Homeಮುಖಪುಟಪ್ರಜಾಪ್ರಭುತ್ವವನ್ನು ಕಾಡುತ್ತಿರುವ ತ್ರಿಬ್ಬಂದಿತನ

ಪ್ರಜಾಪ್ರಭುತ್ವವನ್ನು ಕಾಡುತ್ತಿರುವ ತ್ರಿಬ್ಬಂದಿತನ

- Advertisement -
- Advertisement -

| ವಿ. ನಟರಾಜ್ |

ಹುಲಿಯನ್ನು ಬೋನಿನಿಂದ ಹೊರಗೆ ಬಿಟ್ಟು ಕಡೆಗೆ ರಕ್ಷಣೆಗಾಗಿ ತಾವೇ ಬೋನಿನೊಳಗೆ ಹೊಕ್ಕಿ ಕೂತಂತಿದೆ ಪ್ರಜಾಪ್ರಭುತ್ವದ ಪ್ರಸಕ್ತ ಸ್ಥಿತಿ. ಇದೆಲ್ಲಕ್ಕೂ ‘ಕಳಶ’ವಿಟ್ಟಂತೆ ‘ಬೌದ್ಧಿಕ ವಲಯ’ವನ್ನು ಅಪಹಾಸ್ಯದ, ಅವಜ್ಞೆಯ ಸರಕನ್ನಾಗಿಸಿಕೊಂಡಿರುವ ಆಧುನಿಕ ಸಮಾಜ ತೆಳುಗ್ರಹಿಕೆಗಳು, ಪೊಳ್ಳು ಹಾಗೂ ತೋರಿಕೆಯ ಮಾತುಗಳಿಗೆ ಬಲಿಬಿದ್ದು ತನ್ನ ಸಮಸ್ಯೆಗಳನ್ನು ಸಹ ಪ್ರಾಮಾಣಿಕವಾಗಿ ದಿಟ್ಟಿಸಿಕೊಳ್ಳುವಲ್ಲಿ ಸೋಲುತ್ತಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಜಾಗತಿಕವಾಗಿ ಸಂಭವಿಸಿರುವ ರಾಜಕೀಯ, ಸಾಮಾಜಿಕ, ಆರ್ಥಿಕ ಪಲ್ಲಟಗಳು ಹತ್ತು ಹಲವು ಬಗೆಯ ವ್ಯಾಖ್ಯಾನಗಳಿಗೆ ಕಾರಣವಾಗಿವೆ. ಸಮತಾವಾದ, ಸಮಾಜವಾದ, ಪ್ರಜಾಪ್ರಭುತ್ವವಾದಗಳೆಲ್ಲ ತಾವು ಹುಟ್ಟುಹಾಕಿದ ನಿರೀಕ್ಷೆಗಳ ಭಾರದಲ್ಲಿ ತಾವೇ ಕುಸಿದು ಕಡೆಗೆ ತಮ್ಮದೇ ಆದ ಅಚ್ಚುಗಳಲ್ಲಿ ಹೊಸತಾಗಿ ರೂಪುತಳೆದ ಸರ್ವಾಧಿಕಾರದತ್ತ ಹೊರಳಿಕೊಳ್ಳತೊಡಗಿವೆ. ಪ್ರಜಾಪ್ರಭುತ್ವವಂತೂ ಹತ್ತು ಹಲವು ವಿರೋಧಾಭಾಸಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡು ಕುದಿಕೆಂಡವಾಗತೊಡಗಿದೆ. ಪ್ರಜಾಪ್ರಭುತ್ವದ ಕೇಂದ್ರದಲ್ಲಿ ಇಂದು ಪ್ರಜೆಗಳಿಲ್ಲ; ಬದಲಿಗೆ ಮಾರುಕಟ್ಟೆಯ ಹಿತಾಸಕ್ತಿಗಳಿವೆ. ಇಷ್ಟು ಮಾತ್ರವೇ ಅಲ್ಲದೆ, ಪ್ರಜಾಪ್ರಭುತ್ವವೆನ್ನುವುದು ಪ್ರತಿನಿಧಿಸಬೇಕಿದ್ದ ಮುಕ್ತ ಚಿಂತನೆ, ಅಭಿವ್ಯಕ್ತಿ, ಸಮಸಮಾಜ ನಿರ್ಮಾಣದ ಕನಸುಗಳ ಜಾಗದಲ್ಲಿ ಉಗ್ರ ರಾಷ್ಟ್ರೀಯವಾದ, ಬಲಪಂಥೀಯತೆ, ಮೂಲಭೂತವಾದ, ಜನಾಂಗೀಯವಾದಗಳು ಬಲಗೊಳ್ಳುತ್ತಿವೆ.

