ಈ ದಿನದ ಸರ್ವ ಧರ್ಮ ಸಮ್ಮೇಳನದ ಅಧಿವೇಶನವನ್ನು ಉದ್ಘಾಟಿಸಲು ನನ್ನನ್ನು ಆಮಂತ್ರಿಸಿದ ಸ್ವಾಗತ ಸಮಿತಿಗೆ ನನ್ನ ಅಪಾರ ಕೃತಜ್ಞತೆಗಳು ಸಲ್ಲಬೇಕು. ಇಲ್ಲಿನ ಕಾರ್ಯಕರ್ತರು ನನ್ನನ್ನು ಆಹ್ವಾನಿಸಿದಾಗ ನನಗೆ ಇದೊಂದು ಸುಯೋಗ ಎಂದು ತಿಳಿದು ನಾನು ಹಿಂದು ಮುಂದು ನೋಡದೆ ಕೂಡಲೆ ನನ್ನ ಒಪ್ಪಿಗೆ ಕೊಟ್ಟು ಬಿಟ್ಟೆ. ಆಮೇಲೆ ನನಗೆ ನಾನೇ ಆಲೋಚಿಸತೊಡಗಿದೆ. ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನನಗೆ ವಿಶ್ವಾಸದಿಂದ ವಹಿಸಿರುವ ಈ ಗೌರವಕ್ಕೆ ನಾನು ಅರ್ಹನೆ ಎಂದು ಅನುಮಾನಿಸಿದೆ. ಏಕೆಂದರೆ ನಾನೇನೂ ಧರ್ಮಗುರುವಲ್ಲ; ತೀರ ಆಧ್ಯಾತ್ಮಿಕ ಪ್ರವೃತ್ತಿಯವನೂ ಅಲ್ಲ. ಆದರೆ ಒಂದು ಸಮಾಧಾನವಾಯಿತು. ಅದೆಂದರೆ ಧಾರ್ಮಿಕ ಸಾಹಿತ್ಯವನ್ನು ಅಧ್ಯಯನ ಮಾಡಿದ್ದೇನೆ. ಜೈನಧರ್ಮದ ಕಿಂಚಿತ್ ಪರಿಚಯ ಪರಿಶ್ರಮ ಇದೆ. ಮನೆಯಲ್ಲಿ ನಾವು ಅದನ್ನು ಅನುಸರಿಸುತ್ತೇವೆ. ನನ್ನ ಧರ್ಮಪತ್ನಿ ಜಿನಭಕ್ತೆ ನಮ್ಮ ಪೂರ್ವಿಕರಲ್ಲಿ ಕಲ್ಲಹಳ್ಳಿಯ ಪ್ರಭು ಮೂರನೆಯ ಮಂಗರಸನೆಂಬ ಶ್ರೇಷ್ಠ ಕವಿಯೊಬ್ಬ ಆಗಿಹೋಗಿದ್ದಾನೆ. ಇದೆಲ್ಲಾ ನೆನಪಾಗಿ ಸಂತೋಷವಾಯಿತು. ಈ ಧರ್ಮ ಸಮ್ಮೇಳನವನ್ನು ಉದ್ಘಾಟಿಸಲು ಅವಕಾಶ ಮಾಡಿಕೊಟ್ಟ ಶ್ರೀ ವೀರೇಂದ್ರ ಹೆಗ್ಗಡೆಯವರಿಗೂ ಇಲ್ಲಿನ ಅವರ ಸಹಕಾರ್ಯಕರ್ತರಿಗೂ ನಾನು ಋಣಿಯಾಗಿದ್ದೇನೆ. ಶ್ರೀ ಹೆಗ್ಗಡೆಯವರು ತಮ್ಮ ಸ್ವಾಗತ ಭಾಷಣದಲ್ಲಿ ನನ್ನನ್ನು ಬಹಳವಾಗಿ ಪ್ರಶಂಸಿಸಿದ್ದಾರೆ. ಅದೆಲ್ಲಾ ಅವರ ಅಭಿಮಾನ, ಔದಾರ್ಯ, ಸಹೃದಯತೆಗಳ ಕುರುಹು.
ಧರ್ಮಸ್ಥಳ ಕ್ಷೇತ್ರದಲ್ಲಿ ಸರ್ವ ಧರ್ಮ ಸಮ್ಮೇಳನ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಇಂಥ ಸಮ್ಮೇಳನ ಇಲ್ಲಿ ನಡೆಯದೆ ಇನ್ನೆಲ್ಲಿ ನಡೆದೀತು? ನಡೆಯಬೇಕು? ಇದೇ ಪ್ರಶಸ್ತವಾದ ಸ್ಥಳ. ಏಕೆಂದರೆ ಇದರಲ್ಲಿ ಸ್ವಾರಸ್ಯಕರವಾದ ಔಚಿತ್ಯ ಉಂಟು. ಧರ್ಮ ಸಾಮರಸ್ಯ ಇಲ್ಲಿನ ಮಣ್ಣಿನಲ್ಲೇ ಬೇರುಬಿಟ್ಟಿದೆ. ಇಲ್ಲಿನ ದೈವ ಮಂಜುನಾಥೇಶ್ವರ, ಇದರ ಅರ್ಚಕರು ವೈಷ್ಣವರು, ಕ್ಷೇತ್ರದ ಧರ್ಮಾಧಿಕಾರಿಗಳು ಜೈನರು, ಭಕ್ತರು ಎಲ್ಲ ಮತದವರಿದ್ದಾರೆ. ಕ್ರೈಸ್ತರೂ ಮುಸಲ್ಮಾನರೂ ಹಿಂದೂಗಳೂ ಇಲ್ಲಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದಾರೆ. ನಿಜವಾದ ಧರ್ಮ ಸಮನ್ವಯವೆಂದರೆ ಇದೇ. ಬೇಲೂರು ಶಾಸನದ ಸಂದೇಶ ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬರುತ್ತದೆ.
ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೊ?
ಬೌದ್ಧಾ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ
ಅರ್ಹಶ್ಚೇತಿಹ ಜೈನಶಾಸನಮಿತಿ ಕರ್ಮೇತಿ ಮೀಮಾಂಸಕಾಃ
ಸೋsಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವೇಶಸ್ಸದಾ
ಇದರ ಅರ್ಥ ಬಹು ಸ್ವಾರಸ್ಯಕರವಾದುದು: “ಯಾವ ಪರತತ್ವವನ್ನು ವೇದಾಂತಿಗಳು ಬ್ರಹ್ಮನೆಂದು ಧ್ಯಾನಿಸುತ್ತಾರೋ, ಶೈವರು ಶಿವನೆಂದು ಆರಾಧಿಸುತ್ತಾರೋ, ಬೌದ್ದರು ಬುದ್ಧನೆಂದು ಉಪಾಸಿಸುತ್ತಾರೋ, ನೈಯಾಯಿಕರು ಕರ್ತಾ ಎಂದು ತಿಳಿಯುತ್ತಾರೋ, ಜೈನರು ಜಿನ, ಅರ್ಹಂತ ಎಂದು ತಿಳಿಯುತ್ತಾರೋ, ಮೀಮಾಂಸಕರು ಕರ್ಮವೆಂದು ಭಾವಿಸುತ್ತಾರೋ, ಆ ವಿಭು ನಿಮ್ಮೆಲ್ಲರ ಇಷ್ಟಾರ್ಥಗಳನ್ನು ಅನುಗ್ರಹಿಸಲಿ.” ನಿಜ. ಎಲ್ಲಿ ಇಂಥ ಒಂದು ಹೊಂದಾಣಿಕೆಯ ಮನೋಧರ್ಮವಿದೆಯೋ ಅಲ್ಲಿ ನೆಮ್ಮದಿ ಇರುತ್ತದೆ.
