Homeಮುಖಪುಟಅಂದು ನೋಟುರದ್ದು, ಇಂದು ಮಹಾವಲಸೆ - ಬಡಜನತೆಯ ನಡು ಮುರಿದ ಮೋದಿ

ಅಂದು ನೋಟುರದ್ದು, ಇಂದು ಮಹಾವಲಸೆ – ಬಡಜನತೆಯ ನಡು ಮುರಿದ ಮೋದಿ

ಸಾವಿರಾರು ಕಿ.ಮೀ. ದೂರ ನಡೆಯಲಾರದೆ ದಣಿದು ಸತ್ತವರ ಸಂಖ್ಯೆ ಇಪ್ಪತ್ತು ದಾಟಿದೆ. ಹಸಿವಿನ ಸಾವುಗಳು ಕರೋನಾ ಮರಣಗಳನ್ನು ಹಿಂದಿಕ್ಕುವ ವಿನಾಶ ಎದುರಾಗದಿರಲಿ

- Advertisement -
- Advertisement -

ಸ್ವತಂತ್ರ ಭಾರತದ ಇತಿಹಾಸದಲ್ಲಿ ಈವರೆಗೆ ಕಂಡು ಬಾರದ ಮಹಾವಲಸೆ ಇದು. ದೇಶ ನಡೆಸುವವರು ಹೇರಿದ ದುರಂತ. ದೇಶದ ಖಾಲಿ ಹೆದ್ದಾರಿಗಳಲ್ಲಿ ಅನಾವರಣಗೊಂಡಿರುವ ಈ ಮಾನವ ದುರಂತ ದೃಶ್ಯಗಳಲ್ಲಿ ಕಾಲು ಸೋತ ಇನ್ನು ನಡೆಯಲಾರೆನಮ್ಮಾ ಎಂದು ತಾಯಿಯ ಕಾಲಬುಡದಲ್ಲಿ ಕುಸಿಯುತ್ತಿರುವ ಎಳೆಯ ಮಕ್ಕಳಿವೆ, ಮಕ್ಕಳೇ ಹೊತ್ತು ಸಾಗುತ್ತಿರುವ ಬೆನ್ನು ಬಾಗಿದ ವೃದ್ಧರಿದ್ದಾರೆ. ದುರ್ಬಲದೇಹಿಗಳಿದ್ದಾರೆ.

ಕೊರೋನಾ ಅಮರುವ ಭಯ, ಹಸಿವು, ನೋವು, ಖಿನ್ನತೆ, ಅನಾಥಭಾವ ಆವರಿಸಿರುವ ಈ ವಲಸೆಗಾರರನ್ನು ಮಾನವಘನತೆ ಇಲ್ಲದ ಹುಳು ಹುಪ್ಪಟಗಳಂತೆ, ಬೆಳೆಗೆ ಹತ್ತಿದ ಕೀಟಗಳಂತೆ ಕಾಣಲಾಗುತ್ತಿದೆ. ಸಾಮೂಹಿಕವಾಗಿ ನಿಲ್ಲಿಸಿ ಅವರ ಮೇಲೆ ನಂಜುಕಾರಕ ರಸಾಯನಿಕಗಳನ್ನು ಸಿಂಪಡಿಸುತ್ತಿರುವುದು ಅಮಾನುಷ. ಪೊಲೀಸರು ರಸ್ತೆ ರಸ್ತೆಗಳಲ್ಲಿ ಅವರನ್ನು ಚಿತ್ರಹಿಂಸೆಗೆ ಗುರಿ ಮಾಡತೊಡಗಿದ್ದಾರೆ. ಕಪ್ಪೆಯಂತೆ ಕುಪ್ಪಳಿಸುವ, ನಡುಬಗ್ಗಿಸಿ ಕಾಲುಗಳ ನಡುವಿನಿಂದ ಕೈ ತೂರಿಸಿ ಕಿವಿ ಹಿಡಿಸುವುದು, ಮನಸಿಗೆ ಬಂದಂತೆ ಥಳಿಸುವುದು, ವಾಚಾಮಗೋಚರವಾಗಿ ಬೈಯ್ಯುವುದು, ರಸ್ತೆಗಳ ಬದಿಯಲ್ಲೇ ಜೈಲುಗಳ ನಿರ್ಮಿಸಿ ಅವರನ್ನು ಒಳತಳ್ಳುವುದೆಲ್ಲ ಅವರ ಸುಡುಸಂಕಟದ ಗಾಯಗಳ ಮೇಲೆ ಉಪ್ಪು ಉಜ್ಜಿದಂತಲ್ಲವೇ? ನಮ್ಮದೇ ದೇಶದ ಪ್ರಜೆಗಳಲ್ಲವೇ ಅವರು, ಅವರು ಮಾಡಿದ ಅಪರಾಧವಾದರೂ ಏನು? ಫೆಬ್ರವರಿಯಿಡೀ ಟ್ರಂಪ್ ಸಾಹೇಬನಿಗೆ ನಡೆಮುಡಿ ಹಾಸುವುದರಲ್ಲೇ ಕಾಲ ಕಳೆದ ಸರ್ಕಾರ ತಡವಾಗಿ ಮಾರ್ಚ್ ತಿಂಗಳಲ್ಲಿ ಅಮಲಿನಿಂದ ಎಚ್ಚರಗೊಂಡು ಕರೋನಕ್ಕೆ ಕಣ್ಣು ತೆರೆದದ್ದು ಯಾರ ತಪ್ಪು? 21 ದಿನಗಳ ಸುದೀರ್ಘ ಲಾಕ್ ಡೌನ್ ಜಾರಿಗೆ ಬಡವರ ಬಂಧು, ಚಾಯ್ ವಾಲಾ ಎಂದು ತಮ್ಮನ್ನು ಬಣ್ಣಿಸಿಕೊಳ್ಳುವ ನರೇಂದ್ರ ಮೋದಿಯವರು ನೀಡಿದ ಕಾಲಾವಕಾಶ ಕೇವಲ ನಾಲ್ಕು ತಾಸು!

130 ಕೋಟಿ ಜನ ನಾಲ್ಕು ತಾಸುಗಳಲ್ಲಿ ಮುಚ್ಚಿದ ಕದಗಳ ಹಿಂದೆ ಮಾಯವಾಗಬೇಕು ಎಂದು ವಿಧಿಸುವುದು ಮಹಾಮೂರ್ಖತನ ಮತ್ತು ಎಣೆಯಿಲ್ಲದ ಕ್ರೌರ್ಯ. ಲಾಕ್‌ಡೌನ್ ತಪ್ಪಲ್ಲ. ಈ ತುದಿಯಿಂದ ಆ ತುದಿಯ ತನಕ ಸಾವಿರಾರು ಕಿ.ಮೀ.ಗಳ ದೂರವಿರುವ, ಅಂದಿನ ಗಳಿಕೆಯಲ್ಲೇ ಅಂದಿನ ಅನ್ನ ಬೇಯಿಸಿ ತಿಂದು ಜೀವಿಸಬೇಕಿರುವ ಜನರೇ ಬಹುಸಂಖ್ಯೆಯಲ್ಲಿರುವ ಈ ವಿಶಾಲದೇಶದಲ್ಲಿ ಮೂರು ವಾರಗಳ ಲಾಕ್‌ಡೌನ್ ಘೋಷಣೆಗೆ ಅಗತ್ಯವಿರುವ ಕನಿಷ್ಠ ಪೂರ್ವಸಿದ್ಧತೆಗಳನ್ನೂ ಮಾಡಿಕೊಳ್ಳದೆ ಹೋದದ್ದು ಘೋರ ಅಪರಾಧ. ಜನಸಾಮಾನ್ಯರ ಸಂಕಟಗಳಿಗೆ ಬೆನ್ನು ತಿರುಗಿಸುವ ವಿಕೃತ ದುಷ್ಟತನ. ಎಲ್ಲಿದ್ದರೆ ಅಲ್ಲಿಯೇ ಇದ್ದುಬಿಡಿ ಎಂದು ಆಣತಿ ಮಾಡಿಬಿಟ್ಟರೆ ಮುಗಿಯಿತೇ, ಇದ್ದಲ್ಲೇ ಇರಲು ಅವರಿಗೆ ಏರ್ಪಾಡುಗಳನ್ನು ಮಾಡಬೇಡವೇ? ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯರನ್ನು ವಾಪಸು ಕರೆತರಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ವಿಮಾನಗಳನ್ನು ಕಳಿಸಲಾಗುತ್ತದೆ. ಭಾರತದ ವಿಮಾನ ನಿಲ್ದಾಣಗಳಲ್ಲಿ ಇಳಿದ ಅವರನ್ನು ಕರೋನಾ ಸೋಂಕಿನ ಬಿಗಿ ಪರೀಕ್ಷೆಗೆ ಗುರಿ ಮಾಡದೆ ಬಿಟ್ಟು, ರೋಗ ಹರಡಲು ಕಾರಣವಾದದ್ದು ಅಪ್ಪಟ ಎಚ್ಚರಗೇಡಿತನ. ಈ ಎಚ್ಚರಗೇಡಿತನ, ಪೂರ್ವಸಿದ್ಧತೆ ಮಾಡಿಕೊಳ್ಳದ ಬೇಜವಾಬ್ದಾರಿತನಕ್ಕೆ ಅಮಾಯಕ ಜನಕೋಟಿಯನ್ನು ಶಿಕ್ಷಿಸುವುದು, ಒಂದು ಭಾರತದ ಕಣ್ಣಿಗೆ ಬೆಣ್ಣೆ ಮತ್ತು ಇನ್ನೊಂದು ಬಡಭಾರತದ ಕಣ್ಣಿಗೆ ಸುಣ್ಣ ಇಡುವುದು ಯಾವ ನ್ಯಾಯ ಮೋದಿಯವರೇ? ಗಾಣಿಗ ಅಯ್ಯೋ ಎಂದರೆ ನೆತ್ತಿ ತಂಪಾಗುವುದೇ ಎಂಬಂತೆ ಕ್ಷಮಿಸಿಬಿಡಿ ಎಂದು ಎರಡು ಮಾತುಗಳನ್ನು ತುಟಿ ಜಾರಿಸಿಬಿಟ್ಟರೆ ಈ ಘೋರ ಸಂಕಟ ಸರಣಿ ಮಾಯವಾಗುತ್ತದೆಯೇ? ಬೀದಿಗೆ ಬಿದ್ದಿರುವ ಈ ಜನಕೋಟಿ ನೀವು ವಿಧಿಸಿದ ‘ಸಾಮಾಜಿಕ ದೂರ’ವನ್ನು ಸಾಧಿಸುವುದು ಸಾಧ್ಯವೇ? ಮಹಾಮಾರಿಯನ್ನು ಬಾಗಿಲು ತೆರೆದು ಮತ್ತಷ್ಟು ಒಳಗೆ ಬಿಟ್ಟುಕೊಂಡಂತೆ ಆಗಲಿಲ್ಲವೇ?