ಪ್ರಭುತ್ವ ಮತ್ತು ಮಾರುಕಟ್ಟೆಯ ನಡುವಿನ ಅತಿಸಂಧಾನವು ಸಮುದಾಯ ಮತ್ತು ಸಮಾಜವನ್ನೇ ಮರೆತುಬಿಟ್ಟಿದೆ. ಪ್ರಜಾಪ್ರಭುತ್ವದ ಭಿತ್ತಿಯಲ್ಲಿ ಬಂಡವಾಳಶಾಹಿ ವ್ಯವಸ್ಥೆ, ಮುಕ್ತ ಮಾರುಕಟ್ಟೆ, ಜಾಗತೀಕರಣದಂತಹ ಅಂಶಗಳು ಒಂದು ಬದಿಯಲ್ಲಿ ಹರಳುಗಟ್ಟಿದ್ದರೆ, ಮತ್ತೊಂದೆಡೆ ಉಗ್ರ ರಾಷ್ಟ್ರೀಯವಾದ, ಬಲಪಂಥೀಯತೆ, ಮೂಲಭೂತವಾದಗಳು ತಲೆ ಎತ್ತಿವೆ. ಮುಕ್ತ ಆರ್ಥಿಕ ಹಾಗೂ ಉದ್ಯೋಗ ನೀತಿಗಳು ಸ್ಥಳೀಯವಾಗಿ ಉದ್ಯೋಗನಾಶಕ್ಕೆ, ಉತ್ಪಾದನಾ ಹಿಂಜರಿತಕ್ಕೆ ಕಾರಣವಾದ ಪರಿಣಾಮ ಅಮೆರಿಕವೂ ಸೇರಿದಂತೆ ಹಲವು ರಾಷ್ಟ್ರಗಳು ರಕ್ಷಣಾತ್ಮಕ ಆರ್ಥಿಕ ಕ್ರಮಗಳಿಗೆ ಇಂದು ಮುಂದಾಗಿವೆ. ಹೀಗೆ ಪ್ರಜಾಪ್ರಭುತ್ವದ ಚೌಕಟ್ಟಿನಡಿ ಹತ್ತುಹಲವು ವಿರೋಧಾಭಾಸಗಳು ಕಂಡುಬರುತ್ತಿವೆ. ಹುಲಿಯನ್ನು ಬೋನಿನಿಂದ ಹೊರಗೆ ಬಿಟ್ಟು ಕಡೆಗೆ ರಕ್ಷಣೆಗಾಗಿ ತಾವೇ ಬೋನಿನೊಳಗೆ ಹೊಕ್ಕಿ ಕೂತಂತಿದೆ ಪ್ರಜಾಪ್ರಭುತ್ವದ ಪ್ರಸಕ್ತ ಸ್ಥಿತಿ. ಇದೆಲ್ಲಕ್ಕೂ ‘ಕಳಶ’ವಿಟ್ಟಂತೆ ‘ಬೌದ್ಧಿಕ ವಲಯ’ವನ್ನು ಅಪಹಾಸ್ಯದ, ಅವಜ್ಞೆಯ ಸರಕನ್ನಾಗಿಸಿಕೊಂಡಿರುವ ಆಧುನಿಕ ಸಮಾಜ ತೆಳುಗ್ರಹಿಕೆಗಳು, ಪೊಳ್ಳು ಹಾಗೂ ತೋರಿಕೆಯ ಮಾತುಗಳಿಗೆ ಬಲಿಬಿದ್ದು ತನ್ನ ಸಮಸ್ಯೆಗಳನ್ನು ಸಹ ಪ್ರಾಮಾಣಿಕವಾಗಿ ದಿಟ್ಟಿಸಿಕೊಳ್ಳುವಲ್ಲಿ ಸೋಲುತ್ತಿದೆ.

ಪ್ರಜಾಪ್ರಭುತ್ವ ಹಾಗೂ ಜಾಗತೀಕರಣವನ್ನು ಆವರಿಸಿಕೊಂಡಿರುವ ವಿರೋಧಾಭಾಸಗಳ ಕುರಿತಾಗಿ ಜಾಗತಿಕವಾಗಿ ಬೌದ್ಧಿಕ ಹಾಗೂ ಅಕೆಡೆಮಿಕ್ ವಲಯಗಳಲ್ಲಿ ಅನೇಕ ಜಿಜ್ಞಾಸೆಗಳು, ಚರ್ಚೆಗಳು ನಡೆದಿವೆ. ಇದರಲ್ಲಿ ಪ್ರಮುಖವಾದ ಕೆಲವೊಂದು ಅಂಶಗಳನ್ನು ಭಾರತದ ಸನ್ನಿವೇಶದಲ್ಲಿ ಗಮನಿಸುವುದು ಉತ್ತಮ. ಮೊದಲಿಗೆ, ‘ತ್ರಿವಳಿ ವಿರೋಧಾಭಾಸ’ ಎಂದೇ ಕರೆಯಲಾಗುವ ‘ಗ್ಲೋಬಲೈಸೇಷನ್ ಟ್ರಿಲೆಮಾ’ ಅಥವಾ ‘ಜಾಗತೀಕರಣದ ತ್ರಿಬ್ಬಂದಿತನ’ವನ್ನು ಇಲ್ಲಿ ಗಮನಿಸಬಹುದು. ಹಾರ್ವರ್ಡ್ ವಿಶ್ವವಿದ್ಯಾಲಯದ ಅಭಿವೃದ್ಧಿ ಹಾಗೂ ರಾಜಕೀಯ ಆರ್ಥಿಕತೆಯ ತಜ್ಞರಾದ ಡ್ಯಾನಿ ರೋಡ್ರಿಕ್ ಅವರು ಜಾಗತೀಕರಣದ ಈ ತ್ರಿವಳಿ ವಿರೋಧಾಭಾಸ ಅಥವಾ ಜಾಗತೀಕರಣದ ತ್ರಿಬ್ಬಂದಿತನವನ್ನು ಹೀಗೆ ಸಂಕ್ಷೇಪಿಸುತ್ತಾರೆ: “ರಾಷ್ಟ್ರೀಯ ಸಾರ್ವಭೌಮತ್ವ (National