ಮೈಸೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಈ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಖ್ಯಾತ ನಟ, ನಿರ್ದೇಶಕ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರು, ಸರ್ಕಾರ ರೈತರ ಒಗ್ಗಟ್ಟನ್ನು ಒಡೆಯಲು ಮತ್ತು ಅವರನ್ನು ಹೆದರಿಸಲು ಹೊಸ ನಾಟಕವಾಡುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ನಾವು ರೈತರ ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದು, ದೊಡ್ಡ ಹೋರಾಟಕ್ಕೆ ಸಿದ್ಧತೆ ನಡೆಸುವುದಾಗಿ ಘೋಷಿಸಿದ್ದಾರೆ.
‘ಇದು ಹಸಿರು ವಲಯ, ಸ್ಲಂ ಆಗುತ್ತಿದೆ ಬೆಂಗಳೂರು’: ಸರಕಾರವು ಈ ದೇವನಹಳ್ಳಿಯ ಈ ಭೂಸ್ವಾಧೀನ ಪ್ರದೇಶವನ್ನು ‘ಹಸಿರು ವಲಯ’ ಮಾಡುವುದಾಗಿ ಹೇಳುತ್ತಿರುವುದನ್ನು ಪ್ರಶ್ನಿಸಿದ ಪ್ರಕಾಶ್ ರಾಜ್, “ಆ ಭೂಮಿ ಈಗಾಗಲೇ ಹಸಿರು ವಲಯವಾಗಿದೆ. 1500 ಎಕರೆ ಭೂಮಿಯಲ್ಲಿ ಭೂರಹಿತರಿದ್ದಾರೆ, ಅವರಿಗೆ ಏನು ಪರಿಹಾರ ನೀಡುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. “ಯಾರೋ ಒಬ್ಬರು ಸಚಿವರು ಅದು ಹಾಗೆ ಬಿಟ್ಟರೆ ಸ್ಲಂ ಆಗುತ್ತದೆ ಎಂದು ಹೇಳುತ್ತಾರೆ. ಆದರೆ, ಇಡೀ ಬೆಂಗಳೂರನ್ನು ವಶಪಡಿಸಿಕೊಂಡು ಸ್ಲಂ ಮಾಡುತ್ತಿರುವುದು ನೀವೇ” ಎಂದು ಅವರು ಸರ್ಕಾರವನ್ನು ದೂರಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ‘ನಾಟಕ’ದ ಆರೋಪ: “ಸರಕಾರದ ಪ್ರತಿನಿಧಿಗಳು ನಿನ್ನೆಯಿಂದ (ಜು.10) ಹೊಸ ನಾಟಕ ಮಾಡುತ್ತಿದ್ದಾರೆ. ರೈತರ ನಡುವಿನ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಮಯ ಕೇಳಿ ಸರಕಾರವು ರೈತರಿಗೆ ದ್ರೋಹ ಬಗೆಯುತ್ತಿದೆ. ಈ ರೀತಿ ನಾಟಕ ಮಾಡಬೇಡಿ ಸಿದ್ದರಾಮಯ್ಯನವರೇ, ರೈತರನ್ನು ನೀವೂ ಹೆದರಿಸಬೇಡಿ” ಎಂದು ಪ್ರಕಾಶ್ ರಾಜ್ ನೇರವಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಸರ್ಕಾರ ಮನವಿ ಮಾಡಿಕೊಂಡಂತೆ ನಡೆದುಕೊಳ್ಳುತ್ತಿಲ್ಲ, ಬದಲಾಗಿ ಸರಕಾರ ಈಗ ಏನು ಮಾಡುತ್ತಿದೆ ಎಂಬುದು ಜನರಿಗೆ ನೇರವಾಗಿ ಗೊತ್ತಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಸಿದ್ದರಾಮಣ್ಣ, ಎಂ.ಬಿ.ಪಾಟೀಲ್ ಅವರೇ, ನಿಮ್ಮ ನಾಟಕ ಗೊತ್ತಾಗುತ್ತಿದೆ. ಹಳ್ಳಿಗಳಿಗೆ ನಿಮ್ಮ ಪುಡಾರಿಗಳು ಹೋಗಿ ರೈತರಿಗೆ ಭಯ ಹುಟ್ಟಿಸುತ್ತಿದ್ದಾರೆ. ಅದರಲ್ಲಿ ಕೆಲವರನ್ನು ಕರೆದುಕೊಂಡು ಬಂದು ಪರಿಹಾರ ಕೇಳಿಸುತ್ತಿದ್ದಾರೆ. ಇದೆಲ್ಲವೂ ನಾಟಕ ಎಂದು ಜನರಿಗೆ ಮತ್ತು ನಮಗೆ ನೇರವಾಗಿ ಗೊತ್ತಾಗುತ್ತಿದೆ” ಎಂದು ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭೂಸ್ವಾಧೀನಕ್ಕೆ ಅವಕಾಶವಿಲ್ಲ, ದೊಡ್ಡ ಹೋರಾಟದ ಎಚ್ಚರಿಕೆ: “ದೇವನಹಳ್ಳಿ ರೈತರ ಭೂಮಿಯನ್ನು ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ. ದೊಡ್ಡಮಟ್ಟದ ಹೋರಾಟವನ್ನೇ ಮಾಡುತ್ತೇವೆ” ಎಂದು ಪ್ರಕಾಶ್ ರಾಜ್ ಖಡಾಖಂಡಿತವಾಗಿ ಹೇಳಿದ್ದಾರೆ. ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದು, ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಹೋರಾಟದ ಸ್ವರೂಪ ನಿರ್ಣಯಿಸಲಾಗುವುದು ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ: ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ದೇವನಹಳ್ಳಿಯ ಭೂಸ್ವಾಧೀನ ಸಂಬಂಧಪಟ್ಟಂತೆ ಬಿಜೆಪಿ ಸರಕಾರವು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆಗ ಸಿದ್ದರಾಮಯ್ಯನವರು ರೈತರ ಪರವಾಗಿ ಹೋರಾಟ ಮಾಡಿದ್ದರು. ಆದರೆ, ಅವರು ಮುಖ್ಯಮಂತ್ರಿಯಾದ ಮೇಲೆ ಮಂತ್ರಿಗಳ ಪ್ರಭಾವಕ್ಕೆ ಮಣಿದಿದ್ದಾರೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ. “ಇದು ಮುಖ್ಯಮಂತ್ರಿಯಿಂದ ರೈತ ವಿರೋಧಿ ನಿಲುವುವಾಗಿದೆ” ಎಂದು ಅವರು ಖಂಡಿಸಿದ್ದಾರೆ.
‘ನಾನು ಕನ್ನಡಿಗ, ಕರ್ನಾಟಕದ ಮಗ’: ಎಂ.ಬಿ.ಪಾಟೀಲ್‌ಗೆ ಸವಾಲು “ನಾನು ಕನ್ನಡಿಗ, ಕರ್ನಾಟಕದ ಮಗ, ರಾಜ್ಯದ ರೈತರ ಪರ ಹೋರಾಟ ಮಾಡುತ್ತೇನೆ” ಎಂದು ಘೋಷಿಸಿದ ಪ್ರಕಾಶ್ ರಾಜ್, “ಆಂಧ್ರ, ಗುಜರಾತ್‌ನಲ್ಲಿ ಹೋರಾಟ ಮಾಡಿ ಎಂದು ಹೇಳಲು ಎಂ.ಬಿ.ಪಾಟೀಲ್ ಯಾರು?” ಎಂದು ಸಚಿವ ಎಂ.ಬಿ.ಪಾಟೀಲ್ ಅವರನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮ ಹೋರಾಟದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ 13 ಗ್ರಾಮಗಳ ರೈತರು, ಕೈಗಾರಿಕಾ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ತಮ್ಮ ಭೂಮಿಯನ್ನು “ಬಲವಂತವಾಗಿ” ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಸಾವಿರದ ನೂರು ದಿನಗಳಿಗಿಂತಲೂ ಹೆಚ್ಚು ಕಾಲ ಆಂದೋಲನ ನಡೆಸುತ್ತಿದ್ದಾರೆ. 2022ರಲ್ಲಿ, ಬಸವರಾಜ ಬೊಮ್ಮಾಯಿ ಸರ್ಕಾರವು ಉದ್ದೇಶಿತ ಹೈಟೆಕ್ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ 1,777 ಎಕರೆ ಭೂಮಿಯನ್ನು ಅಧಿಸೂಚಿಸಿತ್ತು. ಈ ಅತ್ಯಂತ ಫಲವತ್ತಾದ ಪ್ರದೇಶವು ಬೆಂಗಳೂರಿನ ಆಹಾರ ಮತ್ತು ಪೋಷಕಾಂಶ ಭದ್ರತೆಗೆ ಜೀವನಾಡಿಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಗುರಪ್ರಸಾದ್ ಕೆರೆಗೋಡು, ಸಿದ್ದರಾಜು ಮುಂತಾದವರು ಉಪಸ್ಥಿತರಿದ್ದರು.