ಇಂತಹ ಘೋರ ವಿಪತ್ತಿನ ದಿನಗಳಲ್ಲಿ ರಾಮಾಯಣ ಮಹಾಭಾರತ ಧಾರಾವಾಹಿಗಳನ್ನು ಮರುಪ್ರಸಾರ ಮಾಡುವುದನ್ನು ಮೂರ್ಖತನ ಎನ್ನುವುದೇ ಅಥವಾ ವಿಕೃತಿ ಎಂದು ಕರೆಯುವುದೇ ಅಥವಾ ಹಿಂಸಾ ವಿನೋದ ಎಂದು ಜರೆಯುವುದೇ? ತಮ್ಮ ಐಷಾರಾಮೀ ಬಂಗಲೆಗಳಲ್ಲಿ ಬೃಹತ್ ಟೀವಿ ತೆರೆಗಳ ಮೇಲೆ ಈ ಧಾರಾವಾಹಿಗಳನ್ನು ನೋಡುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಮಂತ್ರಿಗಳು, ಉಪಮುಖ್ಯಮಂತ್ರಿಗಳ ಚರ್ಮ ಅದೆಷ್ಟು ದಪ್ಪ ಇದ್ದೀತೆಂದು ಊಹಿಸಲು ಬಂದೀತೇ? ದೇಶದ ಆರೋಗ್ಯ ಮಂತ್ರಿ ಡಾ.ಹರ್ಷವರ್ಧನ ಅವರಂತೂ ಮನೆಯಲ್ಲಿ ಹಾವು ಏಣಿ ಆಟ ಆಡುವ ಛಾಯಾಚಿತ್ರವನ್ನು ಹಾಕಿಸಿಕೊಳ್ಳುತ್ತಾರೆ. ಲಕ್ಷೋಪಲಕ್ಷ ಕಾಲುಗಳು ಮೂಡಿದಂತೆ ದೇಶದ ನೂರಾರು ಹೆದ್ದಾರಿಗಳಿಗೆ ಹೆದ್ದಾರಿಗಳೇ ಗಾಯಗೊಂಡು ರಕ್ತಸ್ರವಿಸಿ ಹಸಿದು, ನೀರಡಸಿ ನಡೆಯತೊಡಗಿರುವ ಭಯಾನಕ ದುರಂತ ಈ ಕುರುಡರನ್ನು ಕಿವುಡರನ್ನು ಪಾಷಾಣಾ ಹೃದಯಿಗಳನ್ನು ತಟ್ಟುವುದು ಯಾವಾಗ?

