HomeUncategorizedಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ...

ಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ…

ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡುತ್ತ ಮೈಸೂರಿನಲ್ಲಿ ದೇವನೂರು ಆಡಿದ ಮಾತುಗಳು...

- Advertisement -
- Advertisement -

ಪ್ರಜಾವಾಣಿ ದೀಪಾವಳಿ ಸಂಚಿಕೆಯ ಕಥಾ ಕವನ ಸ್ಪರ್ಧಾ ವಿಜೇತರಿಗೆ ನಾನೀಗ ಬಹುಮಾನ ವಿತರಣೆ ಮಾಡಬೇಕಾಗಿ ಬಂದಿದೆ. ಇಲ್ಲೊಂದು ಗುಟ್ಟು ಹೇಳುವೆ. ಆದರೆ ಒಂದು ಕಂಡೀಷನ್ನು. ಕೇಳಿದ ಮೇಲೆ ಬಹುಮಾನಿತರಾದ ನೀವು- ಎಂಥವನ ಕೈಯಲ್ಲಿ ಪ್ರೈಜ್ ಪಡೆಯಬೇಕಾಗಿ ಬಂತು ಎಂದು ಪರಿತಪಿಸಬಾರದು! ಆ ಗುಟ್ಟು ಏನೆಂದರೆ- ನಾನೂ ಈ ಹಿಂದೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆ ಎರಡು ಸಲ ಕತೆ ಕಳಿಸಿದ್ದೆ. ಪ್ರೈಜ್ ಇರಲಿ, ಮೆಚ್ಚಿಗೇನೂ ಬರಲಿಲ್ಲ. ಆದರೆ ಒಂದು ಕತೆ ಸ್ವಲ್ಪ ದಿನಗಳಾದ ಮೇಲೆ ವಾರದ ಪುರವಣಿಯಲ್ಲಿ ಪ್ರಕಟವಾಯ್ತು. ತಲೆಬರಹವೇನೋ- ‘ವೃತ್ತದಾಚೆ’ ಎಂದು ಇರಬೇಕು. ಆ ಕತೆ ಹೆಚ್ಚೂಕಮ್ಮಿ ದ್ಯಾವನೂರು ಸಂಕಲನದಲ್ಲಿನ ‘ಒಂದು ದಹನದ ಕತೆ’ ಇದೆಯಲ್ಲಾ, ಅಂಥದು.

