Homeಚಳವಳಿಮಾತ್ಮ ಗಾಂಧಿ ಅಂದ್ರ ಏನ್ ಅಂದ್ಕಂಡಿದ್ದೀರಿ? : 'ಗಾಂಧಿ-150' ನೆನಪಿನಲ್ಲಿ ದೇವನೂರು ಮಹಾದೇವರವರ ಸಂದರ್ಶನ

ಮಾತ್ಮ ಗಾಂಧಿ ಅಂದ್ರ ಏನ್ ಅಂದ್ಕಂಡಿದ್ದೀರಿ? : ‘ಗಾಂಧಿ-150’ ನೆನಪಿನಲ್ಲಿ ದೇವನೂರು ಮಹಾದೇವರವರ ಸಂದರ್ಶನ

ಗಾಂಧಿ ಅಸ್ಪೃಶ್ಯತೆಯನ್ನು ‘ಪಾಪ’ (Sin) ಎನ್ನುತ್ತಾರೆ. ಅದೇ ಅಂಬೇಡ್ಕರ್ ‘ಅಪರಾಧ’(crime) ಅನ್ನುತ್ತಾರೆ. ಈ ಎರಡನ್ನೂ ಪರಸ್ಪರ ವಿರೋಧ ಎಂದು ನಾವು ನೋಡುತ್ತಿರುವುದು ಯಾಕೆ? ಎರಡೂ ಅಗತ್ಯ ಎಂದು ಪರಿಗಣಿಸುವುದು ವಿವೇಕ.

- Advertisement -
- Advertisement -

ಇಂದು ಮಹಾತ್ಮ ಗಾಂಧೀಜಿಯವರು ಹುಟ್ಟಿ 150 ವರ್ಷ. ವಿಶ್ವದೆಲ್ಲೆಡೆ ಈ ಶಾಂತಿದೂತನನ್ನು ಪ್ರೀತಿ ಗೌರವಗಳಿಂದ ಸ್ಮರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಾಂಧಿ ಬಗ್ಗೆ ವಿಶೇಷ ಆಸ್ಥೆ ಇಟ್ಟುಕೊಂಡಿರುವ ಕನ್ನಡದ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವರವರನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಸಂದರ್ಶಿಸಿದೆ. ಅದರ ಕನ್ನಡ ಅನುವಾದವನ್ನು ನಮ್ಮಬನವಾಸಿ ಪ್ರಕಟಿಸಿದ್ದು ಗೌರಿ ಓದುಗರ ಬಳಗಕ್ಕಾಗಿ ಇಲ್ಲಿಯೂ ಪ್ರಕಟಿಸಲಾಗುತ್ತಿದೆ.

ಸಂದರ್ಶನ: ಅಮೃತಾ ದತ್, [ದಿ ಇಂಡಿಯನ್ ಎಕ್ಸ್ ಪ್ರೆಸ್ [ನವದೆಹಲಿ ಆವೃತ್ತಿ]

ಕೃಪೆ: ನಮ್ಮ ಬನವಾಸಿ www.nammabanavasi.com

ಪ್ರಶ್ನೆ: ಗಾಂಧೀಜಿಯವರಿಗೆ ಯಾವಾಗ ನಿಮ್ಮ ಮೊದಲ ಮುಖಾಮುಖಿ?

ದೇ.ಮ: ನಾನು ಶಾಲಾ ಬಾಲಕನಾಗಿದ್ದಾಗ ಮೊದಲು ಗಾಂಧಿ ಹೆಸರು ಕೇಳಿದ್ದು, ನಮ್ಮೂರ ಜನರ ಮಾತುಕತೆಗಳಲ್ಲಿ-“ಮಾತ್ಮ ಗಾಂಧಿ ಅಂದ್ರ ಏನ್ ಅಂದ್ಕಂಡಿದ್ದೀರಿ? ಅವ ನರಪೇತಲನಂತೆ. ಅಂತವನೇ ಪರಂಗಿಯವರಿಗೇನೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದನಂತೆ. ಅವನು ಕೊಡೊ ಕಷ್ಟ ತಡೀಲಾರದ ಪರಂಗಿಯವರು ಅವನನ್ನ ಹಿಡಿದು ಸೊಳ್ಳೆ ಮನೆ (ಜೈಲಿ)ಗೆ ಕೂಡಿ ಹಾಕೊರಂತೆ. ದಪ್ಪ ಬೀಗ ಜಡಿಯೋರಂತೆ. ರಾತ್ರಿ ಕೂಡಿ ಹಾಕಿದರೆ ಈ ಗಾಂಧಿ ಎಂಬವ ಬೆಳಗಾಗದೊರಳಗಾಗಿ ಜೈಲಿಂದ ಹೊರಕ್ಬಂದು ಟೋಪಿ ಸರಿ ಮಾಡ್ಕತ್ತ, ನೆಗಾಡ್ತಿದ್ದನಂತೆ! ಆಮೇಲೆ ಹಾಕಿದ ಬೀಗ ಹಾಕ್ದಂಗೆ ಇರೋದಂತೆ!! ಅವ ಎಂಥ ಮಾಯಾವಿ ಇರಬೇಕು!!!” ಈಗಲೂ ನನ್ನ ಮನಸ್ಸೊಳಗೆ ಗಾಂಧಿ ಎಂದಾಕ್ಷಣ ಈ ಗಾಂಧೀನೂ ಜೊತೆಗಿರುತ್ತಾನೆ.