Sovereignty), ವ್ಯಾಪಕ ಜಾಗತೀಕರಣ (Hyper Globalisation) ಮತ್ತು ಪ್ರಜಾಪ್ರಭುತ್ವ (Democracy) ಈ ಮೂರನ್ನೂ ಒಟ್ಟಾಗಿ ಯಾವುದೇ ದೇಶ ಹೊಂದಲು ಸಾಧ್ಯವಿಲ್ಲ; ಇವುಗಳಲ್ಲಿ ಯಾವುದಾದರೂ ಎರಡನ್ನು ಮಾತ್ರವೇ ಅವು ನಿರಂತರವಾಗಿ ಹೊಂದಬಹುದು”. ಭಾರತ ಮತ್ತು ಅಮೆರಿಕವೂ ಸೇರಿದಂತೆ ಪ್ರಜಾಪ್ರಭುತ್ವವನ್ನು ಹೊಂದಿರುವ ಅನೇಕ ದೇಶಗಳು ಇಂದು ಈ ತ್ರಿಬ್ಬಂದಿತನದೊಳಗೆ ಸಿಲುಕಿರುವುದನ್ನು ನಾವು ಗುರುತಿಸಬಹುದು. ವ್ಯಾಪಕ ಜಾಗತೀಕರಣವೆನ್ನುವುದು ಆರ್ಥಿಕ ಸಂಕಷ್ಟಗಳು, ವರ್ಗ ಕಂದರಗಳೊಟ್ಟಿಗೇ ಸ್ಥಳೀಯ ಹಿತಾಸಕ್ತಿಗಳನ್ನು ಮರೆಮಾಚುತ್ತಾ, ಜನಸಾಮಾನ್ಯರ ಹಕ್ಕಾದ ಘನತೆಯ ಹಾಗೂ ಬಡತನರಹಿತ ಜೀವನದ ಸಾಧ್ಯತೆಗಳನ್ನು ಅಳಿಸಿಹಾಕುತ್ತಿದೆ. ಜಾಗತೀಕರಣ ಸೃಷ್ಟಿ ಮಾಡಲಿರುವ ಅವಕಾಶಗಳು ವ್ಯಾಪಕ ಸಂಪತ್ತಿನ ಹೆಚ್ಚಳಕ್ಕೆ ಎಡೆಮಾಡಲಿದ್ದು ಅದು ಜನಸಾಮಾನ್ಯರ ಬದುಕಿನಲ್ಲಿ ಗುಣಾತ್ಮಕವಾದ ಪರಿವರ್ತನೆಗಳಿಗೆ ಕಾರಣವಾಗಲಿವೆ ಎನ್ನುವ ಮಾತುಗಳು ಇಂದು ಪೂರ್ಣ ಪ್ರಮಾಣದಲ್ಲಿ ಸತ್ಯವಾಗಿ ಉಳಿದಿಲ್ಲ. ಜಾಗತೀಕರಣವೆನ್ನುವುದು ವಿಶ್ವದೆಲ್ಲೆಡೆ ಸಮಾನ ಅವಕಾಶಗಳು, ಸಂಪತ್ತಿನ ಸೃಷ್ಟಿಗೆ ಕಾರಣವಾಗುವ ಸಾಧ್ಯತೆಗಳು ಆರಂಭದಲ್ಲಿಯೇ ಇಲ್ಲವಾಗಿದ್ದವು. ಅದೇರೀತಿ, ಪ್ರತಿಯೊಂದು ದೇಶದ ಸಮಾಜದೊಳಗೂ ಸಹ ಜಾಗತೀಕರಣದ ಪ್ರಕ್ರಿಯೆಗಳು ಸಮಾನ ಅವಕಾಶ, ಸಂಪತ್ತಿನ ಸೃಷ್ಟಿಗೆ ಕಾರಣವಾಗುವಲ್ಲಿ ವಿಫಲವಾದವು. ಸಂಪತ್ತಿನ ಹೆಚ್ಚಳ ಅಗಾಧವಾಗಿಯೇ ಆಯಿತಾದರೂ, ಅಷ್ಟೇ ಪ್ರಮಾಣದಲ್ಲಿ ವರ್ಗ ಕಂದರವೂ ಆಳವಾಯಿತು. ಇದೇ ವೇಳೆ ಆಳುವ ಸರ್ಕಾರಗಳು ಖಾಸಗೀಕರಣದ ಪರವಾಗಿ ವ್ಯಾಪಕವಾಗಿ ನಿಂತ ಪರಿಣಾಮ ಜನತೆಯ ಮೂಲಭೂತ ಅವಶ್ಯಕತೆಗಳೆಡೆಗೆ ಸರ್ಕಾರದ ಸ್ಪಂದನ ಕಡಿಮೆಯಾಯಿತು. ಸಂಪತ್ತಿನ ಹೆಚ್ಚಳದಲ್ಲಿ ಉಂಟಾದ ವ್ಯತ್ಯಯಕ್ಕೆ ಅನುಗುಣವಾಗಿ ಈ ಸ್ಪಂದನ ಇರಲಿಲ್ಲ. ಇದು ಬಡವರ ಜೀವನವನ್ನು ಮತ್ತಷ್ಟು ಕಷ್ಟಕರವಾಗಿಸಿತು. ಉತ್ತಮ ಜೀವನ, ಉತ್ತಮ ಅವಕಾಶಗಳ ಸೃಷ್ಟಿಯಲ್ಲಿ ಹಣ ಮತ್ತು ಮಾರುಕಟ್ಟೆಯ ಪಾತ್ರವೇ ಪ್ರಮುಖವಾಗಿ ಸರ್ಕಾರದ ಪಾತ್ರ ಗೌಣವಾಗತೊಡಗಿತು. ಇದು ಮೂಲದಲ್ಲಿ ಪ್ರಜಾಪ್ರಭುತ್ವದ ಸಮಸಮಾಜದ ಆಶಯವನ್ನೇ ಬುಡಮೇಲು ಮಾಡಿದೆ.

