ಹೊಸದಿಲ್ಲಿ: ರಾಹುಲ್ ಗಾಂಧಿ ವಿರುದ್ಧ ‘ಅವಹೇಳನಕಾರಿ’ ಭಾಷೆ ಬಳಸಿದ ಬಿಜೆಪಿಯ ಸಂಸದರಾದ ನಿಶಿಕಾಂತ್ ದುಬೆ ಮತ್ತು ಸಂಬಿತ್ ಪಾತ್ರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕೋರಿ ಕಾಂಗ್ರೆಸ್ ಸಂಸದ ಮಣಿಕಂ ಟ್ಯಾಗೋರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಪಾತ್ರ ಅವರ ನಡವಳಿಕೆಯು ಸಂಸದರು ಪಾಲಿಸಬೇಕಿರುವ ಸಭ್ಯತೆ ಮತ್ತು ನೈತಿಕತೆಯ “ಸ್ಪಷ್ಟ ಉಲ್ಲಂಘನೆ’ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ಜತೆ ನಂಟು ಇದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದು, ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್ –ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಯಿತು.
ಹೊಸದಿಲ್ಲಿಯಲ್ಲಿ ಗುರುವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸಂಸದರಾದ ಸಂಬಿತ್ ಮತ್ತು ಕೆ. ಲಕ್ಷ್ಮಣ್ ಅವರು, ಅಮೆರಿಕದ ಉದ್ಯಮಿ ಜಾರ್ಜ್ ಸೊರೆಸ್ ಮತ್ತು ಕೆಲವು ಏಜೆನ್ಸಿಗಳ ಜತೆ ರಾಹುಲ್ ಗಾಂಧಿ ನಂಟು ಹೊಂದಿದ್ದಾರೆ. ಇವರು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪಾತ್ರ ಅವರ ಸುದ್ದಿಗೋಷ್ಠಿಯನ್ನು ಉಲ್ಲೇಖಿಸಿ ನಿಶಿಕಾಂತ್ ದುಬೆ ಅವರು ಸಂಸತ್ತಿನಲ್ಲಿ ರಾಹುಲ್ ವಿರುದ್ಧ ಆರೋಪ ಮಾಡಿದ್ದಾರೆ.
ದುಬೆ ಅವರು ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು ಸಂಸತ್ ಭವನದ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು.
ಸಂಸತ್ತಿನಲ್ಲಿ ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಎಂದೂ ಬಳಸಿಲ್ಲ. ರಾಹುಲ್ ಗಾಂಧಿ ಅವರು ಅದಾನಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ ದಿನದಿಂದಲೂ, ಅದಾನಿ ಏಜೆಂಟ್ ಗಳು ಅವರನ್ನು ನಿಂದಿಸಲು ಶುರು ಮಾಡಿದ್ದಾರೆ. ಏನೇ ಆದರೂ, ರಾಹುಲ್ ಅವರ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.
ರಾಹುಲ್ ಗಾಂಧಿ ಅವರು ಅದಾನಿ ವಿರುದ್ಧ ಮಾತನಾಡಿದಾಗಲೆಲ್ಲಾ ಸಂಸತ್ತಿನಲ್ಲಿರುವ ಅದಾನಿ ಸ್ಲೀಪರ್ ಸೆಲ್ ಗಳು ಸಕ್ರಿಯಗೊಳ್ಳುತ್ತವೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯಿ ತಿಳಿಸಿದ್ದಾರೆ.
ಸಂಭಾಲ್‌ಗೆ ರಾಹುಲ್ ಗಾಂಧಿ ಪ್ರಯಾಣ ನಿಷೇಧದ ವಿಷಯವನ್ನು ಪ್ರತಿಪಕ್ಷಗಳು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಾಗ ನಡೆದ ಘಟನೆ ದುರದೃಷ್ಟಕರ. ಶೂನ್ಯ ವೇಳೆಯಲ್ಲಿ ಸ್ಪೀಕರ್ ಬಿರ್ಲಾ ಅವರು ಬಿಜೆಪಿ ಸಂಸದ ದುಬೆ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಈ ವೇಳೆಯಲ್ಲಿ ಅವರು ರಾಹುಲ್ ಸೇರಿದಂತೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಇಡೀ ಕಾಂಗ್ರೆಸ್ ವಿರುದ್ಧ ಅತ್ಯಂತ ಮಾನಹಾನಿಕರ ಪದಗಳನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಇದು ಸ್ವೀಕಾರಾರ್ಹವಲ್ಲ. ಈ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ಸಂಸತ್ತಿನಲ್ಲಿ ಎಂದಿಗೂ ಬಳಸಲಾಗಿಲ್ಲ. ನಮಗೆ ತುಂಬಾ ನೋವಾಗಿದೆ ಎಂದು ಅವರು ತಿಳಿಸಿದರು.
