ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂಡಾಯವೆದ್ದು ಬೊಂಬಾಯಿಗೆ ಹೋಗಿದ್ದ ಶಾಸಕರ ಸಾಹಸ ಏನೋ ಮಾಡಲು ಹೋಗಿ ಇನ್ನೇನೋ ಆದಂತಿದೆಯಲ್ಲಾ. ಸೂಕ್ಷ್ಮವಾಗಿ ನೋಡಿದರೆ, ಅಂದರೆ ವಿಶ್ವನಾಥ್ ತರ ಆಲೋಚಿಸಿದರೆ, ಅಂತಹ ಆಗಬಾರದ್ದೇನೂ ಆಗಿಲ್ಲವಂತಲ್ಲಾ. ಹೇಗೆಂದರೆ, ಈ ಕುಮಾರಸ್ವಾಮಿ ಸರಕಾರದಲ್ಲಿದ್ದರೆ ಭಿಕ್ಷುಕರಂತೆ ಇರಬೇಕಿತ್ತು. ಕ್ಷೇತ್ರದ ಕೆಲಸಗಳಿಗಾಗಿ ಬೇಡಬೇಕಿತ್ತು. ಆ ಬೇಡಿಕೆ, ರೇವಣ್ಣನ ಖಾತೆಗೆ ಸಂಬಂಧಿಸಿದ್ದರೆ, ಮುಗಿದೇಹೋಯ್ತು. ಮೂಡ್ಕಿಗಿರಪ್ಪನಿಗೆ ಕೋಳಿ ಕೂದು ಪೊರಮಾಡಿ ಕೈಮುಗಿದಂತಾಗುತ್ತಿತ್ತು. ಇನ್ನುಳಿದ ಬೇಡಿಕೆಗಳು ಪಿತಾಜಿಯವರಾದ ದ್ಯಾವೇಗೌಡರ ಆವಗಾಹನೆಗೆ ಹೋಗಬೇಕಿತ್ತು. ಇಂತಹ ಯಾಚಕತನದಲ್ಲಿ ಶಾಸಕರಾಗಿದ್ದುಕೊಂಡು, ಚಿಲ್ಲರೆ ಹಣದೊಂದಿಗೆ ಮನೆಗೆ ಹೋಗಿ ಮತ್ತು ಚುನಾವಣೆಗೆ ಹೋಗಿ ಸೋಲುವುದಕ್ಕಿಂತ ಮಕ್ಕಳ ಕಾಲಕ್ಕೂ ಮುಗಿಯದಷ್ಟು ಹಣವನ್ನು ಮೋದಿ ಶಾರಿಂದ ಪಡೆದು, ಆ ರಮೇಶ್ ಕುಮಾರ್ ಅದೇನು ಮಾಡುತ್ತಾನೋ ನೋಡೇಬಿಡೋಣ ಎಂಬ ತೀರ್ಮಾನಕ್ಕೆ ಬಂದಿದ್ದರಂತಲ್ಲಾ ಥೂತ್ತೇರಿ.
*****
ಕರ್ನಾಟಕದ ರಾಜಕಾರಣಕ್ಕೇ ಶಾಪದಂತಿರುವ ಅಥವಾ ಒಕ್ಕಲಿಗ ಜನಾಂಗದ ನಾಯಕರುಗಳಿಗೇ ಕಂಟಕವಾಗಿರುವ ದ್ಯಾವೇಗೌಡರು ಮೊನ್ನೆ ತಮ್ಮ ಪಾರ್ಟಿ ಕಾರ್ಯಕರ್ತರ ಎದುರು ಒಂದೇ ಕಣ್ಣಿನಲ್ಲಿ ಎಷ್ಟು ಅತ್ತರೂ ಕಣ್ಣೀರು ಬರದೇ ಕರವಸ್ತ್ರದಿಂದ ವರಸಿಕೊಂಡರಂತಲ್ಲಾ. ಗೌಡರ ಈ ಕಣ್ಣೀರಿಗೆ ಮಂಡ್ಯದ ಮಂತ್ರಿಗಳು ಶಾಸಕರು ಮತ್ತು ನಿಷ್ಠಾವಂತರು ಗೌಡರಿಗೆ ಬರೆಯುತ್ತಿರುವ ಅಥವಾ ಬರೆಯಲು ಯತ್ನಿಸುತ್ತಿರುವ ಕಾಗದಗಳ ಪರಿಣಾಮವೆಂದು ಗೌಡರ ಆಪ್ತವಲಯದ ಆಪಾದನೆಯಾಗಿದೆಯಲ್ಲಾ. ಗೌಡರ ಆವಗಾಹನೆಗೆ ಮಂಡ್ಯದ ಮುಖಂಡರು ಬರೆಯುತ್ತಿರುವ ದೂರಿನ ಪಟ್ಟಿ ಇಂತಿದೆಯಲ್ಲಾ.
