Homeಕರ್ನಾಟಕಗೌರಿ ಹತ್ಯೆ ವಿಚಾರಣೆ: ಹತ್ಯೆಗೆ ಬಳಸಿದ್ದ ಪ್ಯಾಷನ್ ಪ್ರೊ ಬೈಕ್ ಗುರುತುಹಚ್ಚಿದ ಸಾಕ್ಷಿಗಳು

ಗೌರಿ ಹತ್ಯೆ ವಿಚಾರಣೆ: ಹತ್ಯೆಗೆ ಬಳಸಿದ್ದ ಪ್ಯಾಷನ್ ಪ್ರೊ ಬೈಕ್ ಗುರುತುಹಚ್ಚಿದ ಸಾಕ್ಷಿಗಳು

- Advertisement -
- Advertisement -

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ಆಗಸ್ಟ್ ಎರಡನೇ ವಾರದಲ್ಲಿ ನಿಗದಿಯಾಗಿದ್ದ 5 ದಿನಗಳಲ್ಲಿ ಕಾರಣಾಂತರಗಳಿಂದ ಒಂದೂವರೆ ದಿನವಷ್ಟೇ ನಡೆಯಿತು. ಸದ್ಯಕ್ಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸೆಷನ್ಸ್ ನ್ಯಾಯಾಧೀಶರಾದ ಸಿ.ಎಂ. ಜೋಶಿಯವರು ಹೈಕೋರ್ಟಿಗೆ ಮುಂಬಡ್ತಿ ಪಡೆದಿದ್ದಾರೆ. ಹಾಗಾಗಿ ಮುಂಬರುವ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಗೆ ಎಷ್ಟು ಸಮಯ ಕೊಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಆಗಸ್ಟ್ ತಿಂಗಳಿನಲ್ಲಿ ನಡೆದ ವಿಚಾರಣೆಯ ಸಂಕ್ಷಿಪ್ತ ವರದಿ ಇಲ್ಲಿದೆ.

ಗೌರಿಯವರನ್ನು ನಕ್ಸಲರು ಕೊಂದಿರಬಹುದು, ಆಸ್ತಿ ವಿವಾದದಿಂದ ಕೊಲೆಯಾಗಿರಬಹುದು ಎಂಬುದು ಕೋರ್ಟ್ ವಿಚಾರಣೆಯ ಮೊದಲ ತಿಂಗಳಿನಲ್ಲಿ ಆರೋಪಿ ಪರ ವಕೀಲರ ಪಾಟಿ ಸವಾಲಿನ ವಾದ ಸರಣಿಯಾಗಿತ್ತು. ಈಗ ಎರಡನೆಯ ತಿಂಗಳಿನಲ್ಲಿ, ಸಾಕ್ಷಿಗಳು ಪೊಲೀಸರು ಹೇಳಿಕೊಟ್ಟಂತೆ ಹೇಳುತ್ತಿದ್ದಾರೆ; ತನಿಖೆಯಲ್ಲಿ ಪೊಲೀಸರು ನಿಯಮಗಳನ್ನು ಪಾಲಿಸಿಲ್ಲ ಎಂಬುದು ಅವರ ವಾದಸರಣಿಯಾಗಿದೆ. ಈ ತಿಂಗಳಿನಲ್ಲಿ ಒಟ್ಟು 8 ಸಾಕ್ಷಿಗಳನ್ನು ಕೋರ್ಟ್ ವಿಚಾರಣೆ ನಡೆಸಿತು. ಆರೋಪಿ ಪರ ವಕೀಲರು ಪಾಟಿ ಸವಾಲು ನಡೆಸಿದರು.

PWD ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ವಿ.ಬಿ.ಕಳಗೇರಿ ಎಂಬುವವರು ಅಪರಾಧ ನಡೆದ ಸ್ಥಳದ ಸ್ಕೆಚ್ ಮಾಡಿಕೊಟ್ಟಿರುವುದಾಗಿ ಹೇಳಿದರು ಮತ್ತು ಅದನ್ನು ಗುರುತಿಸಿದರು. ಪೊಲೀಸರ ಮನವಿ ಮತ್ತು ತಮ್ಮ ಮೇಲಧಿಕಾರಿಗಳ ಆದೇಶದ ಮೇರೆಗೆ ಸ್ಕೆಚ್ ಮಾಡಿಕೊಟ್ಟಿದ್ದೆ ಎಂದು ಸಾಕ್ಷಿ ನುಡಿದರು. ಇದನ್ನು ಆಕ್ಷೇಪಿಸಿದ ಆರೋಪಿ ಪರ ವಕೀಲರು ನೀವು ಅಪರಾಧ ನಡೆದ ಸ್ಥಳಕ್ಕೆ ಹೋಗಿಯೇ ಇಲ್ಲ, ಪೊಲೀಸರೇ ನಿಮ್ಮ ಕಚೇರಿಗೆ ಬಂದು ಸ್ಕೆಚ್ ಬರೆಸಿದ್ದಾರೆ ಎಂದು ವಾದಿಸಿದರು. ಅದನ್ನು ವಿ.ಬಿ ಕಳಗೇರಿಯವರು ನಿರಾಕರಿಸಿದರು.