ಧರ್ಮ ಎಂದೊಡನೆ ಯಾವ ಧರ್ಮ ಎಂದು ಕೇಳಬಹುದು. ವೈಯಕ್ತಿಕ ಧರ್ಮ, ರಾಷ್ಟ್ರಧರ್ಮ, ವಿಶ್ವಧರ್ಮ ಹೀಗೆ ಶ್ರೇಣಿಯಲ್ಲಿ ಇದು ಏರುತ್ತದೆ. ವೈಯಕ್ತಿಕ ಧರ್ಮ ಉಳಿದೆರಡಕ್ಕೆ ವಿರುದ್ಧವಾಗಬಾರದು. ವೈಯಕ್ತಿಕ ಗುಣದ ಅಭಾವದಲ್ಲಿ ಪ್ರಾಣಿಧರ್ಮವಲ್ಲದೆ ಮನುಷ್ಯಧರ್ಮ ಬರುವುದಿಲ್ಲ. ವೈಯಕ್ತಿಕ ಧರ್ಮ ಉಳಿದೆರಡು ಧರ್ಮಗಳಾದ ರಾಷ್ಟ್ರ ಹಾಗೂ ವಿಶ್ವಧರ್ಮಗಳಿಗೆ ಅಧೀನವಾಗಿ, ಅನುಗುಣವಾಗಿ ಬರಬೇಕು. ಸಾಮುದಾಯಿಕ ರಾಷ್ಟ್ರೀಯ ಸ್ವಭಾವ ಪ್ರಜ್ಞೆಗಳನ್ನು ಒಳಗೊಳ್ಳಬೇಕು. ಸಮತೆ, ಸಹನೆ, ಸಮನ್ವಯ, ಸಮರ್ಪಣೆ ಈ ಉದಾತ್ತ ಗುಣಗಳನ್ನು ಧರ್ಮ ತರಬೇಕು. ನಮ್ಮ ದೇಶದಲ್ಲಿ ಹಾಗಾಗಿರುವುದುಂಟು.
ಕನ್ನಡ ನಾಡು ಇಂದು ಕರ್ನಾಟಕ ಆಗಿದೆ. ಈ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಮತಗಳ ಸಾಮರಸ್ಯವಿದೆ. ಪರಮತ ಸಹಿಷ್ಣುತೆಯನ್ನು ಹೊಸದಾಗಿ ಕಲಿಯುವ ಅಗತ್ಯವಿಲ್ಲ. ಪರಂಪರೆಯಿಂದ ಕನ್ನಡಿಗರಿಗೆ ಅದು ರಕ್ತಗತವಾಗಿ ಹರಿದುಬಂದಿದೆ. ಜೈನರು, ಶೈವರು, ವೈಷ್ಣವರು ಅಣ್ಣತಮ್ಮಂದಿರಾಗಿ ಇಲ್ಲಿ ಬಾಳಿದ್ದಾರೆ. ಕರ್ನಾಟಕದ ಪ್ರಥಮ ಚಕ್ರವರ್ತಿ ಸತ್ಯಾಶ್ರಯ ಪುಲಿಕೇಶಿ ಜೈನಧರ್ಮದಂತೆ ಉಳಿದ ಧರ್ಮಗಳಿಗೂ ಪುರಸ್ಕಾರ ಕೊಟ್ಟಿದ್ದಾನೆ. ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನೂ ತನ್ನ ರಾಜಗುರುಗಳಾದ ಜಿನಸೇನಾಚಾರ್ಯರ ಮಾರ್ಗದರ್ಶನದಲ್ಲಿ ಎಲ್ಲಾ ಧರ್ಮಗಳನ್ನೂ ಸಮದೃಷ್ಟಿಯಲ್ಲಿ ಕಂಡಿದ್ದಾನೆ. ಹೊಯ್ಸಳ ಚಕ್ರೇಶ್ವರ ಬಿಟ್ಟಿದೇವ ಶ್ರೀವೈಷ್ಣವಮತ ಪ್ರತಿಪಾದಕರಾದ ರಾಮಾನುಜಾಚಾರ್ಯರ ವಿಷ್ಣುವರ್ಧನನಾದ, ಜೈನಧರ್ಮವನ್ನು ತೊರೆದರೂ ಜೈನರಿಗೆ ತೊಂದರೆ ಮಾಡಲಿಲ್ಲ. ಪ್ರಭಾವದಿಂದ ಶ್ರೀವೈಷ್ಣವನಾಗಿ ಅವನ ಮಹಾರಾಣಿ ಶಾಂತಲಾದೇವಿ ಜೈನಳಾದರೂ ಅವನೊಡನೆ ಸಹಬಾಳ್ವೆ ನಡೆಸಿದಳು.
ಕನ್ನಡಿಗರ ಸಮನ್ವಯದ ಬಾಳಿಗೆ ಇನ್ನೊಂದು ಉದಾಹರಣೆಯೆಂದರೆ ಶ್ರವಣಬೆಳಗೊಳದಲ್ಲಿ ಸಿಕ್ಕಿರುವ ಬುಕ್ಕರಾಯನ ಕಾಲದ ಒಂದು ಶಾಸನ. ಜೈನರಿಗೂ ವೈಷ್ಣವರಿಗೂ ವಿರಸ ಹುಟ್ಟಿದಾಗ ಆ ದೊರೆ ಅದನ್ನು ಹೇಗೆ ಹೋಗಲಾಡಿಸಿದನು ಎಂಬುದು ಆ ಶಾಸನದಲ್ಲಿದೆ. ಆ ಸಂದರ್ಭದಲ್ಲಿ ರಾಜ ಬುಕ್ಕರಾಯ ಜೈನ ಸಮಾಜದ ಮುಖ್ಯಸ್ಥರ ಹಸ್ತವನ್ನು ವೈಷ್ಣವ ಮುಖ್ಯರ ಕೈಯಲ್ಲಿರಿಸಿ “ಜೈನಧರ್ಮಕ್ಕೂ ವೈಷ್ಣವಧರ್ಮಕ್ಕೂ ವಿರೋಧವಿಲ್ಲ. ಜೈನದರ್ಶನಕ್ಕೆ ಹಾನಿಯುಂಟಾದರೆ ವೈಷ್ಣವರು ತಮ್ಮ ಧರ್ಮಕ್ಕೂ ಹಾನಿಯಾಯಿತೆಂದು ತಿಳಿಯಬೇಕು. ಹೀಗೆಂದು ವೈಷ್ಣವರು ಜೈನ ಬಸದಿಗಳಲ್ಲಿ ಶಾಸನಗಳನ್ನು ಸ್ಥಾಪಿಸಬೇಕು. ಸೂರ್ಯಚಂದ್ರಾದಿಗಳು ಇರುವವರೆಗೂ ವೈಷ್ಣವರು ಜೈನಧರ್ಮವನ್ನು ಕಾಪಾಡಬೇಕು. ಜೈನರದೂ ವೈಷ್ಣವರದೂ ಒಂದೇ ದೇಹ, ಅವರು ವಿರೋಧಿಗಳಲ್ಲ” ಎಂದು ಹೇಳಿದನು. ನಿಜವಾಗಿಯೂ ಈ ವಿವೇಕವಾಣಿ ಅಂದಿಗೂ ಇಂದಿಗೂ ಎಂದೆಂದಿಗೂ ಸಲ್ಲತಕ್ಕ ಸತ್ಯ.