ಈ ಗ್ರಹಿಕೆಗಳ ಹಿನ್ನೆಲೆಯಲ್ಲಿ ಡ್ಯಾನಿ ರೋಡ್ರಿಕ್ ಅವರು ವಿವರಿಸುವ ಜಾಗತೀಕರಣದ ಮುಬ್ಬಂದಿತನವನ್ನು ಗುರುತಿಸಬಹುದು. ರೋಡ್ರಿಕ್ ಅವರು ವಿವರಿಸುವಂತೆ, “ದೇಶವೊಂದು ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮತೆ ಇವೆರಡನ್ನೂ ಒಟ್ಟಾಗಿ ಹೊಂದಬಹುದು. ಹಾಗಾದ ಪಕ್ಷದಲ್ಲಿ ವ್ಯಾಪಕ ಜಾಗತೀಕರಣಕ್ಕೆ ಅಲ್ಲಿ ಸ್ಥಾನವಿರುವುದಿಲ್ಲ. ಇದಲ್ಲದೆ ಹೋದರೆ, ದೇಶವೊಂದು ಪ್ರಜಾಪ್ರಭುತ್ವ ಹಾಗೂ ವ್ಯಾಪಕ ಜಾಗತೀಕರಣಕ್ಕೆ ತನ್ನನ್ನು ಒಡ್ಡಿಕೊಳ್ಳಬಹುದು, ಹಾಗಾದಾಗ ಅದು ತನ್ನ ರಾಷ್ಟ್ರೀಯ ಸಾರ್ವಭೌಮತೆಯನ್ನು ಬಿಟ್ಟುಕೊಡಬೇಕಾಗುತ್ತದೆ. ಇನ್ನೂ ಒಂದು ಸಾಧ್ಯತೆ ಇದೆ, ಅದು ದೇಶವೊಂದು ಸಾರ್ವಭೌಮತ್ವ ಹಾಗೂ ವ್ಯಾಪಕ ಜಾಗತೀಕರಣ ಇವೆರಡನ್ನೂ ಹೊಂದುವುದು. ಹಾಗಾದಾಗ ಪ್ರಜಾಪ್ರಭುತ್ವದ ಹೊಣೆಗಾರಿಕೆಗಳಿಂದ ಅದು ನಿರ್ಗಮಿಸಬೇಕಾಗುತ್ತದೆ”. ಆಸಕ್ತ ಓದುಗರಿಗೆ, ವ್ಯಾಪಕ ಜಾಗತೀಕರಣ ಹಾಗೂ ಸಾರ್ವಭೌಮತ್ವ ಇವೆರಡೂ ಹೇಗೆ ಒಟ್ಟಿಗೆ ಹೋಗಲು ಸಾಧ್ಯ ಎನ್ನುವ ಪ್ರಶ್ನೆಯೊಂದು ಈ ಸಂದರ್ಭದಲ್ಲಿ ಮೂಡಬಹುದು. ಅದಕ್ಕೆ ಉತ್ತರ ಚೀನಾ. ಚೀನಾ ತನ್ನ ವ್ಯಾಪಕ ಜಾಗತೀಕರಣದ ನೀತಿಗಳಿಂದಾಗಿ ಕ್ಷಿಪ್ರ ಅವಧಿಯಲ್ಲಿ ಅಪಾರ ಪ್ರಮಾಣದ ಸಂಪತ್ತು ಹಾಗೂ ಅವಕಾಶಗಳ ಸೃಷ್ಟಿಗೇನೋ ಕಾರಣವಾಗಿದೆ. ಆದರೆ, ಅದರ ಈ ಮಾದರಿಯನ್ನು ಅರ್ಥಿಕ ತಜ್ಞರು ‘ಎಕ್ಸ್‍ಟ್ರ್ಯಾಕ್ಟಿವ್ ಗ್ರೋಥ್’ (Extractive Growth) ಎಂದು ಕರೆಯುತ್ತಾರೆ. ಅಂದರೆ, ಉಳ್ಳವರು ಮತ್ತೊಬ್ಬರನ್ನು ಶ್ರಮಕ್ಕೆ ಹಚ್ಚಿ ಸಂಪತ್ತನ್ನು ಸೃಷ್ಟಿಸಿ ಅದರ ಫಲವನ್ನು ತಾವು ಮಾತ್ರವೇ ಉಣ್ಣುವುದು. ಇಲ್ಲಿ, ಅಧಿಕಾರವೆನ್ನುವುದು ಅತಿಗಣ್ಯವರ್ಗವೊಂದರ ಕೈಯಲ್ಲಿರುತ್ತದೆ. ದೇಶದ ನೀತಿನಿರೂಪಣೆಗಳನ್ನು ಈ ವರ್ಗವು ರೂಪಿಸುವುದರಿಂದ ಅಲ್ಲಿ ಸಾಲಿನ ಕೊನೆಯಲ್ಲಿರುವ ವ್ಯಕ್ತಿಯ ಅಭಿಪ್ರಾಯಗಳಿಗೆ ಮನ್ನಣೆ ಇರುವುದಿಲ್ಲ. ಸಹಜವಾಗಿಯೇ ದೇಶದ ಬಹುಸಂಖ್ಯಾತ ಸಾಮಾನ್ಯರಿಗೆ ಆಯ್ಕೆಗಳೂ ಇರುವುದಿಲ್ಲ. ಇವರ ಶ್ರಮದ ಶೋಷಣೆಯೇ ಸಂಪತ್ತಿನ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ.