ಮೊದಲು ಆಲೋಚಿಸಿ ಆನಂತರ ಕ್ರಿಯೆಗೆ ಇಳಿಯಬೇಕು. ಆದರೆ ಮೋದಿಯವರು ಕ್ರಿಯೆಗೆ ಇಳಿದು ಆನಂತರ ಆಲೋಚಿಸುತ್ತಾರೆ ಎನ್ನಲು ನೋಟು ರದ್ದು ಮತ್ತು ಈ ಲಾಕ್‌ಡೌನ್ ಉತ್ತಮ ಉದಾಹರಣೆಗಳು. ಇದ್ಯಾವ ಸೀಮೆಯ ನಾಯಕತ್ವ? ಎಲ್ಲದಕ್ಕೂ ಅಂತ್ಯವಿರುತ್ತದೆ ಎಂಬ ಮಾತೊಂದಿದೆ. ಬಡವರ ಮೂಗಿಗೆ ತುಪ್ಪ ಸವರಿ ದ್ವೇಷದ ರಾಜಕಾರಣದಲ್ಲಿ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಕ್ಕೂ ಒಂದು ತೀರುವಳಿ ದಿನಾಂಕ ಇದ್ದೇ ಇರುತ್ತದೆ. ಹೆಚ್ಚೆಂದರೆ ಆ ದಿನ ದೂರ ಇದ್ದೀತು. ಆದರೆ ಇರುವುದಂತೂ ನಿಶ್ಚಿತ.

ಚಿತ್ರಕೃಪೆ: ಅರವಿಂದ ತೆಗ್ಗಿನಮಠ

ಮುಂಚಿತವಾಗಿಯೇ ಮೈಕೊಡವಿ ಲಾಕ್‌ಡೌನ್ ತೇದಿಯನ್ನು ನಿಗದಿ ಮಾಡಿ ವಾರದೊಪ್ಪತ್ತು ಕಾಲಾವಕಾಶ ನೀಡಿದ್ದರೆ ಬಡಪಾಯಿಗಳು ಊರು ಸೇರಿಕೊಳ್ಳುತ್ತಿದ್ದರಲ್ಲ? ಭಾರತದಂತಹ ವಿಶಾಲ ದೇಶದ ಮಹಾನಗರಗಳಲ್ಲಿ ಹಬ್ಬಿ ಹೋಗಿರುವ ಯುಪಿ, ಮಧ್ಯಪ್ರದೇಶ, ಬಿಹಾರ, ಒಡಿಶಾ, ಝಾರ್ಖಂಡದ ವಲಸೆಗಾರರು ಊರು ಸೇರಿಕೊಳ್ಳಲು ನಾಲ್ಕು ತಾಸುಗಳು ಸಾಕೇನು?

ಕಳೆದ ಒಂದು ವಾರದ ಲಾಕ್ ಡೌನ್ ಭಾರತದ ಅಸಂಘಟಿತ ವಲಯದ ಕೋಟ್ಯಂತರ ಶ್ರಮಿಕರ ಬೆನ್ನುಮೂಳೆ ಮುರಿದಿದೆ. ಮುಂಬರುವ ದಿನಗಳು ಅವರ ಪಾಲಿಗೆ ಇನ್ನಷ್ಟು ಭೀಕರ ಆಗದಿರಲಿ ಎಂದು ಆಶಿಸೋಣ. ರೆಟ್ಟೆಯ ಬಲವನ್ನು ಕಾಲ ಕಸುವನ್ನೇ ನಂಬಿ ಹೊಟ್ಟೆ ಹೊರೆಯುವ ಜನಸಮೂಹವಿದು. ಒಂದರೊಡನೆ ಮತ್ತೊಂದು ಶಾಮೀಲಾಗಿರುವ ಆಳುವ ವರ್ಗ ಮತ್ತು ಮಧ್ಯಮ ಮೇಲ್ಮಧ್ಯಮ ವರ್ಗಗಳು ಬೆವರೇ ಬಂಡವಾಳವಾಗಿರುವ ಜನಕೋಟಿಯನ್ನು ಅದೆಷ್ಟು ನಿರ್ಲಕ್ಷ್ಯ ಮತ್ತು ಕ್ರೌರ್ಯದಿಂದ ನಡೆಸಿಕೊಳ್ಳುತ್ತಿವೆ ಎನ್ನಲು ಈ ಲಾಕ್ ಡೌನ್ ಬಹುದೊಡ್ಡ ನಿದರ್ಶನ.

