನ ಜೊತೆ 3–4 ಬಾರಿ ಮಾತನಾಡಿದ್ದಾರೆ. ದೇವೇಗೌಡರ ಆರೋಗ್ಯ ಇತ್ತೀಚೆಗೆ ಸ್ವಲ್ಪ ಏರುಪೇರಾಗುತ್ತಿದೆ. ಅವರು ಕೂಡಾ ಪತ್ರ ಬರೆದು ತಮ್ಮ ಬೆಂಬಲವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿರಿ: ಸಿಎಂ ಕಚೇರಿಯ ಮಹತ್ವದ ಕಡತಗಳನ್ನು ಇಲಿ, ಹೆಗ್ಗಣ ಕಚ್ಚಿಕೊಂಡು ಹೋದವೆ?: ಕಾಂಗ್ರೆಸ್ ಪ್ರಶ್ನೆ
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಮಾತನಾಡಿ, “ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆ ಶೇ 16ರಷ್ಟಿದೆ. ಆದರೆ, ಮೀಸಲಾತಿ ಶೇ 4ರಷ್ಟು ಮಾತ್ರ. ನಾಡಿಗೇ ಆಹಾರ ಭದ್ರತೆ ಕೊಟ್ಟಿರುವ ಸಮಾಜ ನಮ್ಮದು. ನಮ್ಮ ಸಮುದಾಯದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನಾಂಗದ ಹಿತದೃಷ್ಟಿಯಿಂದ ಸರ್ಕಾರ ನಮಗೆ ಮೀಸಲಾತಿ ಹೆಚ್ಚಿಸಬೇಕು. ಶೇ 15ರವರೆಗೂ ಮೀಸಲಾತಿ ಹೆಚ್ಚಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕು” ಎಂದು ಒತ್ತಾಯಿಸಿದರು.
ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, “ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರಸರ್ಕಾರ ಘೋಷಿಸಿರುವ ಶೇ 10 ಮೀಸಲಾತಿ ನಮ್ಮ ಸಮುದಾಯಕ್ಕೆ ಸಿಗದೇ ಅನ್ಯಾಯ ಆಗಿದೆ. ಡಿಸೆಂಬರ್ 9 ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ದೇವೇಗೌಡರ ನೇತೃತ್ವದಲ್ಲಿ, ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ” ಎಂದು ಭರವಸೆ ನೀಡಿದ್ದಾರೆ.