• ಸ್ವಾತಂತ್ರ್ಯೋತ್ತರ ಕಾಲಮಾನದಲ್ಲಿ ಹುಟ್ಟಿದ ನಿಮಗೆ, ತಾರುಣ್ಯದಲ್ಲಿ ಗಾಂಧೀಜಿಯವರ ಪ್ರಭಾವ ಹೇಗಿತ್ತು?

ದೇ.ಮ:  “ನಾನು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಓದುವಾಗ ಆರ್‌ಎಸ್‍ಎಸ್‍ನ ‘ಹಿಂದೂ ಒಂದು’ ಎಂಬ ಮೋಹಕ ಬಲೆಗೆ ಬಿದ್ದಿದ್ದೆ. ಯಾವಾಗ ಪಿಯುಸಿ ಫೇಲಾಯ್ತು, ಆವಾಗ ನನ್ನ ಜೀವನ ಗತಿ ಬದಲಾಯ್ತು. ಈ ಕಾಲಾವಾಧಿಯಲ್ಲಿ ಲೋಹಿಯಾ ಸಮಾಜವಾದಿಗಳ ಹಾಗೂ ನವ್ಯ ಸಾಹಿತಿಗಳ ಒಡನಾಟಕ್ಕೆ ಬಿದ್ದೆ. ಹಾಗಾಗಿ ನಾನು ಗಾಂಧಿಯನ್ನು ಕಂಡದ್ದು ಲೋಹಿಯಾ ಕಣ್ಣಲ್ಲಿ ಎಂದು ಕಾಣುತ್ತದೆ. ಲೋಹಿಯಾ, ಅಂಬೇಡ್ಕರ್‍ರನ್ನು ನೈತಿಕತೆ ಸ್ವಭಾವದ ಸಮುದಾಯದ ನಾಯಕ ಎಂದು ಪರಿಗಣಿಸಿದ್ದರು. ನಾನು ಒಂದು ಸಮತೋಲನದ ನೋಟ ಪಡೆಯಲು ಇವೆಲ್ಲಾ ಕಾರಣವಾಗಿರಬಹುದು.

• ನಿಮ್ಮ ಬರಹಗಳಲ್ಲಿ ಗಾಂಧಿ ರಾಜಕಾರಣವನ್ನು ಅಭಿವ್ಯಕ್ತಿಸಬಹುದೆಂಬ ಅರಿವು ನಿಮಗೆ ಯಾವಾಗ ಬಂತು?

