ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಡಿಜಿಪಿ ಕೆ.ರಾಮಚಂದ್ರ ರಾವ್ ಅವರನ್ನು ಕರ್ತವ್ಯದಿಂದ ಅಮಾತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಚಾರಣೆ ನಡೆಸಿ ರಾಮಚಂದ್ರ ರಾವ್ ತಪ್ಪು ಎಸಗಿರುವುದು ಸಾಬೀತಾದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸೋಮವಾರ (ಜ.19) ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ರಾಮಚಂದ್ರ ರಾವ್ ಹೋಗಿದ್ದರು. ಆದರೆ, ಅವರನ್ನು ಭೇಟಿಯಾಗಲು ಸಚಿವರು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಕಚೇರಿಯಲ್ಲಿ ಕುಳಿತು ಸಮವಸ್ತ್ರದಲ್ಲೇ ಡಿಜಿಪಿ ರಾಮಚಂದ್ರ ರಾವ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋಗಳು ಹರಿದಾಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಈ ಹಿಂದೆ ರಾಮಚಂದ್ರ ರಾವ್ ಅವರ ಮಲ ಮಗಳು ನಟಿ ರನ್ಯಾ ರಾವ್ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.


