ಕೊರೊನಾ ಜಗತ್ತನ್ನು ನಮ್ಮ ಕಣ್ಣೆದುರಿಗೇ ಬಹಳ ಕ್ಷಿಪ್ರವಾಗಿ ಬದಲಿಸುತ್ತಿದೆ. ಜಾಗತಿಕವಾಗಿ ಎಲ್ಲ ಸರ್ಕಾರಗಳ ಹೊಣೆಗೇಡಿತನವನ್ನು, ಜನಹಿತವನ್ನು ಬಲಿಕೊಟ್ಟು ಲಾಭಕೋರತನವನ್ನು ಕೇಂದ್ರದಲ್ಲಿಟ್ಟುಕೊಂಡೇ ರೂಪಿಸಿಕೊಂಡು ಬಂದ ಜಗತ್ತಿನ ಬಹುತೇಕ ದೇಶಗಳ ತಪ್ಪು ಆದ್ಯತೆಗಳ ಪರಿಣಾಮವನ್ನು ಬಟಾಬಯಲು ಮಾಡಿದೆ. ಬಹುಮುಖ್ಯವಾಗಿ ಎಲ್ಲ ಯುದ್ಧೋನ್ಮಾದಿ ದೇಶಗಳಿಗೆ, ಸಮರೋತ್ಸಾಹಿ ಮನಸ್ಸುಗಳಿಗೆ ಜಗತ್ತಿನ ಮೂರನೇ ಮಹಾಯುದ್ಧವೆನ್ನುವುದು ಗಡಿಗಳಾಚೆಗಿನ ವೈರಿದೇಶಗಳ ವಿರುದ್ಧವಲ್ಲ, ಬದಲಿಗೆ ಜಾಗತಿಕವಾಗಿ ಸರ್ಕಾರಗಳು ಮರೆತ ಜನಹಿತದಿಂದಾಗಿ ಇಂದು ಎದುರಾಗಿರುವ ಅತ್ಯಂತ ಗಂಭೀರ ಸಮಸ್ಯೆಯ ವಿರುದ್ಧ ಎನ್ನುವುದು ಗೋಡೆಯ ಮೇಲಿನ ಬರಹದಂತೆ ಕಾಣುತ್ತಿದೆ.

ಸಾಂಕ್ರಾಮಿಕ ರೋಗಗಳಿಗೆ ಮನುಕುಲದಷ್ಟೇ ಇತಿಹಾಸವಿದೆ. ವೈರಸ್ಸುಗಳು ಜಗತ್ತಿನಾದ್ಯಂತ ವಿವಿಧ ಕಾಲಘಟ್ಟದಲ್ಲಿ ನಾಗರಿಕ ಸಮಾಜವನ್ನು ಕಂಗೆಡಿಸಿವೆ. ಕಾಲರಾ, ಮಲೇರಿಯಾ, ಪ್ಲೇಗ್ ನಂತಹ ರೋಗಗಳು ಮನುಕುಲಕ್ಕೆ ಮರ್ಮಾಘಾತ ಪೆಟ್ಟುಗಳನ್ನು ಈ ಹಿಂದೆಯೂ ನೀಡಿವೆ. ಇದೆಲ್ಲದರ ನಡುವೆಯೂ ಇಂದಿನ ಆಧುನಿಕ ನಾಗರಿಕತೆ, ಆಧುನಿಕ ವೈದ್ಯಕೀಯ ಸೇವೆಗಳು, ಸುಧಾರಿತ ಆರೋಗ್ಯ ವ್ಯವಸ್ಥೆ ಜಗತ್ತು ಇನ್ನು ಮುಂದೆ ಎಂತಹದ್ದೇ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ಎದುರಿಸಬಲ್ಲದು ಎನ್ನುವ ಹುಂಬ ಧೈರ್ಯವೊಂದನ್ನು ನೀಡಿತ್ತು. ಆದರೆ, ಜಗತ್ತಿನ ಎಲ್ಲ ರಾಷ್ಟ್ರಗಳು ವೈದ್ಯಕೀಯ ತುರ್ತುಪರಿಸ್ಥಿತಿಯೊಂದು ತಮ್ಮ ಮುಂದೆ ಎದುರಾದರೆ ಅದನ್ನು ನಿಭಾಯಿಸಲು ಹೇಗೆ ಸಜ್ಜಾಗಿವೆ, ನಮ್ಮ ನಾಗರಿಕ ಸರ್ಕಾರಗಳು ನಿಜಕ್ಕೂ ಆರೋಗ್ಯ ವ್ಯವಸ್ಥೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿವೆ ಎನ್ನುವುದನ್ನು ಕೊವಿಡ್-19 ಬಯಲು ಮಾಡಿದೆ.

ಜಗತ್ತಿನ ಬಹುತೇಕ ದೇಶಗಳು ಇಂದು ತಮ್ಮ ಶಸ್ತ್ರಾಸ್ತ್ರಗಳ ಗೋದಾಮುಗಳಿಂದ ತಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಹಲವು ಸಾವಿರ ರೂಪಾಯಿಗಳಿಂದ ಹಿಡಿದು, ಹಲವು ಲಕ್ಷ ರೂಪಾಯಿಗಳವರೆಗಿನ ಶಸ್ತ್ರಾಸ್ತ್ರಗಳನ್ನು ವಿತರಿಸುವಷ್ಟು ‘ಸಶಕ್ತ’ವಾಗಿವೆ, ವಿಪರ್ಯಾಸವೆಂದರೆ, ಜಗತ್ತಿನ ಯಾವುದೇ ಶಕ್ತಿಶಾಲಿ ದೇಶವೂ ಕೂಡ ತನ್ನ ಪ್ರಜೆಗಳಿಗೆ ಇಪ್ಪತ್ತು-ಮೂವತ್ತು ರೂಪಾಯಿಗಳಷ್ಟು ವೆಚ್ಚವಾಗುವ, ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಅತ್ಯವಶ್ಯಕವಾದ ಮಾಸ್ಕ್ಗಳನ್ನಾಗಲಿ, ಕೈಗವಸುಗಳನ್ನಾಗಲಿ, ಶುಚಿಗೊಳಿಸಲು ಅಗತ್ಯವಾದ ಸ್ಯಾನಿಟೈಸರ್‌ಗಳಾಗಲಿ ನೀಡಲಾರದಷ್ಟು ‘ದರಿದ್ರ’ವಾಗಿವೆ! ಜಗತ್ತಿನಲ್ಲಿ ಈವರೆಗೆ ಮಾರಿರುವ ಎಕೆ-47 ಬಂದೂಕಿನ ದುಡ್ಡೊಂದರಿAದಲೇ ಹೆಚ್ಚುಕಡಿಮೆ ಇಂದು ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅತ್ಯಂತ ಅಗತ್ಯವಾದ ವೆಂಟಿಲೇಟರ್‌ಗಳನ್ನು, ವಿವಿಧ ವೈದ್ಯಕೀಯ ಪರಿಕರಗಳನ್ನು, ಹತ್ತಾರು ಲಕ್ಷಗಳ ಸಂಖ್ಯೆಯಲ್ಲಿ ಉತ್ಪಾದಿಸಿ, ಉಚಿತವಾಗಿ ಜಗತ್ತಿನ ಎಲ್ಲ ಸಾಮುದಾಯಿಕ ಆರೋಗ್ಯ ಕೇಂದ್ರಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ರವಾನಿಸುವ ಸಾಧ್ಯತೆ ಇರುತ್ತಿತ್ತು.

