ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದ 1150ನೇ ದಿನವಾದ ಗುರುವಾರ ರೈತರನ್ನು ಬೆಂಬಲಿಸಿ ‘ಸಂಯುಕ್ತ ಹೋರಾಟ- ಕರ್ನಾಟಕ’ ಸಂಘಟನೆಗಳ ಒಕ್ಕೂಟ ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿತು.
ಕರ್ನಾಟಕದ ವಿವಿಧ ಭಾಗಗಳಿಂದ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿ, ಚನ್ನರಾಯಪಟ್ಟಣ ರೈತರ ಸುದೀರ್ಘ ಹೋರಾಟವನ್ನು ಮೆಲುಕು ಹಾಕಿದರು. “ಇಂತಹ ಪ್ರಾಮಾಣಿಕ ಹೋರಾಟಕ್ಕೆ ಸೋಲಾಗಬಾರದು, ನಾವು ಯಾವುದೇ ಕಾರಣಕ್ಕೂ ಈ ಹೋರಾಟವನ್ನು ಸೋಲಲು ಬಿಡಬಾರದು” ಎಂದು ಪ್ರತಿಪಾದಿಸಿದರು.
ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ್, “ಬಂಡವಾಳಶಾಹಿಗಳ ಪರವಾಗಿರುವ ಈ ಸರ್ಕಾರಗಳು ಎಂದಿಗೂ ರೈತರ ಪರವಾಗಿಲ್ಲ, ಯಾವ ಪಕ್ಷದ ಸರ್ಕಾರಗಳು ಕೂಡ ಇದಕ್ಕೆ ಹೊರತಾಗಿಲ್ಲ. ಈ ಸುದೀರ್ಘ ಚನ್ನರಾಯಪಟ್ಟಣ ಹೋರಾಟಕ್ಕೆ ದೆಹಲಿ ಹೋರಾಟದ ಸ್ಪೂರ್ತಿ ಇದೆ. ಅಲ್ಲಿ ರೈತರು ಸರ್ವಾಧಿಕಾರಿ ಆದೇಶವನ್ನು ಹಿಮ್ಮೆಟ್ಟಿಸಿದಂತೆ, ಇಲ್ಲಿ ಭೂಮಿ ಕಸಿಯುತ್ತಿರುವ ಕಾರ್ಪೊರೇಟ್ ಪರವಾದ ಸರ್ಕಾರವನ್ನು ನಾವು ಹಿಮ್ಮೆಟ್ಟಿಸಲೇಬೇಕು, ನಾವು ಖಂಡಿತ ಗೆಲ್ಲುತ್ತೇವೆ” ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, “ಸರ್ಕಾರಗಳಿಗೆ ಈ ಭೂಮಿ ಕೇವಲ ಮಾರಾಟದ ಸರಕಷ್ಟೇ. ಆದರೆ, ಇಲ್ಲಿನ ರೈತರಿಗೆ ಇದು ಬದುಕು. ಆದ್ದರಿಂದಲೇ, ಯಾವುದೇ ಕಾರಣಕ್ಕೂ ನಾವು ಭೂಮಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ದೇವನಹಳ್ಳಿ ಚನ್ನರಾಯಪಟ್ಟಣ ರೈತರು ಈ ಐತಿಹಾಸಿಕ ಹೋರಾಟ ನಡೆಸುತ್ತಿದ್ದು, ಈ ಹೋರಾಟ ಇಂದು ಬರಿಯ ದೇವನಹಳ್ಳಿಯ ಹೋರಾಟವಾಗಿ ಮಾತ್ರ ಉಳಿದಿಲ್ಲ. ಇಡೀ ರಾಜ್ಯದ ಹೋರಾಟ. ಇಡೀ ರಾಜ್ಯದ ರೈತ ಸಂಘಟನೆಗಳು ಮತ್ತು ಇತರ ಎಲ್ಲ ಪ್ರಗತಿಪರ ಸಂಘಟನೆಗಳು ಈ ಹೋರಾಟವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಜೂನ್ 25ಕ್ಕೆ ‘ದೇವನಹಳ್ಳಿ ಚಲೋ ಹೆಸರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಲ್ಲ ಹೋರಾಟಗಾರರು, ಬೆಂಬಲಿಗರು ಸೇರಿ ಪ್ರತಿರೋಧವನ್ನು ವ್ಯಕ್ತಪಡಿಸೋಣ. ಇದು ಕನಿಷ್ಠ 10,000 ಜನರನ್ನು ಒಳಗೊಂಡ ಬೃಹತ್ ಕಾರ್ಯಕ್ರಮವಾಗಬೇಕು. ಇದಕ್ಕಾಗಿ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲ ಸಹಭಾಗಿ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಿಂದ ತಮ್ಮ ಕಾರ್ಯಕರ್ತರುಗಳನ್ನು ಇಲ್ಲಿಗೆ ಕರೆತರಲಿವೆ” ಎಂದು ಸಭೆಯ ನಿರ್ಧಾರವನ್ನು ಪ್ರಕಟಿಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, “ಹಿಂದಿನ ಕೋಮುವಾದಿ ಸರ್ಕಾರವನ್ನು ಸೋಲಿಸಲು ನಾವೇ ಹಗಲಿರುಳು ಶ್ರಮಿಸಿ ಅಸ್ತಿತ್ವಕ್ಕೆ ತಂದ ಸರ್ಕಾರ ಇದು. ಆದರೆ, ಸಿದ್ದರಾಮಯ್ಯನವರ ಸರ್ಕಾರದ ಮೇಲಿಟ್ಟಿದ್ದ ನಂಬಿಕೆ ಸಂಪೂರ್ಣ ಹುಸಿಯಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ರೈತರ ಪರವಾಗಿ, ಬಡವರ ಪರವಾಗಿ ನಿಲ್ಲುವುದಾಗಿ ಹೇಳಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಸರ್ಕಾರ ಇದು. ಚನ್ನರಾಯಪಟ್ಟಣ ರೈತರು ಧರಣಿ ನಡೆಸುತ್ತಿರುವಾಗ ಅಲ್ಲಿಗೆ ಬಂದು, ‘ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಭೂಸ್ವಾಧೀನ ಮಾಡಿಕೊಳ್ಳಬಾರದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಲವಂತದ ಭೂಸ್ವಾಧೀನವನ್ನು ಮಾಡುವುದಿಲ್ಲ. ಈ ಭೂಸ್ವಾಧೀನವನ್ನು ಕೈಬಿಡುತ್ತೇವೆ’ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಇಂದು ವಚನಭ್ರಷ್ಟರಾಗಿದ್ದಾರೆ. ಅಲ್ಲದೆ, ಚುನಾವಣೆಯ ಸಮಯದಲ್ಲಿ ರೈತರ ಜೊತೆಗಿರುವುದಾಗಿ ಹೇಳಿದ್ದ ಕೆ.ಹೆಚ್. ಮುನಿಯಪ್ಪನವರು ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಆದ್ದರಿಂದ, ಎಲ್ಲ ಸಂಘಟನೆಗಳು ಚನ್ನರಾಯಪಟ್ಟಣ ರೈತರ ಜೊತೆಗೆ ನಿಂತು ಅವರನ್ನು ಗೆಲ್ಲಿಸಲೇಬೇಕು. ಈ ಕಾರ್ಪೊರೇಟ್ ಪರವಾದ ಸರ್ಕಾರಗಳನ್ನು ಹಿಮ್ಮೆಟ್ಟಿಸಲೇಬೇಕು” ಎಂದು ಮಾತನಾಡಿದರು.
ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ನೂರ್ ಶ್ರೀಧರ್ ಮಾತನಾಡಿ, “ಸದಾ ರೈತರ ಪರವಾಗಿ ಇರುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಇಂದಿನ ಕಾಂಗ್ರೆಸ್ ಸರ್ಕಾರ ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು, ಜನ ವಿರೋಧಿಗಳಾಗಿ ನಡೆದುಕೊಳ್ಳುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಒಂದು ಕಡೆ ರೈತರ ಕೈಯಲ್ಲಿರುವ ಭೂಮಿಯನ್ನು ಭೂಸ್ವಾಧೀನದ ಮೂಲಕ ಕಸಿದುಕೊಳ್ಳುವ ಪ್ರಯತ್ನವಾಗುತ್ತಿದ್ದರೆ, ಮತ್ತೊಂದೆಡೆ ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಹಂಚಿಕೆ ಮಾಡದಿರುವುದು ಈ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ. ಇಂತಹ ಜನ ವಿರೋಧಿ ಸರ್ಕಾರವನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

“ಚನ್ನರಾಯಪಟ್ಟಣ ಹೋರಾಟದ ಹಾದಿಯಲ್ಲಿ ಎಲ್ಲ ರೀತಿಯ ಪ್ರತಿರೋಧಗಳನ್ನು, ಪ್ರತಿಭಟನೆಗಳನ್ನು ಮಾಡುತ್ತಲೇ ಬಂದಿದೆ. ಆದರೆ ಜೂನ್ 25ರಂದು ನಡೆಯಲಿರುವ ‘ದೇವನಹಳ್ಳಿ ಚಲೋ’ ಹಿಂದಿನ ಹೋರಾಟದಂತೆ ಮತ್ತೊಂದು ಹೋರಾಟವಾಗಿರುವುದಿಲ್ಲ. ಇದು ನಿರ್ಣಾಯಕ ಹೋರಾಟ. ಯಾವುದೇ ಕಾರಣಕ್ಕೂ ನಾವು ಬರಿಗೈಯಲ್ಲಿ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಅದಕ್ಕೆ ಇಲ್ಲಿನ ರೈತರು ತಮ್ಮ ಮನೆಯ ದನ, ಕರು, ಕುರಿ ಎಲ್ಲವುಗಳ ಜೊತೆ ಬಂದು ಸೇರಿಕೊಳ್ಳೋಣ. ಅದನ್ನೂ ಮೀರಿ ಹೇಗೆ ಭೂಸ್ವಾಧೀನ ಮಾಡುತ್ತಾರೋ ನೋಡೋಣ, ತಾಕತ್ತಿದ್ದರೆ ಒಂದಿಂಚು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಿ, ಇದು ಸರ್ಕಾರಕ್ಕೆ ಹೋರಾಟಗಾರರ ಸವಾಲು ” ಅವರು ಹಾಕಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಚಾಮರಸ ಮಾಲಿ ಪಾಟೀಲ್, “ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿಗಳು ಮತ್ತು ಅತಿಯಾದ ನೀರಾವರಿಯ ಕಾರಣಕ್ಕೆ ಉಂಟಾಗಿರುವ ಜೌಗು ಭೂಮಿಗಳು ನಮ್ಮಲ್ಲಿ ಸಾಕಷ್ಟು ಇವೆ. ಅಂತಹ ಕಡೆಗಳಲ್ಲಿ ಧಾರಾಳವಾಗಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಿ. ಆದರೆ, ಈ ಸರ್ಕಾರಗಳಿಗೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಉದ್ದೇಶವಿಲ್ಲ ಕೆಐಎಡಿಬಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ” ಎಂದು ದೂರಿದರು.
ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಯು. ಬಸವರಾಜು, ಸಿ.ಐ.ಟಿ.ಯು. ಸಂಘಟನೆಯ ಮೀನಾಕ್ಷಿ ಸುಂದರಂ, ವರಲಕ್ಷ್ಮಿ, ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಮರಿಯಪ್ಪ, ಹೋರಾಟಗಾರರಾದ ಕಾರಳ್ಳಿ ಶ್ರೀನಿವಾಸ್, ಪ್ರಭಾ ಬೆಳವಂಗಲ, ನವೀನ್, ಚಂದ್ರ ತೇಜಸ್ವಿ, ರಮೇಶ್ ಸಂಕ್ರಾಂತಿ ಮುಂತಾದ ವಿವಿಧ ಸಂಘಟನೆಗಳ ಮುಖಂಡರು, ರೈತ ನಾಯಕರುಗಳು, ಮತ್ತು 13 ಹಳ್ಳಿಗಳ ರೈತರು ಭಾಗವಹಿಸಿದ್ದರು.
ಬೆಂಗಳೂರು| ರಾತ್ರೋರಾತ್ರಿ ದಲಿತರ ಮನೆ, ದೇವಸ್ಥಾನ ಧ್ವಂಸ ಆರೋಪ: ಪ್ರಕರಣ ದಾಖಲು