ಅದಿರಲಿ, ಕನ್ನಡದ ಕಥಾ ಕ್ಷೇತ್ರದಲ್ಲಿನ ಸೂಕ್ಷ್ಮಜ್ಞತೆ ಮತ್ತು ಸಂವೇದನಾಶೀಲತೆಯ ಸ್ತರ ಹೆಚ್ಚಾಗುವಂತಾಗಲು ಪ್ರಜಾವಾಣಿಯ ಕಥಾಸ್ಪರ್ಧೆಯ ಪಾತ್ರ ದೊಡ್ಡದು ಎಂದೆನಿಸುತ್ತದೆ. ಇದಕ್ಕೊಂದು ಉದಾಹರಣೆ ನೀಡುವೆ- ಪ್ರಜಾವಾಣಿ ಕಥಾಸ್ಪರ್ಧೆಗೆ ಸಾಮಾನ್ಯವಾಗಿ ನೂರಾರು ಕತೆಗಳು ಬರುತ್ತವೆ. 1ನೇ ರೌಂಡ್‌ನಲ್ಲಿ ಉಪಸಂಪಾದಕರೊಬ್ಬರು, ಪರಿಗಣಿಸಬಹುದಾದ ಕಥೆಗಳನ್ನು ಆಯ್ಕೆ ಮಾಡಿ ಸಂಪಾದಕರಿಗೆ ನೀಡುವುದು ಮಾಮೂಲಿ. ಯಾವ ಕತೆಗಳನ್ನು ಪರಿಗಣಿಸುವುದಿಲ್ಲವೊ ಅದಕ್ಕೆ ಒಂದು ವಾಕ್ಯದ ನಿರಾಕರಣೆಗೆ ಕಾರಣ ನೀಡಿರುತ್ತಾರೆ. ಹೀಗೊಂದು ಸಲ, ಉಪಸಂಪಾದಕರು ‘ಪೋಲಿ ಕತೆ’ ಎಂದು ಕಾಮೆಂಟ್ ಮಾಡಿ ಕತೆಯೊಂದನ್ನು ರಿಜೆಕ್ಟ್ ಮಾಡಿರುವುದು ಸಂಪಾದಕರ ಕಣ್ಣಿಗೆ ಬೀಳುತ್ತದೆ. ಏನೋ ಪೋಲಿ ಕತೆ, ಓದೇ ಬಿಡುವ ಎಂಬ ಕುತೂಹಲಕ್ಕೋ ಏನೋ ಸಂಪಾದಕರು ಆ ಕತೆ ತರಿಸಿಕೊಂಡು ಓದುತ್ತಾರೆ. ಓದಿ ಬೆರಗಾಗುತ್ತಾರೆ. ಅದೊಂದು ಅತ್ಯುತ್ತಮ ಕತೆಯಾಗಿರುತ್ತದೆ. ಎಂಥಾ ಅನ್ಯಾಯವಾಗಿ ಬಿಡ್ತು ಎಂದು ಹಣೆ ಚಚ್ಚಿಕೊಳ್ಳುತ್ತಾರೆ. ಯಾಕೆಂದರೆ ಪರಿಗಣಿಸಲ್ಪಟ್ಟ ಕತೆಗಳನ್ನು ಆಯ್ಕೆ ಸಮಿತಿಗೆ ಆಗಲೇ ಕಳಿಸಿ ಆಗಿಬಿಟ್ಟಿರುತ್ತದೆ. ಆದರೂ ಆ ಕತೆಯನ್ನು ಆಯ್ಕೆ ಸಮಿತಿಯ ಗಮನಕ್ಕೆ ಕಳಿಸಿಕೊಡುತ್ತಾರೆ.