ಜನಕಲ್ಯಾಣ ಕುರಿತ ಜಾಣ ಮರೆವು ತಂದಿತ್ತ ಜಾಗತಿಕ ಸಂಕಷ್ಟ!

ಕೊರೊನಾ ಜಾಗತಿಕವಾಗಿ ಏನೆಲ್ಲಾ ಸಾಮಾಜಿಕ, ಆರ್ಥಿಕ ಉತ್ಪಾತಗಳನ್ನು ಎಸಗಬಹುದು, ವಿಶೇಷವಾಗಿ ಭಾರತದಲ್ಲಿ ಅದು ಉಂಟುಮಾಡುವ ತಕ್ಷಣದ ಹಾಗೂ ದೂರಗಾಮಿ ಆರ್ಥಿಕ, ಸಾಮಾಜಿಕ ಪರಿಣಾಮಗಳೇನು ಎನ್ನುವುದನ್ನು ಗಮನಿಸುವುದಕ್ಕೂ ಮುನ್ನ, ಇಂತಹ ಸಾಂಕ್ರಾಮಿಕ ರೋಗವೊಂದನ್ನು ಎದುರಿಸಲು ಜಗತ್ತಿನ ಬಹುತೇಕ ರಾಷ್ಟ್ರಗಳು ವಿಫಲವಾಗಲು ಕಾರಣವಾಗುತ್ತಿರುವ ಅಂಶವನ್ನು ಮತ್ತಷ್ಟು ದಿಟ್ಟಿಸಿ ನೋಡುವ ಅವಶ್ಯಕತೆ ಇದೆ. ಯಾವುದೇ ನಾಗರಿಕ ಸರ್ಕಾರದ ಪಾಲಿಗೆ ತನ್ನ ನಾಗರಿಕರ ರಕ್ಷಣೆ ಎಂದರೆ ಅದು ಕೇವಲ ವೈರಿದೇಶಗಳಿಂದಲೋ, ಉಗ್ರರಿಂದಲೋ ಎದುರಾಗುವ ವಿಪತ್ತುಗಳನ್ನು ತಡೆಯುವುದು ಮಾತ್ರ ಎಂದಲ್ಲ, ಬದಲಿಗೆ, ನೈಸರ್ಗಿಕ ಉತ್ಪಾತಗಳು, ಜೈವಿಕ ಅವಘಡಗಳು ಹಾಗೂ ವಿವಿಧ ಸಾಮಾಜಿಕ ಸಮಸ್ಯೆಗಳಿಂದ ಉಂಟಾಗುವ ಕ್ಷೋಭೆಗಳನ್ನು ಸಮರ್ಥವಾಗಿ ಎದುರಿಸುವುದು, ಅವುಗಳ ಮೂಲವನ್ನು ಪತ್ತೆ ಹಚ್ಚಿ ಚಿಕಿತ್ಸಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳುವುದು ಎಂದರ್ಥ. ಯುದ್ಧಗಳಿಗೆ ಸನ್ನದ್ಧವಾಗಲು ತೋರುವ ಉತ್ಸಾಹದಲ್ಲಿ ಕನಿಷ್ಠ ಕಾಲು ಭಾಗವಾದರೂ ಮೇಲೆ ಹೇಳಿದ ಸಂಗತಿಗಳ ಬಗ್ಗೆ ಜಾಗತಿಕ ರಾಷ್ಟ್ರಗಳು ತಲೆಕೆಡಿಸಿಕೊಂಡಿದ್ದರೆ ಇಂದು ವಿಶ್ವ ಕೊರೊನಾ ವೈರಸ್ ವಿರುದ್ಧ ಇಷ್ಟು ಕಳಪೆಯಾಗಿ ತನ್ನ ‘ಶಕ್ತಿ’ ಪ್ರದರ್ಶನ ಮಾಡುತ್ತಿರಲಿಲ್ಲ. ಬೇರೆ ದೇಶಗಳ ಪರಿಸ್ಥಿತಿಯನ್ನು ಬಿಡಿ, ಜಗತ್ತಿನ ದೊಡ್ಡಣ್ಣ ಎಂದು ಬೀಗುವ, ಸದಾಕಾಲ ಯುದ್ಧೋನ್ಮಾದದಲ್ಲಿಯೇ ಕಾಲಕಳೆಯುವ ಅಮೆರಿಕದಂತಹ ದೇಶವೂ ಸಹ ಕೊರೊನಾ ಪೀಡಿತ ರೋಗಿಗಳಿಗೆ ಉಪಚರಿಸಲು ವೈದ್ಯರು ಬಳಸಲು ಅಗತ್ಯವಾದ ಧಿರಿಸುಗಳನ್ನು, ವೈದ್ಯಕೀಯ ಮಾಸ್ಕ್ ಗಳನ್ನು ಪೂರೈಸಲು ತಡಕಾಡುತ್ತಿದೆ. ನೆಲ, ಜಲ, ವಾಯು, ಅಂತರಿಕ್ಷ, ಸೈಬರ್ ಹೀಗೆ ಸಕಲ ಯುದ್ಧತಂತ್ರಗಳಲ್ಲಿಯೂ ತನ್ನನ್ನು ಮಣಿಸಲು ಸಾಧ್ಯವಿಲ್ಲ ಎಂದು ಬೀಗುವ ದೇಶವೊಂದು, ಜನಹಿತವನ್ನು ಕಡೆಗಣಿಸಿದ ತನ್ನ ದುರುಳ ವರ್ತನೆಯಿಂದಾಗಿ, ಮುಂದಾಲೋಚನೆ ಇಲ್ಲದ, ಹುಂಬ ವ್ಯಕ್ತಿಯೊಬ್ಬನನ್ನು ಅಧ್ಯಕ್ಷನನ್ನಾಗಿಸಿಕೊಂಡಿರುವ ಮೂರ್ಖತನದಿಂದಾಗಿ ಇಂದು ಕೊರೊನಾ ವಿರುದ್ಧದ ಸಮರದಲ್ಲಿ ಮಕಾಡೆ ಮಲಗಿದೆ.