ದೇ.ಮ: ಇದು ರೂಢಿಗತ ಮಾತು. ನನ್ನ ಕತೆಗಳಾಗಲಿ ಕಾದಂಬರಿಯಾಗಲಿ ಅದು ಬದುಕಿನ ಹಾಡುಪಾಡೇ ಹೊರತು ಎಲ್ಲೂ ಯಾವ ವಾದ, ಇಸಂ ಸೋಂಕು ಇಲ್ಲ ಅಂದುಕೊಂಡಿದ್ದೇನೆ. ಅದು ಕಂಡಲ್ಲಿ ಗುಂಡು! ಜೀವನ ಗ್ರಹಿಕೆಯಲ್ಲಿ ಕಾರುಣ್ಯದ ಹೃದಯ ಬಡಿತಗಳನ್ನು ಅದು ಪುರಾಣವೊ, ಜಾನಪದವೊ, ವೈಚಾರಿಕವೊ, ಸಮುದಾಯದ ನುಡಿಗಟ್ಟೋ ಎಲ್ಲಿದ್ದರೂ ನನ್ನವಾಗಿ ಬಿಡುತ್ತವೆ: ಉದಾ- ‘ನಿಮ್ಮ ಜೀವನ ದೃಷ್ಟೀನೋ, ಲೋಕ ದೃಷ್ಟೀನೋ… ಯಾವುದು?’ ಎಂದು ಕೇಳಿದಾಗ ಜಾರ್ಗನ್ ತಾಂತ್ರಿಕ ಪದಗಳಿಂದ ಹೇಳಲು ನನ್ನ ನಾಲಿಗೆ ತೊದಲುತ್ತದೆ. ಅಥವಾ ನಾನು ಕಲಿತ ವಿದ್ಯೆಯಿಂದಲೋ ಪಡೆದ ಜ್ಞಾನದಿಂದಲೋ ಹೇಳಹೊರಟರೆ ನನಗೆ ತುಂಬಾ ಶ್ರಮವಾಗುತ್ತದೆ. ಕಲಿತ ವಿದ್ಯೆಯನ್ನು ಅರಗಿಸಿಕೊಂಡು ಕಣ್ಮುಂದೆ ಕಾಣುವ ಜೀವನ ವಿವರಗಳಲ್ಲಿ ಹೇಳ ಹೊರಟರೆ ನನಗೆ ‘ದೊಂಬರ ಪರ’ ಕಾಣುತ್ತದೆ: ಮನರಂಜನೆ ನೀಡುತ್ತ ಹೊಟ್ಟೆ ತುಂಬಿಸಿಕೊಳ್ಳುವ ನಮ್ಮ ಅಲೆಮಾರಿ ಸಮುದಾಯದ ದೊಂಬರು ಆಗಾಗ ‘ಪರ’ ಎಂದು ಮಾಡುತ್ತಾರೆ. ತಾವು ಸಂಗ್ರಹಿಸಿದ ದವಸ ಧಾನ್ಯಗಳಿಂದ ಒಟ್ಟಿಗೆ ಅಡಿಗೆ ಮಾಡಿ ಒಟ್ಟಿಗೆ ಒಂದು ಮರದ ಕೆಳಗೆ ಉಣ್ಣುತ್ತಾರೆ. ಈ ಸಾಮೂಹಿಕ ಉಣ್ಣುವ ಕ್ರಿಯೆಗೆ ಮೊದಲು ನಾನಾ ಕಾರಣಗಳಿಂದ ಪಂಕ್ತಿಗೆ ಬರಲಾಗದಿದ್ದವರನ್ನೆಲ್ಲಾ ಲೆಕ್ಕ ಹಾಕಿ ಉದಾಹರಣೆಗೆ- ನಡೆಯಲಾಗದ ವಯಸ್ಸಾದವರು, ಖಾಯಿಲೆ ಬಿದ್ದು ಬರಲಾಗದವರು, ಬಸುರಿ ಬಾಣಂತಿಯರು ಹೀಗೆ ಪಂಕ್ತಿ ಊಟಕ್ಕೆ ಬಾರದವರ ಪಾಲನ್ನು ಎತ್ತಿಡುತ್ತಾರೆ. ಹೀಗೆ ಮಾಡುವಾಗ ಬಸುರಿ ಹೆಣ್ಣುಮಕ್ಕಳಿಗೆ ಎರಡು ಪಾಲು ಎತ್ತಿಡುತ್ತಾರೆ. ಒಂದು ಪಾಲು ಆ ಗರ್ಭಿಣಿ ಹೆಂಗಸಿಗೆ, ಇನ್ನೊಂದು ಪಾಲು ಗರ್ಭಸ್ಥ ಶಿಶುವಿಗೆ. ಬಹುಶಃ ಇದು ನನ್ನ ಲೋಕದೃಷ್ಟಿ? ವಿವರಗಳಲ್ಲಿ ನೋಡದೇ ಅಂತರಂಗದ ಸ್ಪಿರಿಟ್ ಹಿಡಿದು ನೋಡಿದರೆ ಅಲ್ಲಿ ಗಾಂಧಿ, ಅಂಬೇಡ್ಕರ್, ಕಾರ್ಲ್ ಮಾರ್ಕ್ಸ್ ಮುಂತಾದ ಸಮಾನತೆಯ ಆಶಯದ ಎಲ್ಲರೂ ಆ ಮರದ ಕೆಳಗೆ ಕೂಡುತ್ತಾರೆ ಎಂದು ನೋಡುವವನು ನಾನು.

• ಜಾತಿಯ ವಿಷಯ ಬಂದಾಗ ಇತ್ತೀಚೆಗೆ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ಪರಸ್ಪರ ಎದುರಾಳಿಗಳನ್ನಾಗಿ ನಿಲ್ಲಿಸಲಾಗುತ್ತಿದೆ. ವಿರೋಧೀ ಗುಂಪುಗಳಲ್ಲಿ ಗುರುತಿಸಲಾಗುತ್ತದೆ. ಅವರಿಬ್ಬರನ್ನು ಈ ಮೊದಲಿನಿಂದಲೂ ಹೀಗೆಯೇ ನೋಡಲಾಗುತ್ತಿದೆಯೇ?