ಹಾಗಾಗಿಯೇ, ಅಭಿವೃದ್ಧಿ ಆರ್ಥಿಕತೆಯ (Developmental Economics) ಪರವಾಗಿರುವವರೆಲ್ಲರೂ ಡ್ಯಾನಿ ರೋಡ್ರಿಕ್ ಅವರ ಕಾಳಜಿಯನ್ನು ಸುಲಭವಾಗಿ ಗ್ರಹಿಸುತ್ತಾರೆ. ಮುಕ್ತ ಮಾರುಕಟ್ಟೆಯ ವಾದವನ್ನು ಎಂಭತ್ತರ ದಶಕದ ನಂತರ ಪ್ರಬಲವಾಗಿ ಮಂಡಿಸುತ್ತಾ ಬಂದ ಅದರ ಪರವಾದ ಅರ್ಥಶಾಸ್ತ್ರಜ್ಞರು ಮುಕ್ತ ಮಾರುಕಟ್ಟೆಗೆ ಎದುರಾಗುವ ಯಾವುದೇ ಅಡೆತಡೆಗಳನ್ನು, ದೇಶದ ಗಡಿ, ಸುಂಕಗಳನ್ನು ಏಕರೂಪವಾಗಿ ದಂಡಿಸುತ್ತಾ ಬಂದರು. ಬಡರಾಷ್ಟ್ರಗಳು, ಅಭಿವೃದ್ಧಿಶೀಲ ದೇಶಗಳು ಹಾಗೂ ಅಭಿವೃದ್ಧಿ ಹೊಂದಿರುವ ದೇಶಗಳೆಲ್ಲವೂ ಏಕ ಮಾದರಿಯ ಆರ್ಥಿಕ ನೀತಿಗಳನ್ನು, ಕ್ರಮಗಳನ್ನು ಅನುಸರಿಸಬೇಕೆನ್ನುವ ಇವರ ವಾದಗಳು, ಅದಕ್ಕೆ ಪೂರಕವಾಗಿ ಜಾಗತಿಕ ಅರ್ಥಿಕ ಸಂಘಟನೆಗಳು ಕೈಗೊಂಡ ಲಾಬಿಗಳು ಇಂದು ಬಡ ಮತ್ತು ಅಭಿವೃದ್ಧಿಶೀಲ ದೇಶಗಳನ್ನು ಊಹಿಸಲೂ ಕಷ್ಟಸಾಧ್ಯವಾದಂತಹ ಆರ್ಥಿಕ ಸಮಸ್ಯೆಗಳಿಗೆ, ಅಸಮಾನತೆಗಳಿಗೆ ದೂಡಿವೆ. ಇದರ ಪರಿಣಾಮವಾಗಿ ಈ ದೇಶಗಳು ಆರ್ಥಿಕ ಸವಾಲುಗಳನ್ನಷ್ಟೇ ಅಲ್ಲದೆ ಅದಕ್ಕೂ ಮಿಗಿಲಾದ ಸಾಮಾಜಿಕ, ಸಾಂಸ್ಕೃತಿಕ ಸವಾಲುಗಳಿಗೂ ಈಡಾಗಿವೆ. ಜಾಗತೀಕರಣದ ನಂತರದ ಕಾಲಘಟ್ಟದಲ್ಲಿ ಅಭಿವೃದ್ಧಿ ಎನ್ನುವುದು ಏಕೆ ಏಕಪ್ರಕಾರವಾಗಿಲ್ಲ? ಈ ಪ್ರಶ್ನೆ ಬಹುತೇಕ ಅರ್ಥಶಾಸ್ತ್ರಜ್ಞರನ್ನು ಚಿಂತನೆಗೆ ಹಚ್ಚಿದೆ. ಒಂದೇ ಭೌಗೋಳಿಕ ಪರಿಸರ, ಸಂಸ್ಕøತಿಗಳನ್ನು ಹಂಚಿಕೊಂಡಿರುವ ದೇಶಗಳು ಜಾಗತೀಕರಣಕ್ಕೆ ಒಡ್ಡಿಕೊಂಡ ನಂತರ ವಿರುದ್ಧ ದಿಕ್ಕಿನಲ್ಲಿ ಚಲಿಸಿರುವುದನ್ನು ನಾವು ಕಾಣಬಹುದು. ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳು, ಭಾರತ ಮತ್ತು ಪಾಕಿಸ್ತಾನಗಳನ್ನು ಇಲ್ಲಿ ಗಮನಿಸಬಹುದು. ಕೆಲವರ್ಷಗಳ ಹಿಂದೆ ಪ್ರಕಟವಾದ ಆರ್ಥಿಕತಜ್ಞರಾದ ಡರೋನ್ ಅಸೆಮೊಗ್ಲು ಹಾಗೂ ಜೇಮ್ಸ್ ಎ.ರಾಬಿನ್‍ಸನ್ ಅವರು ಒಗ್ಗೂಡಿ ಬರೆದ “ದೇಶಗಳು ಏಕೆ ಸೋಲುತ್ತವೆ?” (Why Nations Fail?) ಎನ್ನುವ ಕೃತಿ ಈ ಪ್ರಶ್ನೆಯನ್ನೇ ಪ್ರಮುಖವಾಗಿಸಿಕೊಂಡು ರೂಪುಗೊಂಡಿದೆ. ರಾಜಕೀಯ ಸಂರಚನೆಗಳು ಹಾಗೂ ಸಾಂಸ್ಥಿಕ ಸ್ವರೂಪಗಳು ಹೇಗೆ ದೇಶ ಹಾಗೂ ಅಲ್ಲಿನ ಜನರ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ, ಹೇಗೆ ಆ ದೇಶ ಗೆಲ್ಲುತ್ತದೆ, ಸೋಲುತ್ತದೆ ಎನ್ನುವುದನ್ನು ಈ ಕೃತಿಯಲ್ಲಿ ಲೇಖಕರು ಕಟ್ಟಿಕೊಡುತ್ತಾರೆ. ಅಸೆಮೊಗ್ಲು ಅವರು ಹೇಳುವ, “ಕೆಟ್ಟ ಸಾಂಸ್ಥಿಕ ರಚನೆಗಳು, ಕೆಟ್ಟ ನಾಯಕನನ್ನು ಮಾತ್ರವೇ ಬಲಪಡಿಸುತ್ತವೆ” ಎನ್ನುವ ಮಾತು ಇಲ್ಲಿ ಮುಖ್ಯ. ಪಾಕಿಸ್ತಾನ, ಉತ್ತರ ಕೊರಿಯಾದಂತಹ ದೇಶಗಳು ಇದಕ್ಕೆ ಒಂದು ರೀತಿಯಲ್ಲಿ ಉದಾಹರಣೆಯಾದರೆ, ನಮ್ಮ ದೇಶವನ್ನೇ ಗಮನಿಸುವುದಾದರೆ ಯಾವೆಲ್ಲ ಸಂದರ್ಭದಲ್ಲಿ ಸಂವಿಧಾನಾತ್ಮಕ ಸಾಂಸ್ಥಿಕ ಸ್ವರೂಪಗಳು, ರಚನೆಗಳು ತಮ್ಮ ಬುದ್ಧಿ ಹಾಗೂ ಜವಾಬ್ದಾರಿಗಳನ್ನು ಮರೆತಿವೆಯೋ ಆ ಸಂದರ್ಭಗಳೆಲ್ಲವೂ ದೇಶವನ್ನು ವಿಪತ್ತಿಗೆ ದೂಡಿದೆ ಎನ್ನುವುದನ್ನು ಮರೆಯಬಾರದು.

ಹಾಗಾದರೆ, ಜಾಗತೀಕರಣ, ಉದಾರೀಕರಣದ ಈ ಪ್ರಕ್ರಿಯೆಯಲ್ಲಿ ಉಂಟಾಗಿರುವ ಈ ಅಸಮತೋಲಿತ ಬೆಳವಣಿಗೆಯನ್ನು ನಿವಾರಿಸುವುದು ಹೇಗೆ? ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ ಮಾದರಿಯಿಂದ ಜನಪರ ಅಭಿವೃದ್ಧಿ ಮಾದರಿಯತ್ತ ಹೊರಳುವುದು ಹೇಗೆ? ಎನ್ನುವ ಪ್ರಶ್ನೆಗಳು ಇಲ್ಲಿ ಮೂಡುತ್ತವೆ. ಈ ಪ್ರಶ್ನೆಗೆ ಉತ್ತರ ಕಷ್ಟವಲ್ಲವಾದರೂ ಅದರ ಅನುಷ್ಠಾನಕ್ಕೆ ಬೇಕಾದ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಕಷ್ಟಸಾಧ್ಯವಾದದ್ದು. ಆರ್ಥಿಕ ತಜ್ಞ ಹಾಗೂ ರಿಸರ್ವ್ ಬ್ಯಾಂಕ್‍ನ ಮಾಜಿ ಮುಖ್ಯಸ್ಥರಾದ ರಘುರಾಮ್ ರಾಜನ್ ಅವರು ತಮ್ಮ ಇತ್ತೀಚಿನ ಕೃತಿ “ದ ಥರ್ಡ್ ಪಿಲ್ಲರ್”ನಲ್ಲಿ ಈ ಕುರಿತು ಅನೇಕ ಒಳನೋಟಗಳನ್ನು ನೀಡಿದ್ದಾರೆ. ಪ್ರಭುತ್ವ, ಮಾರುಕಟ್ಟೆ ಮತ್ತು ಸಮುದಾಯಗಳೆನ್ನುವ ಮೂರು ಮುಖ್ಯ ಸ್ತಂಭಗಳು ಹೇಗೆ ಒಂದು ಮತ್ತೊಂದರೊಡನೆ ವರ್ತಿಸುತ್ತಿವೆ; ಪ್ರಭುತ್ವ ಮತ್ತು ಮಾರುಕಟ್ಟೆಗಳು ಹೇಗೆ ಒಂದಕ್ಕೊಂದು ಆತುಕೊಂಡು ಬೆಳೆಯುತ್ತಾ ಸಮುದಾಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿವೆ ಎನ್ನುವುದನ್ನು ಈ ಕೃತಿ ಚರ್ಚಿಸುತ್ತದೆ. ಜಾಗತೀಕರಣದ ಸವಾಲುಗಳಿಗೆ ಎದುರಾಗಬೇಕೆಂದರೆ ಮಾರುಕಟ್ಟೆ ಪಕ್ಷಪಾತಿಯಾಗಿರುವ ಪ್ರಭುತ್ವವು ಅಭಿವೃದ್ಧಿಯ ಭಿತ್ತಿಯೊಳಗೆ ಸಮುದಾಯವನ್ನು ಮರಳಿ ಕೇಂದ್ರಕ್ಕೆ ತರಬೇಕಾದ ಅಗತ್ಯವನ್ನು ಈ ಕೃತಿ ವಿವರಿಸುತ್ತದೆ.