ಯುದ್ಧಭೂಮಿಯೇ ಇರಲಿ, ರಾಜತಂತ್ರವೇ ಇರಲಿ ಸದಾಕಾಲ ವಿವಿಧ ರಣತಂತ್ರಗಳನ್ನು, ವ್ಯೂಹಗಳನ್ನು ಹೊಸೆಯುತ್ತಾ ಜಗತ್ತಿನ ಎಲ್ಲ ದೇಶಗಳನ್ನು ತನ್ನ ಅಣತಿಗೆ ತಕ್ಕಂತೆ ಕುಣಿಸುವ ಅಮೆರಿಕ ‘ಜೈವಿಕ ಯುದ್ಧ’ದಂತಹ ಭೀತಿಯನ್ನು ಊಹಿಸಿರಲಿಲ್ಲ ಎಂದು ನಂಬುವುದು ಹೇಗೆ? ಒಂದೊಮ್ಮೆ ಅರೋಗ್ಯ ಸಂಬಂಧಿತ ತುರ್ತುಪರಿಸ್ಥಿತಿಯೊಂದು ತನಗೆ ಎದುರಾದರೆ, ದೇಶಾದ್ಯಂತ ಕೆಲವೇ ವಾರಗಳ ಅಂತರದಲ್ಲಿ ಸೃಷ್ಟಿಯಾಗುವ ಗಂಭೀರ ವೈದ್ಯಕೀಯ ಸಮಸ್ಯೆಯನ್ನು ಹೇಗೆ ಎದುರುಗೊಳ್ಳಬೇಕು ಎನ್ನುವ ಬಗ್ಗೆ ಆಲೋಚಿಸಿರಲಿಲ್ಲ ಎಂದರೆ ನಂಬುವುದು ಹೇಗೆ? ಇದೆಲ್ಲವನ್ನೂ ಆಲೋಚಿಸಿಯೂ ಸಹ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚೆಚ್ಚು ಬಲಪಡಿಸಿದಷ್ಟೂ ಅದು ಖಾಸಗಿ ವೈದ್ಯಕೀಯ ರಂಗದ ಲಾಭಕೋರತನಕ್ಕೆ ಅಡ್ಡಿಯಾಗುತ್ತದೆ ಎನ್ನುವ ಬಂಡವಾಳಶಾಹಿ ಲಾಬಿಗಳಿಗೆ ಮಣಿದು ದುರಾಲೋಚನೆಯಿಂದಾಗಿ ಸುಮ್ಮನೆ ಉಳಿಯಿತೆ? ಒಂದಂತೂ ಸತ್ಯ, ಜಗತ್ತಿನ ಅತ್ಯಂತ ಬಲಾಢ್ಯ ದೇಶಗಳಿಂದ ಹಿಡಿದು, ನೆಲಹಿಡಿದಿರುವ ದೇಶಗಳವರೆಗೆ ಎಲ್ಲಿಯೂ ಜನಕೇಂದ್ರಿತ ಅಭಿವೃದ್ಧಿ, ಜನಪರ ನೀತಿಗಳೆನ್ನುವುದು ಆಡಳಿತದಲ್ಲಿ ಪ್ರಥಮ ಆದ್ಯತೆಯಾಗಿ ಮೂಡಲಿಲ್ಲ. ಅವೆಲ್ಲ ಕೇವಲ ತೋರಿಕೆಯ ಕ್ರಮಗಳಿಗಷ್ಟೇ ಸೀಮಿತವಾಗಿವೆ.

ಮತ್ತೊಂದು ತುರ್ತುಪರಿಸ್ಥಿತಿಗೆ ಮುನ್ನುಡಿಯೇ ಈ ಲಾಕ್‌ಡೌನ್?

