ಸಾಮಾಜಿಕ ಮಾಧ್ಯಮಗಳಲ್ಲಿ ರೈತರು ಮತ್ತು ಸಿಖ್ ಸಮುದಾಯದ ವಿರುದ್ಧ ದೇಶದ್ರೋಹ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಸಲ್ಲಿಸಲಾದ ದೂರಿನ ಅನ್ವಯ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈನಲ್ಲಿ FIR ನೊಂದಾಯಿಸಲಾಗಿದೆ.
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಮತ್ತು ಶಿರೋಮಣಿ ಅಕಾಲಿದಳದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು 1984 ರ ಸಿಖ್-ವಿರೋಧಿ ದಂಗೆಗಳನ್ನು ಉಲ್ಲೇಖಿಸಿ ಕಂಗನಾ “ಉದ್ದೇಶಪೂರ್ವಕವಾಗಿ ಸಿಖ್ಖರನ್ನು ಪ್ರಚೋದಿಸುತ್ತಿದ್ದಾರೆ” ಎಂದು ಆರೋಪಿಸಿ ಮುಂಬೈನ ಖಾರ್ ಪೊಳಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ FIR ನೊಂದಾಯಿಸಲಾಗಿದೆ.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ನಂತರ ಕಂಗನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಿಖ್ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
“ಖಲಿಸ್ತಾನಿ ಭಯೋತ್ಪಾದಕರು ಸರ್ಕಾರದ ಕೈ ಹಿಂಡುತ್ತಿದ್ದಾರೆ. ಆದರೆ ನಾವು ಒಬ್ಬ ಮಹಿಳೆಯನ್ನು ಮರೆಯದಿರೋಣ. ಈ ಹಿಂದೆ ಆ ಒಬ್ಬ ಮಹಿಳೆ ಪ್ರಧಾನಿಯಾಗಿದ್ದಾಗ (ಇಂದಿರಾ ಗಾಂಧಿ) ತನ್ನ ಜೀವವನ್ನು ಲೆಕ್ಕಿಸದೆ ಇವರನ್ನು ಸೊಳ್ಳೆಗಳ ರೀತಿ ಹೊಸಕಿ ಹಾಕಿದ್ದರು. ಆ ಮಹಿಳೆ ದೇಶಕ್ಕೆ ಒಳ್ಳೆಯದು ಮಾಡದಿದ್ದರೂ ಸಹ ಇವರನ್ನು ತನ್ನ ಕಾಲಡಿಯಲ್ಲಿ ಹೊಸಕಿ ಹಾಕಿದ್ದರು ಮತ್ತು ದೇಶ ಇಬ್ಭಾಗವಾಗಲು ಬಿಡಲಿಲ್ಲ. ಈಗಲೂ ಆ ಮಹಿಳೆಯನ್ನು ಕಂಡರೆ ಇವರು ನಡುಗುತ್ತಾರೆ. ಇವರಿಗೆ ಅಂಥವರೆ ಬೇಕು” ಎಂದು ಕಂಗನಾ ರೈತರನ್ನು ಅವಮಾನಿಸಿ ಪೋಸ್ಟ್ ಹಾಕಿದ್ದರು.
ರೈತರು ಮತ್ತು ಸಿಖ್ಖರ ವಿರುದ್ಧ ಕೋಮು ದ್ವೇಷವನ್ನು ಪ್ರಚೋದಿಸುವ ಅವರ ಹೇಳಿಕೆಗಳಿಗಾಗಿ ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಆಕೆಯನ್ನು ತಕ್ಷಣ ಬಂಧಿಸಬೇಕು ಎಂದು ಪೊಲೀಸ್ ಕಮಿಷನರ್, ಮುಂಬೈ ಮತ್ತು ಮಹಾರಾಷ್ಟ್ರ ಗೃಹ ಸಚಿವರನ್ನು ಭೇಟಿ ಮಾಡಿ ಸಿಖ್ ಸಮಿತಿಯ ಸದಸ್ಯರು ಒತ್ತಾಯಿಸಿದ್ದಾರೆ. ಅಲ್ಲದೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಕಂಗನಾಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಕಂಗನಾಗೆ ನೀಡಿರುವ ಪದ್ಮಶ್ರೀ ವಾಪಸ್ ಪಡೆಯಿರಿ: ರಾಷ್ಟ್ರಪತಿಗೆ ಸಿಖ್ ಸಮಿತಿ ಒತ್ತಾಯ