ಈ ಎಲ್ಲ ಚರ್ಚೆಗಳನ್ನು ಇಲ್ಲಿ ಹೆಕ್ಕಿರುವ ಪ್ರಮುಖ ಉದ್ದೇಶ, ಸಮಕಾಲೀನ ಭಾರತವು ಪ್ರಸಕ್ತ ತನ್ನ ಮುಂದಿರುವ ಆರ್ಥಿಕ ಹಿಂಜರಿತದ ಪರಿಸ್ಥಿತಿಯನ್ನು ಹೇಗೆ ಗ್ರಹಿಸಬೇಕು, ಗುಣಾತ್ಮಕವಾದ ದೀರ್ಘಕಾಲೀನ ಪರಿಹಾರಗಳಿಗೆ ಮುಂದಾಗಬೇಕು ಎನ್ನುವುದನ್ನು ವಿವರಿಸುವುದೇ ಆಗಿದೆ. ಬಂಡವಾಳ ಹೂಡಿಕೆ ಪರವಾದ ನೀತಿಗಳು, ಅರ್ಥವ್ಯವಸ್ಥೆಗೆ ಹಣದ ಮರುಪೂರಣ, ಬ್ಯಾಂಕ್‍ಗಳ ವಿಲೀನ ಇನ್ನೂ ಮುಂತಾದ ಕ್ರಮಗಳು ಪ್ರಸಕ್ತ ಸಮಸ್ಯೆಗೆ ತಾತ್ಕಾಲಿಕ ಶಮನವನ್ನು ಮಾತ್ರವೇ ನೀಡಬಹುದೇ ಹೊರತು ರಾಚನಿಕ ಬದಲಾವಣೆಗಳಿಗೆ ಕಾರಣವಾಗಲಾರದು. ಹಾಗೆ ನೋಡಿದರೆ, ಈ ಹಿಂದೆ ವಿವರಿಸಿದಂತೆ, “ಕೆಟ್ಟ ಸಾಂಸ್ಥಿಕ ರಚನೆಗಳು ಅಥವಾ ಸಾಂಸ್ಥಿಕ ರಚನೆಗಳ ಉನ್ನತ ಹುದ್ದೆಯಲ್ಲಿರುವವರ ಕೆಟ್ಟ ನಿರ್ಧಾರಗಳು ಕೆಟ್ಟ ನಾಯಕನನ್ನು, ಕೆಟ್ಟ ಆಡಳಿತವನ್ನು ಮಾತ್ರವೇ ಬಲಪಡಿಸಬಲ್ಲದು,” ಎನ್ನುವುದನ್ನು ಮರೆಯುವಂತಿಲ್ಲ. ಈ ಹಿಂದೆ ನಡೆದ ನೋಟು ಅಮಾನ್ಯೀಕರಣ, ಈಗ ತನ್ನಲ್ಲಿನ ಹೆಚ್ಚುವರಿ ಹಣವನ್ನು ವರ್ಗಾಯಿಸುವ ಹೆಸರಿನಲ್ಲಿ ನಡೆದಿರುವ ಹಣ ಮರುಪೂರಣಗಳೆರಡರಲ್ಲೂ ರಿಸರ್ವ್ ಬ್ಯಾಂಕ್‍ನಂತಹ ಜವಾಬ್ದಾರಿಯುತವೂ, ವಿಶ್ವಾಸಾರ್ಹವೂ ಆದ ಸಂಸ್ಥೆ ಇರಿಸಿದ ಹೆಜ್ಜೆಗಳನ್ನೂ ಸಹ ಮೇಲಿನ ಮಾತಿನ ಹಿನ್ನೆಲೆಯಲ್ಲಿ ನಾವು ಗಮನಿಸಬೇಕಾಗುತ್ತದೆ.