ಇದಲ್ಲದೆ, ಕೊರೊನಾ ಇಂದು ಜಾಗತಿಕವಾಗಿ ಒಡ್ಡಿರುವ ಬಹುದೊಡ್ಡ ಪರೀಕ್ಷೆಯೆಂದರೆ, ಜಗತ್ತಿನ ಯಾವುದೇ ಸರ್ಕಾರಗಳು ಆಂತರ್ಯದಲ್ಲಿ ನಿಜಕ್ಕೂ ಎಷ್ಟು ಪ್ರಜಾಸತ್ತಾತ್ಮಕವಾಗಿವೆ ಎನ್ನುವುದುನ್ನು ಒರೆಗೆ ಹಚ್ಚಿರುವುದು. ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚಲು, ಜನರ ಹಿತವನ್ನು ಕೇವಲ ನೆಪವಾಗಿಸಿಕೊಂಡು, ಕೊರೊನಾದ ಈ ಜಾಗತಿಕ ಬಿಕ್ಕಟ್ಟಿನ ಸಂದರ್ಭವನ್ನು ಹೇಗೆ ಮುಂಬರುವ ದಿನಗಳಲ್ಲಿ ಜಗತ್ತಿನ ವಿವಿಧ ದೇಶಗಳ ನಾಯಕರು, ಸರ್ಕಾರಗಳು ದುರುಪಯೋಗ ಮಾಡಿಕೊಳ್ಳಲಿವೆ ಎನ್ನುವುದನ್ನು ಅಲ್ಪಕಾಲದಲ್ಲಿಯೇ ನಿಶ್ಚಿತವಾಗಿಯೂ ನಾವೆಲ್ಲರೂ ನೋಡಲಿದ್ದೇವೆ. ತಮ್ಮೊಳಗಿನ ಸುಪ್ತ ಸರ್ವಾಧಿಕಾರಿ ಧೋರಣೆಗಳನ್ನು, ನಿರಂಕುಶ ಪ್ರಭುತ್ವದೆಡೆಗಿನ ಸೆಳೆತವನ್ನು ವ್ಯಕ್ತಪಡಿಸಲು ಈ ಬಿಕ್ಕಟ್ಟಿನ ಸಂದರ್ಭವನ್ನು ವಿವಿಧ ದೇಶಗಳ ನಾಯಕರು ಬಳಸಿಕೊಂಡು ನಿಧಾನವಾಗಿ ಆ ದಿಕ್ಕಿಗೆ ತಮ್ಮ ದೇಶಗಳನ್ನು ತಳ್ಳುವುದನ್ನು ಬರುವ ದಿನಗಳಲ್ಲಿ ಕಾಣಲಿದ್ದೇವೆ. ಇದರ ಸೂಚನೆಗಳು, ಭಾರತವೂ ಸೇರಿದಂತೆ ಬಲಪಂಥೀಯ ಆಡಳಿತಗಳೆಡೆಗೆ ವಾಲಿರುವ ಬಹುತೇಕ ದೇಶಗಳಲ್ಲಿ ಇದಾಗಲೇ ಸಾಕಷ್ಟು ಸಮಯದಿಂದ ಕಂಡುಬರುತ್ತಿದೆ. ಕೊರೊನಾ ಎನ್ನುವುದು ಈ ದೇಶಗಳ ಪಾಲಿಗೆ ನಿರಂಕುಶ ಸರ್ವಾಧಿಕಾರಿ ಆಡಳಿತವನ್ನು ಮುಂದಿನ ದಿನಗಳಲ್ಲಿ ಹೇರಲು ಒದಗಿ ಬಂದಿರುವ ಅವಕಾಶವಾದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಅಂತಹ ಸನ್ನಿವೇಶಗಳು ಉದ್ಭವಿಸಬಹುದಾದ ಸಾಧ್ಯತೆಗಳನ್ನು ಭಾರತದ ಹಿನ್ನೆಲೆಯಲ್ಲಿ ಇಲ್ಲಿ ಗಮನಿಸಬಹುದು.

ಮೊದಲನೆಯದಾಗಿ, ಭಾರತ ಸರ್ಕಾರವು ಕೇವಲ ‘ನಾಲ್ಕು ಗಂಟೆಗಳಷ್ಟು ಕಡಿಮೆ ಸಮಯವನ್ನು ನಾಗರಿಕರಿಗೆ ನೀಡಿ’ ಲಾಕ್‌ಡೌನ್‌ಗೆ ಮುಂದಾದ ಬಗ್ಗೆ ಕೇವಲ ದೇಶದೊಳಗೆ ಮಾತ್ರವೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶ್ನೆಗಳೆದ್ದಿವೆ. ಬಿಜೆಪಿಯ ವಕ್ತಾರ ನಳಿನ್ ಕೊಹ್ಲಿಯವರ ಮುಂದೆ ಬಿಬಿಸಿ ಅಂತಾರಾಷ್ಟ್ರೀಯ ವಾಹಿನಿ ಇದೇ ಪ್ರಶ್ನೆಯನ್ನು ಇರಿಸಿತು. ಅಪಾರ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರನ್ನು ಹೊಂದಿರುವ ದೇಶವೊಂದು ನಾಲ್ಕು ಗಂಟೆಗಳ ಅತ್ಯಂತ ಕಡಿಮೆ ಸಮಯವನ್ನು ನೀಡಿ ಲಾಕ್‌ಡೌನ್‌ಗೆ ಮುಂದಾಗಿದ್ದು ಏಕೆ ಎಂದು ಪ್ರಶ್ನಿಸಿತು. ಲಾಕ್‌ಡೌನ್‌ನ ಉದ್ದೇಶವೇ ‘ಜನರ ಓಡಾಟವನ್ನು’ ತಡೆಯುವುದಾಗಿದೆ, ಹಾಗಾಗಿ, ಈ ಕ್ರಮ ಅನಿವಾರ್ಯ ಎಂದು ಕೊಹ್ಲಿ ವಿವರಿಸಿದರು. ಹಾಗಾದರೆ, ವಲಸೆ ಕಾರ್ಮಿಕರು ತಮಗೆ ಅನ್ನಾಹಾರಗಳು ಸಿಗುವುದಿಲ್ಲ ಎಂದು ಲಕ್ಷಾಂತರ ಸಂಖ್ಯೆಯಲ್ಲಿ ನಗರಗಳಿಂದ ನೂರಾರು ಕಿಮಿ ದೂರದ ತಮ್ಮ ಊರುಗಳಿಗೆ ಗುಳೆ ಹೊರಟಿದ್ದೇಕೆ? ಸರ್ಕಾರ ತನ್ನ ಸಂದೇಶವನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ವಿಫಲವಾಯಿತೇ? ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ಒದಗಿಸಲಿದ್ದೇವೆ ಎನ್ನುವುದನ್ನು ತಿಳಿಸಲು ಎಡವಿತೇ? ಎನ್ನುವ ಪ್ರಶ್ನೆಗಳನ್ನು ಕೇಳಿತು. ಇದಕ್ಕೆ ಸಮರ್ಪಕ ಉತ್ತರಗಳು ದೊರೆಯಲಿಲ್ಲ.