ದೇ.ಮ: ಭಾರತದ ಜಾತಿ, ವರ್ಣ ಸಮಸ್ಯೆಯನ್ನು ಎದುರಿಸುವಾಗ ಇತ್ತೀಚೆಗೆ ಗಾಂಧಿ ಮತ್ತು ಅಂಬೇಡ್ಕರ್‍ರನ್ನು ಪರಸ್ಪರ ಎದುರಾಳಿಗಳಂತೆ ನಿಲ್ಲಿಸುವುದು ಹೆಚ್ಚುತ್ತಿದೆ. ಜೊತೆಗೆ ವಾದಗಳಾಚೆಗಿನ ಪರಿಣಾಮ ಪರಿಗಣಿಸಿ ಗಾಂಧಿ, ಅಂಬೇಡ್ಕರನ್ನು ಕೂಡಿಸಿ ನೋಡುವ ಪ್ರಯತ್ನವೂ ಅಲ್ಲಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ಸಂದರ್ಭದ ಮೊದಲ ತಲೆಮಾರಿನ ದಲಿತರಿಗೆ ಈ ಗೊಂದಲ, ದ್ವಂದ್ವ ಹೆಚ್ಚಾಗಿ ಇರಲಿಲ್ಲ ಅನ್ನಿಸುತ್ತದೆ. ಮೊದಲ ತಲೆಮಾರಿನ ದಲಿತರ ಮನೆಗಳಲ್ಲಿ ಅಂಬೇಡ್ಕರ್, ಗಾಂಧಿ ಫೋಟೋ ಜೊತೆಯಾಗಿ ಇರುತ್ತಿತ್ತು. ಅವರು ವಾದ ವಿವಾದಕ್ಕಿಂತಲೂ ತಮ್ಮ ಕಠೋರ ದಯನೀಯ ಬದುಕಿನ ಅನುಭವದ ಹಿನ್ನೆಲೆಯಲ್ಲಿ ನಿರ್ಧರಿಸುತ್ತಿದ್ದರು ಎಂದು ಕಾಣುತ್ತದೆ. ಗಾಂಧಿ ಕ್ರಿಯಾಶೀಲತೆಯಿಂದ ಈ ಕ್ರೂರ `ಜಾತಿ ಹಿಂದೂ ಧರ್ಮ’ದ ಸಮಾಜದಲ್ಲಿ ಅಲ್ಪ ಸ್ವಲ್ಪ ಉದಾರತೆ ಬಂದುದನ್ನು ಅವರು ಕಂಡುಂಡಿದ್ದರು. ಗಾಂಧಿಯ ಪ್ರಭಾವದ ಪ್ರಾಮುಖ್ಯತೆ ಆ ಕಾಲದ ದಲಿತರಿಗೆ ಅರಿವಾಗಿತ್ತು ಅಂತ ಅನ್ನಿಸುತ್ತದೆ. ಈ ಕ್ರೂರ `ಜಾತಿ ಧರ್ಮ’ದಲ್ಲಿ ಗಾಂಧಿ ಪ್ರಭಾವದ ಈ ಅಲ್ಪಸ್ವಲ್ಪ ಉದಾರತೆಯೂ ಬಾರದಿದ್ದಲ್ಲಿ ಅದು ದಲಿತರ ನರಕದ ಬದುಕನ್ನು ರೌರವ ನರಕವಾಗಿಸಿಬಿಡುತ್ತಿತ್ತು. ಬಹುಶಃ ಈ ಅರಿವಿನಲ್ಲಿ, ತಮ್ಮ ವಿಮೋಚಕ ಅಂಬೇಡ್ಕರ್‌ರನ್ನೂ, ಹಾಗೇ ತಾವು ಉಸಿರಾಡಲು ಕಾರಣರಾದ ಗಾಂಧಿಯನ್ನೂ ಒಟ್ಟಿಗೆ ನೆನೆಯುತ್ತಿದ್ದರು ಎಂದು ಕಾಣುತ್ತದೆ.

• ಅಂಬೇಡ್ಕರ್ ಅವರಂತೆ ಗಾಂಧೀಜಿಯು ದಲಿತರಿಗೆ, ಅವರ ವಿಮೋಚನೆಯ ನುಡಿಗಟ್ಟನ್ನಾಗಲೀ, ಹಕ್ಕಿನ ಪ್ರತಿಪಾದನೆಯನ್ನಾಗಲೀ ಜೊತೆಗೆ ಸಬಲೀಕರಣದ ದಾರಿಗಳನ್ನಾಗಲೀ ನೀಡಲಿಲ್ಲ ಅಲ್ಲವೇ?