ಕರ್ನಾಟಕದ ಹೊರಗಡೆ ಹೋದಾಗಲೂ ಇದೇ ಸಂದೇಶವನ್ನು ಕಾಣುತ್ತವೆ. ಕ್ರಿಸ್ತಪೂರ್ವದಲ್ಲಿಯೇ ಕಾಣಬರುವ ಅಶೋಕನ ಶಾಸನದ ಮಾತುಗಳಿವು:
“ಸರ್ವಪ್ರಕಾರಗಳಲ್ಲೂ ಪರವಂತದವರನ್ನು ಗೌರವಿಸಲೇ ಬೇಕು. ಹೀಗೆ ನಡೆದುಕೊಂಡರೆ ತನ್ನ ಮತ ವರ್ಧಿಸುತ್ತದೆ. ಪರಮತಕ್ಕೂ ಉಪಕಾರವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ತನ್ನ ಮತವೂ ಕ್ಷೀಣಿಸುತ್ತದೆ. ಪರಮತಕ್ಕೂ ಅಪಕಾರ ಆಗುತ್ತದೆ.”
“ಯಾವನು ತನ್ನ ಮತವನ್ನು ಬೆಳಗಿಸುವ ಅಭಿಮಾನದಿಂದ ತನ್ನ ಮತವನ್ನು ಮೇಲು ಮಾಡಿ ಪರಧರ್ಮವನ್ನು ಕೀಳಾಗಿ ಕಾಣುತ್ತಾನೋ ಅವನು ಖಂಡಿತವಾಗಿ ತನ್ನ ಮತಕ್ಕೆ ಅವಮಾನ ಮಾಡುತ್ತಾನೆ.”
“ಸರ್ವಧರ್ಮ ಸಾಮರಸ್ಯವೇ ಸಾಧುವಾದದ್ದು. ಎಲ್ಲ ಮತದವರೂ ಒಟ್ಟಿಗೆ ಸೇರುವ ಉದ್ದೇಶ ಇತರ ಧರ್ಮದವರು ಹೇಳಿದುದನ್ನು ಕೇಳಿ ಬಹುಶ್ರುತರೂ ಕಲ್ಯಾಣಾಗಮರೂ ಆಗಲೆಂದು ದೊರೆಯ ಅಪೇಕ್ಷೆ.”
ಇಂಥ ಉದಾತ್ತ ಭಾವನೆಗಳಿಂದ ಪ್ರೇರಣೆ ಪಡೆದ ಮಹಾಸಂತ ಕೀರ್ತಿಶೇಷ ಪೂಜ್ಯ ಮಂಜಯ್ಯ ಹೆಗ್ಗಡೆಯವರು ಈ ಧರ್ಮಸಮ್ಮೇಳನದ ಪರಂಪರೆಯನ್ನು ಆರಂಭಿಸಿದರು. ಇದು ನಲವತ್ತು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಶ್ರೀ ರತ್ನವರ್ಮ ಹೆಗ್ಗಡೆಯವರಂತೆ ಅವರ ಚಿರಂಜೀವಿ ಶ್ರೀ ವೀರೇಂದ್ರ | ಹೆಗ್ಗಡೆಯವರೂ ಈ ಕಿರಿಯ ವಯಸ್ಸಿಗೆ ಹಿರಿಯ ಸಾಧನೆಗಳಿಂದ ಎಲ್ಲರ ಪ್ರೀತಿ ಗೌರವಗಳನ್ನು ಪಡೆದು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕಾರ್ಕಳದಿಂದ ಶ್ರೀ ಗೊಮ್ಮಟ ಮಹಾಮೂರ್ತಿಯನ್ನು ಇಲ್ಲಿಗೆ ಸಾಗಿಸಿಕೊಂಡು ಬಂದಿರುವುದಂತೂ ಈ ಶತಮಾನದ ಮಹಾಕಾರ್ಯವಾಗಿದೆ. ಅವರಿಗೆ ಸಕಲ ಶ್ರೇಯಸ್ಸೂ ಸಿಗಲೆಂದು ಹಾರೈಸುತ್ತೇನೆ.
ಧರ್ಮದ ಬಗ್ಗೆ ನನಗೆ ತೋಚಿದ ಒಂದೆರಡು ಭಾವನೆಗಳನ್ನು ವ್ಯಕ್ತಪಡಿಸಲು ನಾನು ಇಚ್ಛಿಸುತ್ತೇನೆ. ಇಂದು ಧರ್ಮ ಎಂದರೆ ಒಂದು ಮತ, ಒಂದು ಜಾತಿ ಎಂದು ಅಪಾರ್ಥ ಕಲ್ಪಿಸುವುದೂ ಉಂಟು. ನಾನಾದರೋ ಧರ್ಮ ಎಂದರೆ ಒಂದು ನಿರ್ದಿಷ್ಟ ನೀತಿ, ನಿಯಮ ಎಂದು ತಿಳಿದುಕೊಂಡಿದ್ದೇನೆ. ಎಂತಲೇ ನಾಡಿನ ಬಹುಮುಖ ಏಳಿಗೆಗೆ ಶ್ರಮಿಸಿದ ಆಳರಸರು ಧರ್ಮಪ್ರಜ್ಞೆಯುಳ್ಳವರಾಗಿದ್ದರು. ಹಿಂದಿನಿಂದಲೂ ಧರ್ಮ ಮತ್ತು ರಾಜಕೀಯಗಳು ಒಂದುಗೂಡಿದ್ದವು. ಆದ್ದರಿಂದಲೇ ಇಂದು ಕೂಡ ಧರ್ಮ ಮತ್ತು ರಾಜಕೀಯಗಳು ಅನ್ಯೋನ್ಯವಾಗಿರಬೇಕೆಂದು ವಾದಿಸುವವರಲ್ಲಿ ನಾನೂ ಒಬ್ಬ. ಆದರೆ ಧರ್ಮದ ಕಲ್ಪನೆ ಕಾಲೋಚಿತವಾಗಿ ಬದಲಾಗುವುದು ಅತ್ಯಗತ್ಯ, ಕಾಲಚಕ್ರ ಉರುಳಿದಂತೆ ಅದೂ ಮಾರ್ಪಾಟು ಕಂಡಿದೆ. ಜಗತ್ತಿನಲ್ಲಿ ಜನಿಸಿರುವ ಪ್ರತಿಯೊಬ್ಬ ಮಾನವನ ಅಭಿವೃದ್ಧಿ ಎಂದರೆ ನಿರುದ್ಯೋಗ, ರೋಗರುಜಿನಾದಿಗಳ ಉಚ್ಚಾಟನೆ, ಮಾನವ ಘನತೆಗೆ ತಕ್ಕಂಥ ವಾಸದ ಮನೆಗಳ ನಿರ್ಮಾಣ, ಒಳ್ಳೆಯ ಉಡುಪು ಮತ್ತು ಪೌಷ್ಟಿಕ ಆಹಾರ ವಸ್ತುಗಳ ಪೂರೈಕೆ, ಯೋಗ, ಶಿಕ್ಷಣ ಸಾಧಿಸುವುದೇ ರಾಜಕೀಯದ, ಧರ್ಮದ ಪ್ರಮುಖ ಉದ್ದೇಶವಾಗಿದೆ. ಆದರೆ ಧರ್ಮದ ಮೂಲತತ್ವಗಳಾದ ದಯೆ, ಅನುಕಂಪಗಳು ಹಳೆಯವೇ ಆಗಿದ್ದು, ಅವುಗಳು ಧರ್ಮದ ಶಾಶ್ವತ ಮೌಲ್ಯಗಳಾಗಿವೆ. ಭಾರತೀಯ ಧರ್ಮದಲ್ಲಿ ಒಳ್ಳೆಯದನ್ನು ಉಳಿಸಿಕೊಂಡು ಕಾಲಧರ್ಮಕ್ಕೆ ಅನುಗುಣವಾದ ಹೊಸ ಮೌಲ್ಯಗಳನ್ನು ಸೃಷ್ಟಿ ಮಾಡಬೇಕಾದ ಸಂಧಿಕಾಲದಲ್ಲಿ ನಾವಿದ್ದೇವೆ.