’ಗೌರಿಯವರಿಗೆ ಗುಂಡು ಹಾರಿಸಿದ ಆರೋಪಿ ಪರಶುರಾಮ್ ವಾಗ್ಮೋರೆಯನ್ನು 2018ರ ಜೂನ್ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಅದೇ ಜೂನ್ ತಿಂಗಳ 22ರಂದು ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಿದ್ದೆವು. ಕೃತ್ಯ ನಡೆದಾಗ ಆತ ಯಾವ ಬಟ್ಟೆಯನ್ನು ಧರಿಸಿದ್ದನೊ (ಜಾಕೆಟ್ ಮತ್ತು ಶೂ) ಅಂತಹ ಬಟ್ಟೆಯನ್ನು ತೊಡಿಸಿ, ಗೌರಿಯವರು ಬಳಸುತ್ತಿದ್ದ ಕಾರನ್ನು ಹೋಲುವ ಮತ್ತೊಂದು ಕಾರನ್ನು ತರಿಸಿ ಒಟ್ಟು ಅಪರಾಧ ಚಿತ್ರಣವನ್ನು ಮರು ಸೃಷ್ಟಿ ಮಾಡಿ ರೆಕಾರ್ಡ್ ಮಾಡಿಕೊಂಡೆವು’ ಎಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಶಿವಾರೆಡ್ಡಿಯವರು ಸಾಕ್ಷಿ ನುಡಿದರು.

ಆರೋಪಿ ಪರ ವಕೀಲರು ’ಅಪರಾಧ ಚಿತ್ರಣದ ಮರುಸೃಷ್ಟಿಗೆ ಬಳಸಿದ ಬಟ್ಟೆಗಳನ್ನು ಪೊಲೀಸರು ಎಲ್ಲಿಂದ ಖರೀದಿಸಿದ್ದೀರಿ? ಅದಕ್ಕೆ ಹಣ ಪಾವತಿಸಿದ ಬಿಲ್ ಇದೆಯೆ?’ ಎಂದು ಶಿವಾರೆಡ್ಡಿಯವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿವಾರೆಡ್ಡಿಯವರು ’ಮೆಜೆಸ್ಟಿಕ್‌ನ ಬೀದಿ ಬದಿಯಲ್ಲಿ ಬಟ್ಟೆ ಖರೀದಿಸಿದೆವು ಮತ್ತು ಬೀದಿ ಬದಿಯಲ್ಲಿ ರಶೀದಿ ನೀಡುವುದಿಲ್ಲ’ ಎಂದು ಉತ್ತರಿಸಿದರು. ’ರಸ್ತೆ ಬದಿ ಬಿಟ್ಟು ಬೇರೆ ಅಂಗಡಿಗಳಲ್ಲಿ ಏಕೆ ಬಟ್ಟೆ ಖರೀದಿಸಲಿಲ್ಲ’ ಎಂದು ವಕೀಲರು ಮರು ಪ್ರಶ್ನಿಸಿದಾಗ, ’ಆ ರೀತಿಯ ಬಟ್ಟೆ ಬೇರೆ ಅಂಗಡಿಯಲ್ಲಿ ಸಿಗಲಿಲ್ಲ’ ಎಂದು ಶಿವಾರೆಡ್ಡಿಯವರು ಉತ್ತರಿಸಿದರು.