ಪಿತೃ ಸಮಾನರು ದೈವ ಸಮಾನರೂ ಆದ ಅಪ್ಪಾಜಿಯವರು ಮತ್ತು ಕುಮಾರಣ್ಣನವರಿಗೆ, ನಮ್ಮ ಶಿರಸಾಷ್ಟಾಂಗ ನಮಸ್ಕಾರಗಳು. ಧೈರ್ಯ ಮಾಡಿ ಈ ಪತ್ರ ಬರೆಯುವ ಉದ್ದೇಶವೇನೆಂದರೆ ಮಂಡ್ಯದಲ್ಲಿ ಚಿರಂಜೀವಿ ನಿಖಿಲ್ ಸೋತ ಮೇಲೆ ತಮ್ಮ ಮನೆಯ ವಾತಾವರಣ ಬದಲಾಗಿದೆ. ಮುಖ್ಯವಾಗಿ ನಾವು ಬಂದಾಗ ಮಡಿಮೈಲಿಗೆ ಬ್ರಾಹ್ಮಣ ಅಸ್ಪøಶ್ಯರನ್ನು ನೋಡಿದಂತೆ ನೋಡುತ್ತೀರಿ ಎಂಬ ವಾಕ್ಯಕ್ಕೆ ಗೌಡರು ಸಿಡಿಮಿಡಿಗೊಂಡರಂತಲ್ಲಾ ಥೂತ್ತೇರಿ…
*****
ಮತ್ತೊಂದು ಪತ್ರದ ಸಾರಾಂಶ. ಅಪ್ಪಾಜಿಯವರೆ ನಾವು ನೀವು ಹೇಳಿದಂತೆ ಕೇಳಿದ್ದೇವೆ. ಕಾಲಲ್ಲಿ ತೋರಿದ ಕೆಲಸವನ್ನ ಕೈಲಿ ಮಾಡಿದ್ದೇವೆ. ಕೈಯಿಂದಲೇ ಹಣ ಹಾಕಿ ರಾಜಕಾರಣ ಮಾಡುತ್ತಿದ್ದೇವೆಯೇ ಹೊರತು ನಿಮ್ಮಿಂದ ಹಣ ಪಡೆದಿಲ್ಲ. ಆದರೂ ನಿಮ್ಮ ಮನೆಗೆ ಬಂದಾಗ, ನಮ್ಮನ್ನು ಕಳ್ಳರಂತೆ ನೋಡುತ್ತೀರಿ. ಇಂತಹ ಅವಮಾನ ಸಹಿಸಲಾಗದೆ ಕೆ.ಆರ್.ಪೇಟೆ ನಾರಾಯಣಗೌಡ ಬಿಕರಿಯಾಗಿ ಹೋದ. ನಮಗೆ ಬೂಕನಕೆರೆ ಎಡೂರಪ್ಪ ದೂರದವನಲ್ಲ. ಆದರೂ ನಾವು ನಿಮ್ಮ ಜೊತೆ ಇದ್ದೇವೆ. ಹೇಳಿದ ಕೆಲಸ ಮಾಡಿದ್ದೇವೆ.