“ಕಾಯಕವೇ ಕೈಲಾಸ” ಎಂಬುದು ಈ ಕಾಲಕ್ಕೆ ತುಂಬ ಅನ್ವಯಿಸುವ ಮಾತಾಗಿದ್ದು, ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ದುಡಿದರೆ ಮಾತ್ರ ನಾಡಿನ ಅಭ್ಯುದಯ ಸಾಧ್ಯವಾದೀತು. ಮಹಾತ್ಮಾ ಗಾಂಧಿಯವರು ‘ದರಿದ್ರ ನಾರಾಯಣ’ ಎಂಬ ಶಬ್ದವನ್ನು ಜನಪ್ರಿಯಗೊಳಿಸಿ, ಜನತೆಯ ಕಲ್ಯಾಣವನ್ನೇ ತಮ್ಮ ಧರ್ಮವನ್ನಾಗಿ ಆರಿಸಿದ್ದರು. ಪ್ರಧಾನಿ ಇಂದಿರಾ ಗಾಂಧಿಯವರು “ಬಡತನದ ಉಚ್ಚಾಟನೆ”ಯನ್ನೇ ತಮ್ಮ ಧರ್ಮವಾಗಿ ಸ್ವೀಕರಿಸಿರುತ್ತಾರೆ. ಅದರೊಂದಿಗೆ ನಾವು “ದಲಿತ ವರ್ಗದ”ಏಳಿಗೆಯೇ ನಮ್ಮ ಧರ್ಮವೆಂದು ದೀಕ್ಷೆ ತೆಗೆದುಕೊಂಡಿದ್ದೇವೆ. ಈ ಗುರಿಯನ್ನು ಮುಟ್ಟುವ ನಮ್ಮ ಮಹಾಪ್ರಯತ್ನದಲ್ಲಿ ಆ ಮತ, ಈ ಮತ ಎಂಬ ಭೇದಭಾವವನ್ನು ನಾವು ಇಟ್ಟುಕೊಂಡಿಲ್ಲ. ಈ ರೀತಿಯ ಧರ್ಮದ ಕಲ್ಪನೆಯೇ ನಮ್ಮ ಮುನ್ನಡೆಗೆ ದಾರಿ ದೀಪವಾಗಲಿ ಎಂದು ನಾನು ನಮ್ರತೆಯಿಂದ ಹಾರೈಸುತ್ತೇನೆ.
ನಾನು ನನ್ನ ಭಾಷಣವನ್ನು ಅಚ್ಚುಹಾಕಿಸಿ ಓದಿದ್ದೇನೆ. ಸಾಧಾರಣವಾಗಿ ಇಂತಹ ಸಭೆಗಳಲ್ಲಿ ಆಡಿದಂತಹ ಮಾತು ಎಲ್ಲರನ್ನೂ ತಲವಂತಾಗಲಿ ಎಂಬ ಉದ್ದೇಶದಿಂದ ನಾನು ಆ ರೀತಿ ಮಾಡಿದೆ. ಆದರೂ ಈ ಸಮಾರಂಭವನ್ನು ಉದ್ಘಾಟಿಸುವುದಕ್ಕೆ ಪೂರ್ವಭಾವಿಯಾಗಿ ಇನ್ನೂ ನಾಲ್ಕಾರು ಮಾತುಗಳನ್ನು ಹೇಳಲು ಇಚ್ಛೆಪಡು ತೇನೆ. ಅಚ್ಚು ಹಾಕಿಸಿರತಕ್ಕ ಈ ಭಾಷಣದಲ್ಲಿ ಕೊನೆಯದಾಗಿ ಧರ್ಮಾಧಿಕಾರಿಗಳು, ಧರ್ಮಸಂಸ್ಥೆಗಳು ಮತ್ತು ಮಠಾಧಿಪತಿಗಳು ದೇಶದಲ್ಲಿ ಏನು ಸಾಧನೆ ಮಾಡುವುದಕ್ಕೆ ಸಾಧ್ಯ ಎನ್ನುವ ವಿಚಾರವನ್ನು ನಾನು ಪ್ರಸ್ತಾಪ ಮಾಡಿದೆ. ನಾನು ಹೇಳಿದ ಮಾತು ಒಂದು ರೀತಿಯಲ್ಲಿ ಅಧಿಕಪ್ರಸಂಗತನ ಎಂದು ಕೆಲವರ ಮನಸ್ಸಿಗೆ ಬಂದಿರಬೇಕು. ಇದನ್ನು ಹೇಳುವುದಕ್ಕೆ ಏನು ಹಿನ್ನೆಲೆ ಇದೆ? ಈ ಮಾತನ್ನು ಏತಕ್ಕಾಗಿ ಹೇಳಿದೆ ಎಂಬುದಾಗಿ ಈ ವಿಚಾರದಲ್ಲಿ ಒಂದು ಬಗೆಯ ಚಿಂತನೆ ಏನಾದರೂ ಉದ್ಭವಿಸಿದಲ್ಲಿ ನಿಜವಾಗಿ ನನ್ನ ಕರ್ತವ್ಯವನ್ನು ನಾನು ಮಾಡಿದ ಹಾಗಾಯಿತು ಎಂದು ಭಾವಿಸುತ್ತೇನೆ, ನನ್ನ ಮಟ್ಟಿಗಾದರೂ ಇದಕ್ಕೆ ಕಾರಣವಿದೆಯೆಂದು ಭಾವಿಸುತ್ತೇನೆ.
ಈ ಧರ್ಮಚಕ್ರ ಒಂದು ಕಾಲಚಕ್ರದ ಹಾಗೆ ಎಂದು ನಾನು ಭಾವಿಸಿದ್ದೇನೆ. ಈ ಕಾಲಚಕ್ರ ಉರುಳುತ್ತಿರುತ್ತದೆ. ಇದು ಸ್ಥಾಯಿಯಾದುದಲ್ಲ. ಬಹಳ ಕಾಲದ ಹಿಂದೆ ನನ್ನ ಹತ್ತಿರ ಒಬ್ಬ ಶಾಸ್ತ್ರಿಗಳು ಹೇಳುತ್ತಿದ್ದರು. ಅದರ ಅರ್ಥ ಇಷ್ಟು. ಈ ಧರ್ಮ ಎಂದು ಏನು ಹೇಳುತ್ತಿದ್ದೇವೆ ಅದು ಸಾಧಾರಣವಾಗಿ ಒಂದು ಆಚರಣೆ, ಹೀಗೆಂದು ಹೇಳಿದರೆ, ಇದರಲ್ಲಿ ನಿಜವಾದ ಆಚರಣೆ ಯಾವುದು ಎಂಬ ಪ್ರಶ್ನೆ ಏಳುತ್ತದೆ. ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡುವುದು, ಮಡಿ ಉಡುವುದು, ವಿಧವಿಧವಾದ ಸಂಪ್ರದಾಯಗಳನ್ನು ಅನುಸರಿಸಿಕೊಂಡು ಹೋಗುವುದು ಇವೆಲ್ಲವೂ ಧರ್ಮವೇನು ಎಂದು ಕೇಳಬಹುದು. ಇವೆಲ್ಲವೂ ಧರ್ಮ ಎಂಬುದು ನಮ್ಮ ಸಮಾಜದಲ್ಲಿ ಸಾಧಾರಣವಾಗಿ ಬೆಳೆದು ಬಂದಿರತಕ್ಕೆ ಒಂದು ನಂಬಿಕೆ.