ದೇ.ಮ: ಅಂಬೇಡ್ಕರ್ ದಲಿತರಿಗೆ ವಿಮೋಚನೆಯ ನುಡಿಕೊಟ್ಟರು. ಅಷ್ಟೇಕೆ ಆದಿವಾಸಿಗಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆಲ್ಲಾ ನುಡಿಕೊಟ್ಟರು. ಅಂಬೇಡ್ಕರ್ ಮಲಗಿದ್ದ ದಲಿತರನ್ನು ಎಚ್ಚರಗೊಳಿಸಿ ನಡೆಯಬೇಕಿತ್ತು. ಗಾಂಧಿಯು ‘ಜಾತಿಧರ್ಮ’ದೊಳಗೆ ಮುಳುಗಿದ್ದವರನ್ನು, ಜಾತಿ ಕೂಪದಲ್ಲಿದ್ದವರನ್ನು ಎತ್ತಿ, ತಿದ್ದಿ ತೀಡುತ್ತ ಪ್ರಯಾಸದ ಹೆಜ್ಜೆ ಹಾಕಬೇಕಿತ್ತು. ಇದನ್ನೆಲ್ಲಾ ನೋಡಿದಾಗ ಅಂಬೇಡ್ಕರ್ ಅವರ ಅಸ್ತಿತ್ವ ಹಾಗೂ ಸವಾಲು ಇಲ್ಲದಿದ್ದರೆ ಗಾಂಧಿ ಅಷ್ಟು ದೂರ ಕ್ರಮಿಸುತ್ತಿರಲಿಲ್ಲವೇನೊ, ಹಾಗೇನೆ ಗಾಂಧೀಜಿಯು ‘ಜಾತಿ ಧರ್ಮ’ದ ಕೂಪದಲ್ಲಿ ಉಂಟು ಮಾಡಿದ ಸಹನೆಯ ಉದಾರತೆಯ ವಾತಾವರಣ ಇಲ್ಲದಿದ್ದರೆ ಈ ಕ್ರೂರ ಸವರ್ಣೀಯ ಸಮಾಜ ಆ ಕಾಲದಲ್ಲಿ ಅಂಬೇಡ್ಕರ್ ಅವರನ್ನು ಅಷ್ಟೂ ಸಹಿಸಿಕೊಳ್ಳುತ್ತಿರಲಿಲ್ಲವೇನೊ ಅನ್ನಿಸುತ್ತದೆ.
ಗಾಂಧಿಯವರೂ ಕೂಡ “ಅಸ್ಪೃಶ್ಯತೆಯನ್ನು ಯಾರು ಆಚರಿಸುತ್ತಾರೊ ಅದು ಅವರ ಸಮಸ್ಯೆ, ಅಸ್ಪೃಶ್ಯರದ್ದಲ್ಲ” ಎನ್ನುತ್ತಾರೆ. ಜಾತಿಯಿಂದ ಭಾರತ ಬಿಡುಗಡೆ ಪಡೆಯಬೇಕಾದರೆ ಬದಲಾಗಬೇಕಾದವರು ಮೊದಲು ಸವರ್ಣಿಯರು ಎಂಬ ತಿಳಿವಳಿಕೆ ನಮ್ಮದಾದರೆ, ಗಾಂಧಿ ಅಗತ್ಯವಿದೆ. ಜೊತೆಗೆ ದಲಿತರು ತಮ್ಮ ನಾಗರಿಕ ಹಕ್ಕು ಹಾಗೂ ಸಮಾನತೆಗಾಗಿ ಹೋರಾಡಲು ಅಂಬೇಡ್ಕರ್ ಅತ್ಯವಶ್ಯ. ಹಾಗಾಗಿ ಎರಡೂ ಕೂಡಬೇಕು ಎನ್ನುವವನು ನಾನು. ಉದಾಹರಣೆಗೆ ಗಾಂಧಿ ಅಸ್ಪೃಶ್ಯತೆಯನ್ನು ‘ಪಾಪ’ (Sin) ಎನ್ನುತ್ತಾರೆ. ಅದೇ ಅಂಬೇಡ್ಕರ್ ‘ಅಪರಾಧ’(crime) ಅನ್ನುತ್ತಾರೆ. ಈ ಎರಡನ್ನೂ ಪರಸ್ಪರ ವಿರೋಧ ಎಂದು ನಾವು ನೋಡುತ್ತಿರುವುದು ಯಾಕೆ? ಎರಡೂ ಅಗತ್ಯ ಎಂದು ಪರಿಗಣಿಸುವುದು ವಿವೇಕ.

• ಗಾಂಧೀಜಿ ಅವರಿಂದ ಇಂದು ದಲಿತರು ಏನನ್ನು ನಿರೀಕ್ಷಿಸಬಹುದು?