ಗೌರಿಯವರನ್ನು ಹತ್ಯೆ ಮಾಡಲು ಬಳಸಿದ್ದ ಹೀರೋ ಕಂಪನಿಯ ಪ್ಯಾಷನ್ ಪ್ರೊ ಬೈಕ್‌ಅನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದನ್ನು ತುಮಕೂರಿನ ಸಾಕ್ಷಿಯೊಬ್ಬರು ಗುರುತಿಸಿದ್ದರು. ತಾನು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದನು ಪ್ರಸ್ತಾಪಿಸಿದ್ದ ಸಾಕ್ಷಿಯು, “2017ರ ಸೆಪ್ಟಂಬರ್ 5ರಂದು ಟಿವಿ ಚಾನೆಲ್ ಒಂದರಲ್ಲಿ ಇಂಟರ್‌ವ್ಯೂ ಮುಗಿಸಿ ಗೌರಿ ಲಂಕೇಶ್ ಮನೆ ಎದುರಿನ ಖಾಲಿ ಸೈಟ್‌ನಲ್ಲಿದ್ದ ಶೆಡ್‌ನಲ್ಲಿ ಸ್ನೇಹಿತ ತಾಯಪ್ಪ ಎಂಬುವವರ ಜೊತೆ ಉಳಿದುಕೊಂಡಿದ್ದೆ. ಅಡುಗೆ ಮಾಡುತ್ತಿದ್ದಾಗ ಗುಂಡಿನ ಶಬ್ದ ಕೇಳಿ ಮನೆಯಿಂದ ಹೊರಬಂದಾಗ ಕಪ್ಪು ಬಣ್ಣದ ಪ್ಯಾಷನ್ ಪ್ರೊ ಬೈಕ್‌ನಲ್ಲಿ ಇಬ್ಬರು ಗೌರಿ ಲಂಕೇಶ್‌ರವರ ಮನೆಯ ಕಡೆಯಿಂದ ತಾವಿದ್ದ ಕಾಂಪೌಂಡ್ ದಾಟಿಕೊಂಡು ಸುಭಾಷ್ ಪಾರ್ಕಿನ ಕಡೆ ಹೋಗುವುದನ್ನು ನೋಡಿದೆ. ಅವರು ಪೂರ್ತಿ ಮುಖ ಮುಚ್ಚುವ ಹಾಗೆ ಹೆಲ್ಮೆಟ್ ಧರಿಸಿದ್ದರು. ಅದರೊಟ್ಟಿಗೆ ಕಾರು ಒಂದು ಇಂಜಿನ್ ಆನ್ ಆಗಿ ನಿಂತಿತ್ತು. ಅದಾದ ಐದಾರು ಸೆಕೆಂಡ್‌ಗಳಲ್ಲಿ ಮತ್ತೊಂದು ಬೈಕ್‌ನಲ್ಲಿ ಇಬ್ಬರು ಗೌರಿ ಲಂಕೇಶ್‌ರವರ ಮನೆ ಎದುರು ಬಂದು ನಿಂತರು (ಟಿವಿ ಕೇಬಲ್ ಸರಿಪಡಿಸುವವರು). ನಾನು ಮತ್ತು ನನ್ನ ಸ್ನೇಹಿತ ತಾಯಪ್ಪ ಇಬ್ಬರಿಗೂ ಭಯವಾಗಿ ವಾಪಸ್ ಶೆಡ್‌ನ ಒಳಗೆ ಹೋದೆವು” ಎಂದು ಕೋರ್ಟಿನಲ್ಲಿ ಸಾಕ್ಷಿ ನುಡಿದಿದ್ದಾರೆ.

(ಆಗ ಅಲ್ಲಿಗೆ ಬಂದಿದ್ದ ಎರಡನೇ ಬೈಕ್ ಕೇಬಲ್ ರಿಪೇರಿ ಮಾಡುವವರದ್ದಾಗಿತ್ತು. ತಮ್ಮ ಮನೆಯ ಕೇಬಲ್ ಕೆಲಸ ಮಾಡುತ್ತಿಲ್ಲ ಎಂದು ಗೌರಿ ಲಂಕೇಶ್‌ರವರು ರೀಪೇರಿ ಮಾಡುವವರಿಗೆ ಬರುವಂತೆ ತಿಳಿಸಿದ್ದರು.)

ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸಿದ ಆರೋಪಿ ಪರ ವಕೀಲರು, ’ಪ್ಯಾಷನ್ ಪ್ರೊ ಮಾಡೆಲ್‌ನ ಹಲವಾರು ಬೈಕ್‌ಗಳಿವೆ. ಇದೇ ಬೈಕ್‌ಅನ್ನು ಅಪರಾಧಕ್ಕೆ ಬಳಸಿದ್ದು ಎಂದು ಹೇಗೆ ಹೇಳುತ್ತೀರಿ? ಕತ್ತಲೆಯಲ್ಲಿ ಬಣ್ಣವನ್ನು ಹೇಗೆ ಗುರುತಿಸಿದಿರಿ’ ಎಂದು ಪ್ರಶ್ನಿಸಿದರು. ಅದಕ್ಕೆ ಸಾಕ್ಷಿಯು ಘಟನೆ ನಡೆದ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಪ್ಯಾಷನ್ ಪ್ರೊ ಬೈಕ್‌ನಲ್ಲಿ ದಾಟಿ ಹೋಗಿದ್ದನ್ನು ತಾನು ಪ್ರತ್ಯಕ್ಷವಾಗಿ ನೋಡಿದ್ದಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇನ್ನು ಗೌರಿ ಹತ್ಯೆಗೆ ಸಂಚು ರೂಪಿಸಿದವರಲ್ಲಿ ಮತ್ತೊಬ್ಬ ಆರೋಪಿ ಮದ್ದೂರಿನ ಕೆ.ಟಿ.ನವೀನ್ ಕುಮಾರ್. ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠದ ಎದುರಿನ ಪಾರ್ಕ್‌ನಲ್ಲಿ ಕುಳಿತು ಸಂಚು ರೂಪಿಸಿದ್ದಾಗಿ ಆತ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದ. ಅದನ್ನು ಪಂಚನಾಮೆ ಮಾಡಲು ಆರೋಪಿಯನ್ನು ಕರೆದುಕೊಂಡು ಹೋದಾಗ ಅವರ ಜೊತೆಯಲ್ಲಿ ಸಿದ್ದೇಶ್ವರ ಎಂಬ ಸರ್ಕಾರಿ ನೌಕರರು ಸಾಕ್ಷಿಯಾಗಿ ಹೋಗಿದ್ದರು. ಆಗ ಆರೋಪಿ ನವೀನ್ ಕುಮಾರ್ ಅದೇ ಜಾಗದಲ್ಲಿ ಕುಳಿತು ಹತ್ಯೆಯ ಸಂಚು ರೂಪಿಸಿದ್ದವೆಂದು ಹೇಳಿದ್ದರು ಎಂದು ಕೋರ್ಟಿನಲ್ಲಿ ಸಿದ್ದೇಶ್ವರ ಸಾಕ್ಷಿ ನುಡಿದರು ಮತ್ತು ಫೋಟೊದಲ್ಲಿ ನವೀನ್ ಕುಮಾರ್ ಯಾರೆಂದು ಗುರುತಿಸಿದರು. ಯಥಾಪ್ರಕಾರ ಪೊಲೀಸರು ಹೇಳಿಕೊಟ್ಟಂತೆ ಹೇಳುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿದರು.

ಮಂಡ್ಯದವರಾದ ರವಿಕುಮಾರ್ ಬೆಂಗಳೂರಿಗೆ ಬಂದು ರಾಜರಾಜೇಶ್ವರಿ ನಗರ ಗೇಟಿನ ಬಳಿ ಇದ್ದಾಗ ಪೊಲೀಸರು ಅವರನ್ನು ಸಾಕ್ಷಿಯಾಗಿ ಕರೆದಿದ್ದರು. “ನಾನು ಅವರೊಡನೆ ಪೊಲೀಸ್ ಠಾಣೆಗೆ ಹೋದಾಗ ತಮ್ಮ ಸಮ್ಮುಖದಲ್ಲಿ ಸೀಲ್ ಆದ ಡಿವಿಆರ್‌ಅನ್ನು ತೆಗೆದು ವಿಡಿಯೋ ಪ್ಲೇ ಮಾಡಿದರು. ಅದರಲ್ಲಿ ಗೌರಿ ಲಂಕೇಶ್‌ರವರು ಕಾರಿನಿಂದ ಇಳಿದು ಹೊರಬರುತ್ತಿದ್ದಂತೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ಗುಂಡು ಹಾರಿಸಿದರು. ಗೌರಿಯವರು ಹಿಂದೆ ಸರಿಯುತ್ತಾ ಅವರ ಮನೆಯ ಬಾಗಿಲ ಹತ್ತಿರ ಕುಸಿದು ಬಿದ್ದ ದೃಶ್ಯಾವಳಿಗಳು ಆ ಡಿವಿಆರ್‌ನಲ್ಲಿದ್ದವು” ಎಂದು ಕೋರ್ಟ್ ವಿಚಾರಣೆ ವೇಳೆ ಅವರು ಹೇಳಿದರು. ಅದೇ ರೀತಿ ಇನ್‌ಕಾಗ್ನಿಟೊ ಫೊರೆನ್ಷಿಕ್ ಫೌಂಡೇಶನ್‌ನಲ್ಲಿ ಕೆಲಸ ಮಾಡುವ ಸ್ನೇಹ ಎಂಬ ಸೈಬರ್ ಫೊರೆನ್ಸಿಕ್ ತಜ್ಞರು 2017ರ ಸೆಪ್ಟಂಬರ್ 6ರಂದು ಪೊಲೀಸರು ತಮ್ಮ ಕಂಪನಿಗೆ ಸೀಲ್ ಆದ ಕವರ್‌ನಲ್ಲಿದ್ದ ಡಿವಿಆರ್‌ಗಳನ್ನು ವಿಶ್ಲೇಷಣೆಗೆ ತಂದುಕೊಟ್ಟರೆಂದು, ಅದನ್ನು ಪಡೆದು ನಾನು ಸಹಿ ಹಾಕಿಕೊಟ್ಟನೆಂದು ಸಾಕ್ಷಿ ನುಡಿದರು ಮತ್ತು ಕೋರ್ಟಿನಲ್ಲಿ ಅವನ್ನು ಗುರುತಿಸಿದರು.

