ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿ ಮೂರು ತಿಂಗಳಾದರೂ ಚನ್ನರಾಯಪಟ್ಟಣ ಭೂಸ್ವಾಧೀನ ರದ್ದುಪಡಿಸುವ ಅಧಿಕೃತ ‘ಡಿನೋಟಿಫಿಕೇಶನ್’ ಆದೇಶವನ್ನು ಸರ್ಕಾರ ಹೊರಡಿಸದಿರುವ ಕಾರಣ, ಭೂಸ್ವಾಧೀನ ವಿರೋಧಿ ಹೋರಾಟದ ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅಧಿಕೃತ ಆದೇಶ ಹೊರಡಿಸದಿರುವ ಕಾರಣ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ ಎಂದು ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ತಿಳಿಸಿದೆ.
ಘೋಷಣೆಯಾದರೂ ಮೌಖಿಕ ಆದೇಶಕ್ಕೆ ಸಿಗದ ಅಧಿಕೃತ ಮುದ್ರೆ
ಚನ್ನರಾಯಪಟ್ಟಣದ ರೈತರು, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಸಮಾನ ಮನಸ್ಕ ಸಂಘಟನೆಗಳು ಜಂಟಿಯಾಗಿ ನಡೆಸಿದ ತೀವ್ರ ಸಂಘರ್ಷಮಯ ಹೋರಾಟದ ಫಲವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜುಲೈ 15ರಂದು ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಸ್ಪಷ್ಟವಾಗಿ ಘೋಷಿಸಿದ್ದರು. ಸರ್ಕಾರದ ಈ ತೀರ್ಮಾನ ದೇಶವ್ಯಾಪಿ ಸುದ್ದಿಯಾಗಿತ್ತು, ಸರ್ಕಾರವು ಕೂಡಾ ಇದನ್ನು ರೈತಪರ ನಿಲುವು ಎಂದು ವ್ಯಾಪಕವಾಗಿ ಪ್ರಚಾರ ಮಾಡಿತ್ತು. ಆದರೆ, ಘೋಷಣೆ ಹೊರಬಿದ್ದು ತಿಂಗಳುಗಳೇ ಕಳೆದರೂ, ಸರ್ಕಾರದ ಮೌಖಿಕ ಆದೇಶವು ಡಿನೋಟಿಫಿಕೇಶನ್ ರೂಪದಲ್ಲಿ ಅಧಿಕೃತವಾಗಿ ಹೊರಬಂದಿಲ್ಲ.
ಆತಂಕಕ್ಕೆ ಕಾರಣವಾದ ಸಭೆಯ ಹುನ್ನಾರ
ಈ ಮಧ್ಯೆ, ಸರ್ಕಾರದ ಘೋಷಣೆಗೆ ವ್ಯತಿರಿಕ್ತವಾಗಿ, ಎರಡು ಹಳ್ಳಿಗಳಿಗೆ ಬೆಲೆ ನಿಗದಿ ಸಭೆ ನಡೆಸುವ ಹುನ್ನಾರಗಳು ನಡೆದಿದ್ದವು. ರೈತರ ತೀವ್ರ ಪ್ರತಿರೋಧದ ನಂತರ ಈ ಸಭೆಯನ್ನು ಮುಂದೂಡಲಾಗಿದೆ. “ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಭಯದಲ್ಲೇ ರೈತರು ಬದುಕುವಂತಾಗಿದೆ” ಎಂದು ಹೋರಾಟಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.
ಹೋರಾಟ ತೀವ್ರಗೊಳಿಸಲು ರೈತರ ಸಿದ್ಧತೆ
ಡಿನೋಟಿಫಿಕೇಶನ್ ಆದೇಶದ ವಿಳಂಬದಿಂದ ರೋಸಿಹೋಗಿರುವ ರೈತರು, ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಯೋಜನೆಯೊಂದಿಗೆ ಹೆಜ್ಜೆ ಇಟ್ಟಿದ್ದಾರೆ. ತಮ್ಮ ತಮ್ಮ ಊರುಗಳಲ್ಲಿ ಸಭೆಗಳನ್ನು ಕರೆಯುವ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸಿಕೊಂಡು ಹೋರಾಟವನ್ನು ಚುರುಕುಗೊಳಿಸಲು ಮುಂದಾಗಿದ್ದಾರೆ.