ಇದರಿಂದ ಏನು ಆಗಿದೆಯೆಂದರೆ ಈ ಧರ್ಮದ ತಿರುಳು ನಮ್ಮಿಂದ ಎಷ್ಟು ದೂರವಾಗಿ ಉಳಿದಿದೆಯೆಂದರೆ ಎಷ್ಟು ಆಳವಾಗಿ ಕೈ ಹಾಕಿದರೂ ಆ ತಿರುಳು ಮಾತ್ರ ನಮಗೆ ಸಿಕ್ಕುತ್ತಾ ಇಲ್ಲ. ಒಂದರ ಮೇಲೊಂದು ಪದರಗಳು ಅದಕ್ಕೆ ಹೊದ್ದಿಕೆಯಾಗಿ ಸೇರಿಕೊಂಡಿವೆ. ಅದಕ್ಕೆ ಈ ಪದರಗಳನ್ನೇ ಧರ್ಮ ಎಂದು ನಾವು ತಿಳಿದು ಕೊಂಡಿರುವುದರಿಂದ ಈ ರೀತಿಯಾಗಿದೆ. ಈ ಒಂದು ಕಾರಣದಿಂದಾಗಿ ನಾವು ಬಹಳ ಜಡವಾಗಿದ್ದೇವೆಂದು ಹೇಳಬೇಕಾಗಿದೆ. ನಾವು ಎಲ್ಲಿ ಜಡವಾಗಿದ್ದೇವೆ? ನಮ್ಮಲ್ಲಿ ಎಷ್ಟೊಂದು ಶಾಲೆ ಕಾಲೇಜುಗಳಾಗಿವೆ. ಎಷ್ಟೊಂದು ಮೋಟಾರು ಕಾರುಗಳು ಬಸ್ಸುಗಳು, ಯಂತ್ರಗಳು, ರಸ್ತೆಗಳು ಮತ್ತೊಂದು ಮಗದೊಂದು ನಿರ್ಮಾಣವಾಗಿದೆ. ಇವನ್ನೆಲ್ಲ ಜಡವೆಂದು ಹೇಳಲು ಸಾಧ್ಯವೆ?
ಹಿಂದೆ ಈ ಧರ್ಮಸ್ಥಳಕ್ಕೆ ಬರಬೇಕಾದರೆ ಸುಮಾರು ಒಂದು ತಿಂಗಳು ಆಗುತ್ತಿತ್ತು. ಈಗ ಬೇಕಾದಷ್ಟು ವ್ಯವಸ್ಥೆಯಾಗಿದೆ. ಹಿಂದೆ ಇಲ್ಲಿಗೆ ಬಂದರೆ ಯಾರೂ ಉಳಿಯುವುದಿಲ್ಲವೇನೋ ಎಂಬ ಭಾವನೆ ಮೂಡಿತ್ತು. ಹಿಂದೆ ನಮ್ಮ ತಂದೆಯವರ ಜೊತೆಯಲ್ಲಿ ಒಬ್ಬರು ಧರ್ಮಸ್ಥಳಕ್ಕೆ ಬಂದು ವಾಪಸು ಬರಲೇ ಇಲ್ಲವೆಂದು ಸುಮಾರು ೯೦ ವರ್ಷಗಳವರೆಗೆ ಬದುಕಿದ್ದ ನಮ್ಮ ಅಜ್ಜಿಯವರು ಹೇಳುತ್ತಿದ್ದರು. ಅಂತಹ ಒಂದು ಕಾಲದಲ್ಲಿ ನಾವು ಈಗ ಇಲ್ಲ. ಹಾಗಾದರೆ ನಮ್ಮ ಸಮಾಜ ಇನ್ನೂ ಸ್ಥಾಯಿಯಾಗಿಯೇ ಉಳಿದಿದೆಯೇ ಅಥವಾ ಬದಲಾಗಿದೆಯೇ ಎಂದು ನೋಡಬೇಕು. ನಾವು ಇವತ್ತು ಪಂಚೆ ಉಡುವುದನ್ನು ಬಿಟ್ಟು ಪ್ಯಾಂಟ್ ಹಾಕುತ್ತಿದ್ದೇವೆ. ಜುಟ್ಟು ಬಿಡುವುದನ್ನು ಬಿಟ್ಟು ಕ್ರಾಪ್ ಮಾಡಿಸುತ್ತಿದ್ದೇವೆ. ಜನಿವಾರ ತೆಗೆದುಹಾಕಿದ್ದೇವೆ, ನಾಮ ಹಾಕುತ್ತಿದ್ದುದನ್ನು ಬಿಟ್ಟಿದ್ದೇವೆ. ಹೀಗೆ ಒಂದೊಂದು ವಿಷಯದಲ್ಲಿಯೂ ನಾವು ಮಾಡ್ರನೈಸ್ ಆಗುತ್ತಿದ್ದೇವೆ. ಆದರೆ ನಮ್ಮ ಆತ್ಮಶಕ್ತಿ ಬೆಳೆದಿದೆಯೇ ಎಂಬುದು ನನ್ನ ಪ್ರಶ್ನೆ. ಇವತ್ತು ಆತ್ಮಶಕ್ತಿ ಎಂದರೆ ಅದಕ್ಕೆ ಅರ್ಥವೇ ಇಲ್ಲದಂತಾಗಿದೆ. ಏತಕ್ಕಾಗಿ ಹೀಗೆ ಆಗಿದೆ? ಹೇಳುವವರು, ಕೇಳುವವರು ಯಾರೂ ಇಲ್ಲವೇ? ಅಥವಾ ಹೇಳುವವರಿಗೂ ಮತ್ತು ಕೇಳುವವರಿಗೂ ಏನಾದರೂ , ಇಲ್ಲವೇ? ಅಥವಾ ಹೇಳತಕ್ಕವರಲ್ಲಿ ಧರ್ಮಪ್ರಚೋದನೆ ಮಾಡಬೇಕೇ ಅಥವಾ ಏನು ಮಾಡಬೇಕು? ಹೇಳತಕ್ಕೆ ಜನರಲ್ಲಿ ಒಂದು ಆತ್ಮಶಕ್ತಿ ಇದ್ದರೆ ಮಾತ್ರ ಧರ್ಮಪ್ರಚೋದನೆಯನ್ನು ಮಾಡಲು ಸಾಧ್ಯ. ಈಗ ನಮ್ಮಲ್ಲಿ ಬಂದಿರುವ ಒಂದು ಅಭಾವ ಎಂದರೆ ಎಲ್ಲರೂ ಧರ್ಮ, ಧರ್ಮ ಎಂದು ಮಾತನಾಡುತ್ತಾ ಇದ್ದಾರೆ. ಆದರೆ ಎಲ್ಲರಲ್ಲೂ ಧರ್ಮವನ್ನು ಮೂಡಿಸುವಂತಹ ಒಂದು ಚೈತನ್ಯದಿಂದ ಕೂಡಿರುವವರು ಯಾರಿದ್ದಾರೆ. ಅಂತಹವರು ಇವತ್ತು ನಮಗೆ ಬೇಕಾಗಿದೆ.