ಬಿಬಿಸಿಯ ವರದಿಯನ್ನು ಉಲ್ಲೇಖಿಸಲು ಇಲ್ಲಿ ಕಾರಣ, ತನ್ನ ಆಡಳಿತ ವೈಫಲ್ಯವನ್ನು ಪ್ರಶ್ನಿಸುವ ದೇಶೀಯ ಮಾಧ್ಯಮಗಳು, ಪ್ರಜ್ಞಾವಂತ ನಾಗರಿಕರನ್ನು ದೇಶದ್ರೋಹಿಗಳಂತೆ ನೋಡುವ ಗುಣವನ್ನು ನಮ್ಮ ಪ್ರಭುತ್ವ ಹಾಗೂ ಅದರ ಎಲ್ಲ ನಡೆಗಳನ್ನೂ ಬಲವಾಗಿ ಸಮರ್ಥಿಸುವ ದೇಶವ್ಯಾಪಿ ಆವರಿಸಿರುವ ಬಲಪಂಥೀಯ ಮನಸ್ಸುಗಳಿಗಿದೆ. ಲಾಕ್‌ಡೌನ್ ಆರಂಭವಾದ ನಂತರ ಈವರೆಗೆ ದೇಶದುದ್ದಗಲಕ್ಕೂ ಅದರ ಪರಿಣಾಮವಾಗಿ ಸಾವಿಗೀಡಾಗಿರುವ ಬಡ ಕಾರ್ಮಿಕರ ಸಂಖ್ಯೆ 20ಕ್ಕೂ ಹೆಚ್ಚು. ಕೆಲವರು ದೂರದೂರುಗಳಿಗೆ ನಡೆದೇ ತೆರಳುವಾಗ ಆಹಾರ, ನೀರಿಲ್ಲದೆ ನಿತ್ರಾಣದಿಂದ ಸಾವಿಗೀಡಾಗಿದ್ದರೆ, ಮತ್ತೆ ಕೆಲವರು ಅಪಘಾತಗಳಿಂದ ಸಾವಿಗೀಡಾಗಿದ್ದಾರೆ. ಇದರ ಹೊರತಾಗಿ, ತೀವ್ರ ಮದ್ಯಪಾನ ವ್ಯಸನದಿಂದ ನರಳುತ್ತಿರುವವರು ಸಹ ಮದ್ಯದ ಅಲಭ್ಯತೆಯಿಂದಾಗಿ ಒಮ್ಮೆಲೇ ದೈಹಿಕ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳಿಂದ ಖಿನ್ನತೆ, ನರಸಂಬಂಧಿ ಸಮಸ್ಯೆಗಳು ಮುಂತಾದವುಗಳಿಗೆ ಈಡಾಗಿ ಆತ್ಮಹತ್ಯೆಯಂತಹ ಕ್ರಮಗಳಿಗೆ ಮುಂದಾಗಿದ್ದಾರೆ. ರಾಜ್ಯವೊಂದರಲ್ಲಿಯೇ ಈ ಬಗೆಯ ಮೂರು ಪ್ರಕರಣಗಳು ವರದಿಯಾಗಿವೆ. ವಿಪರ್ಯಾಸವೆಂದರೆ, ಇಂತಹ ಸಮಸ್ಯೆಗಳನ್ನು ಸಮಾಜ, ಜವಾಬ್ದಾರಿಯುತ ಮಾಧ್ಯಮಗಳು ಸಹಾನುಭೂತಿಯಿಂದ ನೋಡದೆ ವ್ಯಂಗ್ಯದ ಸರಕಾಗಿ ಪರಿಗಣಿಸುತ್ತಿರುವುದು.

ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇಯ ಅಧಿಕೃತ ಅಂಕಿಅಂಶಗಳ ಪ್ರಕಾರವೇ ದೇಶದಲ್ಲಿ ಸರಿಸುಮಾರು 40 ಕೋಟಿಯಷ್ಟು ದುಡಿಯುವ ವರ್ಗವಿದ್ದು, ಇವರಲ್ಲಿ ಶೇ.93ರಷ್ಟು ಮಂದಿ ಅಸಂಘಟಿತ ವಲಯಗಳಲ್ಲಿ ಹಾಗೂ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿರುವವರಾಗಿದ್ದಾರೆ. ಇದರಲ್ಲಿ ಶೇ.75ರಷ್ಟು ಮಂದಿ ಸಣ್ಣ ವ್ಯಾಪಾರಿಗಳು, ಚಾಲಕರು, ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ವೃತ್ತಿಗಳಲ್ಲಿರುವವರು ಮುಂತಾದವರು ಆಗಿದ್ದು ಸ್ವಯಂ ಉದ್ಯೋಗವನ್ನು ಕೈಗೊಂಡಿರುತ್ತಾರೆ. ಉಳಿದಿರುವ ಶೇ.25 ರಲ್ಲಿ ಅರ್ಧದಷ್ಟು ಮಂದಿ ಮಾತ್ರವೇ ಪೂರ್ಣ ಪ್ರಮಾಣದ ವೃತ್ತಿಗಳಲ್ಲಿ ತೊಡಗಿದ್ದು ಮಿಕ್ಕವರು ಅರೆಕಾಲಿಕ, ಅನೌಪಚಾರಿಕ ವೃತ್ತಿಗಳಲ್ಲಿರುತ್ತಾರೆ. ನಗರ ಪ್ರದೇಶಗಳಲ್ಲಿ ವಾಸಿಸುವ ಶೇ.25-30 ಕುಟುಂಬಗಳು ದಿನಗೂಲಿ ಆಧರಿತ ಕುಟುಂಬಗಳಾಗಿದ್ದು ಇವುಗಳಲ್ಲಿ ಬಹುತೇಕ ಕುಟುಂಬಗಳು ನಗರಗಳಿಗೆ ವಲಸೆ ಬಂದ ಕಾರ್ಮಿಕ ಸಮುದಾಯಗಳಾಗಿರುತ್ತವೆ. ದೇಶದಲ್ಲಿ ಸುಮಾರು 7.5 ಕೋಟಿ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳಿದ್ದು ಇವುಗಳು ಸುಮಾರು 18 ಕೋಟಿ ಜನರಿಗೆ ಜೀವನಾಧಾರವಾಗಿವೆ. ಭಾರತದ ಜಿಡಿಪಿಯ ಬೆಳವಣಿಗೆಗೆ ಇವುಗಳು ನೀಡುವ ಪಾಲು ಗುರುತರವಾಗಿದ್ದು, 1,183 ಶತಕೋಟಿ ಡಾಲರ್ ನಷ್ಟಿದೆ. ಹೀಗಾಗಿ, ಸರ್ಕಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ಸಿಬ್ಬಂದಿ, ಕಾರ್ಪೊರೆಟ್ ನೌಕರರನ್ನು ಹೊರತುಪಡಿಸಿದರೆ ಇಂದು ದೇಶದ ಶೇ.93 ಪ್ರತಿಶತ ಉದ್ಯೋಗಿಗಳೇನಿದ್ದಾರೆ ಇವರು ಸದಾಕಾಲ ಅನಿಶ್ಚಿತತೆ, ಅತಂತ್ರ ಪರಿಸ್ಥಿತಿಗಳಲ್ಲಿಯೇ ಬದುಕು ಸವೆಸುವವರಾಗಿದ್ದಾರೆ. ನೋಟು ರದ್ಧತಿ, ಜಿಎಸ್ಟಿಗಳಂತಹ ಕ್ರಮಗಳಿಂದಾಗಿ ಇವರು ಕೆಲಸ ಮಾಡುವ ವಲಯಗಳು ಇದಾಗಲೇ ತೀವ್ರ ಆರ್ಥಿಕ ಸಂಕಷ್ಟಗಳಿಗೆ ತುತ್ತಾಗಿವೆ. ದೇಶಾದ್ಯಂತ ಸಣ್ಣ ಕೈಗಾರಿಕೆಗಳು ಕೊವಿಡ್ ಲಾಕ್‌ಡೌನ್‌ಗೂ ಮುನ್ನವೇ ತುರ್ತು ನಿಗಾ ಘಟಕದಲ್ಲಿದ್ದವು. ಬೇಡಿಕೆಯಲ್ಲಿ ಕಂಡು ಬಂದ ತೀವ್ರ ಕುಸಿತದಿಂದಾಗಿ ಬಹುತೇಕ ಕೈಗಾರಿಕೆಗಳುಮ ಸಣ್ಣ ಉದ್ಯಮಗಳು ಅರೆಕಾಲಿಕವಾಗಿ ಕೆಲಸ ನಿರ್ವಹಿಸುವ ಸ್ಥಿತಿ ತಲುಪಿದ್ದವು. ಲಾಕ್‌ಡೌನ್ ಎನ್ನುವುದು ಇವುಗಳ ಪಾಲಿಗೆ ಕೊನೆಯ ಮೊಳೆಯಾಗಿದ್ದು, ಇವುಗಳಲ್ಲಿ ಬಹುತೇಕವು ತೀವ್ರ ನಿಗಾ ಘಟಕದಿಂದ ಶವಾಗಾರದೆಡೆಗೆ ಪಯಣ ಬೆಳೆಸಲಿವೆ. ದೇಶದಲ್ಲಿ ನಿರುದ್ಯೋಗವೆನ್ನುವುದು ಕಳೆದ ನಾಲ್ಕೂವರೆ ದಶಕದಲ್ಲಿಯೇ ಅಧಿಕ ಪ್ರಮಾಣದಲ್ಲಿತ್ತು. ಲಾಕ್ ಡೌನ್ ನಂತರ ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಏಕೆಂದರೆ ಗಣನೀಯ ಸಂಖ್ಯೆಯ ಕಿರು ಉದ್ಯಮಗಳಿಗೆ ಮರಳಿ ಕೆಲಸ ಆರಂಭಿಸುವುದು ದುಸ್ಸಾಧ್ಯದ ಮಾತಾಗಲಿದೆ.