ದೇ.ಮ: ಒಂದು ಕಡೆ ಬರೆದಿದ್ದೆ: ‘ಗಾಂಧಿ ಮುಂದಿನ ಜನ್ಮದಲ್ಲಿ ಹರಿಜನ ಆಗಿ ಹುಟ್ಟಬೇಕು ಎನ್ನುತ್ತಾರೆ. ಇದು ಆಗುತ್ತೊ ಇಲ್ಲವೊ ನನಗೆ ಗೊತ್ತಿಲ್ಲ. ಆದರೆ ಗಾಂಧಿ ಬದುಕು ಬರಹ ನಡೆಗಳನ್ನು ದಲಿತ ಕಣ್ಣಲ್ಲಿ edit ಮಾಡಿದರೆ ಅಲ್ಲಿ ದಲಿತ ಗಾಂಧಿ ಹುಟ್ಟುತ್ತಾನೆ’ ಅಂತ.

• ಗಾಂಧಿ ಅವರ ಪಿತೃಪ್ರಧಾನ ಧೋರಣೆ ನಿಮಗೆ ಅಸಹನೆ ಉಂಟು ಮಾಡಿದೆಯೇ? ಈಗ ಕೆಲ ದಲಿತ ಯುವತಿಯರು ಗಾಂಧಿ ಅವರ ಈ ಪಿತೃಪ್ರಧಾನ ಧೋರಣೆ ಬಗೆಗೆ ಹಾಗೂ ಅಂಬೇಡ್ಕರ್ ಅವರನ್ನು ಗಾಂಧಿ ನಡೆಸಿಕೊಂಡ ರೀತಿಯ ಬಗೆಗೆ ಕುಪಿತಗೊಂಡಿದ್ದಾರೆ ಆ ಯುವತಿಯರಿಗೆ ನೀವು ಹೇಗೆ ಸಮಜಾಯಿಷಿ ನೀಡುವಿರಿ?

ದೇ.ಮ: ನಾನು ಹಳೆಕಾಲದವನು ಇರಬೇಕು. ‘ಗಾಂಧಿ ಕಠಿಣ ತಂದೆಯಂತೆ’ ಎಂದು ಒಂದು ಕಡೆ ಬರೆದಿದ್ದೆ, ಅಷ್ಟೆ. ಗಾಂಧಿ ರೌಂಡ್ ಟೇಬಲ್ ಚರ್ಚೆ ಸಂದರ್ಭದಲ್ಲಿ ಅಂಬೇಡ್ಕರ್ ಜತೆ ನಡೆದುಕೊಂಡ ಒರಟು ರೀತಿ ಬಗ್ಗೆ ನನಗೆ ಕೋಪವಿದೆ. ದಲಿತ ಯುವತಿಯರು ಗಾಂಧಿಯ ಪಿತೃತ್ವ ಧೋರಣೆಯನ್ನು ಪ್ರತಿಭಟಿಸುತ್ತಿರುವುದರ ಬಗ್ಗೆ ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೂ ಅವರು ಗಾಂಧಿಯ ಜೀವನದ ಗತಿಯನ್ನೊಮ್ಮೆ ಗಮನಿಸಲಿ ಎಂದಷ್ಟೆ ವಿನಂತಿಸುವೆ. ಯಾಕೆಂದರೆ, ಸನಾತನಿಯಾಗಿದ್ದ ಗಾಂಧಿ ಒಂದೇ ಒಂದು ಜೀವಿತಾವಧಿಯಲ್ಲಿ ‘ತಾನು ಅಸ್ಪೃಶ್ಯರು ಮತ್ತು ಸವರ್ಣೀಯರ ವಿವಾಹದಲ್ಲಿ ಮಾತ್ರ ಭಾಗವಹಿಸುವೆ’ ಎನ್ನುವಷ್ಟು ದೂರ ಕ್ರಮಿಸುತ್ತಾರೆ. ಈ ದೂರ ಕ್ರಮಿಸಲು ಗಾಂಧಿ ಎಷ್ಟು ಎದ್ದುಬಿದ್ದು ಉರುಳು ಸೇವೆ ಮಾಡಿರಬಹುದು? ಹಾಗೇ ಗಾಂಧಿ, ‘ನಾನು ಮಹಿಳೆಯಾಗಿ ಹುಟ್ಟಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು ಎಂದು ಎಲ್ಲೋ ಕೇಳಿದ ನೆನಪು ನನಗೆ. ಆಲೋಚನೆಯಲ್ಲಾದರೂ, ಅಸ್ಪೃಶ್ಯನಾಗಿ ಹುಟ್ಟಬೇಕು ಅನ್ನುವುದಾಗಲಿ ಅಥವಾ ಮಹಿಳೆಯಾಗಿ ಹುಟ್ಟಬೇಕು ಎನ್ನುವುದಾಗಲಿ ಯಾಕಾಗಿ ಬರುತ್ತದೆ? ಗಾಂಧಿಗೆ ತಾನು ಮೇಲ್ಜಾತಿಯಲ್ಲಿ ಹುಟ್ಟಿದ್ದಕ್ಕೆ ಜಿಗುಪ್ಸೆಗೊಂಡು ಅಸ್ಪೃಶ್ಯನಾಗಿ ಹುಟ್ಟಬೇಕು ಅನ್ನಿಸಿರುವುದೊ, ಹಾಗೆ ತನ್ನ ಪಿತೃತ್ವದ ಕಾಠಿಣ್ಯಕ್ಕೆ ಜಿಗುಪ್ಸೆಗೊಂಡು ಹೆಣ್ಣಾಗಿ ಹುಟ್ಟಬೇಕು ಅನ್ನಿಸಿರುವುದೂ ಇದ್ದಿರಬಹುದಲ್ಲವೆ?