ಈಗ ವಿದ್ಯಾಭ್ಯಾಸ ಎಲ್ಲಾ ಕಡೆಯೂ ಹೆಚ್ಚಾಗಿದೆ. ಅಂದರೆ ಹೆಚ್ಚು ಜನರು ವಿದ್ಯಾರ್ಥಿಗಳು ಆಗಿದ್ದಾರೆಂದು ಅರ್ಥವಲ್ಲ. ನಮ್ಮ ಹಳ್ಳಿಗಳಲ್ಲಿ ಜಮೀನು ಅಥವಾ ಹಣ ತೆಗೆದುಕೊಳ್ಳತಕ್ಕಂತಹ ವ್ಯವಹಾರಕ್ಕೆ ಒಂದು ಪತ್ರವನ್ನು ಬರೆಯುವುದು ಅಥವಾ ಯಾರಾದರೂ ಒಬ್ಬರಿಗೆ ಅರ್ಜಿಯನ್ನು ಬರೆದುಕೊಡುವುದು ಇಷ್ಟು ಬಂದರೆ ಅವರನ್ನು ವಿದ್ಯಾವಂತರೆಂದು ಹೇಳುತ್ತಾರೆ. ಆದರೆ ಇವತ್ತು ಬಿ.ಎ., ಬಿ.ಎಸ್‌ಸಿ. ಮುಂತಾದ ಡಿಗ್ರಿಗಳನ್ನು ಪಡೆದುಕೊಂಡು ಶಾಸ್ತ್ರಜ್ಞರಾಗಿ, ವಿಜ್ಞಾನಿಗಳಾಗಿರುವವರು ವಿದ್ಯಾವಂತರೆನಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನಾವು ಈಗ ಬೇರೆ ಬೇರೆ ದೇಶಗಳ ವಿದ್ಯೆಗಳನ್ನೂ ಕಲಿಯುತ್ತಿದ್ದೇವೆ. ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಿದ್ದೇವೆ. ಅದರಿಂದ ಬೇರೆ ಬೇರೆ ವಿದ್ಯೆಗಳ ಪರಿಚಯ ಆಗುತ್ತಿದೆ. ಹೊರಗಡೆ ಇರತಕ್ಕ ಜನರು-ಅವರು ಮತಾಚಾರ್ಯರೇ ಆಗಿರಲಿ, ವಿಜ್ಞಾನಿಗಳೇ ಆಗಿರಲಿ ಅಥವಾ ಯಾರೇ ಆಗಿರಲಿ ಏನೇನು ಮಾಡುತ್ತಿದ್ದಾರೆ ಎಂಬುದೆಲ್ಲವನ್ನೂ ನಮ್ಮ ವಿದ್ಯಾವಂತರು ಇವತ್ತು ತಿಳಿಯುತ್ತಿದ್ದಾರೆ.
ಈ ರೀತಿಯ ಒಂದು ಅಡಿಪಾಯದ ಜನತೆಯನ್ನು ನಾವು ‘ವೆಸ್ಟ್ರನೈಸ್ಡ್ ಪೀಪಲ್ ಅಥವಾ ‘ಮಾಡ್ರನೈಸ್ಡ್ ಪೀಪಲ್ ಎಂದು ಕರೆಯುತ್ತಿದ್ದೇವೆ. ಇದನ್ನು ನಾವು ಇವತ್ತು ‘ವೆಸ್ಟ್ರನ್ ಥಾಟ್ಸ್’ ಅಥವಾ ‘ಕಲ್ಚ ರಲ್ ಥಾಟ್ಸ್’ ಎಂದು ಹೇಳುತ್ತಿದ್ದೇವೆ.
ಈ ‘ವೆಸ್ಟ್ರನ್ ಥಾಟ್ಸ್’ ನಮ್ಮ ದೇಶ ಪ್ರಗತಿಯ ಹಾದಿಗೆ ಹೋಗಲು ಪ್ರಚೋದನೆ ಮಾಡಿದೆ ಎಂಬುದು ಎಲ್ಲರೂ ಒಪ್ಪವಂತಹ ಮಾತು. ಇವತ್ತು ನಮ್ಮ ಸಂಪ್ರದಾಯಗಳನ್ನು ಅನುಸರಿಸಿಕೊಂಡು ಹೋದರೇ ಸರಿ: ಈಗಿನವರಿಗಂತೂ ನಮ್ಮ ಮಹಾಭಾರತ ರಾಮಾಯಣಗಳ ಮತ್ತು ಧರ್ಮದ ಗಂಧವೇ ಇಲ್ಲ ಎಂದು ಹೇಳುತ್ತಾರೆ. ಇತ್ತ ನಮ್ಮ ವೇದ, ಪುರಾಣ ಅಥವಾ ಉಪನಿಷತ್ತು ಹೇಳತಕ್ಕವರಿಂದ ಇವುಗಳ ಘೋಷಣೆಗಳನ್ನು ಮಾತ್ರ ಕೇಳುತ್ತಿದ್ದೇವೆ. ಇದು ನಮ್ಮಲ್ಲಿ ಇರತಕ್ಕಂತಹ ಒಂದು ಪದ್ಧತಿಯಾಗಿದೆ. ಇದು ಏಕೆ ಹೀಗೆ ಆಯಿತು? ಆ ಮಾತು ಬೇರೆ.
ನಮ್ಮ ದೇಶದಲ್ಲಿ ಇರುವ ಯಾವುದೇ ಮತ ತನ್ನ ಇಂದಿನ ಸ್ವರೂಪದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲವೆಂಬುದು ನನ್ನ ಒಂದು ಭಾವನೆ. ನಮ್ಮಲ್ಲಿರುವ ವಿದ್ಯಾವಂತರು ಇದೆಲ್ಲವನ್ನೂ ಯೋಚನೆ ಮಾಡಬೇಕು. ಇಲ್ಲದಿದ್ದರೆ ನಮಗೆ ನಮ್ಮಲ್ಲೇ ಗೌರವ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳನ್ನು ಇವತ್ತು ನಮ್ಮ ಸಂಪ್ರದಾಯಗಳ ಬಗ್ಗೆ ಕೇಳಿದರೆ, ಈ ಧರ್ಮ ಏಕೆ ಉಳಿಯಬೇಕು, ಇದರಿಂದ ಏನು ಪ್ರಯೋಜನ ಇದೆಯೆಂದು ಪ್ರಶ್ನೆಗಳನ್ನು ಹಾಕುತ್ತಾರೆ. ಇವತ್ತು, ವೈಷ್ಣವ, ಜೈನ ಎಂಬುದಾಗಿ ಹೊಡೆದಾಡಬೇಕಾಗಿಲ್ಲ; ಎಲ್ಲ ಮತಗಳೂ ಒಂದೇ ಎಂಬುದಾಗಿ ಅವರಿಗೆ ಹೇಳುವ ಅಗತ್ಯವೂ ಇಲ್ಲ. ಯಾವ ಮತಗಳೂ ಬೇರೆಯಲ್ಲ ಎಂಬ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಬಂದಿದೆ. ಇದೇ ರೀತಿಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಕಡೆಗಳಲ್ಲಿಯೂ ಆಗುತ್ತಿದೆ. ಮುಂದೆ ಏನು ಆಗಬೇಕಾಗಿದೆ? ಏನು ಉದ್ದೇಶ ಸಾಧನೆ ಮಾಡಬೇಕಾಗಿದೆ? ಈ ಧರ್ಮ ಏನು ಹೇಳುತ್ತದೆ? ಇದನ್ನು ವಿದ್ಯಾವಂತ ತರುಣರಿಗೆ, ಮುಂದಿನ ಪೀಳಿಗೆಗೆ ಮತ್ತು ಮುಂದಿನ ಜನಾಂಗಕ್ಕೆ ನಾವು ಹೇಳತಕ್ಕಂತಹ ಏರ್ಪಾಡು ಮಾಡುವುದಕ್ಕೆ ಸಾಧ್ಯವಾಗುವುದಾದರೆ ಇಂತಹ ಸಮ್ಮೇಳನಗಳು ಮುಖ್ಯವಾದುವೂ ಉಪಯೋಗಕರವಾದುವೂ ಆಗುತ್ತವೆ ಎಂದು ನಾನು ತಿಳಿಯುತ್ತೇನೆ. ಇದೂ ಒಂದು ಮಹತ್ ಕಾರ್ಯವೇ ಸರಿ.