ಆರ್ಥಿಕ ಉದಾರೀಕರಣ, ಜಾಗತೀಕರಣಗಳು ಸೃಷ್ಟಿಸಿರುವ ಆರ್ಥಿಕ ಕಂದರ, ಇದರಿಂದ ಮೂಡಿರುವ ಸಾಮಾಜಿಕ ಕ್ಷೋಭೆ, ಹೊಸತಾಗಿ ಉದ್ಯೋಗಗಳು ಸೃಷ್ಟಿಯಾಗುವುದಿರಲಿ ಇರುವ ಉದ್ಯೋಗಗಳೇ ಕ್ಷಿಪ್ರವಾಗಿ ಕಾಣೆಯಾಗುತ್ತಿರುವ ಈ ಹೊತ್ತಿನಲ್ಲಿ ದಿಕ್ಕೆಟ್ಟಂತೆ ತೋರುತ್ತಿರುವ ಯುವಜನತೆ ಇವೆಲ್ಲವೂ ನಮ್ಮ ಕಣ್ಣಮುಂದಿನ ಸತ್ಯಗಳು. ಆದರೆ, ಇದೆಲ್ಲವನ್ನೂ ಮರೆಸಲೆನ್ನುವಂತೆ ಉಗ್ರ ರಾಷ್ಟ್ರೀಯತೆಯ ಹೆಸರಿನಲ್ಲಿ ಮೂಲಭೂತವಾದವನ್ನು ಬೆಳೆಸಲಾಗುತ್ತಿದೆ. ವರ್ಗ ಅಸಮಾನತೆಯ ಕಂದರವನ್ನು ಧಾರ್ಮಿಕ ಅಸಹಿಷ್ಣುತೆಯ ಅಂಧಕಾರದಲ್ಲಿ ಮರೆ ಮಾಡಲಾಗುತ್ತಿದೆ. ದಿಟ್ಟ ಚಿಂತನೆಗಳಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ರಾಷ್ಟ್ರೀಯ ಸಾರ್ವಭೌಮತೆಯ ಹೆಸರಿನಲ್ಲಿ ಉಗ್ರ ರಾಷ್ಟ್ರೀಯವಾದವು, ಅಭಿವೃದ್ಧಿಯ ಹೆಸರಿನಲ್ಲಿ ಧನಿಕ ಪಕ್ಷಪಾತಿಯಾದ ಜಾಗತೀಕರಣದ ಫಲಗಳು ಮಾತ್ರವೇ ಕಾಣಿಸುತ್ತಿವೆ. ಪ್ರಜಾಪ್ರಭುತ್ವವೆನ್ನುವುದು ಶಿಥಿಲಗೊಂಡಿದೆ. ಪ್ರಜಾಪ್ರಭುತ್ವವನ್ನು ಒತ್ತರಿಸಿ ಮೇಲಿನ ಎರಡಕ್ಕೂ ಹೆಚ್ಚು ಆಸ್ಪದ ಮಾಡಲಾಗಿದೆ. ಅದೇರೀತಿ, ಅಭಿವೃದ್ಧಿಯ ಚಕ್ರದ ಕೇಂದ್ರದಲ್ಲಿ ಆಯ್ದ ಕೆಲ ಬಂಡವಾಳಶಾಹಿಗಳು ಮಾತ್ರವೇ ಕೂತಿದ್ದು ಸಮುದಾಯದ ಹಿತಾಸಕ್ತಿಗಳು ಗೌಣವಾಗಿವೆ. ಹಾಗಾಗಿ ಇಲ್ಲಿ ಜನಪರವಾದ ಅಭಿವೃದ್ಧಿಯೆನ್ನುವುದು ಸಾಧ್ಯವಾಗಬೇಕಾದರೆ ಸರ್ಕಾರದ ಆದ್ಯತೆಗಳು, ಆಲೋಚನೆಗಳು ಸ್ಪಷ್ಟವಾಗಿ ಬದಲಾಗಬೇಕಿದೆ. ಉಗ್ರ ರಾಷ್ಟ್ರೀಯ ಮೂಲಭೂತವಾದದ ಜಾಗಕ್ಕೆ ವೈಚಾರಿಕ ಕಿಡಿಯುಳ್ಳ ಪ್ರಜಾಪ್ರಭುತ್ವವನ್ನೂ, ಧನಿಕಪರವಾದ ಜಾಗತೀಕರಣದ ಜಾಗಕ್ಕೆ ಬಹುಜನ ಕೇಂದ್ರಿತ ಅಭಿವೃದ್ಧಿ ಮಾದರಿಯನ್ನೂ ತರಬೇಕಿದೆ. ಇದಕ್ಕಾಗಿ ವ್ಯಾಪಕ ಜಾಗತೀಕರಣದಿಂದ ಹಿಂದೆ ಸರಿಯುವುದು ಅನಿವಾರ್ಯವಾಗಬಹುದು, ಜಿಡಿಪಿ ಲೆಕ್ಕಾಚಾರದ ಬೆಳವಣಿಗೆಗೆ ಬದಲಾಗಿ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಆದ್ಯತೆ ನೀಡುವ ಹೊರನೋಟಕ್ಕೆ ಅಷ್ಟೇನೂ ಆಕರ್ಷಕವೆನಿಸದ ನಿಜ ಅಭಿವೃದ್ಧಿ ಮಾದರಿಗಳಿಗೆ ಹೊರಳಬೇಕಾಗಬಹುದು. ಆದರೆ, ಇದೆಲ್ಲವೂ ಅತ್ಯಗತ್ಯ. ಏಕೆಂದರೆ, ಅಂತಿಮವಾಗಿ ಯಾವುದೇ ದೇಶದ ಸಂಪತ್ತು, ಆ ದೇಶದ ಜನತೆ ಹಾಗೂ ಅಲ್ಲಿನ ಸಮಾಜ ಪ್ರತಿನಿಧಿಸುವ ಮೌಲ್ಯಗಳು ಎನ್ನುವುದನ್ನು ನಾವು ಮರೆಯಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...