ಮಣಿಪುರ ಹಿಂಸಾಚಾರ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಕುರಿತು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ಬರಹಗಾರ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪೆರಂಬಲೂರು ಜಿಲ್ಲೆಯ ವಕೀಲ ಕವಿಯರಸು ಅವರು ನೀಡಿದ ದೂರಿನ ಮೇರೆಗೆ ಶೇಷಾದ್ರಿ ಅವರನ್ನು ಬಂಧಿಸಲಾಗಿದೆ. ನ್ಯಾಯಾಂಗದ ಬಗ್ಗೆ ಶೇಷಾದ್ರಿ ಅವರ ದೃಷ್ಟಿಕೋನದಿಂದ ವಿಚಲಿತನಾಗಿದ್ದೇನೆ ಎಂದು ಅವರುಆರೋಪಿಸಿದ್ದಾರೆ.
ಐಪಿಸಿ ಸೆಕ್ಷನ್ 153, 153 ಎ ಮತ್ತು 505 (1) (B) ಅಡಿಯಲ್ಲಿ ಶೇಷಾದ್ರಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸಂದರ್ಶನದಲ್ಲಿ, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಕುರಿತು ಚರ್ಚಿಸುವಾಗ, ಮೇ 4 ರಂದು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಕುಕಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಖಂಡಿಸಿರುವುದನ್ನು ಶೇಷಾದ್ರಿ ಅವರು ಟೀಕಿಸಿದ್ದರು.
”ನಿಮಗೆ (ಕೇಂದ್ರ ಸರ್ಕಾರಕ್ಕೆ) ಏನನ್ನೂ ಮಾಡುವುದು ಸಾಧ್ಯವಿಲ್ಲ ಎಂದಾದರೆ, ನಾವು (ನ್ಯಾಯಾಲಯ) ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಹಾಗಾದರೆ ಚಂದ್ರಚೂಡ್ ಅವರ ಕೈಗೆ ಗನ್ ನೀಡಿ, ಅಲ್ಲಿಗೆ ಕಳುಹಿಸಿ. ಅವರು ಅಲ್ಲಿ ಶಾಂತಿ ಮರುಸ್ಥಾಪನೆ ಮಾಡುತ್ತಾರೆಯೇ ಎಂದು ನೋಡೋಣ” ಎಂಬುದಾಗಿ ಬದ್ರಿ ಶೇಷಾದ್ರಿ ಹೇಳಿದ್ದರು.
”ಅದು ಬೆಟ್ಟಗುಡ್ಡದ ಮತ್ತು ಸಂಕೀರ್ಣ ಪ್ರದೇಶವಾಗಿದೆ. ಅಲ್ಲಿ ಕೊಲೆಗಳು ಸಾಮಾನ್ಯವಾಗಿ ನಡೆಯುತ್ತವೆ. ಅಲ್ಲಿ ಹಿಂಸಾಚಾರಗಳು ನಡೆಯದಂತೆ ತಡೆಯುವುದು ನಮಗೆ ಸಾಧ್ಯವಿಲ್ಲ” ಎಂದು ತಿಳಿಸಿದ್ದರು.
ಈ ಸಂದರ್ಶನದ ವಿಚಾರವಾಗಿ ವಕೀಲ ಕವಿಯರಸು ಎಂಬುವವರು ಶೇಷಾದ್ರಿ ವಿರುದ್ಧ ದೂರು ಸಲ್ಲಿಸಿದ್ದರು. ಜುಲೈ 22ರಂದು ವೀಕ್ಷಿಸಿದ ಯೂಟ್ಯೂಬ್ ಸಂದರ್ಶನದ ತುಣುಕಿನಲ್ಲಿ, ಲೇಖಕ ಶೇಷಾದ್ರಿ ಅವರು ಸುಪ್ರೀಂಕೋರ್ಟ್ ಮತ್ತು ಸಿಜೆಐ ಡಿವೈ ಚಂದ್ರಚೂಡ್ ಅವರನ್ನು ಟೀಕಿಸಿದ್ದಾರೆ. ಇದರಿಂದ ತೀವ್ರ ಆಘಾತವಾಗಿದೆ ಎಂದು ವಕೀಲ ಆರೋಪಿಸಿದ್ದಾರೆ.
