ದೇವನಹಳ್ಳಿ ರೈತರ ಭೂ ಸ್ವಾಧೀನ ಸಂಬಂಧ ಜುಲೈ 15ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ ಎಂದು ರಾಜ್ಯ ರೈತ ಸಂಘದ ನಾಯಕ ಬಡಗಲಪುರ ನಾಗೇಂದ್ರ ಶುಕ್ರವಾರ (ಜು.4) ತಿಳಿಸಿದರು.
ಫ್ರೀಡಂ ಪಾರ್ಕ್‌ನಲ್ಲಿ ನಡೆದ ‘ನಾಡ ಉಳಿಸಿ ಸಮಾವೇಶ’ದ ವೇದಿಕೆಯಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ನಡೆದ ರೈತರು, ಹೋರಾಟಗಾರರ ಜೊತೆಗಿನ ಸರ್ಕಾರದ ಸಭೆಯಲ್ಲಿ ನಡೆದ ಚರ್ಚೆ ಮತ್ತು ಮುಂದಿನ ಹೋರಾಟದ ರೂಪುರೇಷಗಳ ಮಾಹಿತಿ ನೀಡಿದರು.
ಸಿಎಂ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಜುಲೈ 15ರಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ಸಭೆ ಕರೆದಿದ್ದಾರೆ. ಆಯ್ತು ಸಭೆ ಬರ್ತೀವಿ ಎಂದು ಹೇಳಿದ್ದೇವೆ. ಆದರೆ, ಅಂತಿಮ ತೀರ್ಮಾನ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನವನ್ನು ಕೈ ಬಿಡ್ತೀನಿ ಎಂದಷ್ಟೇ ನೀವು ಹೇಳಬೇಕು ಎಂಬುವುದಾಗಿ ತಿಳಿಸಿ ಬಂದಿದ್ದೇವೆ ಎಂದರು.
ಮುನಿಯಪ್ಪ ಮತ್ತು ಎಂ.ಬಿ ಪಾಟೀಲ್ ಕುತಂತ್ರದಿಂದ ರೈತರ ಭೂಮಿ ಕಬಳಸಲು ಭೂಗಳ್ಳರಾಗಿ ನಿಂತಿದ್ದಾರೆ ಅವರಿಗೆ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದೇವೆ. ಅವರು ಭೂಮಿಯನ್ನು ಕಿತ್ತುಕೊಳ್ಳೂವುದಕ್ಕೆ ಸಾಧ್ಯವಿಲ್ಲ, ನಾವು ಭೂಮಿ ಬಿಟ್ಟುಕೊಡುವ ಪ್ರಶ್ನೆಯೂ ಇಲ್ಲ ಇದಂತೂ ಸ್ಪಷ್ಟ ಎಂದು ಇದೇ ವೇಳೆ ತಿಳಿಸಿದರು.
ನಾವು ಕೈಗಾರಿಕೆ ವಿರೋಧಿಗಳಲ್ಲ. ಆದರೆ, ಬೆಂಗಳೂರು ಸುತ್ತಮುತ್ತಲೇ ಕಾರ್ಖಾನೆಗಳು ಏಕೆ ಬೇಕು? ಅವೈಜ್ಞಾನಿಕವಾದ ಅಭಿವೃದ್ಧಿ ತಂತ್ರವನ್ನು ಕೈ ಬಿಡಿ ಎಂದು ಎಚ್ಚರಿಸಿ ಬಂದಿದ್ದೇವೆ ಎಂದು ಹೇಳಿದರು.
ಭೂ ಸ್ವಾಧೀನ ಹಿಂಪಡೆಯಬೇಕಾದರೆ ಕಾನೂನು ತೊಡಕುಗಳಿವೆ. ಒಮ್ಮತದ ತೀರ್ಮಾನ ಆಗಬೇಕಿದೆ. ಅದಕ್ಕೆ 10 ದಿನಗಳ ಸಮಯ ಬೇಕು ಎಂದು ಸಿಎಂ ಕೇಳಿದ್ದಾರೆ. ಜುಲೈ 15ಕ್ಕೆ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರ ಮಾತು ಕೇಳಿ ಜನಚಳವಳಿಗಳು ಮೈ ಮರೆಯುವುದಿಲ್ಲ. ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.
ದೇವನಹಳ್ಳಿ ಭೂ ಸ್ವಾಧೀನ| ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಸಿಎಂ ಸಿದ್ದರಾಮಯ್ಯ