ನಾವಿಂದು ವಾರಣಾಸಿಯ 16 ವರ್ಷದ ಬಾಲಕನ ಮಾತು: “ಗೋಡ್ಸೆ ಕಾಲ ನಡೆಯುವಲ್ಲಿ ನಾನು ಗಾಂಧಿ ಪರ ನಿಲ್ಲುತ್ತೇನೆ” ಎಂಬ ನುಡಿಯನ್ನು ಆಲಿಸಬೇಕಾಗಿದೆ. ಹಾಗೆ ಇನ್ನೊಂದು ಮಾತು. “ಯಾವುದೇ, ಯಾರದೇ ಮೂಲಭೂತವಾದ, ಮತಾಂಧತೆಯು ಮೊದಲು ಮಾಡುವುದು ತನ್ನವರ, ತನಗೆ ಸೇರಿದವರ ಕಣ್ಣುಗಳನ್ನು ಕಿತ್ತು ಅಂಧರನ್ನಾಗಿಸುವುದು. ಆಮೇಲೆ ಮಿದುಳು ಕಿತ್ತು ವಿವೇಕ ಶೂನ್ಯರನ್ನಾಗಿಸುವುದು. ನಂತರ ಹೃದಯ ಕಿತ್ತು ಕ್ರೂರಿಗಳನ್ನಾಗಿಸುವುದು. ಆಮೇಲೆ ನರಬಲಿ ಕೇಳುವುದು. ಇಂದು ಇದು ಹೆಚ್ಚುತ್ತಿದೆ. ಬಹಳ ತುರ್ತಾಗಿ ನಮ್ಮ ಮಕ್ಕಳ ಕಣ್ಣು ಹೃದಯ ಮಿದುಳುಗಳನ್ನು ಮೂಲಭೂತವಾದ, ಮತಾಂಧತೆಯ ದವಡೆಯಿಂದ ರಕ್ಷಿಸಬೇಕಾಗಿದೆ. ಹಾಗಾಗಿ ಗಾಂಧಿ ಕೊಂದು ಅಲೆದಾಡುತ್ತಿರುವ ಗೋಡ್ಸೆ ಪ್ರೇತಕ್ಕೆ ಮೋಕ್ಷ ಸಿಕ್ಕಿದ ಮೇಲೆ, ಗಾಂಧಿಯನ್ನು ದಲಿತ ಯುವತಿಯರು ವಿಚಾರಿಸಿಕೊಳ್ಳುವುದು ಒಳಿತು. ಈ ಎಚ್ಚರ ಇಲ್ಲದಿದ್ದರೆ ಅಪಾಯ ದಲಿತರ ಬುಡಕ್ಕೇ ಬರುತ್ತದೆ ಎನ್ನುವ ಆತಂಕ ನನ್ನದು.

• ಹಿಂದೆಂದಿಗಿಂತ ಪ್ರಭಾವಶಾಲಿಯಾದ ಆರ್‌‌ಎಸ್‍ಎಸ್‍ನವರು ಇಂದು, ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ‘ನಮ್ಮವರು’ ಎಂದು ಅಭಿಪ್ರಾಯ ರೂಪಿಸುತ್ತಿದ್ದಾರೆ. ಇದನ್ನು ನೀವು ಹೇಗೆ ನೋಡುತ್ತೀರಿ?