ಈ ಘಟನೆಗೂ ಮೊದಲು ಸ್ಪೀಕರ್, ಸಂಸತ್ತಿನ ಮತ್ತು ಲೋಕಸಭೆಯ ಸಂಪ್ರದಾಯಗಳ ಬಗ್ಗೆ ಮಾತನಾಡುತ್ತಿದ್ದರು. ಸಂಸತ್ತಿನಲ್ಲಿ ವಿಷಯಗಳನ್ನು ಹೇಗೆ ಪ್ರಸ್ತಾಪಿಸಬೇಕು ಮತ್ತು ಸದನಕ್ಕೆ ಹೇಗೆ ಬರಬೇಕು ಎಂಬುದರ ಕುರಿತು ಸಲಹೆ ನೀಡುತ್ತಿದ್ದರು. ಇದಾದ ಹತ್ತು ನಿಮಿಷಗಳ ನಂತರ ಸ್ಪೀಕರ್ ಅವರು ದುಬೆ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ ಅವರು ಈ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅದಾನಿ ಭ್ರಷ್ಟಾಚಾರದ ವಿರುದ್ಧ ರಾಹುಲ್ ಗಾಂಧಿ ಆರಂಭದಿಂದಲೂ ನಿಂತಿದ್ದಾರೆ. ಈಗ ಸಂಸತ್ತಿನಲ್ಲಿ ಅದಾನಿ ಏಜೆಂಟರು ರಾಹುಲ್ ಗಾಂಧಿಯನ್ನು ಸಂಸತ್ತಿನಲ್ಲಿ ನಿಂದಿಸಲು ಆರಂಭಿಸಿದ್ದಾರೆ ಎಂದು ವೇಣುಗೋಪಲ್ ತಿಳಿಸಿದ್ದಾರೆ.
ದುಬೆ ಅವರಿಂದ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪಕ್ಷವು ಬಿರ್ಲಾ ಅವರನ್ನು ಭೇಟಿ ಮಾಡಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದುಃಖದ ಸಂಗತಿಯೆಂದರೆ, ಸ್ವಲ್ಪ ಸಮಯದ ಹಿಂದೆ, ಸ್ಪೀಕರ್ ನಮಗೆ ಶಿಸ್ತಿನ ಬಗ್ಗೆ ಪಾಠವನ್ನು ಕಲಿಸುತ್ತಿದ್ದರು. ಈ ಪಾಠವನ್ನು ಬಿಜೆಪಿ ಸಂಸದರು [ದುಬೆ] ಎತ್ತಿಕೊಂಡು ಎಸೆದರು. ನಾವು ಸ್ಪೀಕರ್ ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಸಂಸದರು ಕ್ಷಮೆಯಾಚಿಸಬೇಕು, ಅವರ ಮಾತುಗಳನ್ನು ಹಿಂಪಡೆಯಬೇಕು ಮತ್ತು ಈ ವಿಷಯದಲ್ಲಿ ಸ್ಪೀಕರ್ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಗೊಗೊಯ್ ಹೇಳಿದರು.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಪ್ರತಿಪಕ್ಷದ ಸದಸ್ಯರು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸಲು ಒತ್ತಾಯಿಸಿದಾಗ ಮತ್ತು ಬುಧವಾರ ರಾಹುಲ್ ಗಾಂಧಿಗೆ ಅಲ್ಲಿಗೆ ಪ್ರಯಾಣಿಸಲು ಅವಕಾಶ ನೀಡದಿದ್ದನ್ನು ಪ್ರಶ್ನಿಸಿದಾಗ ದುಬೆ ಅವರಿಂದ ಈ ಹೇಳಿಕೆಗಳು ಬಂದಿವೆ.