ಈ ಮಧ್ಯೆ, ಮಾನ್ಯ ಕೈಗಾರಿಕಾ ಸಚಿವರು ಅ.17 ರಂದು ಬ್ರಿಗೇಡ್ ಪೌಂಡೇಶನ್ ಸಹಯೋಗದಲ್ಲಿ ಲಕ್ಷ ಗಿಡಗಳ ನೆಡುವ ಕಾರ್ಯಕ್ರಮಕ್ಕಾಗಿ ಹರಳೂರು ಬಳಿಯ ಏರೋಸ್ಪೇಸ್ ಡಿಫೆನ್ಸ್ ಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ. “ಇಲ್ಲಿ ಶತಮಾನಗಳಿಂದ ಲಕ್ಷಾಂತರ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿರುವ ರೈತರು ಆತಂಕದಲ್ಲಿದ್ದಾರೆ. ಇದು ವೈರುಧ್ಯವೇ ಸರಿ” ಎಂದು ರೈತ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಸಚಿವರ ಭೇಟಿಯ ಹಿನ್ನೆಲೆಯಲ್ಲಿ, ‘ಸಚಿವರು ಈ ರೈತರಿಗೆ ಸರ್ಕಾರ ಆದೇಶದಂತೆ ಈ ತಿಂಗಳಿನೊಳಗೆ ಡಿನೋಟಿಫಿಕೇಶನ್ ಮಾಡುವ ಖಚಿತ ಬರವಸೆ ನೀಡಿ ಅದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಸಮಿತಿಯು ಬಲವಾಗಿ ಒತ್ತಾಯಿಸಿದೆ. ಅಧಿಕೃತ ಆದೇಶ ಹೊರಬೀಳುವವರೆಗೆ ರೈತರ ಆತಂಕ ನಿವಾರಣೆಯಾಗುವುದು ಕಷ್ಟ.
ರೈತರ ಸಮಸ್ಯೆ ಬಗೆಹರಿಸುವುದು ಉಸ್ತುವಾರಿ ಸಚಿವರ ಜವಾಬ್ದಾರಿ
ನಮ್ಮ ಉಸ್ತುವಾರಿ ಸಚಿವರಾದ ಕೆ. ಎಚ್. ಮುನಿಯಪ್ಪನವರು ಕೂಡ ಅಂದಿನ ಸಭೆಯಲ್ಲಿ ಸರ್ಕಾರದ ಪರವಾಗಿ ಹಾಜರಿದ್ದು, ಭೂಸ್ವಾಧೀನ ರದ್ದತಿ ಆದೇಶಕ್ಕೆ ಸಾಕ್ಷಿಯಾಗಿದ್ದರು. ಮೂರು ತಿಂಗಳಾದರೂ ಸರ್ಕಾರದ ಆದೇಶ ಜಾರಿಯಾಗದಿರುವುದನ್ನು ಅವರು ಸೂಕ್ಷ್ಮವಾಗಿ ಪರಿಗಣಿಸಬೇಕು. ಅಲ್ಲದೆ, ನಮ್ಮ ರೈತರ ಹಿತ ಕಾಯುವುದು ಮತ್ತು ಸಮಸ್ಯೆ ಬಗೆಹರಿಸುವುದು ಕೂಡ ಉಸ್ತುವಾರಿ ಸಚಿವರ ಜವಾಬ್ದಾರಿಯಾಗಿದ್ದು, ಅವರು ಅದರಂತೆ ಡಿನೋಟಿಫಿಕೇಶನ್ (ಭೂಸ್ವಾಧೀನ ರದ್ದತಿ) ಆದೇಶ ಹೊರಡಿಸಲು ಕ್ರಮವಹಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ, ಪ್ರಭಾ ಬೆಳವಂಗಲ, ಕಾರಳ್ಳಿ ಶ್ರೀನಿವಾಸ್, ಜಯರಾಮೇಗೌಡ, ಮಾರೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ, ಚೀಮಾಚನಹಳ್ಳಿ ರಮೇಶ್, ಅಶ್ವತ್ತಪ್ಪ, ಜಯರಾಮೇಗೌಡ, ಸುಬ್ರಮಣಿ, ಕೃಷ್ಣಪ್ಪ, ವೆಂಕಟಮ್ಮ, ಪಿಳಪ್ಪ, ವೆಂಕಟೇಶ್, ಗೋಪಾಲಗೌಡ, ಮಂಜುನಾಥ್, ಗೋಪಿನಾಥ್, ಗೋಪಾಲಪ್ಪ, ವೆಂಕಟೇಶ್, ಅಶ್ವತ್ತಪ್ಪ, ಪ್ರಮೋದ್ ಭಾಗವಹಿಸಿದ್ದರು.
ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದಲ್ಲಿ ತಪ್ಪೇನಿದೆ; ಸಿಎಂ ಸಿದ್ದರಾಮಯ್ಯ