ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಜಂಟಿಯಾಗಿ ನಡೆಸಿದ್ದ ಬೆಂಗಳೂರಿನ ಗಂಗೇನಹಳ್ಳಿ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಎಚ್ ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಈ ದಿನ.ಕಾಮ್’ ವರದಿ ಮಾಡಿದೆ.
ಪ್ರಕರಣದ ಬಗ್ಗೆ ‘ಈ ದಿನ’ದಲ್ಲಿ ಸರಣಿ ತನಿಖಾ ವರದಿ ಪ್ರಕಟವಾದ ನಂತರ, ಅಧಿಕಾರಿಗಳು ಲೋಕಾಯುಕ್ತ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದರು. ಸೆ.21ರಂದು ಯಡಿಯೂರಪ್ಪ ಅವರು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.
ಈ ಬಗ್ಗೆ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, “ನನಗೆ ಲೋಕಾಯುಕ್ತ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ” ಎಂದು ಹೇಳಿದ್ದರು.
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಜಂಟಿಯಾಗಿ ನಡೆಸಿದ ಭೂ ಹಗರಣ ಇದು. ಬಿಡಿಎಗೆ ಸೇರಿದ ಬೆಂಗಳೂರು ಮಹಾನಗರದ ನಟ್ಟ ನಡುವೆ ಸುಮಾರು 55,000 ಚದರ ಅಡಿ ಭೂಮಿಯನ್ನು ಡಿನೋಟಿಫೈ ಮಾಡಿ ಗುಳುಂ ಮಾಡಲಾಗಿದೆ. ಆ ಭೂಮಿಯ ಇವತ್ತಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ! ಇಬ್ಬರು ಬೇರೆ ಬೇರೆ ಅವಧಿಯಲ್ಲಿ ಸಿಎಂಗಳಾಗಿದ್ದವರು. ಆದರೆ, ಹಗರಣ ಮಾತ್ರ ಒಂದೇ ಆಗಿದೆ. ಈ ಪ್ರಕರಣದಲ್ಲಿ ಎಫ್‌ಐಆರ್ ಕೂಡ ಒಂದೇ ಆಗಿದ್ದು, ಸರ್ಕಾರಿ ಸ್ವತ್ತನ್ನು ಲೂಟಿ ಹೊಡೆಯುವ ಒಳಸಂಚಿನಲ್ಲಿ ಇಬ್ಬರೂ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.
ಇದನ್ನೂ ಓದಿ; ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ ಹಿಂಪಡೆದ ಕರ್ನಾಟಕ : ಇದೇ ರೀತಿಯ ನಿರ್ಧಾರ ಕೈಗೊಂಡ ಇತರ ರಾಜ್ಯಗಳು ಯಾವುವು?