ಹಾಗಲ್ಲದೆ ಹಿಂದಿನಿಂದಲೂ ಬಂದಿರತಕ್ಕಂತಹ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡತಕ್ಕಂತಹ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲಿ ಎಂದು ಹರಕೆ ಹೊರುವುದು, ಅಧಿಕಾರಿಯು ತನಗೆ ಬಡ್ತಿ ಬಂದರೆ ಕಾಣಿಕೆಯನ್ನು ಸಲ್ಲಿಸುತ್ತೇನೆ, ಮುಡಿ ಕೊಡುತ್ತೇನೆ ಎಂದು ಹೇಳುವುದು, ರೋಗಿಯ ಖಾಯಿಲೆ ವಾಸಿಯಾದರೆ ಹರಕೆಯನ್ನು ಹೊರುತ್ತೇನೆಂದು ಹೇಳುವುದು, ಕಾಳಸಂತೆ ವ್ಯಾಪಾರಿ ತನಗೆ ಒಳ್ಳೆಯದಾದರೆ ತನ್ನ ಸಂಪಾದನೆಯಲ್ಲಿ ಅರ್ಧಭಾಗವನ್ನು ಒಪ್ಪಿಸುತ್ತೇನೆ ಎಂದು ಹರಕೆಯನ್ನು ಹೊರುವುದು ಇವೆಲ್ಲವೂ ಧರ್ಮವೇನು? ಇದನ್ನು ನಾವು ಮುಂದುವರಸಿಕೊಂಡು ಹೋದರೆ ಧರ್ಮಾಚರಣೆ ಮಾಡಿದ ಹಾಗೆ ಆಗುತ್ತದೆಯೆ? ಇದು ಸತ್ವ ಇಲ್ಲದಂತಹ ಧರ್ಮ.
ನೈತಿಕವಾಗಿ, ಸಾಮಾಜಿಕವಾಗಿ ಆಗಬೇಕಾದಂತಹ ಕಾರ್ಯ ಏನಿದೆ ಅದನ್ನು ನಾವು ಆಚರಣೆಗೆ ತರಬೇಕು, ಇವತ್ತು ನಮ್ಮ ಸಮಾಜದ ಧರ್ಮ ಬದಲಾಗಿದೆ. ಈಗ ವ್ಯಕ್ತಿಗೆ ಪ್ರಾಧಾನ್ಯ ಕೊಟ್ಟುಕೊಂಡು ಬರುವುದಕ್ಕೆ ಬದಲಾಗಿ ಸಮಷ್ಟಿಯನ್ನು ಗೌರವಿಸುವ ಪರಂಪರೆಯನ್ನು ಬೆಳಸಬೇಕಾಗಿದೆ. ಎಲ್ಲ ಆಚಾರ ವಿಚಾರಗಳನ್ನೂ ಸಮಷ್ಟಿಯ ಕಡೆಗೆ ನಡೆಸಿಕೊಂಡು ಹೋಗಬೇಕು. ಇಲ್ಲಿ ಒಂದು ಸಾಮೂಹಿಕ ಲಗ್ನವನ್ನು ಏರ್ಪಡಿಸಿದಾಗ ಅದರಲ್ಲಿ ಎಲ್ಲ ಮತದವರು, ಹರಿಜನರು, ಗಿರಿಜನರು ಸೇರಿದ್ದರು ಎಂದು ನಮ್ಮ ಹೆಗ್ಗಡೆಯವರು ಹೇಳಿದರು. ಹೀಗೆ ಎಲ್ಲರನ್ನೂ ಒಂದೇ ಸಮವಾಗಿ ಕಂಡರೆ, ಹಾಗೆ ಮಾಡಿದರೆ ಅದು ಒಂದು ಸಮಷ್ಟಿಯ ಮಾರ್ಗ ಎನಿಸಿಕೊಳ್ಳುತ್ತದೆ. ಇನ್ನೂ ಮುಂದೆ ಹೋಗಬೇಕಾದರೆ, ವ್ಯವಹಾರಗಳಲ್ಲಿಯೂ ಸಮಾನತೆ ಬರಬೇಕು: ಆರ್ಥಿಕವಾಗಿಯೂ ಸಮಾನತೆ ಬರಬೇಕಾಗಿದೆ. ಸಾಮಾನ್ಯ ವ್ಯಕ್ತಿಗೆ ಸಾಮಾಜಿಕವಾಗಿ ಕಷ್ಟ ಕಾರ್ಪಣ್ಯಗಳಿಂದ ಬಿಡುಗಡೆಯಾದರೆ ಮಾತ್ರ ಮುಕ್ತಿ ಎಂಬುದು ಸಿಕ್ಕುತ್ತದೆ. ಇವತ್ತು ನಾವು ಬಡತನದಿಂದ ಮುಕ್ತಿಯನ್ನು ಹೊಂದಬೇಕಾಗಿದೆ. ಅಜ್ಞಾನದಿಂದ ಬಿಡುಗಡೆ ಹೊಂದಬೇಕಾಗಿದೆ. ಇವತ್ತು ಮೋಕ್ಷ ಪಡೆಯಬೇಕಾಗಿರುವುದು ನಾವು ಮತ್ತು ನೀವ ಮಾತ್ರವಲ್ಲ; ಇಡೀ ಸಮಾಜವೇ ಮುಕ್ತಿಯನ್ನು ಪಡೆಯಬೇಕಾಗಿದೆ. ಒಂದು ದೊಡ್ಡ ರೋಗದಿಂದ ನಮ್ಮ ಇಡೀ ಸಮಾಜವೇ ಬಿಡುಗಡೆಗೊಳ್ಳಬೇಕಾಗಿದೆ.
ಇವತ್ತು ನಮಗೆ ಬೇಕಾಗಿರತಕ್ಕಂತಹ ಗುಣವನ್ನು ಮತ್ತು ಚೈತನ್ಯವನ್ನು ಯಾವುದು ಕೊಡುತ್ತಾ ಬರುತ್ತದೆಯೋ ಅದೇ ನಮಗೆ, ನಮ್ಮ ದೇಶಕ್ಕೆ ಬೇಕಾಗಿರ ತಕ್ಕಂತಹ ಧರ್ಮ. ನಮ್ಮಲ್ಲಿ ಇರತಕ್ಕಂತಹ ಕೆಲವು ಹಳೆಯ ಸಂಪ್ರದಾಯಗಳನ್ನು ಬೇಗನೆ ಬಿಡಬೇಕು. ಆಧುನಿಕ ಜನ ಎಂದಾಗಬೇಕಾದರೆ ಎಲ್ಲವನ್ನೂ ಕಿತ್ತುಹಾಕಿ ಎಂದು ಹೇಳತಕ್ಕೆ ಮನುಷ್ಯ ನಾನಲ್ಲ. ಇವತ್ತು ಧರ್ಮದ ಹೆಸರಿನಲ್ಲಿ ಕಾಣಬರುತ್ತಿರುವ ವಿಧವಿಧವಾದ ವೇಷಭೂಷಣಗಳನ್ನು ಉಳಿಸಿಕೊಳ್ಳಬೇಕಾಗಿಲ್ಲ: ನಮ್ಮ ಸಂಪ್ರದಾಯದಲ್ಲಿ ಬಂದಿರತಕ್ಕ ಕೆಲವಾರು ವಿಷಯಗಳನ್ನು ಬಿಡಲೇಬೇಕಾಗಿದೆ. ಇದೆಲ್ಲವನ್ನೂ ಬಿಟ್ಟು ಇವತ್ತು ಒಂದು ಹೊಸ ಸಮಾಜವನ್ನು ಸೃಷ್ಟಿಸಬೇಕಾಗಿದೆ. ಧರ್ಮದಲ್ಲಿ ಇರುವ ಶಾಶ್ವತವಾದ ಮೌಲ್ಯಗಳನ್ನು, ಗುಣಗಳನ್ನು ಉಳಿಸಿಕೊಳ್ಳುವುದೇ ನಮ್ಮ ಮುಖ್ಯವಾದ ಗುರಿಯಾಗಬೇಕು. ಅದು ಹಳೆಯದೇ ಆಗಿರಲಿ ಅಥವಾ ಹೊಸದೇ ಆಗಿರಲಿ, ಎಲ್ಲ ದೇಶಕ್ಕೆ ಮತ್ತು ಎಲ್ಲ ಮನುಷ್ಯರ ದೇಹಕ್ಕೆ ಅಂಟಿಕೊಂಡಿರತಕ್ಕದ್ದು ‘ಸತ್ಯ’ ಇದನ್ನು ಯಾರೂ ಬೇಡವೆಂದು ಹೇಳುವುದಕ್ಕಾಗುವುದಿಲ್ಲ. ಇದು ಎಲ್ಲರಿಗೂ ಬೇಕಾಗಿರತಕ್ಕದ್ದು.