ಮೈತೇಯಿ ಸಮುದಾಯಕ್ಕೆ ಬುಡಕಟ್ಟು ಸಮುದಾಯದ ಮಾನ್ಯತೆ ನೀಡುವ ಮಣಿಪುರ ಹೈಕೋರ್ಟ್ ನಿರ್ಧಾರದ ಕಾರಣದಿಂದಲೇ ಮಣಿಪುರ ಹಿಂಸಾಚಾರದ ಸಮಸ್ಯೆ ಶುರುವಾಗಿತ್ತು ಎಂದು ಶೇಷಾದ್ರಿ ಹೇಳಿದ್ದರು. ”ಶೇಷಾದ್ರಿ ಅವರು ಸಿಜೆಐ ಸ್ಥಾನವನ್ನು ಕೀಳಾಗಿಸಲು ಪ್ರಯತ್ನಿಸುತ್ತಿದ್ದರು. ಈ ದೇಶದ ಸುಪ್ರೀಂಕೋರ್ಟ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಗೌರವವನ್ನೂ ಅವರು ಕಡೆಗಣಿಸಿದ್ದಾರೆ” ಎಂದು ಕವಿಯರಸು ದೂರಿನಲ್ಲಿ ಹೇಳಿದ್ದಾರೆ.
ಬದ್ರಿ ಅವರು ನ್ಯೂ ಹಾರಿಜಾನ್ ಮೀಡಿಯಾ ಪ್ರೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಕ್ರಿಕ್ ಇನ್‌ಫೋದ ಸಹ ಸಂಸ್ಥಾಪಕರಾಗಿದ್ದು, ಸ್ವರಾಜ್ಯ ನಿಯತಕಾಲಿಕೆಯಲ್ಲಿ ಲೇಖನಗಳನ್ನು ಬರೆಯುತ್ತಾರೆ.
ಶೇಷಾದ್ರಿ ಅವರ ಬಂಧನವನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಖಂಡಿಸಿದ್ದಾರೆ. ಡಿಎಂಕೆ ಸರ್ಕಾರವು ಬಂಧನಗಳ ಮೇಲೆಯೇ ಅವಲಂಬಿತವಾಗಿದೆ ಎಂದು ಅವರು ಟೀಕಿಸಿದ್ದಾರೆ.
புகழ்பெற்ற பதிப்பாளர், மேடைப் பேச்சாளர் திரு @bseshadri அவர்களை தமிழக காவல்துறை இன்று அதிகாலை கைது செய்துள்ளதை @BJP4TamilNadu வன்மையாகக் கண்டிக்கிறது.
சாமானிய மக்களின் கருத்துக்களை எதிர்கொள்ள திராணியற்று கைது நடவடிக்கையை மட்டுமே நம்பி இருக்கிறது இந்த ஊழல் திமுக அரசு.
ஊழல்…
— K.Annamalai (@annamalai_k) July 29, 2023
”ಖ್ಯಾತ ಪ್ರಕಾಶಕ ಮತ್ತು ವಾಗ್ಮಿ ಬದ್ರಿ ಶೇಷಾದ್ರಿ ಅವರನ್ನು ಶುಕ್ರವಾರ ಮುಂಜಾನೆ ತಮಿಳುನಾಡು ಪೊಲೀಸರು ಬಂಧಿಸಿರುವುದನ್ನು ತಮಿಳುನಾಡು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಈ ಭ್ರಷ್ಟ ಡಿಎಂಕೆ ಸರ್ಕಾರವು, ಸಾಮಾನ್ಯ ಜನರ ಅಭಿಪ್ರಾಯಗಳನ್ನು ಈಡೇರಿಸುವ ಸಾಮರ್ಥ್ಯ ಇಲ್ಲದ ಕಾರಣ ಬಂಧನಗಳ ಮೇಲೆ ಮಾತ್ರವೇ ಅವಲಂಬಿತವಾಗಿದೆ. ಭ್ರಷ್ಟ ಡಿಎಂಕೆ ಸರ್ಕಾರದ ಪ್ರತೀಕಾರದ ಕ್ರಮಗಳನ್ನು ಹೇರುವುದು ಮಾತ್ರವೇ ತಮಿಳುನಾಡು ಪೊಲೀಸರ ಕೆಲಸವೇ?” ಎಂದು ಅಣ್ಣಾಮಲೈ ಅವರು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಇಂದು INDIAದ ನಿಯೋಗ ಭೇಟಿ