ಆದರೆ ಈ ಡಿವಿಆರ್ ದೃಶ್ಯಾವಳಿಗಳನ್ನು ಆರೋಪಿ ಪರ ವಕೀಲರಿಗೆ ಇನ್ನೂ ಕೊಟ್ಟಿಲ್ಲವಾದ್ದರಿಂದ ಪಾಟೀ ಸವಾಲು ನಡೆಸಲಿಲ್ಲ. ಅಲ್ಲದೆ ಡಿವಿಆರ್ ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳುವಾಗ ತನಿಖಾಧಿಕಾರಿಗಳು (ಅನುಚೇತ್) ಸರಿಯಾದ ವಿಧಾನ ಅಳವಡಿಸಿಲ್ಲ ಎಂದು ನ್ಯಾಯಾಧೀಶರು ಸರ್ಕಾರ ವಕೀಲರನ್ನು ಪ್ರಶ್ನಿಸಿದರು. ತನಿಖೆ ಮುಗಿದ ನಂತರ ತಾನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದು, ಈ ಪ್ರಶ್ನೆಗೆ ತನಿಖಾಧಿಕಾರಿಗಳೆ ವಿವರಣೆ ನೀಡಬೇಕೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಾಲನ್ ಉತ್ತರಿಸಿದರು. ಹಾಗಾಗಿ ಈ ಸಾಕ್ಷಿಯನ್ನು ಆನಂತರ ವಿಚಾರಣೆ ನಡೆಸಲು ಕೋರ್ಟ್ ಒಪ್ಪಿಕೊಂಡಿದೆ.

ಆರೋಪಿಗಳಲ್ಲಿ ಒಬ್ಬರಾದ ಗಣೇಶ್ ಮಿಸ್ಕಿನ್ ಎಂಬುವವರಿಗೆ ವೆರಿಕೋವೆಯ್ನ್ಸ್ ಎಂಬ ಆರೋಗ್ಯದ ಸಮಸ್ಯೆಯಿರುವುದಾಗಿ ತಿಳಿಸಿ ಚಿಕಿತ್ಸೆಗೆ ಅವಕಾಶ ನೀಡಲು ಮನವಿ ಮಾಡಲಾಯಿತು. ಜೈಲು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಅಥವಾ ಅಗತ್ಯಬಿದ್ದರೆ ಸ್ವಂತ ಖರ್ಚಿನಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಖಾಸಗಿ ಆಸ್ಪತ್ರೆಗೆ ಸೇರಿಸಬಹುದೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ಮುಂದಿನ ತಿಂಗಳು ಸೆಪ್ಟಂಬರ್ 5ರಿಂದ 9ನೇ ತಾರೀಖಿನವರೆಗೆ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ. 2022 ಸೆಪ್ಟಂಬರ್ 5ಕ್ಕೆ ಗೌರಿಯವರು ಕೊಲೆಯಾಗಿ 5 ವರ್ಷಗಳ ತುಂಬುತ್ತಿವೆ. ಆ ಸಂದರ್ಭದಲ್ಲಿ ತನಿಖಾಧಿಕಾರಿಗಳಾದ ಡಿಸಿಪಿ ಅನುಚೇತ್‌ರವರು ವಿಚಾರಣೆಗೆ ಹಾಜರಾಗಲಿದ್ದಾರೆ.


ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ; ಆರೋಪಿಗಳನ್ನು ಗುರುತು ಹಚ್ಚಿದ ಪ್ರಮುಖ ಸಾಕ್ಷಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...