ಸ್ಪೀಕರ್ ಬಿರ್ಲಾ ನಂತರ ದುಬೆ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟು, ವಿರೋಧ ಪಕ್ಷದ ಸದಸ್ಯರು ಅವರ ನಂತರ ಸಂಭಾಲ್ ಬಗ್ಗೆ ಮಾತನಾಡಬಹುದು ಎಂದು ಹೇಳಿದರು.
ಶೂನ್ಯ ವೇಳೆಯಲ್ಲಿ ಮಾತನಾಡಿದ ದುಬೆ, ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಫ್ರಾನ್ಸ್‌ನ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಸಂಸತ್ ಕಲಾಪದ ಹಳಿತಪ್ಪಿಸಲು ಪ್ರಯತ್ನಿಸಿವೆ. ಅಮೆರಿಕ ಶ್ರೀಮಂತ ಹೂಡಿಕೆದಾರ ಸೊರೊಸ್, ತನಿಖಾ ಪತ್ರಕರ್ತರ ಸಂಘಟನೆಯಾದ “ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ’ (ಒಸಿಸಿಆರ್‌ಪಿ) ಹಾಗೂ ಕಾಂಗ್ರೆಸ್ ಪಕ್ಷ ಪರಸ್ಪರ ನಂಟು ಹೊಂದಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸಿವೆ ಎಂದು ಹೇಳಿದರು.
ಸರ್ಕಾರವನ್ನು ಹಳಿತಪ್ಪಿಸುವುದು ಹೇಗೆ ಎಂಬುದರ ಕುರಿತು ನಿರಂತರವಾಗಿ ವಿವಿಧ ತಂತ್ರಗಳನ್ನು ರೂಪಿಸುವುದು ವಿರೋಧ ಪಕ್ಷಗಳ ಕೆಲಸವಾಗಿದೆ. ವಿದೇಶಿ ನಿಧಿಯ ಸಹಾಯದಿಂದ ಮೋದಿ ಜಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹಳಿತಪ್ಪಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಫ್ರೆಂಚ್ ಮಾಧ್ಯಮ ಸಂಸ್ಥೆ, ಮೀಡಿಯಾಪಾರ್ಟ್, ಸೋರೋಸ್ ಫೌಂಡೇಶನ್‌ನಿಂದ ಬೆಂಬಲಿತ ಮತ್ತು ಯುಎಸ್ ಸರ್ಕಾರದಿಂದ ಧನಸಹಾಯ ಪಡೆದ ಒಸಿಸಿಆರ್‌ಪಿ ಎಂಬ ಸಂಘಟನೆಗಳೊಂದಿಗೆ ನಂಟು ಹೊಂದಿರುವ ರಾಹುಲ್ ಗಾಂಧಿ ಭಾರತೀಯ ಸಂಸತ್ತನ್ನು ಹಳಿತಪ್ಪಿಸುತ್ತಾ, ಅದನ್ನು ಕಾರ್ಯನಿರ್ವಹಿಸಲು ಬಿಡುತ್ತಿಲ್ಲವೆಂದು ದುಬೈ ಸಂಸತ್ತಿನಲ್ಲಿ ಹೇಳಿದರು.
ಸೊರೊಸ್ ವಿಶ್ವ ಆರ್ಥಿಕತೆಯನ್ನು ಹೇಗೆ ಹಳಿತಪ್ಪಿಸುತ್ತಾನೆ? 1991 ರಲ್ಲಿ, ಜಾರ್ಜ್ ಸೊರೊಸ್ ಅವರು ಬ್ಯಾಂಕ್ ಆಫ್ ಇಂಗ್ಲೆಂಡ್ ಅನ್ನು ಅದರ ಸಹಜ ಸ್ಥಿತಿಯಿಂದ ಹಳಿ ತಪ್ಪಿಸಿದನು. ನಂತರ ಅದು $6 ಶತಕೋಟಿ ಲಾಭವನ್ನು ಗಳಿಸಿತು. ಇಂದು, ಸೊರೊಸ್ ಭಾರತದ ಆರ್ಥಿಕತೆಯನ್ನು ಹಳಿತಪ್ಪಿಸಿ ತಾನು ಲಾಭ ಗಳಿಸುವ ಗುರಿಯನ್ನು ಹೊಂದಿದ್ದಾನೆ. ಹಾಗಾಗಿ ಒಸಿಸಿಆರ್ ಪಿ ( OCCRP) ಮಾಡಿದ ಯಾವುದೇ ವರದಿಯನ್ನು ಕಾಂಗ್ರೆಸ್ ಪಕ್ಷವು ತಕ್ಷಣವೇ ಟ್ವೀಟ್ ಮಾಡುತ್ತದೆ ಎಂದು ದುಬೆ ಹೇಳಿದರು.