ಎಳೆ ಹುಡುಗನನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದಾಗ ಕುಮಾರಣ್ಣನೇ ಸ್ಪರ್ಧಿಸಿದ್ದಾನೆ ಎನ್ನುವಂತೆ ಕೆಲಸ ಮಾಡಿದ್ದೇವೆ. ಕೈಲಿದ್ದ ಕಾಸು ಖಾಲಿಯಾದ ಮೇಲೆ ಕೈ ಸಾಲ ಮಾಡಿದ್ದೇವೆ. ಎಣ್ಣೆ ಅಂಗಡಿ, ಮಿಲಿಟ್ರಿ ಹೋಟೆಲ್ ಬಾಕಿ ಹಾಗೇ ಇದೆ. ಕಿರುಜಾತಿ ಲೀಡರುಗಳನ್ನೆಲ್ಲಾ ತಂದು ನಿಮ್ಮ ಮುಂದೆ ನಿಲ್ಲಿಸಿ ಬಿಕರಿ ಮಾಡಿದೆವು. ಅವರ ಹಳೆ ಬಾಕಿ ಹಾಗೇ ಇದೆ. ನಮ್ಮ ಭಾಷಣದಿಂದ ಜನ ರೊಚ್ಚಿಗೆದ್ದಿದ್ದಾರೆ. ಹೀಗೆ ಮಾತನಾಡಿ ಎಂದು ಹೇಳಿದವರೂ ನೀವೆ. ಈಗ ನಮ್ಮನ್ನ ದೂರುತ್ತಿರುವವರೂ ನೀವೆ. ಹೇಳಿ ನಾವು ಇಲ್ಲೇ ಇರಬೇಕೋ ಅಥವಾ ಬೂಕನಕೆರೆಗೆ ಹೋಗಬೇಕೊ ತಿಳಿಸಿ ಎಂದು ಬರೆದುಬಿಟ್ಟಿದ್ದಾರಲ್ಲ ಥೂತ್ತೇರಿ…
*****
ಮತ್ತೊಂದು ಪತ್ರದ ಒಕ್ಕಣೆ ಇಂತಿದೆಯಲ್ಲಾ. ತಂದೆಯಿಲ್ಲದ ನನಗೆ ತಂದೆ ಸಮಾನರೂ ಅಣ್ಣನಿಲ್ಲದ ನನಗೆ ಅಣ್ಣನಂತಿರುವ ಕುಮಾರಣ್ಣ, ಮಂಡ್ಯದ ಚುನಾವಣಾ ಫಲಿತಾಂಶದ ನಂತರ ನಾನು ನಿಮ್ಮ ಮನೆಗೆ ಬಂದಾಗ ಅಪ್ಪಾಜಿಯವರು ಅತ್ತ ನೋಡುತ್ತಿದ್ದರು. ನನ್ನ ಕಡೆ ತಿರುಗಲಿಲ್ಲ. ನೀವು ಪ್ರಜಾವಾಣಿಯ ಜಾಹೀರಾತು ನೋಡುತ್ತ ತಲೆ ಎತ್ತಲಿಲ್ಲ. ನಿಜಕ್ಕೂ ಮಂಡ್ಯದಲ್ಲಿ ನಮ್ಮ ನಿಖಿಲ್ ಸೋತಿದ್ದು ನಮ್ಮಿಂದಲ್ಲ ನಿಮ್ಮಿಂದ. ಕೇಳಿ ಮೊದಲನೆಯದಾಗಿ ಮಂಡ್ಯಕ್ಕೆ ಒಂಟಿ ಕರುವಿನಂತೆ ಆ ಹುಡುಗನನ್ನ ತಂದು ನಿಲ್ಲಿಸಿದ್ದು ದೊಡ್ಡ ತಪ್ಪು. ಆ ನಂತರ ಕುಮಾರಣ್ಣ ಮೂರು ಸುಮಲತಾರನ್ನ ಹುಡುಕಿ ತಂದು ನಿಲ್ಲಿಸಿದ್ದು ಇನ್ನು ದೊಡ್ಡ ತಪ್ಪು. ಆನಂತರ ಕುಮಾರಣ್ಣ ಯಶ್ ಎಂಬ ನಟನನ್ನು ಕೀಳಾಗಿ ನಿಂದಿಸಿದ್ದು ಮಹಾ ಅಪರಾಧ. ಆ ನಟನ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ನಮಗೂ ಓಟಾಕಲಿಲ್ಲ. ಕಾಂಗ್ರೆಸ್ಸಿಗೂ ಓಟು ಹಾಕಲಿಲ್ಲ. ಇನ್ನ ದರ್ಶನ್ ಎಂಬ ದೊಡ್ಡ ನಟನನ್ನ ಕುಮಾರಣ್ಣ ಆಡಿಕೊಂಡರು. ಆ ನಟನ ಇಡೀ ಕರ್ನಾಟಕದ ಅಭಿಮಾನಿಗಳು ದಳಕ್ಕೆ ಓಟು ಮಾಡಲಿಲ್ಲ. ಈ ಹಾಳು ಟಿ.