ಇನ್ನು, ಸಂಘಟಿತ ಕ್ಷೇತ್ರಗಳತ್ತಲೇ ಮುಖ ಮಾಡಿದರೂ ಸಹ ವಾಹನ ತಯಾರಿಕಾ ವಲಯ, ಬ್ಯಾಂಕಿಂಗ್ ಕ್ಷೇತ್ರ, ರಿಯಾಲ್ಟಿ ಉದ್ಯಮ, ವೈಮಾನಿಕ ಕ್ಷೇತ್ರ, ದೇಶೀಯ ಇಲೆಕ್ಟ್ರಾನಿಕ್ ಉತ್ಪಾದನಾ ವಲಯ ಮುಂತಾದವುಗಳು ಇದಾಗಲೇ ಗಂಭೀರ ಸಂಕಷ್ಟದಲ್ಲಿದ್ದವು. ಉದ್ಯೋಗ ಕಡಿತವೂ ಸೇರಿದಂತೆ ವ್ಯಾಪಕ ಅರ್ಥಿಕ ಕ್ರಮಗಳಿಗೆ ಮುಂದಾಗಿದ್ದವು. ಲಾಕ್ ಡೌನ್ ಇವುಗಳ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲಿದೆ. ಜಗತ್ತು 2009ಕ್ಕಿಂತಲೂ ಕೆಟ್ಟದಾದ ಆರ್ಥಿಕ ಹಿಂಜರಿತಕ್ಕೆ ಕುಸಿದಿದೆ ಎಂದು ಕೋವಿಡ್-19 ಪರಿಣಾಮಗಳನ್ನು ಆಧರಿಸಿ ವಿಶ್ವಬ್ಯಾಂಕ್ ಹೇಳಿದೆ. ಭಾರತದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ. ಮೇಲಿನ ಈ ಎಲ್ಲ ಅಂಶಗಳನ್ನು ಗಮನಿಸಿದರೆ ಸ್ಪಷ್ಟಗೊಳ್ಳುವ ಒಂದು ಅಂಶವೆಂದರೆ, ದೇಶ ಪ್ರಸಕ್ತ ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟೇನಿದೆ, ಇದು ಕೇವಲ ಆರೋಗ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟು ಮಾತ್ರವೇ ಆಗದೆ ಅತ್ಯಂತ ಕಠಿಣವೂ, ಜಟಿಲವೂ ಆದ ಬೃಹತ್ ಸಾಮಾಜಿಕ, ಆರ್ಥಿಕ ಸಮಸ್ಯೆಯಾಗಿಯೂ ಪರಿವರ್ತಿತವಾಗಲಿದೆ ಎನ್ನುವುದು. ಮುಂದಾಲೋಚನೆ ಇಲ್ಲದೆ ಜಾರಿಗೆ ತಂದ ನೋಟು ರದ್ಧತಿ ಹಾಗೂ ಯೋಜಿತ ರೂಪುರೇಷೆಗಳಿಲ್ಲದೆ ಅನುಷ್ಠಾನಕ್ಕೆ ಬಂದ ಜಿಎಸ್ಟಿಗಳಿಂದ ಉಂಟಾದ ಗಣನೀಯ ದುಷ್ಪರಿಣಾಮಗಳನ್ನು ಮುಂದಿನ ದಿನಗಳನ್ನು ಸುಲಭವಾಗಿ ಕೋವಿಡ್ ಬಿಕ್ಕಟ್ಟಿನ ತಲೆಗೆ ಕಟ್ಟಿ ಆಳುವ ಸರ್ಕಾರ ಕೈತೊಳೆದುಕೊಳ್ಳಲಿದೆ. ಅಷ್ಟರಮಟ್ಟಿಗೆ, ಭಾರತದ ಪಾಲಿಗೆ ಮಾತ್ರವೇ ಅಲ್ಲದೆ, ಜಗತ್ತಿನ ಬಹುತೇಕ ದೇಶಗಳ ಸರ್ಕಾರಗಳ ಪಾಲಿಗೆ ಕೋವಿಡ್ ತಮ್ಮ ಹುಳುಕುಗಳು, ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಒದಗಿ ಬಂದ ವರವಾಗಲಿದೆ.