ಭಾರತ-ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಗಳ ಕುರಿತು ಪೆಗಾಸಸ್ ಸ್ಪೈವೇರ್ ಒಳಗೊಂಡಂತೆ ಒಸಿಸಿಆರ್ ಪಿ, ಹಿಂಡೆನ್‌ಬರ್ಗ್ ತಪ್ಪು ವರದಿಯನ್ನು ನೀಡುತ್ತಿವೆ. ಇವುಗಳು ನೀಡುವ ವರದಿಯನ್ನು ಹಿಂಬಾಲಿಸಿ ಭಾರತದ ಸಂಸತ್ತನ್ನು ಹಳಿತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸಿದೆ ಎಂದು ದುಬೆ ಆರೋಪಿಸಿದರು.
ಈ ಹೇಳಿಕೆಗಳ ನಂತರ ಪ್ರತಿಪಕ್ಷಗಳಿಂದ ಪ್ರತಿಭಟನೆ ಭುಗಿಲೆದ್ದಿತು. ಮಧ್ಯಾಹ್ನ ಸದನ ಮತ್ತೆ ಸಭೆ ಸೇರಿದಾಗ ಕೆಲವೇ ನಿಮಿಷಗಳು ಮಾತ್ರ ಕಾರ್ಯ ನಿರ್ವಹಿಸಿ, , ನಂತರ ಸ್ಫೀಕರ್ ಬಿರ್ಲಾ ಅವರು ದಿನದ ಮಟ್ಟಿಗೆ ಸದನವನ್ನು ಮುಂದೂಡಿದರು.
ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಕಾಂಗ್ರೆಸ್ಸಿನ ಟ್ಯಾಗೋರ್ ಅವರು ಮಾಧ್ಯಮ ಸಂವಾದದ ಸಂದರ್ಭದಲ್ಲಿ ಬಿಜೆಪಿ ಸಂಸದ ಪಾತ್ರ ಅವರು “ಅನುಚಿತ ಮತ್ತು ಅಗೌರವದ ವರ್ತನೆಯನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ನಡವಳಿಕೆಯು ಗೌರವಾನ್ವಿತ ಸಂಸತ್ತಿನ ಪ್ರತಿಷ್ಠೆಯನ್ನು ಹಾಳುಮಾಡುತ್ತದೆ ಮಾತ್ರವಲ್ಲದೆ ಉನ್ನತ ಸಾಂವಿಧಾನಿಕ ಹುದ್ದೆಯ ಘನತೆಗೆ ಅವಮಾನ ಮಾಡುತ್ತದೆ. ಸಂಸತ್ತಿನ ಪಾಲಕನಾಗಿ ನಾನು ಸಂಬಿತ್ ಪಾತ್ರಾ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಟ್ಯಾಗೋರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ನಾನು ಈ ಪದಗಳನ್ನು ಬಳಸಲು ಹೆದರುವುದಿಲ್ಲ. ಯಾಕೆಂದರೆ ನಾನೊಬ್ಬ ಭಾರತೀಯ. ಪಕ್ಷ ನನಗೆ ಕಲಿಸಿದಂತೆ, ನನಗೆ ರಾಷ್ಟ್ರ ಮೊದಲು, ಪಕ್ಷ ಕೊನೆಯದು ಎಂದು ಪತ್ರಿಕಾಗೋಷ್ಠಿಯಲ್ಲಿ ಪಾತ್ರಾ ಹೇಳಿದ್ದರು.
ಇದಕ್ಕೂ ಮುನ್ನ ಗುರುವಾರ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಸಂಸದರು “ಮೋದಿ ಅದಾನಿ ಏಕ್ ಹೈ” (ಮೋದಿ ಮತ್ತು ಅದಾನಿ ಒಂದೇ) ಎಂದು ಬರೆದ ಜಾಕೆಟ್‌ಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು. ಸಂಸತ್ತಿನಲ್ಲಿ ಮೆರವಣಿಗೆಯನ್ನು ನಡೆಸಿದ್ದರು.
ಇದನ್ನೂ ಓದಿ…ನೆನಪಿನಿಂದ ಮಾಸದ ಡಿಸೆಂಬರ್-6