ವಿ ಜನ ಕುಮಾರಣ್ಣನ ಮಾತನ್ನ ಒಂದು ತಿಂಗಳು ಅರೆದರು. ಇನ್ನ ರೇವಣ್ಣನ ಮಾತು ಮಂಡ್ಯದ ಮಹಿಳೆಯರ ಓಟನ್ನೇ ಕಸಿಯಿತು. ನಿಖಿಲರನ್ನು ಸೋಲಿಸಿದವರು ನೀವೇ ಹೊರತು ನಾವಲ್ಲ ಥೂತ್ತೇರಿ…
*****
ಮತ್ತೊಂದು ಪತ್ರದಲ್ಲಿ ದೇವೇಗೌಡರನ್ನ ನೇರಾನೇರ ಪ್ರಶ್ನಿಸಿದೆಯಂತಲ್ಲಾ. ಮಾನ್ಯ ದೇವೇಗೌಡರೆ ತಮ್ಮ ರಾಜಕಾರಣವನ್ನ ನೋಡಿದರೆ, ಕುಲಕ್ಕೆ ಮೂಲ ಕೊಡಲಿ ಕಾವು ಎನ್ನುವಂತೆ ಕಾಣುತ್ತಿದ್ದೀರಿ. ಇವತ್ತು ಒಬ್ಬನೇ ಒಬ್ಬ ಧೀಮಂತ ನಾಯಕ ಒಕ್ಕಲಿಗ ಜನಾಂಗದಲ್ಲಿ ಇಲ್ಲದಂತೆ ಮಾಡಿಬಿಟ್ಟಿದ್ದೀರಿ. ಕಾಂಗ್ರೆಸ್‍ನಲ್ಲೂ ಇಲ್ಲ, ದಳದಲ್ಲೂ ಇಲ್ಲ. ಅದಕ್ಕೆ ಇಲ್ಲಿ ಬಿಜೆಪಿ ಕಾಲೂರಿದ್ದು. ಕುಮಾರಣ್ಣ ಅವರ ಜೊತೆ ಸರಕಾರ ಮಾಡಿ ಕಾಲೂರಲು ಅವಕಾಶ ಮಾಡಿದರು. ಈಗ ನಿಮ್ಮಿಬ್ಬರ ಮನೆತನದ ಬುದ್ಧಿಯಿಂದ ಅತ್ತ ಕಾಂಗ್ರೆಸ್ಸೂ ಹಾಳಾಯ್ತು. ದಳವೂ ಉದುರೊಯ್ತು. ಬಿಜೆಪಿ ಕಾಲೂರಿತು. ಕಾರಣ ಇಷ್ಟೆ. ತಾವು ಅನಾದಿಕಾಲದಿಂದ ಕರ್ನಾಟಕ ಮತ್ತು ದೇಶವನ್ನು ಕುರಿತು ಯೋಚಿಸಿದವರಲ್ಲ. ಬರೇ ಕುಟುಂಬವನ್ನು ಕುರಿತು ಯೋಚಿಸಿದಿರಿ. ಅವರ ಅಂತಿಮ ಹಂತ ಯಾವುದು ಎಂದರೆ, ನಾಡಿನ ಒಕ್ಕಲಿಗ ಜನಾಂಗ ನಿಮ್ಮನ್ನ ನಿಮ್ಮ ಕುಟುಂಬವನ್ನು ತಿರಸ್ಕರಿಸಿದೆ. ನಿಮ್ಮ ಪಾರ್ಟಿ ಆಫೀಸು ಹಾಳಾಗಿದೆ. ನೀವೇ ನೇಮಿಸಿದ ಅಧ್ಯಕ್ಷ ನಿಮಗೆ ತಕ್ಕ ಶಾಸ್ತಿ ಮಾಡಿದ. ಈಗಲಾದರೂ ಸಮಗ್ರ ಕರ್ನಾಟಕದಲ್ಲಿ, ದಳ ಎಂಬ ಪ್ರಾದೇಶಿಕ ಪಾರ್ಟಿ ಉಳಿಸಲು ಕಣ್ಣು ತೆರೆಯಿರಿ. ಮಿಸ್ಟರ್ ದೇವೇಗೌಡ್ ಓಪನ್ ಯುವರ್ ಐ ಥೂತ್ತೇರಿ…