ಆ ‘ಪೋಲಿ’ ಕತೆಗೆ ಬಹುಮಾನ ಬರುತ್ತದೆ. ಕತೆ ಹೆಸರು- ಹಾಲು ಕುಡಿದ ಹುಡುಗಾ, ಬರೆದವರು- ಅಬ್ದುಲ್ ರಷೀದ್. ಈ ಕತೆ ಹೇಗಿದೆ ಅಂದರೆ- ಒಂದು ಬೆಂಕಿಪೊಟ್ಟಣದಲ್ಲಿ ಇಡಬಹುದಾಗಿದ್ದಂತಹ ಸೂಕ್ಷ್ಮ ನೇಯ್ಗೆಯ ಢಾಕಾದ ನವಿರು ಮಸ್ಲಿನ್ ಸೀರೆಯಂತೆ. ಮುಷ್ಟಿಗೆ ಸಿಗದ ಈ ಕತೆಯನ್ನು ಗುರುತಿಸುವುದು ಸಾಮಾನ್ಯ ವಿಷಯವಲ್ಲ. ಆದರೆ ಸೂಕ್ಷ್ಮಜ್ಞತೆ, ಸಂವೇದನಾಶೀಲತೆ ಇಲ್ಲದ ವಾತಾವರಣ? ಅದು ಕಣ್ಣು ಕಾಣದ ಕುರುಡು ಮತ್ತು ಸಂವೇದನಾಹೀನ ಕುಷ್ಠರೋಗದ ಆಳ್ವಿಕೆಯಲ್ಲಿ ಪ್ರಜೆಗಳೂ ಕಣ್ಣು ಕಾಣದ ಕುರುಡು ಮತ್ತು ಸಂವೇದನಾಹೀನ ಕುಷ್ಠರೋಗಿಗಳು ತುಂಬಿರುವಂತೆ. ಇದಕ್ಕೊಂದು ಉದಾಹರಣೆ ಬೇಕೆ? ನವೆಂಬರ್ 11 ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಒಂದು ಸಣ್ಣ ಸುದ್ದಿ ಒಳಪುಟದಲ್ಲಾದರೂ ಪ್ರಕಟವಾಗಿದೆ. ಅದು ತುಷಾರ್ ಗಾಂಧಿ ಹೇಳಿಕೆ. ಅವರು ಹೇಳುತ್ತಾರೆ: “ಗಾಂಧಿ ಕೊಲೆ ಪ್ರಕರಣವನ್ನು ಇಂದು ಸರ್ವೋಚ್ಛ ನ್ಯಾಯಾಲಯವು ಮರು ವಿಚಾರಣೆ ನಡೆಸಿದ್ದರೆ `ಗೋಡ್ಸೆ ಕೊಲೆಗಾರ, ಆದರೆ ದೇಶಭಕ್ತ’ ಎಂದು ತೀರ್ಪು ಬರುತ್ತಿತ್ತು” ಎನ್ನುತ್ತಾರೆ. ಮುಂದೆ, “ಈ ತೀರ್ಪಿನಿಂದ ನ್ಯಾಯಾಂಗ ವ್ಯವಸ್ಥೆಗೆ ‘ನಂಬಿಕೆಯ ಅಪರಾಧ (crime of belief)’ ಎಂಬ ಹೊಸ ಕೆಟಗರಿ ಸೇರ್ಪಡೆಯಾದಂತಾಯಿತು” ಎನ್ನುತ್ತಾರೆ. ಜೊತೆಗೆ, “ತೀರ್ಪನ್ನು ಒಪ್ಪದಿದ್ದರೂ ಅದನ್ನು ಸ್ವೀಕರಿಸಬೇಕು ಹಾಗೂ ಅದಕ್ಕೆ ವಿಧೇಯರಾಗಿರಬೇಕು” ಎನ್ನುತ್ತಾರೆ. ಕನಿಷ್ಠ ನಮ್ಮ ಮಾಧ್ಯಮಗಳಾದರೂ ಸಂವೇದನಾಶೀಲತೆ ಉಳಿಸಿಕೊಂಡಿದ್ದಲ್ಲಿ ಇದು ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುತ್ತಿತ್ತು. ದೃಶ್ಯಮಾಧ್ಯಮಗಳಲ್ಲಿ ಗಂಭೀರ ಚರ್ಚೆ ವಿಷಯವಾಗುತ್ತಿತ್ತು.

ಇಂತಹ ವಿಷಮ ವಾತಾವರಣದಲ್ಲಿ ಒಂದು ಕುತೂಹಲ ನನಗೆ. ಆ ನವಿರು ಕತೆ ಬರೆದ ರಷೀದ್ ಈ ಕಾಲದ ಇಪ್ಪತ್ತು ವರ್ಷದ ಯುವಕನಾಗಿದ್ದರೆ, ಇಂದಿನ ವಾಟ್ಸಪ್, ಫೇಸ್‌ಬುಕ್ ಗೀಳಿನ ನಡುವೆ ಅಂಥ ಕತೆ ಬರೆಯುತ್ತಿದ್ದನೆ? ರಷೀದ್‌ನಂತಹ ಪ್ರತಿಭಾವಂತರು ಈ ಕಾಲದಲ್ಲಿ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಮುಳುಗೇಳುತ್ತ ಕಳೆದು ಹೋಗುತ್ತಿರಬಹುದೆ? ನಾನು ಹೇಳುತ್ತಿರುವುದು ಇರಬಹುದು ಅಥವಾ ಇಲ್ಲದೇನೂ ಇರಬಹುದು. ಇಂದಿನ ವಾಟ್ಸಪ್, ಫೇಸ್‌ಬುಕ್‌ಗಳ ಕಡೆ ಕಣ್ಣಾಡಿಸಿದರೆ ಬಹುತೇಕ ಸ್ವಯ ಇಲ್ಲದ ಬಯಲು ಶೌಚಾಲಯದಂತೆ ಕಂಡುಬರುತ್ತದೆ. ಇದು ಸ್ನಾನಗೃಹವಾಗಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಇದನ್ನು ಯಾಕೆ ಹೇಳಿದೆನೆಂದರೆ- ಸೂಕ್ಷ್ಮತೆ, ಸಂವೇದನಾಶೀಲತೆಯ ಅಭಿರುಚಿ ಉಂಟಾಗಲು ತನ್ನ ಕಾಣ್ಕೆ ನೀಡುತ್ತಿರುವ ಪ್ರಜಾವಾಣಿಗೆ ಒಂದು ಸಾಧ್ಯತೆಯ ಬಗ್ಗೆ ಗಮನ ಸೆಳೆಯುವುದಕ್ಕಾಗಿ. ಏನೆಂದರೆ, ಹೇಗೂ ವೆಬ್-ಪೋರ್ಟಲ್ ಇದೆ. ಅದರಲ್ಲಿ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಕಥೆ, ಕವನ, ಚುಟುಕು, ಚಿತ್ರ, ಪ್ರಬಂಧ, ವರದಿ, ಇತ್ಯಾದಿಗಳಲ್ಲಿ ಉತ್ತಮ ಗುಣಮಟ್ಟದವುಗಳನ್ನು ಆಯ್ಕೆ ಮಾಡಿ ಪ್ರಕಟಿಸುವುದಾದರೆ ಇದರಿಂದಾಗಿ ವಾಟ್ಸಪ್, ಫೇಸ್‌ಬುಕ್‌ಗಳ ಅಭಿರುಚಿ ಹೆಚ್ಚುವಂತಾಗಬಹುದೆ? ಈ ಆಸೆ ನನ್ನದು.