ಕೊವಿಡ್ ಪ್ರಸ್ತುತ ಭಾರತದಲ್ಲಿ ಸಮುದಾಯಕ್ಕೆ ಹಬ್ಬಿಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ಅದಿನ್ನೂ ವಿದೇಶಗಳಿಂದ ಅಗಮಿಸಿರುವವರು ಹಾಗೂ ಅವರಿಂದ ಸೋಂಕಿಗೆ ಒಳಗಾದವರಿಗೆ (ಪ್ರಾಥಮಿಕ ಸೋಂಕಿತರು) ಮಾತ್ರವೇ ಸೀಮಿತವಾಗಿದೆ ಎನ್ನುವ ಅಭಿಪ್ರಾಯವನ್ನು ಸರ್ಕಾರ ವ್ಯಕ್ತಪಡಿಸುತ್ತಿದೆ. ಆದರೆ, ವ್ಯಾಪಕವಾಗಿ ಸಾಮುದಾಯಿಕ ತಪಾಸಣೆಗಳನ್ನು ಕೈಗೊಳ್ಳದೆ ಇಂತಹ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತ್ಯಗತ್ಯವಾಗಿ ಮಾಡಬೇಕಿದ್ದ ಕೆಲಸವೆಂದರೆ ಸಮುದಾಯದಲ್ಲಿ ಕೊರೊನಾ ಹರಡಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಅಗತ್ಯವಾದ ವೈದ್ಯಕೀಯ ತಪಾಸಣೆಗಳನ್ನು ವ್ಯಾಪಕವಾಗಿ ನಡೆಸುವುದು. ಹೀಗಾದಲ್ಲಿ ಮಾತ್ರವೇ ಕೊರೊನಾ ದೇಶದಲ್ಲಿ ನಿಜಕ್ಕೂ ಯಾವ ಹಂತದಲ್ಲಿದೆ ಎಂದು ತಿಳಿಯಲು ಹಾಗೂ ಅದರ ಹರಡುವಿಕೆಯನ್ನು ಕ್ಷಿಪ್ರವಾಗಿ ನಿಯಂತ್ರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಕಳ್ಳರನ್ನು ಹಿಡಿದಾಗ ಹೇಗೆ ನಾಕಾಬಂದಿ ಯಶಸ್ವಿಯಾಗುತ್ತದೆಯೋ, ಅದೇ ರೀತಿ, ಲಾಕ್‌ಡೌನ್ ಯಶಸ್ವಿಯಾಗುವುದು ಸೋಂಕಿನ ಗಹನತೆಯನ್ನು ಪತ್ತೆಹಚ್ಚಿದಾಗ. ನಾಕಾಬಂದಿ ಹಾಕಿದ ನಂತರ ಯಾರನ್ನೂ ವಿಚಾರಣೆ ಮಾಡದೆ ಹೋದರೆ ಹೇಗೆ ಕಳ್ಳರು ತಪ್ಪಿಸಿಕೊಳ್ಳುತ್ತಾರೋ ಅದೇ ರೀತಿ, ಲಾಕ್‌ಡೌನ್ ಆದ ನಂತರ ಸಾಮುದಾಯಿಕ ವೈದ್ಯಕೀಯ ತಪಾಸಣೆ ಮಾಡದೆ ಹೋದರೆ ಕೊರೊನಾದ ಸಾಂಕ್ರಾಮಿಕತೆ ಪತ್ತೆಯಾಗುವುದಿಲ್ಲ. ಲಾಕ್‌ಡೌನ್ ಉದ್ದೇಶವೇ ಸೋಂಕಿತರನ್ನು ಕ್ಷಿಪ್ರವಾಗಿ ಗುರುತಿಸಿ, ಅವರನ್ನು ಅವರಿದ್ದಲ್ಲಿಯೇ ಸಮುದಾಯದಿಂದ ಪ್ರತ್ಯೇಕಿಸಿ, ಪರಿಣಾಮಕಾರಿಯಾಗಿ ವೈದ್ಯಕೀಯ ನಿಗಾ ವಹಿಸುವುದಾಗಿದೆ. ಆದರೆ, ತಪಾಸಣೆಯನ್ನೇ ಮಾಡದೆ ಹೋದರೆ, ಸೋಂಕು ಪತ್ತೆಯಾಗುವುದಾದರೂ ಹೇಗೆ? ಈ ಪ್ರಶ್ನೆಗೆ ನಮ್ಮನ್ನಾಳುವು ಸರ್ಕಾರಗಳು ಉತ್ತರಿಸಬೇಕು.

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಭಾರತ ಹೆಚ್ಚೆಚ್ಚು ಸಾಮುದಾಯಿಕ ತಪಾಸಣೆಯನ್ನು ಕೈಗೊಂಡಾಗ ಮಾತ್ರವೇ ಪರಿಸ್ಥಿತಿಯ ನೈಜ ಚಿತ್ರಣ ಸಿಗಲಿದೆ. ತಪಾಸಣೆ ಮಾಡದೆ ಉಳಿದರೆ ದೊಡ್ಡದೊಂದು ಗಂಡಾಂತರಕ್ಕೆ ಆಹ್ವಾನವನ್ನು ನೀಡಿದಂತೆ ಎಂದು ದೇಶವಿದೇಶಗಳ ತಜ್ಞ ವೈದ್ಯರು, ಸಾಂಕ್ರಮಿಕ ರೋಗಗಳ ಪರಿಣಾಮಗಳ ಚರ್ಚೆಯನ್ನು ಅಭ್ಯಸಿಸುವ ಸಂಶೋಧಕರು ಹೇಳುತ್ತಿದ್ದಾರೆ. ಮುಂದಿನ ಕೆಲ ತಿಂಗಳಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ 20 ಕೋಟಿಯನ್ನು ಮೀರಬಹುದು ಎನ್ನುವ ಅಂದಾಜುಗಳನ್ನು ಜಾಗತಿಕವಾಗಿ ವಿವಿಧ ಸಂಸ್ಥೆಗಳು ನೀಡುತ್ತಿವೆ. ಇದರಲ್ಲಿ ಕನಿಷ್ಠವೆಂದರೂ ಹತ್ತು ಲಕ್ಷಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಬಹುದು. ಈ ಪರಿಸ್ಥಿತಿಯನ್ನು ಎದುರಿಸಲು ದೇಶಕ್ಕೆ ಸರಿಸುಮಾರು ಹನ್ನೆರಡು ಲಕ್ಷ ವೆಂಟಿಲೇಟರ್‌ಗಳ ಅವಶ್ಯಕತೆ ಇದೆ ಎನ್ನುವ ವರದಿಗಳಿವೆ. ಕೋವಿಡ್ ಬಿಕ್ಕಟ್ಟನ್ನು ಎದುರಿಸಲು ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರ ಹೇಗೆ ಸಜ್ಜುಗೊಂಡಿದೆ ಎನ್ನುವುದು ಓದುಗರಿಗೆ ತಿಳಿದಿರುವ ಸಂಗತಿಯೇ ಆಗಿದೆ. ಪ್ರಸಕ್ತ ಲೇಖನದ ವ್ಯಾಪ್ತಿಯಿಂದ ಈ ವಿಚಾರವನ್ನು ಹೊರಗಿಡೋಣ.