ದೇ.ಮ: ಅಂಬೇಡ್ಕರ್‌ರು ‘ಹಿಂದೂವಾಗಿ ಸಾಯಲಾರೆ’ ಎಂದ ದಿನವನ್ನು ಆಚರಣೆ ಮಾಡಿದರೆ, ಜೊತೆಗೆ ಐದಿಂಚಿನ ಭೀಮಾ ಕೋರೆಗಾಂವ್ ಪ್ರತಿಮೆಯನ್ನು ಮನೆಮನೆಗಳಲ್ಲಿ ಇಟ್ಟುಕೊಳ್ಳುವಂತೆ ನೋಡಿಕೊಂಡರೂ ಸಾಕು. ಆರ್‌ಎಸ್‍ಎಸ್ ಇದನ್ನು ಹೇಗೆ ದಕ್ಕಿಸಿಕೊಳ್ಳುತ್ತದೆ? ಇನ್ನು ಗಾಂಧಿಗೆ ಬಂದರೆ, ಗೋಡ್ಸೆ ಪ್ರೇತ ವಿದೇಶಕ್ಕೆ ಭೇಟಿ ನೀಡಿ ಅಲ್ಲಿನ ಪ್ರೇತಗಳಿಗೆ ತನ್ನನ್ನು ಪರಿಚಯಿಸಿಕೊಳ್ಳುವಾಗ ‘ತಾನು ಬುದ್ಧನ ನಾಡಿನವನು ಅಂತಲೊ, ಗಾಂಧಿ ನಾಡಿನವನು ಅಂತಲೊ ಅಥವಾ ಅಂಬೇಡ್ಕರ್ ನಾಡಿನವನು ಅಂತಲೋ ಪರಿಚಯಿಸಿಕೊಳ್ಳಬೇಕಾಗಿ ಬರುತ್ತದೆ. ಈಗ ವರ್ತಮಾನದಲ್ಲಿರುವ ಗೋಡ್ಸೆ ವಿಚಾರಧಾರೆಯ ಸಂತಾನದವರು ಮಾಡುತ್ತಿರುವುದೂ ಇದನ್ನೆ ಅಲ್ಲವೆ?

ಇಂದಿನ ಜಗತ್ತಿನ ಆರ್ಥಿಕ ಅಭಿವೃದ್ಧಿ ವಹಿವಾಟು ಎಂದರೆ ಪಿರಮಿಡ್ಡಿನ ತುದಿಗೆ ಸಂಪತ್ತನ್ನು ಸುರಿದು ಅದು ಹರಿದು ಇಳಿದು ಬುಡ ತಲುಪುವುದಕ್ಕಾಗಿ ಕಾಯ್ದು ಕುಳಿತಿರುವ ಆರ್ಥಿಕತೆಯಾಗಿದೆ. ಅದು ಬುಡ ತಲುಪದೆ ಆರ್ಥಿಕತೆಯೇ ಕುಸಿದು ಬೀಳುತ್ತಿದೆ. ಕೈಗೆ ಕೆಲಸ, ಸ್ವಾವಲಂಬನೆ, ವಿಕೇಂದ್ರೀಕರಣ ಇತ್ಯಾದಿಗಳ ಗಾಂಧಿ ಅನಿವಾರ್ಯವಾಗುತ್ತಿದ್ದಾರೆ. ಇಂದು ಗಾಂಧಿ ಆರ್ಥಿಕತೆಯ ಬಿತ್ತನೆ ಬೀಜಗಳನ್ನು ಹುರಿದು (ಪ್ರೈ) ಮಾಡಿ ಕೆಡದಂತೆ ಇಟ್ಟುಕೊಂಡಿದ್ದಾರೆಯೇ ಹೊರತು ಅವುಗಳನ್ನು ಬಿತ್ತಿ ಬೆಳೆದಿಲ್ಲ. ಆ ಚಿಂತನೆಗಳಿಗೆ ಆಧುನಿಕತೆ ಸ್ಪರ್ಶ ಕೊಟ್ಟು ಬಿತ್ತಿ ಬೆಳೆದು ಇಂದಿನ ಪರಿಸ್ಥಿತಿಗೆ ಸುಧಾರಿತ ತಳಿ ಮಾಡಬೇಕಾಗಿದೆ. ಇ.ಎಫ್.ಶೂಮಾಕರ್ ಅವರ ‘ಸ್ಮಾಲ್ ಈಸ್ ಬ್ಯೂಟಿಪುಲ್’ ಮುಂದುವರೆಸಬೇಕಾಗಿದೆ. ಗಾಂಧಿಯನ್ನು ಗಾಂಧಿಯಲ್ಲಿಯೇ ನೋಡಬಾರದು. ಗಾಂಧಿಯನ್ನು ಚಿಗುರಿಸಿದ ಕಡೆ ಗಾಂಧಿಯನ್ನು ಕಾಣಬೇಕು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...