ಯಾಕೆಂದರೆ, ಇಂದು ನಮ್ಮ ಯುವಜನತೆ ಅಭಿವ್ಯಕ್ತಗೊಳ್ಳಬೇಕಾಗಿದೆ. ಸಮುದಾಯದ ಧ್ವನಿಯಾಗಬೇಕಾಗಿದೆ. ಭಾರತದಲ್ಲಿ ಸುಮಾರು 137 ಕೋಟಿ ಬಾಯಿಗಳಿವೆ. 137 ಕೋಟಿ ಹೊಟ್ಟೆಗಳು ಇವೆ. 274 ಕೋಟಿ ಕೈಗಳಿವೆ. ಈ ಕೈಗಳಿಗೆ ಕೆಲಸ ಸಿಗುವಂತಾಗಿ ಅವುಗಳ ಹೊಟ್ಟೆ ತುಂಬಿಸಬೇಕಾಗಿದೆ. ಇಂದು ಉದ್ಯೋಗ ಕುಸಿತವಾಗುತ್ತ ಜನರು ಉದುರಿ ಹೋಗುತ್ತಿದ್ದಾರೆ. ಇಂಥಲ್ಲಿ ಜೀವಗಳನ್ನು ಉಳಿಸುವ ಯೋಜನೆ ರೂಪಿಸಬೇಕಾಗಿದೆ. ಆದರೆ ಹೊಟ್ಟೆಗೆ ಹೊಡೆಯುವುದನ್ನೆ ಆಳ್ವಿಕೆಯು ಅಭಿವೃದ್ಧಿ ಎಂದುಕೊಂಡಿದೆ. ಇದಕ್ಕೆ ಉದಾಹರಣೆ- ಇಂದು ಇಲ್ಲಿ ಚರ್ಚಿತವಾಗುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ- ಇಂಥವು. ಎಷ್ಟಂತ ಹೇಳುವುದು? ಭಾರತದಲ್ಲೀಗ ಆಳ್ವಿಕೆ ಮತ್ತು ಪೂತನಿ (crony) ಬಂಡವಾಳಶಾಹಿ ಜೊತೆಗೂಡಿಕೊಂಡು ಉದ್ಯೋಗನಾಶ ಯಜ್ಞ ಮಾಡುತ್ತಿವೆ. ಉದ್ಯೋಗದ ಸ್ಥಿತಿಗತಿ ಸ್ವ್ವಾತಂತ್ರ್ಯ ಪೂರ್ವ ಕಾಲದ ದಯಾನೀಯ ಸ್ಥಿತಿಗೆ ತಲುಪಲು ಧಾವಿಸುತ್ತಿದೆ. ಜನ ಸಮುದಾಯಕ್ಕೆ ಬೀದಿಗೆ ಬೀಳುವುದರ ಅರಿವು ಬಾರದಿರಲೆಂದು ಆ ಅಮಾಯಕರಿಗೆ ಭಾವನಾತ್ಮಕ ಅಫೀಮು ಕುಡಿಸಲಾಗುತ್ತಿದೆ. ಟಿಪ್ಪು ಅಂತಾರೆ, ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಅನ್ನುತ್ತಾರೆ, ಗೋಮಾತೆ ಅನ್ನುತ್ತಾರೆ, ಮೈಸೂರು ಪಾಕು ನಮ್ಮದು ಅನ್ನುತ್ತಾರೆ, ಪಾಕಿಸ್ತಾನದ ಭೀತಿ ತೋರಿಸುತ್ತಾರೆ, ದೇವರಿಗೆ ಹೆಡಮುರಿ ಕಟ್ಟಿ ಬೀದಿಗೆ ಎಸೆಯುತ್ತಾರೆ. ಹೀಗೆ ಹೀಗೆ ನೂರೆಂಟು ಭಾವಯಮಪಾಶಗಳನ್ನು ಎಸೆಯುತ್ತಾರೆ. ಮಾದಕಲೋಕ ಸೃಷ್ಟಿಸುತ್ತಾರೆ. ಇಂದು ವ್ಯಾಘ್ರನ ಗೋಮುಖವನ್ನು ಬಯಲಿಗೆ ಎಳೆಯಬೇಕಾಗಿದೆ. ಸರ್ಕಾರಕ್ಕೆ ನಾವು ಕೇಳಬೇಕಾಗಿದೆ- “ಒಂದು ಗ್ಯಾರಂಟಿ ಉದ್ಯೋಗ ನೀಡು, ಆಮೇಲೆ ಮಾತಾಡು” ಎಂದು ಮೊದಲು ಕೇಳಿ ಆಮೇಲೆ ಉಳಿದುದೆಲ್ಲ.