ಲಾಕ್ ಡೌನ್ ಅನ್ನು ಏಪ್ರಿಲ್ 15ರ ನಂತರ ಮುಂದುವರೆಸುವುದಿಲ್ಲ ಎನ್ನುವ ಇಂಗಿತವನ್ನು ಸರ್ಕಾರ ವ್ಯಕ್ತಪಡಿಸಿದೆ. ಜೂನ್ ಅಂತ್ಯದವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರೆಯಬಹುದು ಎನ್ನುವ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ಸುಳ್ಳು ಎಂದು ಅದು ಹೇಳಿದೆ. ಹಾಗಾದರೆ, ಏಪ್ರಿಲ್ 15ರೊಳಗೆ ಪ್ರಕರಣಗಳಲ್ಲಿ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾದರೆ ಸರ್ಕಾರದ ನಿರ್ಧಾರ ಏನಿರಲಿದೆ ಎನ್ನುವ ಪ್ರಶ್ನೆ ಏಳುತ್ತದೆ. ಹಿಂದಿನ ಸೀಮಿತ ಉದಾಹರಣೆಗಳನ್ನು ನೋಡಿದರೆ ಜಾಗತಿಕವಾಗಿ ಲಾಕ್‌ಡೌನ್ ಕೇವಲ 21 ದಿನಕ್ಕೆ ಸೀಮಿತಗೊಳಿಸಿದ ಉದಾಹರಣೆ ಕಡಿಮೆ. ಒಂದು ವೇಳೆ, ಲಾಕ್‌ಡೌನ್ ವಿಸ್ತರಿಸುವಂತಹ ಪರಿಸ್ಥಿತಿ ಉದ್ಭವಿಸಿದರೆ ಆಗ ಈ ಹಿಂದೆ ಚರ್ಚಿಸಿದಂತೆ ಭಾರತದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಡುವುದಲ್ಲದೆ, ಇಲ್ಲಿನ ಅಸಂಘಟಿತ ಕಾರ್ಮಿಕ ವಲಯದ ಶ್ರಮಿಕರು, ಕಿರು ಉದ್ಯಮಗಳು, ವ್ಯಾಪಾರಿಗಳು ಹಿಂದೆಂದೂ ಕಾಣದಂತಹ ಕರಾಳ ಸಂಕಷ್ಟಕ್ಕೆ ಈಡಾಗಲಿದ್ದಾರೆ. ಇದು ಸಾಮಾಜಿಕ ಕ್ಷೋಭೆಗೂ ಕಾರಣವಾಗಬಹುದು. ಹೀಗಾಗುವುದನ್ನು ತಪ್ಪಿಸಬೇಕೆಂದರೆ ಒಂದೆಡೆ ವ್ಯಾಪಾರ, ವಹಿವಾಟು, ಕೈಗಾರಿಕೆಗಳು, ಉದ್ಯಮಗಳೂ ನಡೆಯಬೇಕು, ಮತ್ತೊಂದೆಡೆ ಜನತೆ ಶಿಸ್ತಿಗೊಳಪಟ್ಟು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಬೇಕು, ಅದೂ ಗುಂಪುಗೂಡದೆ. ಇದು ಹೇಗೆ ಸಾಧ್ಯ? ಇದನ್ನು ಜಾರಿಗೊಳಿಸುವ ಬಗೆ ಹೇಗೆ? ಆಗ ‘ತುರ್ತುಪರಿಸ್ಥಿತಿ’ ಎನ್ನುವ ಅಸ್ತ್ರ ಪ್ರತ್ಯಕ್ಷವಾಗಲು ಹವಣಿಸುತ್ತದೆ. ಈ ದೇಶಕ್ಕೆ ಸರ್ವಾಧಿಕಾರಿ ಆಡಳಿತ ಬೇಕು ಎಂದು ಬಹುಕಾಲದಿಂದ ಹಪಹಪಿಸುತ್ತಿರುವವರಿಗೆ ಅದಕ್ಕೊಂದು ಸುವರ್ಣಾವಕಾಶ ದೊರಕಿದಂತೆ ಭಾಸವಾಗುತ್ತದೆ. ಸರ್ವಾಧಿಕಾರತ್ವದ ತೀರದ ಮೋಹವನ್ನು ಹತ್ತಿಕ್ಕಿ ಪ್ರಜಾಪ್ರಭುತ್ವದ ಪಾವಿತ್ರ‍್ಯವನ್ನು ಕಾಪಾಡಲು ಈ ದೇಶದ ಸಂವಿಧಾನದಲ್ಲಿ ಅಪಾರ ಬದ್ಧತೆ ಬೇಕು. ಅಂತಹ ಬದ್ಧತೆಯನ್ನು ಕೇಂದ್ರ ಸರ್ಕಾರ ಎಂತಹದ್ದೇ ಪರಿಸ್ಥಿತಿಯಲ್ಲಿಯೂ ಪಾಲಿಸುತ್ತದೆ ಎಂದು ಸದ್ಯಕ್ಕೆ ನಾವೆಲ್ಲರೂ ನಂಬೋಣ.


ಇದನ್ನೂ ಓದಿ: ಅಂದು ನೋಟುರದ್ದು, ಇಂದು ಮಹಾವಲಸೆ – ಬಡಜನತೆಯ ನಡು ಮುರಿದ ಮೋದಿ 

LEAVE A REPLY

Please enter your comment!
Please enter your name here