 

ದುಡಿಮೆ, ಅನ್ನ, ಭದ್ರತೆ, ಸಾರಿಗೆ ಎಲ್ಲವುಗಳಿಂದ ವಂಚಿತರಾಗಿ ಸಾವಿರಾರು ಕಿ.ಮೀ.ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿರುವ ಈ ಜನರ ಹೊಟ್ಟೆಯ ಸಿಟ್ಟು ರೆಟ್ಟೆಗೆ ಬಂದರೆ ತಮ್ಮ ವಿನಾಶ ಖಚಿತ ಎಂಬ ಸುಡುಸತ್ಯವನ್ನು ಶೋಷಕ ವರ್ಗಗಳು ಅರಿಯಲಿ.

ಕೊರೋನಾ ಮಹಾ ಸಾಂಕ್ರಾಮಿಕದಿಂದ ಪಾರಾಗಲು ‘ಸಾಮಾಜಿಕ ದೂರ’ ಕಾಯ್ದುಕೊಳ್ಳಬೇಕೆಂಬುದು ವೈದ್ಯಕೀಯ ವಿಧಿ. ಈ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ಸವರ್ಣೀಯ ವರ್ಗವೊಂದು ಸಮರ್ಥಿಸಿಕೊಳ್ಳತೊಡಗಿರುವ ಹಳೆಯ ವಿಕಾರ ಮೇಲೆ ತೇಲಿದೆ. ಈ ದೇಶದ ಮನದಾಳದಲ್ಲಿ ಎಲ್ಲ ಕಾಲಕ್ಕೂ ಹುದುಗಿರುವ ಮನುವಾದಿ ಮಲದ ಬಾಹ್ಯ ಚಿಹ್ನೆಯಿದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಸುದ್ದಿಯನ್ನ ಕರೆ ಕರೆ ಹಾಕ್ರಪ್ಪ ಎಲ್ಲದಕ್ಕೂ ಕಾರಣ ಮೋದಿನೇ ನಿಮ್ಮ ಮನೆಯಲ್ಲಿ ಬೆಕ್ಕು ಮರಿ ಹಾಕಿದರೆ ಮೋದಿಯೇ ಕಾರಣ ನಿಜವಾದ ಸುದ್ದಿಯನ್ನು ಹಾಕಿ ಜನರನ್ನು ದಾರಿ ತಪ್ಪಿಸಬೇಡಿ

  2. This is completely baseless and brainless article. Without applying mind, without having any knowledge, without seeing what’s happening in other countries, writer has expressed his myopic view. Just 0.01 % of inconvenience caused to people who have left their places brainless has been blown out of proportion. Writer has no idea what would have happened if lock down was not implemented. Shame on people like to think and write publicly. Shame of the bloggers.

  3. This article brought light on the present situation and it is worsen by uneducated priministor and some of their politicians despite some of effective decisions by pm . Over this article brings all worst sides of this government

  4. ತೊಂದರೆಗಳು ಇದ್ದಾವೆ ಎಂದು ನಮಗೂ ಗೊತ್ತು.
    ನಾನು ಒಬ್ಬ ಡಾಕ್ಟರ್ ಆಗಿ ಸುಮಾರು ಬಾರಿ ಗಮನಿಸಿದ ಒಂದು ವಿಚಾರ: Emergency medical situation ನಲ್ಲಿ ಒಬ್ಬ ಡಾಕ್ಟರ್ ಮಾಡಿದ Treatment ಮೇಲೆ, ಎಲ್ಲಾ Normal ಆದಮೇಲೆ ಬೇರೆಯವರು ಅದರ ಮೇಲೆ Comment ಮಾಡಿದ ಹಾಗೆ.
    ಈಗಿನ ಪರಿಸ್ಥಿತಿಯಲ್ಲಿ Prospective suggestions ಕೊಡಿ. ಆದರೆ ಪರಿಣಾಮ ನಾವೂ ನೋಡುತ್ತೇವೆ.

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...