ಕೊನೆಗೊಂದು ಮಾತು. ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿಗಳು. ಪಾಳಿಯಲ್ಲಿ ಆಸೆ ಎನ್ನುವುದಕ್ಕೆ ‘ತನ್ಹಾ’ ಎಂದಿದೆ. ಸಂಸ್ಕೃತದಲ್ಲಿ ‘ತೃಷ್ಣೆ’ ಎಂದಿದೆ. ಇಂಗ್ಲೀಷ್‌ನಲ್ಲಿ craving ಎಂದಿದೆ. ಇದನ್ನು ನೋಡಿದಾಗ ‘ಆಸೆ’ ಪದ ಸಾಲದು ಅನ್ನಿಸುತ್ತದೆ. ಸಿಗರೇಟ್ ಇಲ್ಲದಿದ್ದಾಗ ನಾನು ತಹತಹಿಸುವುದು ಆಸೆ ಅಲ್ಲ, ಅದು craving. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- ‘ದಾಹ’. ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.

ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‌ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು?

ಪುಣ್ಯಕ್ಕೆ, ಭೂಮಿತಾಯಿಯೇ ಸ್ವೀಡನ್‌ನ ಹದಿನಾರು ವರ್ಷದ ಬಾಲೆ ಗ್ರೆಟಾ ಥನ್ಬರ್ಗ್‌ಳ ಮೈಮೇಲೆ ಬಂದು ನುಡಿಸಿದಂತೆ ಗ್ರೆಟಾ ನುಡಿಯುತ್ತಿದ್ದಾಳೆ. ಈ ಅನಾಹುತಗಳಿಗೆಲ್ಲಾ ಕಾರಣರಾದ ಜಗತ್ತಿನ ನಾಯಕರಿಗೆ “how dare you?” ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...