ನಾನು ಈ ಸಮ್ಮೇಳನವನ್ನು ಅಲ್ಲಗಳೆಯುತ್ತಿದ್ದೇನೆಂದು ಅಲ್ಲ: ನಮ್ಮ ದೇಶದಲ್ಲಿ ಯಾರೇ ಆಗಿರಲಿ ಅವರು ಯಾವ ಜಾತಿಗೆ ಸಂಬಂಧಪಟ್ಟವರೇ ಆಗಿರಲಿ. ಅವರಲ್ಲಿ ನನ್ನ ಒಂದು ನಮ್ರತೆಯ ವಿನಂತಿ ಏನೆಂದರೆ ನಿಮ್ಮ ಕರ್ತವ್ಯ ಅಡ್ಡಿ ಮಾಡಿದರೆ ಅದು ನಿಮ್ಮ ಸಂಪ್ರದಾಯಕ್ಕೆ, ನಿಮ್ಮ ಮತಕ್ಕೆ ಮತ್ತು ಸಮಾಜಕ್ಕೆ ಮೋಸಮಾಡಿದಂತೆ ಆಗುತ್ತದೆ. ಇವತ್ತು ಯಾವುದೇ ಒಂದು ಮತ ಕೆಲಸಮಾಡುವುದಕ್ಕೆ ಸಾಧ್ಯವೇ ಇಲ್ಲ. ಸಾಮಾಜಿಕವಾಗಿ ನಾವು ಯೋಚನೆ ಮಾಡಬೇಕು. ಎಷ್ಟೇ ಅಡಚಣೆಗಳು ಇದ್ದರೂ ನಮ್ಮ ಕಾರ್ಯಸಾಧನೆ ಮಾಡಬೇಕು. ನಮ್ಮ ಆರ್ಥಿಕ ಸಾಮಾಜಿಕ ಗುರಿಗಳನ್ನು ಸಾಧಿಸಬೇಕು. ಈ ಎಲ್ಲರೂ ಸೇರಿಕೊಂಡು ಯೋಚನೆ ಮಾಡಬೇಕು. ಇದಕ್ಕೆ ನಾನು ಒಬ್ಬನೇ ಉತ್ತರವನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ. ನಾನು ಯಾವುದನ್ನು ತ್ಯಾಗ ಮಾಡಬೇಕೆಂದು ಹೇಳುತ್ತಿದ್ದೇನೋ ಆ ಬಾಹ್ಯಾಡಂಬರಕ್ಕೆ ಸ್ವಲ್ಪಮಟ್ಟಿಗಾದರೂ ಅಂಟಿಕೊಂಡಿದ್ದೇನೆ, ಯಾರು ಇದಕ್ಕೆ ತಲೆಬಾಗಿಲ್ಲವೋ, ಬಾಗುವುದಿಲ್ಲವೋ ಅಂತಹವರಿಗೆ ನನ್ನ ದೀರ್ಘದಂಡ ನಮಸ್ಕಾರಗಳು.
ಇದನ್ನೂ ಓದಿ: ಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸುರವರ ಭಾಷಣ
ದೇಶದಲ್ಲಿನ ಪರಿಸ್ಥಿತಿಯನ್ನು ತಿದ್ದುವುದಕ್ಕೆ ಸಂಬಂಧಪಟ್ಟವರಿಗೆಲ್ಲ ಅಧಿಕಾರವಿದೆ. ‘ಕಾಯೇನ ವಾಚಾ ಮನಸಾ ಅಂದರೆ ಶರೀರದಿಂದ, ಮಾತಿನಿಂದ, ಮನಸ್ಸಿನಿಂದ ನಾವು ಈ ಕಾರ್ಯದಲ್ಲಿ ತೊಡಗಬೇಕು. ಇದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತಹ ಮಾತಾಗಿದೆ. ಈ ಮೂರು ರೀತಿಗಳಲ್ಲಿ ಕಾರ್ಯಪ್ರವೃತ್ತನಾಗುವವನೇ ಯೋಗ್ಯನೆಂದು ಅಲ್ಲಿ ಹೇಳಿದೆ. ಈ ಮೂರನ್ನೂ ಹೊಂದಿಸಿಕೊಂಡು ಹೋಗುವಂತಹ ಮನುಷ್ಯನಿಗೆ ವಿಶಿಷ್ಟ ಶಕ್ತಿ ಇದ್ದೇ ಇರುತ್ತದೆ. ಅದನ್ನು ಎದುರಿಸುವುದಕ್ಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಈ ಮೂರರಲ್ಲಿ ತೂಕ ತಪ್ಪಿಸಿದಂತಹವರು ಎಷ್ಟು ಕಿರುಚಿಕೊಂಡರೂ ಕೂಡ ಯಾರೂ ಕೇಳುವುದಿಲ್ಲ. ಇಂದು ಧರ್ಮಸಂಸ್ಥೆಗಳಿಂದ ಮತ್ತು ಮಠಾಧಿಪತಿಗಳಿಂದ ನಮ್ಮ ದೇಶದಲ್ಲಿ ಇಂಥ ನೈತಿಕ-ಸಾಮಾಜಿಕ ಆರ್ಥಿಕ ಪುನರುದ್ಧಾರದ ಕಾರ್ಯಸಾಧನೆಯಾಗಬೇಕಾಗಿದೆ. ಈ ಕಾರ್ಯ ಈ ಮಾರ್ಗದಲ್ಲಿ ಆಗಬೇಕು ಎಂಬುದು ನಮ್ಮ ಮನಸ್ಸಿನ ಒಂದು ಮಹತ್ವಾಕಾಂಕ್ಷೆಯಾಗಿದೆ. ಈ ಸರ್ವಧರ್ಮ ಸಮ್ಮೇಳನ ಇಂಥ ಪ್ರೇರಣೆ-ಪ್ರಚೋದನೆಗಳನ್ನು ಒದಗಿಸಲಿ ಎಂದು ಹಾರೈಸುತ್ತೇನೆ ಹಾಗೂ ಈ ಸಮ್ಮೇಳನವನ್ನು ನಾನು ತುಂಬ ಸಂತೋಷದಿಂದ ಉದ್ಘಾಟಿಸುತ್ತೇನೆ.
- ದಿನಾಂಕ 23.11.1973ರಂದು ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾಡಿದ ಭಾಷಣವಿದು.
(ಡಾ.ಹಾ.ಮಾ ನಾಯಕರವರು ಸಂಪಾದಿಸಿರುವ ಡಿ.ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯವರ ಕರ್ನಾಟಕಕ್ಕೆ ಶುಭವಾಗಲಿ ಎಂಬ ಪುಸ್ತಕದಿಂದ ಪ್ರಸ್ತುತ ಬರಹವನ್ನು ಆಯ್ದುಕೊಳ್ಳಲಾಗಿದೆ.)


